ಹುಬ್ಬಳ್ಳಿ: ದಕ್ಷಿಣ ಭಾರತದಲ್ಲಿ ಕರ್ನಾಟಕ (Karnataka) ಬಿಟ್ಟರೆ ಬಿಜೆಪಿಗೆ ಬೇರೆ ಎಲ್ಲೂ ಭವಿಷ್ಯ ಇಲ್ಲ. ಹಾಗಾಗಿನೇ ಅಧಿಕಾರ ಕೈತಪ್ಪಬಾರದು ಅಂತ ಬಿಜೆಪಿ (BJP) ಹಠಕ್ಕೆ ಬಿದ್ದಿದೆ. ಸಿಕ್ಕಾಪಟ್ಟೆ ಪ್ರಚಾರ ಮಾಡುತ್ತಿದೆ. ಈಗ ಬಿಜೆಪಿ ಕಲ್ಯಾಣಕ್ಕಾಗಿ ಇಂದು (Kalyana Karnataka) ಅಮಿತ್ ಶಾ ರಾಜ್ಯಕ್ಕೆ ಆಗಮಿಸಿದ್ದಾರೆ. ಬಿಜೆಪಿಯಲ್ಲಿರುವ ಮುನಿಸು, ಕೋಪತಾಪಕ್ಕೆಲ್ಲಾ ತೇಪೆ ಹಾಕೋದಕ್ಕೂ ಸಭೆ ನಿಗದಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ಯಾದಗಿರಿ ಮತ್ತು ಕಲಬುರಗಿಯಲ್ಲಿ ಮೋದಿ (PM Modi) ರಣಕಹಳೆ ಮೊಳಗಿಸಿದ್ದರು. ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ ಶಕ್ತಿ ತುಂಬಿ ಹೋಗಿದ್ದರು. ಈಗ ಆ ಶಕ್ತಿಯನ್ನ ಇಮ್ಮಡಿಗೊಳಿಸಲು ಚುನಾವಣಾ ಚಾಣಾಕ್ಯ ಅಮಿತ್ ಶಾ (Union Minister Amit Shah) ಹುಬ್ಬಳ್ಳಿಗೆ ಬರುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿರುವ ಅಮಿತ್ ಶಾ ಇಂದು ಒಟ್ಟು 6 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಅಮಿತ್ ಶಾ ‘ಕಲ್ಯಾಣ’ ಕಹಳೆ 01; ಲಿಂಗಾಯತ ಮತ ಟಾರ್ಗೆಟ್
ಕೆಎಲ್‍ಇ ಸಂಸ್ಥೆಯ ಭೂಮರಡ್ಡಿ ಕಾಲೇಜಿನ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿಯಾಗ್ತಾರೆ. ಮೊದಲು BVB ಕಾಲೇಜು ಒಳಾಂಗಣ ಸ್ಟೇಡಿಯಂ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಕೆಎಲ್‍ಇ ಸೊಸೈಟಿಯ ಅಮೃತ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಆ ಮೂಲಕ ಲಿಂಗಾಯತ ಮತದಾರರನ್ನ ಸೆಳೆಯುವುದು ಅಮಿತ್ ಶಾ ಅವರ ಮೊದಲ ಪ್ಲ್ಯಾನ್.
ಅಮಿತ್ ಶಾ ‘ಕಲ್ಯಾಣ’ ಕಹಳೆ 02; ಅಭಿವೃದ್ಧಿ ಹೆಸರಲ್ಲಿ ಮತಬೇಟೆ
ಕೆಎಲ್‍ಇ ಸಂಸ್ಥೆ ಕಾರ್ಯಕ್ರಮದ ಬಳಿಕ ಅಮಿತ್ ಶಾ, ಧಾರವಾಡ ವಿಶ್ವ ವಿದ್ಯಾಲಯಕ್ಕೆ ಆಗಮಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೋಕಸಭಾ ಕ್ಷೇತ್ರದ ಧಾರವಾಡ ವಿವಿ ಒಳಗೆ ನಿರ್ಮಾಣ ಆಗುತ್ತಿರುವ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್ಗೆ ಶಂಕುಸ್ಥಾಪನೆ ಮಾಡಲಿದ್ದಾರೆ.
ಅಮಿತ್ ಶಾ ‘ಕಲ್ಯಾಣ’ ಕಹಳೆ 03; ದೇಶದಲ್ಲಿ ಒಟ್ಟು 8 ರಾಷ್ಟ್ರೀಯ ಫಾರಿನ್ಸಿಕ್ ವಿಶ್ವವಿದ್ಯಾಲಯಗಳಿವೆ. ನಾಳೆ 9ನೇ ಹಾಗು ದಕ್ಷಿಣ ಭಾರತದ ಮೊದಲ ವಿವಿಗೆ ಅಡಿಗಲ್ಲು ಹಾಕಲಿದ್ದಾರೆ ಅಮಿತ್ ಶಾ. ಕರ್ನಾಟಕ ವಿವಿ, ಕೃಷಿ ಮತ್ತು ಕಾನೂನು ವಿವಿ ಕ್ಯಾಂಪಸ್ನಲ್ಲೇ ನಿರ್ಮಾಣ ಆಗುತ್ತಿದೆ. ಧಾರವಾಡ ವಿಶ್ವವಿದ್ಯಾಲಯ ಇದಕ್ಕಾಗಿ 42 ಎಕರೆ ಜಾಗವನ್ನೂ ಒದಗಿಸಿದೆ. ಆ ಮೂಲಕ ಯುವ ಮತದಾರರನ್ನ ಸೆಳೆಯೋ 2ನೇ ಪ್ಲ್ಯಾನ್ ಬಿಜೆಪಿಯದ್ದಾಗಿದೆ.
ಅಮಿತ್ ಶಾ ‘ಕಲ್ಯಾಣ’ ಕಹಳೆ 04; ಕುಂದಗೋಳಕ್ಕೆ ಶಾ ಲಗ್ಗೆ
ಇಂದು ಮಧ್ಯಾಹ್ನ ಕುಂದಗೋಳ ಕ್ಷೇತ್ರಕ್ಕೆ ಅಮಿತ್ ಶಾ ಬರ್ತಿದ್ದಾರೆ. ಕುಂದಗೋಳ ಹೇಳಿ ಕೇಳಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಕಾಂಗ್ರೆಸ್ಗೆ ಸೋಲುಣಿಸೋ ಪ್ಲ್ಯಾನ್ ಹಾಕಿದ್ದಾರೆ. ಮೊದಲು 300 ವರ್ಷಗಳ ಪುರಾತನ ಶಂಭುಲಿಂಗ ದೇವಸ್ಥಾನಕ್ಕೆ ಹಾಗೂ ಬಸವಣ್ಣ ದೇವರ ಮಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಕುಂದಗೋಳದ ವಾರ್ಡ್ ನಂ.7ರಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನಕ್ಕೆ ಮನೆ ಮನೆಗಳಿಗೆ ಕರಪತ್ರ ವಿತರಣೆಗೆ ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ಅಭಿಯಾನಕ್ಕೂ ಚಾಲನೆ ನೀಡಿ 2 ಕಿ.ಮೀ ರೋಡ್ಶೋ ನಡೆಸಲಿದ್ದಾರೆ.
ಅಮಿತ್ ಶಾ ‘ಕಲ್ಯಾಣ’ ಕಹಳೆ 05; ಕಲ್ಯಾಣ ಬಿಕ್ಕಟ್ಟಿಗೆ ಶಾ ಮದ್ದು!
ಕುಂದಗೋಳ ಕಾರ್ಯಕ್ರಮ ಮುಗಿಸಿ ಅಮಿತ್ ಶಾ ನೇರ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಕಲ್ಯಾಣ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ಸಚಿವರು, ಶಾಸಕರು, ಪದಾಧಿಕಾರಿಗಳ ಜೊತೆ ಸಭೆ ಮಾಡಲಿದ್ದಾರೆ. ಸಭೆಯ ಉದ್ದೇಶ ಒಡೆದು ಹೋಗಿರುವ ಬಿಜೆಪಿ ಮನಸ್ಸುಗಳನ್ನ ಒಗ್ಗೂಡಿಸೋ ಪ್ಲ್ಯಾನ್ ಆಗಿದೆ.
'ಕಲ್ಯಾಣ' ಬಿಕ್ಕಟ್ಟಿಗೆ ಶಾ ಮದ್ದು
ಬೆಳಗಾವಿ 8 ಕ್ಷೇತ್ರಗಳಲ್ಲಿ 6 ಬಿಜೆಪಿ, 2 ಕಾಂಗ್ರೆಸ್ ಗೆದ್ದಿದೆ. ಆದರೆ ಬೆಳಗಾವಿ ಬಿಜೆಪಿ ನಾಯಕರಲ್ಲಿ ಒಗ್ಗಟ್ಟಿಲ್ಲ. ಜಾರಕಿಹೊಳಿ Vs ಸವದಿ ಟೀಂ ಕಚ್ಚಾಟಕ್ಕೆ ಅಮಿತ್ ಶಾ ಬ್ರೇಕ್ ಹಾಕುವ ಲೆಕ್ಕಾಚಾರ ಬಿಜೆಪಿಯದ್ದು. ಇನ್ನು ಧಾರವಾಡದಲ್ಲಿ 5 ಬಿಜೆಪಿ 2 ಕಾಂಗ್ರೆಸ್ ಕ್ಷೇತ್ರಗಳನ್ನ ಗೆದ್ದಿದೆ. ಆದರೆ ಜೋಶಿ ಕೇಂದ್ರ ಸಚಿವರಾಗಿದ್ದರೂ ಶೆಟ್ಟರ್-ಬೆಲ್ಲದ್ ಮಧ್ಯೆ ಕೋಲ್ಡ್ವಾರ್ ಇದೆ.
ಇದನ್ನೂ ಓದಿ: PM Modi: ಮೋದಿ ಮನುಷ್ಯ ಅಲ್ರಿ ದೇವರು; ಅದಕ್ಕೆ ಹಾರ ಹಾಕಲು ಹೋಗಿದ್ದೆ; ಕೇಳಿದ್ರಾ 12ರ ಬಾಲಕನ ಮಾತು?
ಇನ್ನು ಹಾವೇರಿಯಲ್ಲಿ 6 ಕ್ಷೇತ್ರಗಳಲ್ಲಿ 4 ಕಾಂಗ್ರೆಸ್-2 ಬಿಜೆಪಿಯದ್ದು. ಸಿಎಂ ಬೊಮ್ಮಾಯಿ ತವರಲ್ಲಿ ಬಿಜೆಪಿ ಹಿನ್ನಡೆಯಲ್ಲಿದೆ. ಹೀಗಾಗಿ ಕನಿಷ್ಠ 4 ಕ್ಷೇತ್ರಗಳಲ್ಲಿ ಗೆಲ್ಲುವ ಬಗ್ಗೆ ರಣತಂತ್ರ ರೂಪಿಸಲಾಗುತ್ತಿದೆ. ಗದಗದ 4 ಕ್ಷೇತ್ರಗಳಲ್ಲಿ 3ರಲ್ಲಿ ಬಿಜೆಪಿ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದ್ದು, ಈ ಸಲ H.K.ಪಾಟೀಲ್ ಸೋಲಿಸಿ 4 ಕ್ಷೇತ್ರಕ್ಕೆ 4 ಗೆಲ್ಲುವ ಲೆಕ್ಕ ಹಾಕಿ ಅಮಿತ್ ಶಾ ಸಭೆ ಕರೆದಿದ್ದಾರೆ ಅಂತ ಗೊತ್ತಾಗಿದೆ.
ಅಮಿತ್ ಶಾ ‘ಕಲ್ಯಾಣ’ ಕಹಳೆ 06; ಕಿತ್ತೂರಿನಲ್ಲಿ ಜನಸಂಕಲ್ಪ ಸಮಾವೇಶ
ಇನ್ನು ಕಾರ್ಯಕರ್ತರನ್ನ ಹುರಿದುಂಬಿಸುವ ಜೊತೆಗೆ ಜನರನ್ನ ಸೆಳೆಯಲು ಇಂದು ಸಂಜೆ ಬೆಳಗಾವಿಯ ಕಿತ್ತೂರು ಕ್ಷೇತ್ರದ ವೀರ ಸೋಮೇಶ್ವರ ರಂಭಾಪುರಿ ಕಲ್ಯಾಣ ಮಂಟಪ ಮೈದಾನದಲ್ಲಿ ಜನಸಂಕಲ್ಪ ಸಮಾವೇಶದಲ್ಲಿ ಅಮಿತ್ ಷಾ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: KMF-Amul Cooperation: ಅಮುಲ್ ಜೊತೆ ವಿಲೀನವಾಗುತ್ತಾ ನಂದಿನಿ? ಅಮಿತ್ ಶಾ ಪ್ರಸ್ತಾಪಕ್ಕೆ ಕನ್ನಡಿಗರು ಕಿಡಿಕಿಡಿ
ಅಮಿತ್ ಶಾ ‘ಕಲ್ಯಾಣ’ ಕಹಳೆ 07; ಸಂಘ ಪರಿವಾರ+ಅಗ್ರನಾಯಕರ ಸಭೆ
ಕಿತ್ತೂರು ಸಮಾವೇಶದ ಬಳಿಕ ಅಮಿತ್ ಶಾ ಬೆಳಗಾವಿಯಲ್ಲಿ ಹಿರಿಯ ನಾಯಕರ ಸಭೆ ಕರೆದಿದ್ದಾರೆ. ಸಂಘ ಪರಿವಾರದ ಪ್ರಮುಖರ ಜೊತೆ ಸಭೆ ನಡೆಸಿ ಬಳಿಕ ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಮಾಜಿಸಿಎಂ ಯಡಿಯೂರಪ್ಪ, ಜೋಶಿ ಸೇರಿ ಅನೇಕರ ಜೊತೆ ಪ್ರತ್ಯೇಕ ಸಭೆನೂ ಮಾಡುವುದು ಖಚಿತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ