ಬೆಂಗಳೂರು(ಮೇ.31): ಆಡಳಿತಾರೂಢ ಬಿಜೆಪಿಯಲ್ಲಿನ ಬಂಡಾಯ ಹೊಸ ಟ್ವೀಸ್ಟ್ ಪಡೆಯುತ್ತಿದೆ. ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ವಿರುದ್ಧ ಅದೇ ಪಕ್ಷದ ಶಾಸಕರಾದ ಉಮೇಶ ಕತ್ತಿ ಹಾಗೂ ಬಸನಗೌಡ ಪಾಟೀಲ ಯತ್ನಾಳ ಸಿಟ್ಟಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮುರುಗೇಶ್ ನಿರಾಣಿ ನಾನು ಭಿನ್ನಮತೀಯರ ಸಭೆಯಲ್ಲಿ ಪಾಲ್ಗೊಂಡಿಲ್ಲ. ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಬಹಿರಂಗ ಹೇಳಿಕೆ ನೀಡುತ್ತಿರುವುದೇ ಶಾಸಕ ಉಮೇಶ್ ಕತ್ತಿ ಹಾಗೂ ಶಾಸಕ ಬಸವನಗೌಡ ಪಾಟೀಲ ಯತ್ನಾಳರ ಕೋಪಕ್ಕೆ ಕಾರಣವಾಗಿದೆ. ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ನಡೆದಿದ್ದ ಸಭೆಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಪಾಲ್ಗೊಂಡಿದ್ದರು.
ಅಲ್ಲದೇ ಈ ಹಿಂದೆ ಉಮೇಶ ಕತ್ತಿ, ರಾಮದಾಸ್ ಜೊತೆ ಸೇರಿ ನಿರಾಣಿ ಸಭೆ ಮಾಡಿದ್ದರು. ಜೊತೆಗೆ ಗುರುವಾರ ಕತ್ತಿ ನಿವಾಸದ ಸಭೆಗೂ ಬರುತ್ತೇನೆ ಎಂದು ಹೇಳಿ ಕೊನೆ ಕ್ಷಣದಲ್ಲಿ ಸಭೆಗೆ ಗೈರಾಗಿದ್ದರು. ಇದು ನಿರಾಣಿಯ ತಂತ್ರಗಾರಿಕೆ, ನಮ್ಮ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಎತ್ತಿ ಕಟ್ಟುವ ಕೆಲಸವನ್ನ ನಿರಾಣಿ ಮಾಡುತ್ತಿದ್ದಾರೆ ಎನ್ನುವ ಬಂಡಾಯ ಶಾಸಕರ ಆರೋಪವಾಗಿದೆ.
ತಾನು ಮಾತ್ರ ಮುಖ್ಯಮಂತ್ರಿಗೆ ಒಳ್ಳೆಯವನಾಗುವುದು, ನಮ್ಮನ್ನೆಲ್ಲಾ ಅವರ ದೃಷ್ಣಿಯಲ್ಲಿ ಕೆಟ್ಟವರನ್ನಾಗಿ ಮಾಡುವುದು ಮುರುಗೇಶ್ ನಿರಾಣಿ ತಂತ್ರಗಾರಿಕೆ ಅಂತಾ ಕತ್ತಿ ಹಾಗೂ ಯತ್ನಾಳ ತಮ್ಮ ಆಪ್ತರ ಹೇಳಿ ಹೇಳಿಕೊಳ್ಳುತ್ತಿದ್ದಾರಂತೆ. ಈ ಬಂಡಾಯ ಸಭೆಯ ರೂವಾರಿಯೇ ನಿರಾಣಿ. ಆದರೆ, ನಮ್ಮನ್ನ ಮಾತ್ರ ಕೆಟ್ಟವರಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಅನ್ನೋ ಅಸಮಾಧಾನ ಬಂಡಾಯ ಶಾಸಕರದ್ದಾಗಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ದೃಷ್ಠಿಯಲ್ಲಿ ತಾವು ಒಳ್ಳೆಯವರಾಗಿ ನೂರಾರು ಕೋಟಿಗಳ ಫೈಲ್ ಗಳನ್ನ ಕ್ಲೀಯರ್ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಅವಕಾಶ ಸಿಕ್ಕರೆ ಸಂಪುಟ ವಿಸ್ತರಣೆ ವೇಳೆ ಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆಯೂ ನಿರಾಣಿಯದ್ದಾಗಿದೆ ಎಂದು ಭಿನ್ನರು ಹೇಳುತ್ತಿದ್ದಾರೆ.
ಇದನ್ನೂ ಓದಿ : ಕೊರೋನಾ ಹಾಟ್ ಸ್ಪಾಟ್ ಕಲಬುರ್ಗಿಯ ಮೋಮಿನಪುರಕ್ಕೆ ಬಿಗ್ ರಿಲೀಫ್ - ಎಲ್ಲ ಪಾಸಿಟಿವ್ ಪ್ರಕರಣಗಳು ಡಿಸ್ಚಾರ್ಜ್
ಒಟ್ಟಿನಲ್ಲಿ ಮುರುಗೇಶ ನಿರಾಣಿ ನಡೆಯಿಂದ ಬಿಜೆಪಿ ಬಂಡಾಯ ಶಾಸಕರ ತಂಡದಲ್ಲಿಯೇ ಬಿರುಕು ಬಿಟ್ಟಂತಾಗಿದೆ. ಈ ಬಂಡಾಯ ಮುಂದಿನ ದಿನದಲ್ಲಿ ಎಲ್ಲಿಗೆ ಹೋಗಿ ತಲುಪುತ್ತದೆ ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ