ಮಂಡ್ಯ (ಡಿ.30): ವಿಧಾನಸಭೆ ಚುನಾವಣೆ (Assembly Election) ಹಿನ್ನೆಲೆ ಎಲ್ಲಾ ಪಕ್ಷಗಳಲ್ಲೂ ರಾಜಕೀಯ ಚಟುವಟಿಕೆ ಗರಿಗೆದರಿದೆ. ಹಳೇ ಮೈಸೂರು ಭಾಗದ ಮತಗಳ ಮೇಲೆ ಬಿಜೆಪಿ (BJP) ಕಣ್ಣು ಹಾಕಿದ್ದು, ಘಟಾನುಘಟಿಗಳೇ ಮತಬೇಟೆಗಿಳಿದಿದ್ದಾರೆ. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಕ್ಕರೆ ನಾಡು ಮಂಡ್ಯದಲ್ಲಿ (Mandya) ರಣಕಹಳೆ ಮೊಳಗಿಸಲು ರೆಡಿಯಾಗಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಅಮಿತ್ ಶಾ (Amit Sha) ಚಾಲನೆ ನೀಡಲಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಮಂಡ್ಯಗೆ ಅಮಿತ್ ಶಾ
ಮಂಡ್ಯದಲ್ಲಿ ಕೇಂದ್ರ ಗೃಹ ಸಚಿವರನ್ನು ಸ್ವಾಗತಿಸಲು ಬಿಜೆಪಿ ನಾಯಕರು, ಕಾರ್ಯಕರ್ತರು ರೆಡಿಯಾಗಿದ್ದಾರೆ. ಅಮಿತ್ ಶಾ ಎಂಟ್ರಿಗೆ ಭರ್ಜರಿ ಸಿದ್ದತೆ ನಡೆಸಲಾಗಿದ್ದು, ಅಮಿತ್ ಶಾ ಆಗಮಿಸುತ್ತಿದ್ದಂತೆ ಸುಮಾರು 11 ಗಂಟೆಗೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿರುವ ಮೆಗಾ ಡೈರಿ ಉದ್ಘಾಟನೆ ಮಾಡಲಿದ್ದಾರೆ.
ಮೆಗಾ ಡೈರಿ ಉದ್ಘಾಟನೆ
ಮೆಗಾ ಡೈರಿ 47 ಎಕರೆ ವಿಸ್ತೀರ್ಣದಲ್ಲಿದ್ದು, ಹಾಲು ಉತ್ಪಾದಕ ಘಟಕವನ್ನು 260.9 ಕೋಟಿ ವೆಚ್ಚದಲ್ಲಿ ತಯಾರಿಸಲಾಗಿದೆ. ಒಂದು ದಿನಕ್ಕೆ 30 ಮೆಟ್ರಿಕ್ ಟನ್ ಹಾಲಿನ ಪೌಡರ್ ಉತ್ಪಾದನೆ ಮಾಡಲಾಗುತ್ತದೆ. 4 ಮೆಟ್ರಿಕ್ ಟನ್ ಕೋವಾ, 2 ಮೆಟ್ರಿಕ್ ಟನ್ ಪನೀರ್, 12 ಮೆಟ್ರಿಕ್ ಟನ್ ತುಪ್ಪ
10 ಮೆಟ್ರಿಕ್ ಟನ್ ಬೆಣ್ಣೆ, 10 ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗ್ತಿದ್ದು,
ಮೆಗಾ ಡೈರಿಯಿಂದ ಉದ್ಘಾಟನೆಯಿಂದ 1 ವರ್ಷಕ್ಕೆ 6 ಕೋಟಿ ಹಣ ಉಳಿತಾಯವಾಗಲಿದೆ.
ಸಾರ್ವಜನಿಕ ಸಮಾವೇಶ ಕಾರ್ಯಕ್ರಮ
ಮೆಗಾ ಡೈರಿ ಉದ್ಘಾಟನೆ ಬಳಿಕ ಸಾರ್ವಜನಿಕ ಸಮಾವೇಶ ಕಾರ್ಯಕ್ರಮ ನಡೆಯಲಿದೆ. ಸುಮಾರು 1 ಸಾವಿರ ರೈತರನ್ನ ಉದ್ದೇಶಿಸಿ ಅಮಿತ್ ಶಾ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಸಿಎಂ ಎಸ್.ಎಮ್.ಕೆ, ಸಿಎಂ ಬಸವರಾಜ್ ಬೊಮ್ಮಾಯಿ, ನಿರ್ಮಲಾನಂದನಾಥ ಸ್ವಾಮಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ನಿಗದಿಯಂತೆ ನಡೆಯಲಿದೆ ಕಾರ್ಯಕ್ರಮ
ಪ್ರಧಾನಿ ಮೋದಿಯವರ ಸೂಚನೆ ಮೇರೆಗೆ ಇಂದಿನ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಗೆಜ್ಜಲಗೆರೆಯಲ್ಲಿ ಸಚಿವ ಸೋಮಶೇಖರ್ ಹೇಳಿದ್ದಾರೆ.
ಮೋದಿ ಅವರು ತಾಯಿಯ ಅಂತಿಮ ದರ್ಶನಕ್ಕೆ ಯಾರೂ ಬರಬೇಡಿ ನಿಮ್ಮ ಕಾರ್ಯಕ್ರಮ ಎಂದಿನಂತೆ ಮುಂದುವರೆಸಿರಿ ಎಂದು ಹೇಳಿದ್ದಾರೆ.
ಹೀಗಾಗಿ ಮಂಡ್ಯದಲ್ಲಿ ಅಮಿತ್ ಶಾ ಅವರ ಕಾರ್ಯಕ್ರಮಗಳು ನಿಗದಿಯಂತೆ ನಡೆಯಲಿದೆ ಎಂದು ಹೇಳಿದ್ದಾರೆ.
ಖಾತೆ ತೆರೆಯಲು ಬಿಜೆಪಿ ರಣತಂತ್ರ
ಕಾಂಗ್ರೆಸ್-ಜೆಡಿಎಸ್ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಖಾತೆ ತೆರೆಯಲು ರಣತಂತ್ರ ರೂಪಿಸಿದ್ದು, ಇದಕ್ಕಾಗಿ ಅಮಿತ್ ಶಾ ಆಗಮಿಸುತ್ತಿದ್ದಾರೆ. 2023ಕ್ಕೆ ಕನಿಷ್ಠ 20 ಸ್ಥಾನಗಳಲ್ಲಿ ಪಕ್ಷವನ್ನು ಗೆಲ್ಲಿಸುವಂತೆ ನಾಯಕರಿಗೆ ಟಾಸ್ಕ್ ನೀಡಿದ್ದಾರೆ. ಅದರಂತೆಯೇ ಬಿಜೆಪಿ ನಾಯಕರು ಪಕ್ಷದ ಬಲವರ್ಧನೆಗೆ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ.
ಜನಸಂಕಲ್ಪ ರಥಯಾತ್ರೆ
2019ರ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ಗೆಲುವಿನಿಂದ ಗಟ್ಟಿ ನೆಲೆ ದೊರಕಿದಂತಾಗಿದೆ. ಇದೇ ನೆಲದಿಂದಲೇ ಜನಸಂಕಲ್ಪ ರಥಯಾತ್ರೆ ನಡೆಸುವುದರೊಂದಿಗೆ ಬಿಜೆಪಿ ವಿಜಯಯಾತ್ರೆಯನ್ನು ಇನ್ನಷ್ಟು ವೇಗವಾಗಿ ಮುನ್ನಡೆಸಲು ಸಂಕಲ್ಪ ಮಾಡಿದೆ ಎನ್ನಲಾಗಿದೆ.
ಇದನ್ನೂ ಓದಿ: BMTC ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್! ಮತ್ತೆ ಬಸ್ ಟಿಕೆಟ್ ದರ ಹೆಚ್ಚಳ
ಮಂಡ್ಯದಲ್ಲಿ ಅಮಿತ್ ಶಾ ರಣಕಹಳೆ ಮೊಳಗಿಸಲು ರೆಡಿಯಾಗಿದ್ದು, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಅಮಿತ್ ಶಾ ಉತ್ಸಾಹ ತುಂಬಲಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಮಾಡಲಿದ್ದು, ಬಿಜೆಪಿ ಸಾರ್ವಜನಿಕ ಸಮಾವೇಶಕ್ಕೆ 1 ಲಕ್ಷ ಜನರು ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ