ಬೆಂಗಳೂರು(ಮೇ 13): ದೇಶದೆಲ್ಲೆಡೆ ಕೊರೋನಾ ತನ್ನ ರಣಕೇಕೆ ಮುಂದುವರೆಸಿದೆ. ಜನರು ವ್ಯಾಕ್ಸಿನ್ಗಾಗಿ ಪರದಾಡುತ್ತಿದ್ದಾರೆ. ಆದರೆ ಲಸಿಕೆ ಸಿಗುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ ವ್ಯಾಕ್ಸಿನ್ಗೆ ಸಂಬಂಧಿಸಿದಂತೆ ಉಡಾಫೆ ಮಾತೊಂದನ್ನು ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವ್ಯಾಕ್ಸಿನ್ ಒದಗಿಸಿ ಎಂದು ಕೋರ್ಟ್ ಹೇಳುತ್ತೆ. ಆದರೆ ಸಾಕಷ್ಟು ಪ್ರಮಾಣದಲ್ಲಿ ವ್ಯಾಕ್ಸಿನ್ ಪ್ರೊಡಕ್ಷನ್ ಆಗಲಿಲ್ಲವೆಂದ್ರೆ ನಾವೇನು ನೇಣುಹಾಕಿಕೊಳ್ಳಬೇಕಾ? ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕೇಂದ್ರಸರ್ಕಾರ ಎಲ್ಲಾ ಪ್ರಯತ್ನಗಳನ್ನು ಪ್ರಮಾಣಿಕವಾಗಿ ಮಾಡುತ್ತಿದೆ. ಎಲ್ಲಾ ರಾಜ್ಯಗಳ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳಲಾಗಿದೆ. ನಿರಂತರವಾಗಿ ಸಮಾಲೋಚನೆ ಮಾಡಿ ಮೋದಿ ಅವರು ಎಲ್ಲಾ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಮಹಾರಾಷ್ಟ್ರ ಕರ್ನಾಟಕ ಮತ್ತು ಉತ್ತರ ಪ್ರದೇಶಕ್ಕೆ ಆಮ್ಲಜನಕ ಪೂರೈಕೆಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. 850 ಮೆಟ್ರಿಕ್ ಟನ್ ಆಸುಪಾಸಿನಲ್ಲೇ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ನಾವು ಜಗಳ ಮಾಡಿ ಆ್ಯಕ್ಟಿವ್ ಕೇಸಸ್ ಆಧಾರದ ಮೇಲೆ ಕರ್ನಾಟಕಕ್ಕೆ ಹೆಚ್ಚು ಪೂರೈಕೆ ಮಾಡುವಂತೆ ಮಾಡಿದ್ದೇವೆ. ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕಕ್ಕೆ ಅತಿ ಹೆಚ್ಚು ಪ್ರಮಾಣದಲ್ಲಿ ರೆಮಿಡೆಸಿವಿರ್ ಮತ್ತು ಟ್ರಸ್ಲಿಜೋಂ, ಆಂಪಿಟೋರೆಸಿಯನ್ ಇಂಜೆಕ್ಷನ್ ಗಳನ್ನು ಸರಬರಾಜು ಮಾಡಿದ್ದೇವೆ. ಟ್ರಸ್ಲಿಜೋಂ ಔಷಧಕ್ಕೂ ಹೆಚ್ಚು ಬೇಡಿಕೆ ಇದೆ. ಪ್ರತಿ ಇಂಜೆಕ್ಷನ್ ಗೆ 34,000 ದರವಿದೆ. ಈ ಇಂಜೆಕ್ಷನ್ ಮೂಲ ಉತ್ಪಾದಕರು 50,000 ಡೋಸ್ ಡೊನೇಟ್ ಮಾಡಿದ್ರು ಎಂದು ಹೇಳಿದರು.
ಇದು ನಿಮ್ಮ ವ್ಯಾಕ್ಸಿನೇಷನ್ ಕಾರ್ಯಕ್ರಮದ ರೀತಿಯೇ?; ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಮುಂದುವರೆದ ಅವರು, ವಿರೋಧ ಪಕ್ಷದವರಿಗೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ. ಪ್ರತಿಭಟನೆ ಮಾಡುವುದರಿಂದ ಕೊರೋನಾ ಹೋಗುತ್ತೆ ಎಂದರೆ ಬೀದಿಯಲ್ಲಿ ಪ್ರತಿಭಟನೆ ಮಾಡಿ. ನಮ್ಮಪ್ರಧಾನಿಗಳು ಯಾವುದೇ ಮೂಲೆಯಿಂದ ಒಂದೊಳ್ಳೆ ಸಲಹೆ ಬಂದರೂ ಸ್ವೀಕರಿಸಿ ಎಂದಿದ್ದಾರೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರೇ ನೀವು ಹೀಗೆ ಪ್ರತಿಭಟನೆ ಮಾಡುವ ಬದಲು, ನಿಯೋಗ ಹೊತ್ತೊಯ್ದು ಸಿಎಂ ಹಾಗೂ ಆರೋಗ್ಯ ಸಚಿವರ ಜೊತೆ ಕುಳಿತು ಮಾತನಾಡಿ ಎಂದು ವಾಗ್ದಾಳಿ ನಡೆಸಿದರು.
ರೆಮಿಡಿಸ್ವಿರ್ ಅಮೇರಿಕಾದ ಕಂಪೆನಿಯ ಪೇಟೆಂಟ್ ಇದೆ. ಭಾರತದ ಏಳು ಕಂಪೆನಿಗಳಿಗೆ ತಯಾರಿಕೆಗೆ ಅನುಮತಿ ನೀಡಲಾಗಿದೆ. ಕಳೆದ ವರ್ಷ ಕೊರೋನಾ ಕಡಿಮೆ ಆದಾಗ ಆ ಕಂಪೆನಿಗಳು ತಯಾರಿಕೆ ಕಡಿಮೆ ಮಾಡಿದೆವು. ರೆಮಿಡಿಸ್ವಿರ ಸೆಲ್ಫ್ ಲೈಫ್ ಕೇವಲ 3 ತಿಂಗಳು ಮಾತ್ರ. ತಯಾರಿಕೆಗೆ 21 ದಿನ ಬೇಕಿತ್ತು. ಹೀಗಾಗಿ ಆರಂಭದಲ್ಲಿ ಸಮಸ್ಯೆ ಆಯ್ತು. ಮೊದಲ ಅಲೆಯಲ್ಲಿ ಕೇವಲ 23 ಲಕ್ಷ ತಯಾರಿಕೆ ಆಗುತ್ತಿತ್ತು. ಈಗ 1.05 ಕೋಟಿ ತಯಾರಾಗುತ್ತಿದೆ. ರಫ್ತು ನಿಷೇಧ ಹಾಕಿದ್ದೇವೆ. ಇವತ್ತು ದೇಶದ ಯಾವುದೇ ರಾಜ್ಯದಲ್ಲಿ ಸಮಸ್ಯೆ ಇಲ್ಲ. ಕರ್ನಾಟಕಕ್ಕೆ 5 ಲಕ್ಷ ರೆಮಿಡಿಸ್ವಿರ್ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಲಸಿಕೆ ಕೊರತೆ ಇಂದು ದೊಡ್ಡ ಚರ್ಚೆಯಾಗಿ ಹೊರಹೊಮ್ಮಿದೆ. ಭಾರತ ದೊಡ್ಡ ರಾಷ್ಟ್ರ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ನಾವು ಲಸಿಕೆ ವಿಚಾರದಲ್ಲಿ ಟೀಕೆಗಳ ಹೊರತಾಗಿಯೂ ಇತರೆ ದೇಶಕ್ಕೆ ನೆರವು ನೀಡಿದ್ದೇವೆ. ಈಗ ಅನೇಕ ದೇಶಗಳು ನಮಗೆ ನೆರವು ನೀಡಿವೆ ಎಂದರು.
ರೆಮಿಡಿಸ್ವಿರ್ ಔಷಧದ ಬಗ್ಗೆ ದೊಡ್ಡ ಗೋಲ್ ಮಾಲ್ ನಡೆದಿದೆ. ರೆಮಿಡಸ್ವಿರ್ ಔಷಧದಿಂದಲೇ ಕೊರೋನಾ ಗುಣಮುಖವಾಗುತ್ತದೆ ಅಂತಾ ಬಿಂಬಿಸಿ ದೊಡ್ಡ ಗೋಲ್ ಮಾಲ್ ಮಾಡಿದ್ದಾರೆ. ಈ ಔಷಧದ ಮೂಲ ಅಮೆರಿಕ. ರೆಮಿಡಿಸ್ವಿರ್ ಔಷಧ ತಯಾರು ಮಾಡಲಿಕ್ಕೆ ನಮ್ಮಕಂಪೆನಿಗಳಿಗೆ ಅನುಮತಿ ನೀಡಿ ಸಮಸ್ಯೆ ಬಗೆಹರಿಸಲಾಗಿದೆ. ಅದರ ಬೆಲೆ ಕಡಿಮೆ ಮಾಡಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ