ಕೋಲಾರ (ಡಿ. 19): ಎರಡು ದಿನದ ಹಿಂದೆ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಅಪಹರಣಕ್ಕೆ ಒಳಗಾಗಿದ್ದ 8 ವರ್ಷದ ಬಾಲಕನನ್ನು ರಕ್ಷಿಸಲಾಗಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. ಮಂಗಳೂರಿನಲ್ಲಿ ಕಿಡ್ನಾಪ್ ಮಾಡಿದ್ದ ನಾಲ್ಕು ಮಂದಿ ಹಾಗೂ ಕೋಲಾರದಲ್ಲಿ ಅಪಹರಣಕಾರರಿಗೆ ಸಹಕಾರ ನೀಡಿದ ಆರೋಪದಡಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೂರ್ನಹೊಸಳ್ಳಿ ಗ್ರಾಮದ ಮಹೇಶ್ ಎನ್ನುವರ ನಿವಾಸದ ಮೇಲೆ ಖಚಿತ ಮಾಹಿತಿ ಆಧಾರದ ಮೇಲೆ ಬೆಳ್ತಂಗಡಿ ಹಾಗೂ ಕೋಲಾರ ಪೊಲೀಸರು ದಾಳಿ ನಡೆಸಿದ್ದು, ಬಾಲಕ ಅನುಭವ್ನನ್ನು ರಕ್ಷಿಸಿ, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರು ಮಂಡ್ಯ ಮೂಲದ ಹನಮಂತು, ರಂಜಿತ್, ಮೈಸೂರಿನ ಗಂಗಾಧರ್ , ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಕಮಲ್ , ಕೋಲಾರದ ಕೂರ್ನಹೊಸಳ್ಳಿ ಮೂಲದ ಮಂಜುನಾಥ್, ಮಹೇಶ್. ಮಹೇಶ್ ಸದ್ಯ ಪೇಂಟಿಂಗ್ ಕೆಲಸ ಮಾಡುತ್ತಿದ್ದರೆ, ಮಂಜುನಾಥ್ ಟೈಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಮತ್ತೆ ಇಬ್ಬರು ಕೂರ್ನಹೊಸಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ.
ಏನಿದು ಪ್ರಕರಣ?
ಉದ್ಯಮಿ ಬಿಜ್ನೋಯ್ ಎಂಬುವರ 8 ವರ್ಷದ ಮಗ ಅನುಭವ್ ಡಿಸೆಂಬರ್ 17 ರಂದು ಅಪಹರಿಸಿದ್ದರು. ಮನೆ ಮುಂದೆ ಆಟವಾಡುತ್ತಿದ್ದ ಅನುಭವ್ನನ್ನು ಪೋಷಕರ ಎದುರೇ ಅಪರಿಚಿತರು ಕಾರಿನಲ್ಲಿ ಅಪಹರಣ ಮಾಡಿದ್ದರು. ಈ ಸಂಬಂಧ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದರು.
ಪ್ರಕರಣ ಸಂಬಂಧ ಗುರುವಾರ ರಾತ್ರಿ ಪೋಷಕರಿಗೆ 100 ಬಿಟ್ ಕಾಯಿನ್ ಅಂದರೆ 17 ಕೋಟಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆರೋಪಿಗಳ ಸುಳಿವು ಸಿಗದ ಹಿನ್ನಲೆ ಈ ಪ್ರಕರಣ ಸವಾಲ್ ಆಗಿ ಪರಿಣಮಿಸಿತ್ತು. ಬಳಿಕ ಆರೋಪಿಗಳ ಫೋನ್ ಕರೆ ಬೆನ್ನಟ್ಟಿ ಶೋಧಿಸಿದ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಕುರಿತು ಮಾತನಾಡಿದ ತನಿಖಾ ಅಧಿಕಾರಿ ಬೆಳ್ತಂಗಡಿ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್, ಕೋಲಾರದಲ್ಲಿ ಆರೋಪಿಗಳು ಇದ್ದದ್ದು ಮಾಹಿತಿ ಇತ್ತು, ಸ್ಥಳೀಯ ಮಹೇಶ್, ಮಂಜುನಾಥ್ ಮೇಲ್ನೋಟಕ್ಕೆ ಸಹಕಾರ ಮಾಡಿದ್ದಾರೆ ಎಂಬುದು ಕಾಣಿಸುತ್ತಿದೆ. ಕಿಡ್ನಾಪ್ ಗೆ ಯಾರು ಪ್ರೇರೇಪಣೆ ಕೊಟ್ಡಿದ್ದಾರೆ ಎಂವುದು ತನಿಖೆಯ ನಂತರ ತಿಳಿಯಲಿದೆ, ಹಣಕ್ಕೆ ಬೇಡಿಕೆ ಇಟ್ಟು ನಂತರ, 100 ಬಿಟ್ ನಾಣ್ಯಗಳಿಗೆ ಬೇಡಿಕೆ ಇಟ್ಟಿದ್ದರು. ಪೋನ್ ಗಳನ್ನ ವಶಕ್ಕೆ ಪಡೆದಾಗ ಸಿಮ್ ಕಾರ್ಡ್ ಬೇರೆಯ ಕಡೆಯದು ಎಂದು ಕಂಡುಬಂದಿದೆ, ಆದರೆ ಅದು ಬೇರೆ ರಾಜ್ಯದ ಸಿಮ್ ಕಾರ್ಡ್ ಅಥವಾ ಅಲ್ಲವಾ ಎಂದು ತನಿಖೆಯ ನಂತರ ಗೊತ್ತಾಗಲಿದೆ ಎಂದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ