ಕೇಂದ್ರ ಬಜೆಟ್​​​ನಲ್ಲಿ ಹೈದರಾಬಾದ್​​-ಕರ್ನಾಟಕ ಭಾಗಕ್ಕೆ ತೀವ್ರ ನಿರಾಸೆ; ಜನತೆಯ ಬೇಸರ

ನಿಮ್ಜ್ ಸ್ಥಾಪನೆ, ಕೈಗಾರಿಕಾ ಕಾರಿಡಾರ್ ಸ್ಥಾಪನೆ, ತೊಗರಿ ಅಭಿವೃದ್ಧಿಗೆ ಪೂರಕವಾದ ಯಾವುದೇ ಅಂಶಗಳು ಬಜೆಟ್ ನಲ್ಲಿಲ್ಲ ಎಂದು ಈ ಭಾಗದ ಜನತೆ ನಿರಾಸೆ ವ್ಯಕ್ತಪಡಿಸಿದೆ. ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಹೈದರಾಬಾದ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮರನಾಥ ಪಾಟೀಲ, ಕೇಂದ್ರ ಬಜೆಟ್ ತೀವ್ರ ನಿರಾಸೆ ತಂದಿದೆ ಎಂದಿದ್ದಾರೆ.

 ಹೈದರಾಬಾದ್​​-ಕರ್ನಾಟಕ

ಹೈದರಾಬಾದ್​​-ಕರ್ನಾಟಕ

  • Share this:
ಕಲಬುರ್ಗಿ(ಫೆ.01): ಕೋವಿಡ್ ನಂತರ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಬಹು ನಿರೀಕ್ಷಿತ ಬಜೆಟ್ ಕೆಲ ವಲಯಗಳ ಜನತೆಗೆ ತೀವ್ರ ನಿರಾಸೆ ಮೂಡಿಸಿದೆ. ಅದರಲ್ಲಿಯೂ ಅತ್ಯಂತ ಹಿಂದುಳಿದ ಭಾಗವೆನಿಸಿಕೊಂಡ ಹೈದರಾಬಾದ್ ಕರ್ನಾಟಕಕ್ಕೆ ಬಜೆಟ್ ನಲ್ಲಿ ಯಾವುದೇ ಯೋಜನೆಗಳು ಘೋಷಣೆಯಾಗಿಲ್ಲ. ಇದರಿಂದಾಗಿ ಈ ಭಾಗದ ಜನತೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನಿರೀಕ್ಷೆಗಳೆಲ್ಲವೂ ಹುಸಿಯಾಗುವ ಜೊತೆಗೆ ತೈಲ ದರ ಏರಿಕೆಯ ಬರೆ ಹಾಕಿಸಿಕೊಳ್ಳುವಂತಾಗಿದೆ ಎಂದು ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಇಂದು ಮಂಡಿಸಿದ ಬಜೆಟ್ ಮೇಲೆ ಹೈದರಾಬಾದ್ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕದ ಜನತೆ ಬೆಟ್ಟದಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು.  ಹಿಂದುಳಿದ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ಸಿಗಲಿದೆ. ರೈಲ್ವೆ ವಿಭಾಗೀಯ ಕೇಂದ್ರಕ್ಕೆ ಹೆಚ್ಚಿನ ಅನುದಾನ ಘೋಷಣೆಯಾಗಲಿದೆ. ಕಲಬುರ್ಗಿಯಲ್ಲಿ ಏಮ್ಸ್ ಸ್ಥಾಪಿಸೋ ಘೋಷಣೆಯಾಗಲಿದೆ ಎಂಬಿತ್ಯಾದಿ ನಿರೀಕ್ಷೆಗಳೆಲ್ಲವೂ ಹುಸಿಯಾಗಿವೆ.

ಸಂವಿಧಾನದ ಕಲಂ 371(ಜೆ) ಅಡಿ ವಿಶೇಷ ಅನುದಾನ ಸಿಗಬಹುದು. ಹಿಂದುಳಿದ ಭಾಗದ ಅಭಿವೃದ್ಧಿಗೆ ಒತ್ತು ಸಿಗೋ ಸಾಧ್ಯತೆಗಳಿವೆ ಎಂದು ಈ ಭಾಗದ ಜನತೆ ನಂಬಿಕೆಯಿಟ್ಟಿದ್ದರು. ಆದರೆ ಜನರ ನಿರೀಕ್ಷೆಯ ಒಂದಂಶವೂ ಬಜೆಟ್ ನಲ್ಲಿ ಪ್ರಸ್ತಾಪ ಆಗಿಲ್ಲ. ಅದರಲ್ಲಿಯೂ ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ಘೋಷಣೆಯಾಗಿದ್ದ ಕಲಬುರ್ಗಿ ರೈಲ್ವೆ ವಿಭಾಗಿಯ ಕಛೇರಿಗೆ ಹೆಚ್ಚಿನ ಅನುದಾನ ಸಿಗಬಹುದು ಎಂದುಕೊಂಡಿದ್ದವರಿಗೆ ತೀವ್ರ ನಿರಾಸೆಯಾಗಿದೆ.

ಅಲ್ಲದೆ ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾದ ನಂತರ ಈ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿಯಾಗಬಹುದೆಂದು ಲೆಕ್ಕ ಹಾಕಲಾಗಿತ್ತು. ಅದಕ್ಕೆ ಪೂರಕವಾಗಿ ಬಜೆಟ್ ನಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಕೈಗಾರಿಕಾ ಅಭಿವೃದ್ಧಿಗೆ ಯೋಜನೆ ಘೋಷಣೆಯಾಗಬಹುದೆಂಬ ಲೆಕ್ಕಾಚಾರ ತಲೆಕೆಳಗಾಗಿದೆ.

ನಿಮ್ಜ್ ಸ್ಥಾಪನೆ, ಕೈಗಾರಿಕಾ ಕಾರಿಡಾರ್ ಸ್ಥಾಪನೆ, ತೊಗರಿ ಅಭಿವೃದ್ಧಿಗೆ ಪೂರಕವಾದ ಯಾವುದೇ ಅಂಶಗಳು ಬಜೆಟ್ ನಲ್ಲಿಲ್ಲ ಎಂದು ಈ ಭಾಗದ ಜನತೆ ನಿರಾಸೆ ವ್ಯಕ್ತಪಡಿಸಿದೆ. ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಹೈದರಾಬಾದ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಮರನಾಥ ಪಾಟೀಲ, ಕೇಂದ್ರ ಬಜೆಟ್ ತೀವ್ರ ನಿರಾಸೆ ತಂದಿದೆ ಎಂದಿದ್ದಾರೆ.

ಬೇಗೂರು ಸುತ್ತಮುತ್ತ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಸೆರೆ

ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಎಂ.ಎಸ್.ಎಂ.ಇ. ಬೆಳವಣಿಗೆಗೆ ಬಜೆಟ್ ನಲ್ಲಿ ಒತ್ತುಕೊಟ್ಟಿಲ್ಲ. ಕಾರ್ಪೊರೇಟ್ ಸೆಕ್ಟರ್ ಗಳಿಗೆ ತೆರಿಗೆ ಕಡಿತ ಮಾಡಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೃಷಿ ಸೆಸ್ ವಿಧಿಸಿರೋದು ಜನಸಾಮಾನ್ಯರಿಗೆ ದೊಡ್ಡ ಹೊಡೆತ. ಜನಸಾಮಾನ್ಯರ ಬದುಕು ದುರ್ಭರ ಆಗೋದು ಖಚಿತ. ಪ್ರತಿಯೊಂದರ ಬೆಲೆಯೂ ಹೆಚ್ಚಲಿದೆ. ಕೃಷಿ ವಲಯಕ್ಕೂ ನಿರೀಕ್ಷಿತ ಪ್ರಮಾಣದ ಲಾಭಗಳಾಗಿಲ್ಲ. 371(ಜೆ) ಅನ್ವಯ ಹೈದರಾಬಾದ್ ಕರ್ನಾಟಕ್ಕೆ ವಿಶೇಷ ಒತ್ತು ಸಿಗುತ್ತದೆ ಅನ್ನೋ ನಿರೀಕ್ಷೆ ಹುಸಿಯಾಗಿದೆ.

ಕಲಬುರ್ಗಿ ಗೆ ಏಮ್ಸ್ ತರೋ ವಿಚಾರ ಪ್ರಸ್ತಾಪಿಸಿಲ್ಲ. ಕೈಗಾರಿಕಾ ಕಾರಿಡಾರ್, ಕಲಬುರ್ಗಿ ಪ್ರತ್ಯೇಕ ರೈಲ್ವೆ ವಲಯ, ನಿಮ್ಜ್ ಬಗ್ಗೆಯೂ ಯಾವುದೇ ಘೋಷಣೆಯಿಲ್ಲ. ಆತ್ಮ ನಿರ್ಭರ ಯೋಜನೆಯಡಿ ಆಮದು ಶುಲ್ಕ ಹೆಚ್ಚಳ ಒಳ್ಳೆಯ ಬೆಳವಣಿಗೆ. ಹಿರಿಯ ನಾಗರೀಕರಿಗೆ ತೆರಿಗೆ ರಿಟರ್ನ್ಸ್ ವಿನಾಯಿತಿ ಸ್ವಾಗತಾರ್ಹ. ಉಳಿದಂತೆ ಬಜೆಟ್ ಬಗ್ಗೆ ತೀವ್ರ ನಿರಾಸೆಯಾಗಿದೆ ಎಂದು ಅಮರನಾಥ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಂದೆಡೆ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಶರಣಬಸಪ್ಪ ಮಮಶೆಟ್ಟಿ, ಕೇಂದ್ರ ಬಜೆಟ್ ರೈತ ವಿರೋಧಿಯಾಗಿದೆ ಎಂದು ಕಿಡಿಕಾರಿದ್ದಾರೆ. ಕೃಷಿಗೆ ಸೆಸ್ ಸಂಗ್ರಹಿಸೋ ಹೆಸರಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡಲಾಗಿದೆ. ಇದರಿಂದಾಗಿ ಮೇಲ್ನೋಟಕ್ಕೆ ರೈತರಿಗೆ ಲಾಭ ಅನಿಸಿದರೂ, ಪರೋಕ್ಷವಾಗಿ ರೈತ ಸಮುದಾಯಕ್ಕೂ ತೈಲ ದರ ಏರಿಕೆಯ ಹೊರೆ ಬೀಳಲಿದೆ. ಅಗತ್ಯ ವಸ್ತುಗಳ ದರ ಗಗನಮುಖಿಯಾಗಲಿದೆ. ಬೆಂಬಲ ಬೆಲೆ ಹೆಚ್ಚಳ ಇತ್ಯಾದಿಗಳ ಕಡೆ ಬಜೆಟ್ ನಲ್ಲಿ ಗಮನ ಹರಿಸಿಲ್ಲ. ಸ್ವಾಮಿನಾಥನ್ ವರದಿ ಜಾರಿಗೆ ಕ್ರಮ ಕೈಗೊಂಡಿಲ್ಲ ಎಂದು ಮಮಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಇಂದು ಮಂಡನೆಯಾದ ಕೇಂದ್ರ ಬಜೆಟ್ ಹೈದರಾಬಾದ್-ಕರ್ನಾಟಕ ಭಾಗದ ಮಟ್ಟಿಗೆ ತೀವ್ರ ನಿರಾಸೆ ಮೂಡಿಸಿದೆ. ಹಿಂದುಳಿದ ಭಾಗದ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಅನ್ನೋ ಅಸಮಾಧಾನ ವ್ಯಕ್ತವಾಗಿದೆ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡ ತಾರದಿರುವುದೂ ಕಾರಣ ಎಂದು ಆಕ್ರೋಶ ಹೊರಹೊಮ್ಮಿದೆ.
Published by:Latha CG
First published: