• Home
  • »
  • News
  • »
  • state
  • »
  • Karnataka Politics - ಸಿಎಂ ಯಡಿಯೂರಪ್ಪ ಮೇಲೆ ಮುರುಗೇಶ್ ನಿರಾಣಿ ಮುನಿಸು?

Karnataka Politics - ಸಿಎಂ ಯಡಿಯೂರಪ್ಪ ಮೇಲೆ ಮುರುಗೇಶ್ ನಿರಾಣಿ ಮುನಿಸು?

ಶಾಸಕ ಮುರುಗೇಶ​ ನಿರಾಣಿ

ಶಾಸಕ ಮುರುಗೇಶ​ ನಿರಾಣಿ

Rebel Politics - ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಸಿಗದಿದ್ದಾಗ ಒಳಗೊಳಗೆ ಅತೃಪ್ತಿಯಿದ್ದರೂ ತೋರಿಸಿಕೊಳ್ಳದೆ ಬಿಎಸ್ ಯಡಿಯೂರಪ್ಪನವರೊಂದಿಗೆ ಅಂತರ ಕಾಯ್ದುಕೊಂಡು ತಮ್ಮ ಕ್ಷೇತ್ರ, ಕೈಗಾರಿಕೋದ್ಯಮದತ್ತ ತೊಡಗಿಸಿಕೊಂಡಿದ್ದರು.

  • Share this:

ಬಾಗಲಕೋಟೆ(ಮೇ 29): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರೊಂದಿಗೆ  ಮಾಜಿ ಸಚಿವ, ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ್ ನಿರಾಣಿ ಮುನಿಸಿಕೊಂಡಿದ್ದಾರಾ ಅನ್ನೋದು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯಾಕೆಂದರೆ ಮೈತ್ರಿ ಸರ್ಕಾರ ಪತನದ ಬಳಿಕ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಸಚಿವರಾಗುವ ಕನಸು ಕಂಡಿದ್ದರು. ಬಿಎಸ್ ಯಡಿಯೂರಪ್ಪನವರ ಅತ್ಯಾಪ್ತರಲ್ಲಿ ಮುರುಗೇಶ್ ನಿರಾಣಿ ಕೂಡ ಒಬ್ಬರು. ಯಾವಾಗಲೂ ಯಡಿಯೂರಪ್ಪನವರ ಎಡ-ಬಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಬಹುತೇಕವಾಗಿ ಸಿಗುತ್ತೆ ಎಂದು ಹೇಳಲಾಗುತ್ತಿತ್ತು. ಆದರೆ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ದಕ್ಕಲಿಲ್ಲ.


ಹಿಂದೆ ಬಿಜೆಪಿ ಸರ್ಕಾರದಲ್ಲಿ ಮುರುಗೇಶ್ ನಿರಾಣಿ ಕೈಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸಿ ಆ ಕ್ಷೇತ್ರದಲ್ಲಿ ರಾಜ್ಯ ಅಭಿವೃದ್ಧಿ ಕಾಣುವಂತೆ ಮಾಡಿದ್ದರು. ಈ ಬಾರಿ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಸಿಗದಿದ್ದಾಗ ಒಳಗೊಳಗೆ ಅತೃಪ್ತಿಯಿದ್ದರೂ ತೋರಿಸಿಕೊಳ್ಳದೆ ಬಿಎಸ್ ಯಡಿಯೂರಪ್ಪನವರೊಂದಿಗೆ ಅಂತರ ಕಾಯ್ದುಕೊಂಡು ತಮ್ಮ ಕ್ಷೇತ್ರ, ಕೈಗಾರಿಕೋದ್ಯಮದತ್ತ ತೊಡಗಿಸಿಕೊಂಡಿದ್ದರು.


ಇದನ್ನೂ ಓದಿ: ಕೈ ಚಾಚಿ ಮಂತ್ರಿಗಿರಿ ಕೇಳುವ ಅಯೋಗ್ಯ ನಾನಲ್ಲ; ಯಡಿಯೂರಪ್ಪ ಸಿಎಂ ಆಗಿರೋವರೆಗೂ ಸಚಿವ ಸ್ಥಾನ ಕೇಳಲ್ಲ: ಯತ್ನಾಳ


ಸಚಿವ ಸಂಪುಟ ವಿಸ್ತರಣೆ ಚರ್ಚೆಗೆ ಬಂದಾಗಲೊಮ್ಮೆ ಮುರುಗೇಶ್ ನಿರಾಣಿ ಸಚಿವ ಸ್ಥಾನದ ಆಕಾಂಕ್ಷಿ ಎನಿಸಿದ್ದರು. ಜನವರಿ ತಿಂಗಳಲ್ಲಿ  ಲಿಂಗಾಯತ ಪಂಚಮಸಾಲಿ ಹರಿಹರ ಪೀಠದ  ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ದಾವಣಗೆರೆಯಲ್ಲಿ ನಡೆದಿದ್ದ ಹರ ಜಾತ್ರೆಯ ಕಾರ್ಯಕ್ರಮದಲ್ಲಿ ನೇರವಾಗಿಯೇ ಸಿಎಂ ಯಡಿಯೂರಪ್ಪರಿಗೆ ವಚನಾನಂದ ಸ್ವಾಮೀಜಿ ಮುರುಗೇಶ್ ನಿರಾಣಿ ಮಂತ್ರಿ ಮಾಡಿ ಇಲ್ಲವೇ ಪರಿಣಾಮ ಎದುರಿಸಿ ಎಂದಿದ್ದರು. ಆಗ ಯಡಿಯೂರಪ್ಪರಿಗೆ ಒತ್ತಡ  ಹಾಕುವ ಮೂಲಕ ಮುರುಗೇಶ್ ನಿರಾಣಿ ಬೆನ್ನಿಗೆ ನಿಂತಿದ್ದ ಸ್ವಾಮೀಜಿಗೆ ಯಡಿಯೂರಪ್ಪ, ಈ ರೀತಿ ಬೆದರಿಸಿಬೇಡಿ ಎಂದು ಕಾರ್ಯಕ್ರಮದಲ್ಲೆ ಬಹಿರಂಗವಾಗಿಯೇ ಸಿಡುಕಿದ್ದರು. ಈ ವೇಳೆ ವಚನಾನಂದ ಸ್ವಾಮೀಜಿ ಹಾಗೂ ಯಡಿಯೂರಪ್ಪ ಮಧ್ಯೆ ಮಾತಿಗೆ ಮಾತು ಬೆಳೆದು ಕಾರ್ಯಕ್ರಮದಲ್ಲಿ ಸಂಚಲನ ಸೃಷ್ಟಿಸಿತ್ತು. ಆಗ ಯಡಿಯೂರಪ್ಪ ಮುರುಗೇಶ್ ನಿರಾಣಿಗೆ ಇದನ್ನೇ ಹೇಳಿಸಲು ಇಲ್ಲಿಗೆ ಕರೆದುಕೊಂಡು ಬಂದಿದ್ದಿಯೇನು ಎಂದು ಗರಂ ಆಗಿದ್ದರು. ಆ ಬಳಿಕ ಬಿಎಸ್ ಯಡಿಯೂರಪ್ಪರೊಂದಿಗೆ ಮುರುಗೇಶ್ ನಿರಾಣಿ ಮತ್ತಷ್ಟು  ಅಂತರ ಕಾಯ್ದುಕೊಂಡು ದೂರವೇ ಉಳಿದರು. ಸಹಜವಾಗಿ ರಾಜಕೀಯ ವಲಯದಲ್ಲಿ ಮುರುಗೇಶ್ ನಿರಾಣಿ ಮುನಿಸಿನ ಸುದ್ದಿ ಹರದಾಡುತ್ತಲೇ ಇದೆ‌.


ಇದನ್ನೂ ಓದಿ: ಅಸಮಾಧಾನಿತರ ಸಭೆ ನಡೆಸಿದ್ದ ಉಮೇಶ್ ಕತ್ತಿ ಮೇಲೆ ಸಿಎಂ ಯಡಿಯೂರಪ್ಪ ಕೆಂಗಣ್ಣು


ಇದೇ ವೇಳೆ, ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್. ಸಂತೋಷ್ ನೇಮಕಕ್ಕೆ ಹಲವು ಶಾಸಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಬಿಎಸ್ ಯಡಿಯೂರಪ್ಪರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಬೇಕು ಎನ್ನುವ ತಂತ್ರಗಾರಿಕೆ ನಡೆದಿದೆ. ಬೆಂಗಳೂರಿನಲ್ಲಿ ಔತಣ ಕೂಟದ ನೆಪದಲ್ಲಿ 10ಕ್ಕೂ ಹೆಚ್ಚು ಬಿಜೆಪಿ ಶಾಸಕರು ಸೇರಿ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮುರುಗೇಶ್ ನಿರಾಣಿ ನ್ಯೂಸ್ 18ನೊಂದಿಗೆ ಮಾತನಾಡಿ, ಈ ರೀತಿ ಬೆಳವಣಿಗೆ ನಡೆದಿಲ್ಲವೆಂದು ತಳ್ಳಿಹಾಕಿದ್ದಾರೆ.


ಇದನ್ನೂ ಓದಿ: ಸೌದಿಯಲ್ಲಿ ಸಿಲುಕಿ ತವರಿಗೆ ಮರಳಲು ಕನ್ನಡಿಗರ ಪರದಾಟ; ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ್ಯ


ಆದರೆ ಸಿಎಂ ಯಡಿಯೂರಪ್ಪರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಬೇಕು ಎನ್ನುವ ಚರ್ಚೆ ನಡೆತಿದೆ,ನೀವೂ ಯಡಿಯೂರಪ್ಪನವರ ಬೆನ್ನಿಗೆ ನಿಲ್ತೀರಾ ಎಂದಾಗ ನಾನು ಪಕ್ಷದ ಪರ ಇರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಬಿಎಸ್ ಯಡಿಯೂರಪ್ಪರ ಮೇಲೆ ಮುರುಗೇಶ್ ನಿರಾಣಿಗೆ ಮುನಿಸಿದೆ ಎಂದೇ ಅರ್ಥೈಸಿಕೊಳ್ಳಲಾಗುತ್ತಿದೆ. ಮುರುಗೇಶ್ ನಿರಾಣಿ ರಾಜಕಾರಣಕ್ಕೆ ಪ್ರವೇಶವಾದಾಗಿನಿಂದಲೂ ಬಿಎಸ್ ಯಡಿಯೂರಪ್ಪರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರು. ನಮ್ಮ ನಾಯಕರು ಬಿಎಸ್ ಯಡಿಯೂರಪ್ಪ ಎಂದು ಹೇಳುತ್ತಾ, ಯಡಿಯೂರಪ್ಪನವ ರಾಜಕೀಯ ಸ್ಥಿತ್ಯಂತರದಲ್ಲೂ ಮುರುಗೇಶ್ ನಿರಾಣಿ ಜೊತೆಯಿದ್ದರು‌. ಆದರೆ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ಮಾತ್ರ ಮುರುಗೇಶ್ ನಿರಾಣಿ ಯಡಿಯೂರಪ್ಪ ಜೊತೆಗೆ ಹೋಗಿರಲಿಲ್ಲ. ಇದೀಗ ಮತ್ತೆ  ಮುರುಗೇಶ್ ನಿರಾಣಿ ಪಕ್ಷ ನಿಷ್ಠೆಗೆ ಬದ್ಧರಾಗಿದ್ದಾರೆ. ಸಚಿವ ಸ್ಥಾನ ಸಿಗಲಿಲ್ಲವೆಂದು ಯಡಿಯೂರಪ್ಪರೊಂದಿಗೆ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಸಹಜ ಮಾತು. ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ತಪ್ಪಿಸುವಲ್ಲಿ ಕೆಲಸ ಮಾಡುತ್ತಿರುವ ಕಾಣದ ಕೈ ಯಾರು ಅನ್ನೋ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಿದೆ.


Published by:Vijayasarthy SN
First published: