• Home
  • »
  • News
  • »
  • state
  • »
  • Bitcoin Scam: ಬಿಟ್‌ಕಾಯಿನ್ ಹಗರಣದ ಬಗ್ಗೆ ಇಂದು ಮಹತ್ವದ ಸಂಸದೀಯ ಸ್ಥಾಯಿ ಸಮಿತಿ ಸಭೆ!

Bitcoin Scam: ಬಿಟ್‌ಕಾಯಿನ್ ಹಗರಣದ ಬಗ್ಗೆ ಇಂದು ಮಹತ್ವದ ಸಂಸದೀಯ ಸ್ಥಾಯಿ ಸಮಿತಿ ಸಭೆ!

Bitcoin / ಬಿಟ್‌ಕಾಯಿನ್

Bitcoin / ಬಿಟ್‌ಕಾಯಿನ್

ಮಧ್ಯಾಹ್ನ 3 ಗಂಟೆಗೆ ನಡೆಯುವ ಸಭೆಯಲ್ಲಿ ಇತ್ತೀಚೆಗೆ ಚರ್ಚೆ ಆಗುತ್ತಿರುವ ಬಿಟ್ ಕಾಯಿನ್ ಹಗರಣದ ಬಗ್ಗೆ, ಬಿಟ್ ಕಾಯಿನ್ ಚಲಾವಣೆ ಬಗ್ಗೆ ಹಣಕಾಸು ಕ್ಷೇತ್ರದ ತಜ್ಞರು (Economy Exports) ಮತ್ತು ಬಿಟ್ ಕಾಯನ್ ಮಾರುಕಟ್ಟೆ (Bitcoin Market) ಸಂಸ್ಥೆಗಳಿಂದ ಮಾಹಿತಿ ಸಂಗ್ರಹ ಮಾಡಲಾಗುತ್ತದೆ ಎನ್ನಲಾಗಿದೆ.

ಮುಂದೆ ಓದಿ ...
  • Share this:

ನವದೆಹಲಿ, ನ. 15: ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ (Bitcoin Scam) ಭಾರೀ ಸದ್ದು ಮಾಡುತ್ತಿದೆ. ಎಷ್ಟರಮಟ್ಟಿಗೆ ಎಂದರೆ ಇದೇ ವಿಷಯವನ್ನು ಬಳಸಿಕೊಂಡು ಪ್ರತಿಪಕ್ಷ ಕಾಂಗ್ರೆಸ್ (Congress) ಮತ್ತು ಆಡಳಿತಾರೂಢ ಬಿಜೆಪಿ (BJP) ನಾಯಕರು ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದಲ್ಲದೆ ಭಾರತದಾದ್ಯಂತ ಬಿಟ್ ಕಾಯಿನ್ ಅವ್ಯವಹಾರ ನಡೆಯುತ್ತಿದೆ. ಬಿಟ್ ಕಾಯಿನ್ ವ್ಯಾಲೆಟ್ (Bitcoin Wallet) ಗಳನ್ನು ಹ್ಯಾಕ್ ಮಾಡಿ ಕ್ರಿಪ್ಟೋ ಕರೆನ್ಸಿ (Crypto Currency) ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾಯಿಸಲಾಗುತ್ತಿದೆ. ಕೆಲವು ಅಂತಾರಾಷ್ಟ್ರೀಯ ಸಂಘ - ಸಂಸ್ಥೆಗಳು ಮತ್ತು ವಿದೇಶಿ ಸರ್ಕಾರಗಳ ಬೊಕ್ಕಸಕ್ಕೂ ಕನ್ನ ಹಾಕಲಾಗಿದೆ ಎಂಬೆಲ್ಲಾ ದೂರುಗಳು ಕೇಳಿಬರುತ್ತಿವೆ. ಈ‌ ಹಿನ್ನೆಲೆಯಲ್ಲಿ ಇಂದು ಕೇಂದ್ರ ಹಣಕಾಸು ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯ ಮಹತ್ವದ ಸಭೆ ನಡೆಯಲಿದೆ.


ಮಧ್ಯಾಹ್ನ 3 ಗಂಟೆಗೆ ನಡೆಯುವ ಸಭೆಯಲ್ಲಿ ಇತ್ತೀಚೆಗೆ ಚರ್ಚೆ ಆಗುತ್ತಿರುವ ಬಿಟ್ ಕಾಯಿನ್ ಹಗರಣದ ಬಗ್ಗೆ, ಬಿಟ್ ಕಾಯಿನ್ ಚಲಾವಣೆ ಬಗ್ಗೆ ಹಣಕಾಸು ಕ್ಷೇತ್ರದ ತಜ್ಞರು (Economy Exports) ಮತ್ತು ಬಿಟ್ ಕಾಯನ್ ಮಾರುಕಟ್ಟೆ (Bitcoin Market) ಸಂಸ್ಥೆಗಳಿಂದ ಮಾಹಿತಿ ಸಂಗ್ರಹ ಮಾಡಲಾಗುತ್ತದೆ ಎನ್ನಲಾಗಿದೆ.


ಮೊನ್ನೆ ಬಿಟ್ ಕಾಯಿನ್ ಅವ್ಯವಹಾರದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ನೇತೃತ್ವದಲ್ಲಿ ನಡೆದಿದ್ದ ಕೇಂದ್ರ ಸರ್ಕಾರದ ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಾಗಿತ್ತು. ಇದಾದ ಬಳಿಕ ಇಂದು ಕೇಂದ್ರ ಹಣಕಾಸು ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯ ಸಭೆ ನಡೆಯುತ್ತಿದೆ.


ರಿಸರ್ವ್ ಬ್ಯಾಂಕ್ ನಿಷೇಧಕ್ಕೆ ಸುಪ್ರೀಂ ತಡೆ


ಕ್ರಿಪ್ಟೋ ಕರೆನ್ಸಿ ವಹಿವಾಟಿಗೆ 2018ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ನಿಷೇಧ ಹೇರಿತ್ತು.‌ ಬ್ಯಾಂಕ್‌ಗಳು (Banks) ಮತ್ತು ಹಣಕಾಸು ಸಂಸ್ಥೆಗಳು (Financial Institutions) ಕ್ರಿಪ್ಟೋ ಕರೆನ್ಸಿ ಮೂಲಕ ವಹಿವಾಟು ನಡೆಸುವಂತಿಲ್ಲ ಎಂದು ನಿಷೇಧ ಹೇರಿತ್ತು. ಆನಂತರದಲ್ಲಿ 2020ರಲ್ಲಿ ಸುಪ್ರೀಂ ಕೋರ್ಟ್ ರಿಸರ್ವ್ ಬ್ಯಾಂಕ್ ನಿಷೇಧಕ್ಕೆ ತಡೆ ನೀಡಿತ್ತು.


ಇದನ್ನೂ ಓದಿ:  Bitcoin Scam ಬಗ್ಗೆ ಪ್ರಧಾನಿ ಮೋದಿ ಮೊದಲು ಪ್ರತಿಕ್ರಿಯೆ ನೀಡಲೇಬೇಕು: ರಣದೀಪ್ ಸುರ್ಜೆವಾಲಾ ಆಗ್ರಹ


ಆ ಸಂದರ್ಭದಲ್ಲಿ ಕ್ರಿಪ್ಟೋ ಕರೆನ್ಸಿಯ ಆನ್‌ಲೈನ್ ವಹಿವಾಟಿಗೆ (Online Transaction) ಅವಕಾಶವನ್ನು ಮಾಡಿಕೊಡಲಾಗಿತ್ತು. ಇದಾದ ಮೇಲೆ ಕೇಂದ್ರ ಸರ್ಕಾರ (Union Government) ಹೊಸ ನಿಯಮಗಳನ್ನು ರೂಪಿಸಿ ಕ್ರಿಪ್ಟೋಕರೆನ್ಸಿ ಮೂಲಕ ಗಳಿಸಿದ ಹಣ ಅಥವಾ ಆಗಿರುವ ನಷ್ಟದ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯ ಎಂದು ಹೇಳಿತ್ತು.


ಕಂಪನಿಗಳು ತಮ್ಮ ಬ್ಯಾಲೆನ್ಸ್‌ಶೀಟ್‌ನಲ್ಲಿ ಕ್ರಿಪ್ಟೋ ವ್ಯವಹಾರದ ಬಗ್ಗೆ ನಮೂದಿಸಬೇಕೆಂದು ಹೇಳಿತ್ತು‌ ಹೀಗೆ ಕ್ರಿಪ್ಟೋ ಕರೆನ್ಸಿ ವ್ಯವಹಾರ ಅಸ್ಪಷ್ಟತೆಯಿಂದ ಕೂಡಿದ್ದು ಅದರ ಬಗ್ಗೆ ತಜ್ಞರಿಂದ ಇಂದಿನ ಸ್ಥಾಯಿ ಸಮಿತಿ ಸಭೆ ಮಾಹಿತಿ‌ ಸಂಗ್ರಹಿಸಲಿದೆ ಎನ್ನಲಾಗುತ್ತಿದೆ.


ಬಹಳ ದೊಡ್ಡ ಹಗರಣ


ಬಿಟ್‌ಕಾಯಿನ್ ಹಗರಣ ದೊಡ್ಡದು. ಅದಕ್ಕಿಂತ ಮುಚ್ಚುಡಿತ್ತಿರುವುದು ಇನ್ನೂ ದೊಡ್ಡದು. ಏಕೆಂದರೆ ಅದು ಯಾರದೋ ಹುಸಿ ವರ್ಚಸ್ಸನ್ನು ಮುಚ್ಚಿಡುವಂಥದ್ದು' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಒಗಟಿನ ರೂಪದಲ್ಲಿ ಟ್ವೀಟ್ (Tweet) ಮಾಡಿರುವ ರಾಹುಲ್ ಗಾಂಧಿ ಅವರು ಯಾರ ಹೆಸರನ್ನೂ ಹೇಳದೆ ಪರೋಕ್ಷವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ಕಡೆಗೆ ಬೊಟ್ಟು ಮಾಡಿದ್ದಾರೆ. ಬಿಟ್ ಕಾಯಿನ್ ಹಗರಣ ಬಯಲಾದರೆ ಅವರ ವರ್ಚಸ್ಸಿಗೆ ಧಕ್ಕೆ ಆಗಲಿದೆ, ಅದೇ ಕಾರಣಕ್ಕೆ ಮುಚ್ಚಿಡುತ್ತಿದ್ದಾರೆ ಎಂದು ಹೇಳಿದ್ದಾರೆ.


ಇದನ್ನೂ ಓದಿ:  Bitcoin Scam ಸಂಬಂಧ ಸರ್ಕಾರದ ಸ್ಪಷ್ಟನೆ; ಕಾಂಗ್ರೆಸ್ ಆರೋಪಗಳಿಗೆ ಸಚಿವ Sudhakar ಉತ್ತರ!


ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ (Ranadeep Surjewala) ಬಿಟ್ ಕಾಯಿನ್ ಹಗರಣದ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಹಾಲಿ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (Special Investigation Team) ಮೂಲಕ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.


ಒಂದು ಬಿಟ್ ಕಾಯಿನ್ 51 ಲಕ್ಷ ರೂಪಾಯಿ


ಅಲ್ಲದೆ ಬಿಟ್ ಕಾಯಿನ್ ಹಗರಣ  ಅತ್ಯಂತ ದೊಡ್ಡ ಹಗರಣ. ಈ‌ ಹಗರಣದ ನಾಯಕ ಮತ್ತು ಖಳನಾಯಕ ಇಬ್ವರೂ ಬಿಜೆಪಿಯವರೇ. ಭಾರತದ ರೂಪಾಯಿ ಪ್ರಕಾರ ಒಂದು ಬಿಟ್ ಕಾಯಿನ್ 51 ಲಕ್ಷ ರೂಪಾಯಿ. ಯಾಕೆ ಈ ಹಗರಣದ ಬಗ್ಗೆ ಜಾರಿ‌ ನಿರ್ದೇಶನಾಲಯ (Enforcement Directorate), ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ಮತ್ತು ಇಂಟರ್ ಪೋಲ್ (Interpol)  ಸುಮ್ಮನಿವೆ? ಎಂದು ಪ್ರಶ್ನಿಸಿದ್ದರು.


ದಿಕ್ಕು ತಪ್ಪಿಸಿ ಮಾಡಿರುವ ಹಗರಣ


ರಾಜ್ಯದ ಬಿಜೆಪಿ ಸರ್ಕಾರ ಬಿಟ್ ಕಾಯಿನ್ ಹಗರಣದಲ್ಲಿ ಶಾಮೀಲಾಗಿದೆ. ಇದು ಅತ್ಯಂತ ಷಡ್ಯಂತ್ರ ರೂಪಿಸಿ ಮಾಡಿರುವ ಹಗರಣ. ತನಿಖಾ ಸಂಸ್ಥೆಗಳ ದಿಕ್ಕು ತಪ್ಪಿಸಿ ಮಾಡಿರುವ ಹಗರಣ. ತನಿಖೆಯನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದಲೇ ಜಾರಿ‌ ನಿರ್ದೇಶನಾಲಯ, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಇಂಟರ್ ಪೋಲ್ ಗಳಿಗೆ ತಿಳಿಸಿಲ್ಲ.


ಬಿಟ್ ಕಾಯಿನ್ ಹಗರಣದ ವಿಚಾರಣೆಗೆಂದು 2019ರ ನವೆಂಬರ್ 14 ಶ್ರೀಕಿಯನ್ನು ಬಂಧಿಸಲಾಗಿದೆ.  ಆತ 120 ದಿನ ಕಸ್ಟಡಿಯಲ್ಲಿ ಇದ್ದ. ಅವನ ವಿರುದ್ಧ 5 ದೂರು ದಾಖಲಿಸಲಾಗಿದೆ. ಒಂದು ಕೇಸಿನಲ್ಲಿ ಕಸ್ಟಡಿ ಮುಗಿಯುತ್ತಿದ್ದಂತೆ ಇನ್ನೊಂದು ಕೇಸ್ ಮೇಲೆ ಬಂಧಿಸಲಾಗಿದೆ.


ರಣದೀಪ್ ಸುರ್ಜೆವಾಲಾ ಪ್ರಶ್ನೆ


ಶ್ರೀಕಿ ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ 'ಬೇರೆ ಬೇರೆ ದೇಶಗಳ ಕಂಪನಿ, ಸರ್ಕಾರಿ ಖಾತೆಗಳನ್ನು ಹ್ಯಾಕ್ ಮಾಡಿದ್ದಾನೆ ಎಂಬ ಸಂಗತಿಗಳನ್ನು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದೇನೆ' ಎಂದು ಹೇಳಿದ್ದಾನೆ. ಆದರೆ ಕರ್ನಾಟಕ ಸರ್ಕಾರ (Karnataka Government) ಇಂಟರ್ ಪೋಲ್ ಗೆ ಮಾಹಿತಿ ನೀಡಿಲ್ಲ. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಹಿಂದೆ ಗೃಹ ಸಚಿವರಾಗಿದ್ದಾಗಲೇ ಈ ಹಗರಣ ಬೆಳಕಿಗೆ ಬಂದಿದೆ. ಶ್ರೀಕಿಯನ್ನು ಬಂಧಿಸಿದಾಗ, ಬಿಡುಗಡೆಯಾದಾಗ ಕೂಡ ಬೊಮ್ಮಾಯಿ ಗೃಹ ಸಚಿವರಾಗಿದ್ದರು ಎಂದು ರಣದೀಪ್ ಸುರ್ಜೆವಾಲಾ ವಿವರಿಸಿದ್ದರು.


5,200 ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ವರ್ಗಾವಣೆ?


1.20 ಲಕ್ಷ ಬಿಟ್ ಕಾಯಿನ್ ಕದ್ದಿರುವುದಾಗಿ ಶ್ರೀಕಿ ಹೇಳಿದ್ದಾನೆ. ಒಂದು ಬಿಟ್ ಕಾಯಿನ್ ಗೆ 51 ಲಕ್ಷ ರೂಪಾಯಿ ಇದೆ. ಶ್ರೀಕಿ ಡಾರ್ಕ್ ವೆಬ್ ಹ್ಯಾಕ್ ಮಾಡಿರುವ ಮಾಹಿತಿ ಇದೆ. ಬೆಂಗಳೂರು ಪೊಲೀಸರು ಶ್ರೀಕಿ ಬಳಿ 31 ಬಿಟ್​ ಕಾಯಿನ್ ವಶಕ್ಕೆ ಪಡೆದಿದ್ದರು. 9 ಕೋಟಿ ಮೌಲ್ಯದ ಆ ಬಿಟ್ ಕಾಯಿನ್ ಎಲ್ಲಿಗೆ ಹೋದವು? ಈ ಬಗ್ಗೆ ಬೆಂಗಳೂರು ಪೊಲೀಸರೇ ಹೇಳಿದ್ದಾರೆ. ಆನಂತರ ಇಲ್ಲ ಎಂದಿದ್ದಾರೆ. 24 ವ್ಯಾಲೆಟ್ ಗಳಿಂದ ಬಿಟ್ ಕಾಯಿನ್ ಗಳ ವರ್ಗಾವಣೆ ಆಗಿದೆ. ಕದ್ದಿರುವ ಬಿಟ್ ಕಾಯಿನ್ ಗಳ ವರ್ಗಾವಣೆ ಮಾಡಲಾಗಿದೆ. 2 ದಿನದಲ್ಲಿ 5,200 ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ವರ್ಗಾವಣೆ ಮಾಡಲಾಗಿದೆ. ಈ ಎರಡು ದಿನ ಆತ ಬೆಂಗಳೂರು ಪೊಲೀಸರ ವಶದಲ್ಲಿದ್ದ ಎಂದು ಗಂಭೀರ ಆರೋಪ ಮಾಡಿದ್ದರು.


ಬಿಟ್ ಕಾಯಿನ್ ಹಗರಣದ ನಾಯಕ, ಖಳನಾಯಕ ಯಾರು?


'ಬಿಟ್ ಕಾಯಿನ್ ಬಗ್ಗೆ ಚಿಂತಿಸಬೇಡಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ' ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಹಾಗಾದರೆ ಬಿಟ್ ಕಾಯಿನ್ ಹಗರಣದ ನಾಯಕ, ಖಳನಾಯಕ ಯಾರು? ಪ್ರಧಾನಿ ಜೊತೆ ಚರ್ಚೆ ಮಾಡಿದ ಬಸವರಾಜ ಬೊಮ್ಮಾಯಿ ಹಗರಣದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಯಾಕೆ ತಿಳಿಸಿಲ್ಲ? ಎಂದು ಪ್ರಶ್ನೆ ಮಾಡಿದ್ದರು.

Published by:Mahmadrafik K
First published: