ಬೆಂಗಳೂರು: ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಉಮೇಶ್ ಕತ್ತಿ ನಡುವಿನ ಮನಸ್ತಾಪ ದೂರ ಮಾಡುವಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ.
ಇಬ್ಬರು ಮನಸ್ತಾಪ ದೂರ ಮಾಡುವ ನಿಟ್ಟಿನಲ್ಲಿ ಸಿಎಂ ಬಿಎಸ್ವೈ ಇಂದು ತಮ್ಮ ನಿವಾಸದಲ್ಲಿ ಇಬ್ಬರು ನಾಯಕರನ್ನು ಸಂಧಾನ ಕರೆದು, ಇಬ್ಬರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಒಟ್ಟಿಗೆ ಕೆಲಸ ಮಾಡಿ,
ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತೇವೆ. ತಮಗೆ ವಹಿಸಿರುವ ಅಭ್ಯರ್ಥಿಗಳನ್ನು ಗೆಲವು ನಮ್ಮ ಜವಾಬ್ದಾರಿ ಎಂದು ಇಬ್ಬರು ನಾಯಕರು ಸಿಎಂ ಬಿಎಸ್ವೈಗೆ ಮಾತು ಕೊಟ್ಟಿದ್ದಾರೆ.
ಇಷ್ಟು ದಿನ ಇಬ್ಬರು ನಾಯಕರು ಮಾತನಾಡದೇ ದೂರ ಇದ್ದರು. ಉಪಚುನಾವಣೆಯಲ್ಲಿ ಇಬ್ಬರು ನಾಯಕರ ಮುನಿಸಿನಿಂದ ಪಕ್ಷದ ಅಭ್ಯರ್ಥಿ ಗೆಲುವು ಕಷ್ಟ ಎಂಬುದನ್ನು ಅರಿತ ಸಿಎಂ ಇಬ್ಬರು ನಾಯಕರನ್ನು ಮುಖಾಮುಖಿ ಕೂರಿಸಿಕೊಂಡು ಮಾತುಕತೆ ನಡೆಸಿದರು.
ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬೇಕು. ನಿಮ್ಮ ಉಸ್ತುವಾರಿ ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ನಿಮ್ಮದೇ. ಅಭ್ಯರ್ಥಿಯ ಸೋಲು, ಗೆಲುವಿಗೆ ನೀವೇ ನೇರ ಹೊಣೆ. ಅಭ್ಯರ್ಥಿ ಗೆಲುವಿಗೆ ಯಾವುದೇ ಸಹಕಾರ ನೀಡಲು ನಾನು ಸಿದ್ಧ. ನಿಮ್ಮ ವೈಮನಸ್ಸು ಅಥವಾ ಏನೇ ತೊಂದರೆ, ಸಮಸ್ಯೆ ಇದ್ದರೂ ನನ್ನ ಬಳಿ ಹೇಳಿ, ಬಗೆಹರಿಸುವೆ. ನಿಮಗೆ ವಹಿಸಿರುವ ಕ್ಷೇತ್ರದ ಪ್ರಚಾರದ ರೂಪುರೇಷೆ, ರಣತಂತ್ರಗಳನ್ನೂ ನೀವೇ ಸಿದ್ಧಪಡಿಸಿ ಎಂದು ಲಕ್ಷ್ಮಣ ಸವದಿ ಹಾಗೂ ಉಮೇಶ್ ಕತ್ತಿಗೆ ಬಿಎಸ್ವೈ ಸೂಚನೆ ನೀಡಿದ್ದಾರೆ.
ಇದನ್ನು ಓದಿ: ಅಥಣಿ ಕಾಂಗ್ರೆಸ್ಸಿಗೆ ಕಗ್ಗಂಟಾದ ಬಂಡಾಯ ಅಭ್ಯರ್ಥಿಗಳಿಂದ ಒಕ್ಕೂಟ ರಚನೆ
ಅಥಣಿಯಿಂದ ಮಹೇಶ್ ಕುಮಟಳ್ಳಿ ಗೆಲ್ಲಿಸುವ ಜವಾಬ್ದಾರಿ ಲಕ್ಷ್ಮಣ್ ಸವದಿಯದ್ದು, ಗೋಕಾಕ್ನಿಂದ ರಮೇಶ್ ಜಾರಕಿಹೊಳಿ ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ಉಮೇಶ್ ಕತ್ತಿಗೆ ವಹಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ