ಸಚಿವ ಉಮೇಶ್ ಕತ್ತಿ (Minister Umesh Katti Death) ನಿಧನವಾಗಿದ್ರೆ ಇತ್ತ ರಾಜ್ಯ ಬಿಜೆಪಿಯಲ್ಲೀಗ ಜನೋತ್ಸವದ (BJP Janotsava) ಜಂಜಾಟ ಶುರುವಾಗಿದೆ. ಉಮೇಶ್ ಕತ್ತಿ ಅವರ ನಿಧನದ ಹಿನ್ನೆಲೆ ರಾಜ್ಯ ಸರ್ಕಾರ (Karnataka Government) ಒಂದು ದಿನ ಶೋಕಾಚರಣೆ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ. ಒಂದು ವೇಳೆ ಮೂರು ದಿನದ ಶೋಕಾಚರಣೆ (Mourning) ಆದೇಶ ಹೊರಡಿಸಿದ್ರೆ ನಾಳೆ ದೊಡ್ಡಬಳ್ಳಾಪುರದಲ್ಲಿ (Doddaballapur) ನಡೆಯಬೇಕಿರುವ ಜನೋತ್ಸವ ಕಾರ್ಯಕ್ರಮ ರದ್ದುಗೊಳಿಸುವ ಅನಿವಾರ್ಯ ಎದುರಾಗಬಹುದಿತ್ತು. ಈ ಹಿನ್ನೆಲೆ ಶೋಕಾಚರಣೆಯನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸಿದೆ ಎಂಬ ಮಾತುಗಳು ಕೇಳಿ ಬಂದಿವೆ. ಒಂದು ದಿನದ ಶೋಕಾಚರಣೆಯ ಕುರಿತು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Farmer CM Siddaramaiah) ಅವರು ಒಂದು ದಿನದ ಶೋಕಾಚರಣೆಗೆ ಬೇಸರ ಹೊರ ಹಾಕಿದ್ದಾರೆ.
ಶೋಕಾಚರಣೆಯನ್ನು ಮೂರು ದಿನ ಮಾಡಬಹುದಿತ್ತು. ಯಾಕೆ ಒಂದೇ ದಿನ ಘೋಷಣೆ ಮಾಡಿದ್ದಾರೋ ಗೊತ್ತಿಲ್ಲ. ಅವರು ಸಿಟ್ಟಿಂಗ್ ಮಿನಿಸ್ಟರ್ ಆಗಿದ್ದವರು. ಮೂರು ದಿನ ಶೋಕಾಚರನೆ ಘೋಷಿಸಬಹುದಿತ್ತು. ಸರ್ಕಾರ ಯಾಕೆ ಘೋಷಿಸಿಲ್ಲವೋ ಗೊತ್ತಿಲ್ಲ. ನಾನು ಅದರ ಬಗ್ಗೆ ಮಾತಾಡಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಿಗಧಿಯಂತೆ ಜನೋತ್ಸವ
ಇನ್ನೂ ಸರ್ಕಾರ ನಾಳೆ ನಿಗಧಿಯಂತೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ನಡೆಸಲು ನಿರ್ಧರಿಸಿದೆ. ಈಗಾಗಲೇ ಮೂರು ಬಾರಿ ಜನೋತ್ಸವ ಮುಂದೂಡಿಕೆ ಆಗಿದೆ ಇದೀಗ ಮತ್ತೆ ಮುಂದೂಡೋದು ಬೇಡ ಎಂಬ ಅಭಿಪ್ರಾಯ ಕೆಲ ನಾಯಕರು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿಂದೆ ಎಲ್ಲ ಸಿದ್ಧತೆ ಆಗಿ ಕೊನೆ ಕ್ಷಣದಲ್ಲಿ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿತ್ತು. ಈಗ ಎಲ್ಲ ಸಿದ್ದತೆ ಮಾಡಿ ಮುಂದೂಡಿದ್ರೆ ಕಷ್ಟ ಆಗುತ್ತದೆ. ಹೀಗಾಗಿ ನಾಳೆಯೇ ಕಾರ್ಯಕ್ರಮ ಮಾಡೋಣ ಎಂದು ಜನೋತ್ಸವ ಉಸ್ತುವಾರಿ ಸಚಿವರು ಸಿಎಂಗೆ ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಸಿಎಂ ಬೊಮ್ಮಾಯಿ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Umesh Katti Death: ಹೃದಯಾಘಾತದಿಂದ ಉಮೇಶ್ ಕತ್ತಿ ನಿಧನ; ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದೇನು?
ಕೆಲವು ಶಾಸಕರಿಂದ ಅಪಸ್ವರ
ಪಕ್ಷದ ಕೆಲ ಶಾಸಕರು ಈ ಸಮಯದಲ್ಲಿ ಜನೋತ್ಸವ ಬೇಡ ಎಂದು ಅಪಸ್ವರ ಎತ್ತಿದ್ದಾರಂತೆ. ಸಂಪುಟದ ಸಚಿವರೊಬ್ಬರನ್ನು ಕಳೆದುಕೊಂಡ ಸಂದರ್ಭದಲ್ಲಿ ಸರ್ಕಾರ ಸಂಭ್ರಮಾಚರಣೆ ಮಾಡಿದ್ರೆ ತಪ್ಪು ಸಂದೇಶ ರವಾನೆ ಆಗಬಹುದು ಎಂದು ಕೆಲ ಸಚಿವರು ಆತಂಕ ಹೊರ ಹಾಕಿದ್ದಾರಂತೆ. ಇದೀಗ ಇದೇ ವಿಷಯ ಬಿಜೆಪಿ ಅಂಗಳದಲ್ಲಿ ಚರ್ಚೆ ಆಗುತ್ತಿದೆ.
ಸಿಟಿ ರವಿ, ಎಂಟಿಬಿ ಹೇಳಿದ್ದೇನು?
ಜನೋತ್ಸವ ರದ್ದು ಮಾಡಿ ಎಂದು ಸಿಎಂಗೆ ಅಭಿಪ್ರಾಯ ತಿಳಿಸುತ್ತೇನೆ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ. ಇತ್ತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಜನೋತ್ಸವ ರದ್ದು ಮಾಡಿದರೆ ಒಳ್ಳೆಯದು ಅಂತ ಹೇಳಿದ್ರೆ, ಶಾಸಕರಾದ ಸತೀಶ್ ರೆಡ್ಡಿ ಸೇರಿದಂತೆ ಅನೇಕ ನಾಯಕರಿಂದಲೂ ನೋವಿನ ಸಂದರ್ಭದಲ್ಲಿ ಸಂಭ್ರಮೋತ್ಸವ ಸೂಕ್ತ ಅಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಕ್ಯಾಬಿನೆಟ್ ದರ್ಜೆಯ ಸಚಿವರು ನಿಧನರಾದರೆ ಮೂರು ದಿನ ಶೋಕಾಚರಣೆ ಇರುತ್ತಿತ್ತು. ಬೊಮ್ಮಾಯಿ ಸರ್ಕಾರದಲ್ಲಿ ಒಂದು ದಿನಕ್ಕೆ ಮಾತ್ರ ಸೀಮಿತ ಮಾಡಲಾಗಿದೆ. ನಾಳೆ ಜನೋತ್ಸವ ಹಿನ್ನೆಲೆ ಒಂದೇ ದಿನಕ್ಕೆ ಶೋಕಾಚರಣೆ ಸೀಮಿತ ಮಾಡಲಾಗಿದೆ ಎನ್ನುವ ಚರ್ಚೆ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿದೆ. ಈ ಹಿಂದೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ ಜನೋತ್ಸವ ರದ್ದು ಮಾಡಲಾಗಿತ್ತು.
ಸುಧಾಕರ್ ಹಠ
ಪ್ರವೀಣ್ ನೆಟ್ಟಾರು ಹತ್ಯೆ ಕಾರಣಕ್ಕೆ ಜನೋತ್ಸವ ರದ್ದು ಮಾಡಲಾಗಿತ್ತು. ಇದೀಗ ಉಮೇಶ್ ಕತ್ತಿ ನಿಧನರಾಗಿದ್ದಾರೆ. ಪದೇ ಪದೇ ಜನೋತ್ಸವ ರದ್ದು ಬೇಡ ಎಂದು ಸಚಿವ ಸುಧಾಕರ್ ಹಠ ಹಿಡಿದಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ