• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಸಚಿವ ನಾರಾಯಣಸ್ವಾಮಿ ಯಡವಟ್ಟು! ಮೃತ ಯೋಧನ ಬದಲು, ಜೀವಂತ ಯೋಧನ ಕುಟುಂಬಕ್ಕೆ ಸಾಂತ್ವನ

ಸಚಿವ ನಾರಾಯಣಸ್ವಾಮಿ ಯಡವಟ್ಟು! ಮೃತ ಯೋಧನ ಬದಲು, ಜೀವಂತ ಯೋಧನ ಕುಟುಂಬಕ್ಕೆ ಸಾಂತ್ವನ

ಸಂಸದ ಎ.ನಾರಾಯಣಸ್ವಾಮಿ

ಸಂಸದ ಎ.ನಾರಾಯಣಸ್ವಾಮಿ

Minister A Narayanaswamy: ಜನಾಶೀರ್ವಾದ ಯಾತ್ರೆ ಮೂಲಕ ಜನರನ್ನು ತಲುಪುವ ಕೆಲಸ ಮಾಡೋದನ್ನು ಬಿಟ್ಟು, ಈ ರೀತಿ ಒಂದಿಲ್ಲೊಂದು ಯಡವಟ್ಟುಗಳನ್ನು ಬಿಜೆಪಿ ನಾಯಕರು ಪ್ರದರ್ಶನ ಮಾಡ್ತಿದ್ದಾರೆ. 

  • Share this:

ಗದಗ : ಬಿಜೆಪಿ ನಾಯಕರಿಗೆ ಅದೇನಾಗಿದೆಯೋ ಗೊತ್ತಿಲ್ಲ.‌ ಜನಾಶೀರ್ವಾದ ಯಾತ್ರೆಯ ಹೆಸರಲ್ಲಿ ಒಂದಲ್ಲ ಒಂದು ಯಡವಟ್ಟು ಮಾಡ್ತಿದ್ದಾರೆ. ಭಗವಂತ ಖೂಬಾ ಯಾತ್ರೆಯಲ್ಲಿ ಗುಂಡಿನ ಸದ್ದು ಕೇಳಿದ್ರೆ, ಅವರದ್ದೇ ಯಾತ್ರೆಯಲ್ಲಿ ಕೊರೋನಾ ನಿಯಮಾವಳಿಗಳ ಉಲ್ಲಂಘನೆಯೂ ನಡೆದಿದೆ. ಈ ಪಟ್ಟಿಯಲ್ಲಿ ಹೊಸ ಸೇರ್ಪಡೆ ಕೇಂದ್ರ ಸಚಿವ ಎ ನಾರಾಯಣಸ್ವಾಮಿ. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮೃತ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳೋದು ಬಿಟ್ಟು ಜೀವಂತವಾಗಿರೋ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿ ತಮ್ಮ ಪೇಚಿಗೆ ಸಿಲುಕಿಹಾಕಿಕೊಂಡಿದ್ದಾರೆ. 


ಹೌದು ಬಿಜೆಪಿ ನಾಯಕರು ಕೊರೋನಾ ನಿಯಮಾವಳಿಗಳನ್ನು ಮೀರಿ ಜನಾಶೀರ್ವಾದ ಯಾತ್ರೆ ಮಾಡ್ತಿರೋದು ಪ್ರಪಂಚಕ್ಕೆ ಗೊತ್ತಾಗಿದೆ‌. ಹೋದಲೆಲ್ಲಾ ಒಂದಲ್ಲಾ ಒಂದು ತಪ್ಪು ಮಾಡಿ ಇಂಗುತಿಂದ ಮಂಗನಂತಾಗುತ್ತಿದ್ದಾರೆ. ಗದಗ ಜಿಲ್ಲೆಯ ಜನಾಶೀರ್ವಾದ ಯಾತ್ರೆಯಲ್ಲೂ ಹೀಗೆ ಆಗಿದೆ. ಅಂದಹಾಗೆ ನಿನ್ನೆ ಗದಗ ಜಿಲ್ಲೆಯಲ್ಲಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಜನಾಶೀರ್ವಾದ ಯಾತ್ರೆ ನಡೆದಿತ್ತು. ವೇದಿಕೆ ಕಾರ್ಯಕ್ರಮದ ನಂತರ ಮೃತ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳುವ ಕಾರ್ಯಕ್ರಮವನ್ನು ಸ್ಥಳೀಯ ಬಿಜೆಪಿ ನಾಯಕರು ಆಯೋಜಿಸಿದ್ದರು.


ಅದರಂತೆ ಗದಗ ತಾಲೂಕಿನ ಮುಳಗುಂದ ಪಟ್ಟಣದ ಮೃತ ಯೋಧ ಬಸವರಾಜ್ ಅವರ ಮನೆಗೆ ತೆರಳಿ ನಾರಾಯಣಸ್ವಾಮಿ ಸಾಂತ್ವನ ಹೇಳಬೇಕಾಗಿತ್ತು. ಅಲ್ಲೇ ಆಗಿದ್ದು ನೋಡಿ ಯಡವಟ್ಟು. ಅವರು ಮೃತ ಯೋಧನ‌ ಮನೆಗೆ ತೆರಳುವುದನ್ನು ಬಿಟ್ಟು, ಹಾಲಿ ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ರವಿಕುಮಾರ್ ಕಟ್ಟಿಮನಿ ಅವರ ಮನೆಗೆ ಹೋಗಿ ಅವರ ಕುಟುಂಬಕ್ಕೆ ಧೈರ್ಯ ತುಂಬುವ ಮಾತನ್ನಾಡಿದ್ದಾರೆ.


ಇನ್ನೊಂದೆಜ್ಜೆ ಮುಂದೋದ ನಾರಾಯಣಸ್ವಾಮಿ ಅವರ ಕುಟುಂಬಕ್ಕೆ ಜಮೀನು ಸೈನಿಕನ ಪತ್ನಿಗೆ ಸರ್ಕಾರಿ ಕೆಲಸ ಕೊಡಿಸುವ ಭರವಸೆಯನ್ನೂ ನೀಡಿದ್ದಾರೆ.


ಕೇಂದ್ರ ಸಚಿವ ನಾರಾಯಣಸ್ವಾಮಿ ಅವರ ಈ ಮಾತುಗಳನ್ನು ಕೇಳಿ ಒಂದು ಕ್ಷಣ ಯೋಧ ರವಿಕುಮಾರ್ ಅಚರ ಕುಟುಂಬಸ್ಥರು ತಬ್ಬಿಬ್ಬಾಗಿದ್ದಾರೆ. ನಂತರ ಸ್ಥಳದಲ್ಲಿಯೇ ಇದ್ದ ಬಿಜೆಪಿ ಕಾರ್ಯಕರ್ತರೊಬ್ಬರು ರವಿಕುಮಾರ್ ಅವರಿಗೆ ವಿಡಿಯೋ ಕಾಲ್ ಮಾಡಿ ಮಾತಾಡಿಸಿದಾಗ ಸಚಿವರಿಗೆ ತಾವು ಮಾಡಿದ ತಪ್ಪಿನ ಅರಿವಾಗಿದೆ.


ಒಂದೂವರೆ ವರ್ಷದ ಹಿಂದೆ ಮಹಾರಾಷ್ಟ್ರದ ಪುಣೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಯೋಧ ಬಸವರಾಜ್ ಹಿರೇಮಠ ಮೃತಪಟ್ಟಿದ್ರು. ಅವರ ಕುಟುಂಬಕ್ಕೆ ಸಾಂತ್ವನ ಹೇಳೋದು ಬಿಟ್ಟು, ನಾರಾಯಣಸ್ವಾಮಿ ಹಾಲಿ ಸೇವೆ ಸಲ್ಲಿಸುತ್ತಿರುವ ಜೀವಂತವಾಗಿರುವ ರವಿಕುಮಾರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳೋ ಮೂಲಕ ತಮ್ಮ ನಾರಾಯಣಸ್ವಾಮಿ ಮುಜುಗರಕ್ಕೀಡಾಗಿದ್ದಾರೆ. ಇದೆಲ್ಲಾ ನಡೆದಿರೋದು ಮಾಹಿತಿಯ ಕೊರತೆಯಿಂದ ಎಂದು ಬಿಜೆಪಿ ಕಾರ್ಯಕರ್ತರು ತೇಪೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ.


ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ವೃದ್ಧ ದಂಪತಿಗಳ ಡಬಲ್ ಮರ್ಡರ್; ಬೆಚ್ಚಿಬಿತ್ತು ರಾಜಧಾನಿ!


ಇತ್ತ ಮೃತಪಟ್ಟಿರೋ ಯೋಧ ಬಸವರಾಜನ ತಾಯಿ, ನನ್ನ ಮಗ ಪ್ರಾಣ ಬಿಟ್ಟು ಇಷ್ಟು ದಿವಸ ಆಯಿತು. ಯಾರೊಬ್ಬರೂ  ಸಹ ಸಾಂತ್ವನ ಹೇಳಲು ಬರಲಿಲ್ಲ‌. ಆದರೆ ಬದಕಿರೋ ಯೋಧನ ಮನೆಗೆ ಹೋಗಿ ಅವರಿಗೂ ಸಹ ನೋವನ್ನ ಕೊಟ್ಟಿದಾರೆ. ಮಗನನ್ನ ಕಳೆದುಕೊಂಡಿರೋ ನಮಗೆ ಯಾರೂ ಬಂದಿಲ್ಲ ಅಂತ ತಾಯಿ ಕಣ್ಣೀರು ಹಾಕಿದ್ದಾರೆ.


ಇದನ್ನೂ ಓದಿ: ತಾಲಿಬಾನ್​ ಪ್ರಮುಖ ನಾಯಕ ಶೇರ್​ ಮೊಹಮ್ಮದ್​ಗೆ ಭಾರತದ ನಂಟು; ನೆನಪು ಹಂಚಿಕೊಂಡ ಮಿಲಿಟರಿ ಸ್ನೇಹಿತರು


ಜನಾಶೀರ್ವಾದ ಯಾತ್ರೆ ಮೂಲಕ ಜನರನ್ನು ತಲುಪುವ ಕೆಲಸ ಮಾಡೋದನ್ನು ಬಿಟ್ಟು, ಈ ರೀತಿ ಒಂದಿಲ್ಲೊಂದು ಯಡವಟ್ಟುಗಳನ್ನು ಬಿಜೆಪಿ ನಾಯಕರು ಪ್ರದರ್ಶನ ಮಾಡ್ತಿದ್ದಾರೆ.


ಇನ್ನೊಂದೆಡೆ ಬಿಜೆಪಿಯ ಜನಾಶೀರ್ವಾದ ಯಾತ್ರೆಯನ್ನು ಕಾಂಗ್ರೆಸ್​ ಸೇರಿದಂತೆ ಇತರೆ ವಿರೋಧ ಪಕ್ಷಗಳು ಕಟುವಾಗಿ ಟೀಕಿಸುತ್ತಿದ್ದಾರೆ. ಇದು ಜನಾಶೀರ್ವಾದ ಯಾತ್ರೆಯಲ್ಲ ಮೂರನೇ ಅಲೆಗೆ ನಾಂದಿ ಹಾಡುವ ಶವಾಶೀರ್ವಾದ ಯಾತ್ರೆ ಎಂದು ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸಿದೆ. ಮೂರನೇ ಅಲೆ ಆರಂಭವಾಗುವ ಭಯದ ವಾತಾವರಣದಲ್ಲಿ ಬಿಜೆಪಿಗೆ ಈ ಯಾತ್ರೆ ಮುಖ್ಯವಾ ಎಂಬುದು ಸಾರ್ವಜನಿಕರ ಪ್ರಶ್ನೆಯೂ ಹೌದು.

top videos
    First published: