ಅಮೆರಿಕ-ಭಾರತ ಸಂಬಂಧ ಅತ್ಯಂತ ಮಹತ್ವದ್ದು: ಆನ್ ಲೀ ಶೇಷಾದ್ರಿ

ಬೆಂಗಳೂರು ವಿವಿಯ ಕಾನೂನು ವಿಭಾಗ ಅಕ್ಟೋಬರ್ 2ರಿಂದ ಮೂರು ದಿನ ಕಾಲ ಆಯೋಜಿಸಿದ್ದ ಮಾಡೆಲ್ ಯುನೈಟೆಡ್ ನೇಷನ್ಸ್ ಸಭೆಯಲ್ಲಿ ದೇಶ ವಿದೇಶಗಳಿಂದ 150ಕ್ಕೂ ಹೆಚ್ಚು ವಿದ್ಯಾರ್ಥಿ ಪ್ರತಿನಿಧಿಗಳು ಪಾಲ್ಗೊಂಡು ಸಂವಾದ ನಡೆಸಿದರು.

ಆನ್ ಲೀ ಶೇಷಾದ್ರಿ

ಆನ್ ಲೀ ಶೇಷಾದ್ರಿ

 • Share this:
  ಬೆಂಗಳೂರು: ಮಹಾತ್ಮ ಗಾಂಧಿ ಅವರ ಬಗ್ಗೆ ಅಮೆರಿಕಕ್ಕೆ ವಿಶೇಷ ಗೌರವ ಹೊಂದಿದೆ. ಅವರ ಮೌಲ್ಯಗಳು ನಮ್ಮ ಸಮಾಜದ ಮೇಲೆ ಹಾಗೂ ಕಾನೂನು ಕ್ಷೇತ್ರದ ಮೇಲೆ ಅಗಾಧ ಪ್ರಭಾವ ಬೀರಿವೆ ಎಂದು ಚೆನ್ನೈನಲ್ಲಿನ ಅಮೆರಿಕ ದೂತಾವಾಸದ ಪಬ್ಲಿಕ್‌ ಅಫೇರ್ಸ್‌ ಆಫೀಸರ್ ಆನ್‌ ಲೀ ಶೇಷಾದ್ರಿ ಹೇಳಿದರು.

  ಬೆಂಗಳೂರು ವಿಶ್ವ ವಿದ್ಯಾಲಯದ ಯುನಿವರ್ಸಿಟಿ ಲಾ ಕಾಲೇಜು ಆಯೋಜಿಸಿದ್ದ ‘ಮಾಡೆಲ್‌ ಯುನೈಟೆಡ್‌ ನೇಷನ್ಸ್‌’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಮೆರಿಕ- ಭಾರತದ ನಡುವಿನ ಸಂಬಂಧ ಅತ್ಯಂತ ಮಹತ್ವದ್ದು. ಅಮೆರಿಕದಲ್ಲಿ ಪ್ರತಿವರ್ಷ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ‘ಯುಎಸ್‌ ಯುನಿವರ್ಸಿಟಿ ವರ್ಚುವಲ್‌ ಫೇರ್‌ 2020’ ನಡೆಯುತ್ತಿದ್ದು, ಅಮೆರಿಕದ ಪ್ರಮುಖ ವಿಶ್ವವಿದ್ಯಾಲಯಗಳು ಇದರಲ್ಲಿ ಭಾಗವಹಿಸಲಿವೆ. ಇಲ್ಲಿಯ ವಿದ್ಯಾರ್ಥಿಗಳು ಪೋಷಕರು ಇದರ ಲಾಭ ಪಡೆಯಬೇಕು ಎಂದವರು ಕರೆ ನೀಡಿದರು.

  ‘ಮಾಡೆಲ್‌ ಯುನೈಟೆಡ್ ನೇಷನ್ಸ್‌’ ಕಾರ್ಯಕ್ರಮವು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ವಿದ್ಯಾರ್ಥಿಗಳಿಗೆ ಇಂಥ ಅವಕಾಶ ಒದಗಿಸಿಕೊಟ್ಟ ಯೂನಿವರ್ಸಿಟಿ ಲಾ ಕಾಲೇಜಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

  ಇದನ್ನೂ ಓದಿ: RAISE 2020: ಬುದ್ಧಿವಂತ ದತ್ತಾಂಶವೇ ಇವತ್ತಿನ ಡಿಜಿಟಲ್ ಬಂಡವಾಳ – ಮುಕೇಶ್ ಅಂಬಾನಿ

  ನ್ಯಾಷನಲ್ ಬುಕ್ ಟ್ರಸ್ಟ್ ನ ನಿರ್ದೇಶಕ ಲೆಫ್ಟಿನೆಂಟ್ ಕರ್ನಲ್ ಯುವರಾಜ್ ಮಲಿಕ್ ಮಾತನಾಡಿ, 'ಅಂತಾರಾಷ್ಟ್ರೀಯ ಹಂತದಲ್ಲಿ ಸಹಭಾಗಿತ್ವದ ಅಗತ್ಯವಿದೆ. ಹಾಗೆಯೇ ವಿಶ್ವಸಂಸ್ಥೆ ಹಾಗೂ ಇತರೆ ರಾಷ್ಟ್ರಗಳು ನಿಶಸ್ತ್ರೀಕರಣದತ್ತ ಗಮನ ನೀಡಬೇಕಿದೆ' ಎಂದು ಹೇಳಿದರು.

  ವಿಶ್ವಸಂಸ್ಥೆ ವಿಶೇಷ ಅಧಿಕಾರಿ ಸಮರ್ಥ್ ಪಾಠಕ್ ಮಾತನಾಡಿ, ಯುವಕರು ವಿಶ್ವದ ಭವಿಷ್ಯವಾಗಿದ್ದು, ಸಾಮಾಜಿಕ ಭದ್ರತೆ ಬಗ್ಗೆ ಗಮನ ನೀಡಬೇಕಾಗಿದೆ, ಸಮಾಜದ ಸರ್ವತೋಮುಖ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಹೊಸ ಸಂಕಷ್ಟದ ವಾಸ್ತವ ಪರಿಸ್ಥಿತಿಯಲ್ಲಿ ಸಾಮಾಜಿಕ ಅಪಾಯದ ಮಧ್ಯೆ ಸುಸ್ಥಿರವೆನಿಸುವ ಅಭಿವೃದ್ಧಿ ಕಾರ್ಯಗಳಿಗೆ ಮರುಕಾರ್ಯತಂತ್ರ ರೂಪಿಸುವ ಅಗತ್ಯ ಇದೆ ಎಂದರು.

  ವಿಶ್ವಸಂಸ್ಥೆ ಮಾನವ ಹಕ್ಕುಗಳ ಅಧಿಕಾರಿ ಕಿರಿ ಅತ್ರಿ ಮಾತನಾಡಿ, ವಲಸಿಗರು ಹಾಗೂ ನಿರಾಶ್ರಿತರ ಬಗ್ಗೆ ಎಲ್ಲಾ ಸರ್ಕಾರಗಳು ಆಸಕ್ತಿ ವಹಿಸಬೇಕಿದೆ. ಅವರ ಪುನರ್ವಸತಿ ಬಗ್ಗೆಯೂ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.

  ಇದನ್ನೂ ಓದಿ: ಭಾರತದಿಂದ ಸಬ್​ಮರೈನ್ ನಾಶಮಾಡಬಲ್ಲ ಶಕ್ತಿಶಾಲಿ SMART ಕ್ಷಿಪಣಿ ಯಶಸ್ವಿ ಪ್ರಯೋಗ

  ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ. ವೇಣುಗೋಪಾಲ್ ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ಪ್ರಜಾತಂತ್ರ ರಕ್ಷಣೆಗಾಗಿ ಮಾತುಕತೆಯು ಪ್ರಮುಖ ಪಾತ್ರವಹಿಸಲಿದೆ. ಆದರೆ ಇಂದಿನ ಕೊವಿಡ್ 19 ಹಾಗೂ ಇತರೆ ಜಾಗತಿಕ ಸಮಸ್ಯೆಗಳಿಗೆ ಮಾತುಕತೆ ಮೂಕ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಇಂತಹ ವೇದಿಕೆಯನ್ನು ಸೃಷ್ಟಿಸಿಕೊಡುತ್ತಿದೆ ಎಂದು ವಿವರಿಸಿದರು.

  ಅಕ್ಟೋಬರ್ 2ರಿಂದ ಮೂರು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ವಿವಿಧ ಭಾಗಗಳಿಂದ 150ಕ್ಕೂ ಹೆಚ್ಚು ವಿದ್ಯಾರ್ಥಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ವಿವಿಧ ಗಂಭೀರ ವಿಚಾರಗಳ ಬಗ್ಗೆ ಚರ್ಚೆಗಳು, ಸಂವಾದಗಳು ನಡೆದವು.
  Published by:Vijayasarthy SN
  First published: