ನವದೆಹಲಿ(ಸೆ.03): ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳಲ್ಲಿ ಎಂಟು ಪೂರಕ ಪೌಷ್ಟಿಕಾಂಶದ ಆರೋಗ್ಯಕರ ಉತ್ಪನ್ನಗಳನ್ನು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಅವರು ದೇಶಾದ್ಯಂತ ಬಿಡುಗಡೆ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಡಿ.ವಿ ಸದಾನಂದಗೌಡ ಅವರು, ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳಲ್ಲಿ ಲಭ್ಯವಿರುವ ಅಗ್ಗದ ದರದ ಗುಣಮಟ್ಟದ ಔಷಧಗಳಿಂದ ದೇಶದ ಬಡ ಜನರಿಗೆ ಎರಡೂವರೆ ಸಾವಿರ ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ತಿಳಿಸಿದರು.
ಜನೌಷಧಿ ಕೇಂದ್ರಗಳಲ್ಲಿ ಮಾತ್ರ ದೊರೆಯುವ ಎಂಟು ಪ್ರಕಾರದ ಪೌಷ್ಟಿಕಾಂಶ ಔಷಧಗಳ ಬಿಡುಗಡೆ ಮಾಡಿದ ಅವರು, ಈಗ ವೈದ್ಯರು ಕೂಡ ಜನೌಷಧಗಳ ಸಲಹೆ ಮಾಡುತ್ತಿದ್ದಾರೆ. ಇದರಿಂದ ಬಡ ಮತ್ತು ಮಧ್ಯಮವರ್ಗದ ಜನರಿಗೆ ಪ್ರಯೋಜನವಾಗುತ್ತಿದೆ ಎಂದರು.
ಈಗ ಬಿಡುಗಡೆ ಮಾಡಲಾಗಿರುವ 8 ಪ್ರಕಾರದ ಪೌಷ್ಟಿಕ ಔಷಧಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಹೆಚ್ಚಿನ ಗಮನ ನೀಡಲಾಗಿದೆ. ಪ್ರಸಕ್ತ ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಬಡ ಜನರಿಗೂ ಸುಲಭ ದರದಲ್ಲಿ ಪೌಷ್ಟಿಕ ಔಷಧಗಳು ಲಭ್ಯವಾಗಿ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಬೇಕು ಎಂಬುದು ಇದರ ಉದ್ದೇಶವಾಗಿದೆ ಎಂದರು.
ಗುಣಮಟ್ಟದ ಜೆನೆರಿಕ್ ಮತ್ತು ಕೈಗೆಟುಕುವ ಔಷಧಿಗಳನ್ನು ಖರೀದಿಸಲು ಪ್ರತಿದಿನ ಸುಮಾರು ಒಂದು ಮಿಲಿಯನ್ ರೋಗಿಗಳು 6,500 ಜನೌಷಧಿ ಅಂಗಡಿಗಳಿಗೆ ಭೇಟಿ ನೀಡುತ್ತಾರೆ ಎಂದು ಸಂತಸ ವ್ಯಕ್ತ ಪಡಿಸಿದರು. ಮಧುಮೇಹ, ರಕ್ತದೊತ್ತಡ, ಸೈಕೋಟ್ರೋಪಿಕ್ ಮುಂತಾದ ದೀರ್ಘಕಾಲದ ಕಾಯಿಲೆಗಳಿಗೆ ಔಷಧಿಗಳನ್ನು ತೆಗೆದುಕೊಳ್ಳಬೇಕಾದ ರೋಗಿಗಳಿಗೆ ಈ ಯೋಜನೆಯು ವರದಾನವಾಗುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ‘ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಗುರಿ’ - ಡಿಜಿ-ಐಜಿಪಿ ಪ್ರವೀಣ್ ಸೂದ್
ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಮಾತನಾಡಿ, ಜೆನರಿಕ್ ಔಷಧಗಳು ಅನುಪಾತವು ಈಗ ಹೆಚ್ಚಾಗಿದೆ. ಪ್ರಧಾನಮಂತ್ರಿಯ ದೃಷ್ಟಿಗೆ ಅನುಗುಣವಾಗಿ ಜನೌಷಧಿ ಕೇಂದ್ರಗಳನ್ನು ಪ್ರಾರಂಭಿಸಲಾಯಿತು. ಪೋಷಕಾಂಶ ಆಧಾರಿತ ಉತ್ಪನ್ನಗಳು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಪ್ರಸ್ತುತ ದೇಶದಲ್ಲಿ ಕರೋನಾ ಸಾಂಕ್ರಾಮಿಕ ರೋಗ ಹರಡಿರುವ ಸಮಯದಲ್ಲಿ ಇದು ಮಹತ್ವದ್ದಾಗಿದೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ