Couple Suicide: ಪಾಗಲ್ ಪ್ರೇಮಿಗಳ ದುರಂತ ಅಂತ್ಯ: ಕೊಲೆ ಆಯಾಮದಲ್ಲೂ ಪೊಲೀಸರಿಂದ ತನಿಖೆ

ಒಂದು ವೇಳೆ ಇವರು ಹೇಳುತ್ತಿರುವುದು ನಿಜವಾದರೆ , ಆತ್ಮಹತ್ಯೆಯಂತಹಾ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಅನ್ನೋ ಸಂಶಯ ಮೂಡುತ್ತೆ . ಇಲ್ಲಿ ಯಾರು ಹೇಳುತ್ತಿರುವುದು ಸತ್ಯ ಯಾರು ಹೇಳುತ್ತಿರುವುದು ಸುಳ್ಳು ಅನ್ನೋದರ ತನಿಖೆ ಆಗಬೇಕಾಗಿದೆ.

ಯಶವಂತ್ ಮತ್ತು ಜ್ಯೋತಿ

ಯಶವಂತ್ ಮತ್ತು ಜ್ಯೋತಿ

  • Share this:
ಪ್ರೀತಿ (Love) ಮಾಡಬಾರದು ಮಾಡಿದರೆ ಜಗಕ್ಕೆ ಹೆದರಬಾರದು ಎಂಬ ಮಾತಿದೆ.‌ ಈ‌ ಮಾತಿಗೆ ಅನ್ವರ್ಥ ಎಂಬಂತೆ ಇದ್ದ ಪ್ರೇಮಿಗಳು (Lovers) ಬದುಕಲು ಹೆದರಿ ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಬಾಳಿ ಬದುಕಬೇಕಾದ ಯವಜೋಡಿ (Couple) ಬೆಂಕಿಯಲ್ಲಿ ಬೆಂದು ಹೆತ್ತವರ ಬಾಳಿಗೆ ಕೊಳ್ಳಿಯಿಟ್ಟಿದ್ದಾರೆ.‌ ಜೊತೆಯಾಗಿ ಬದುಕಬೇಕಾದವರು, ಒಂದೇ ಚಿತೆಯಲ್ಲಿ ಬೂದಿಯಾಗಿದ್ದಾರೆ.‌ ಹಾಗಾದ್ರೆ ಆ ಯುವ ಜೋಡಿ ಈ ಕೆಟ್ಟ ನಿರ್ಧಾರಕ್ಕೆ ಬರಲು ಇದ್ದ ಕಾರಣವಾದ್ರೂ ಏನು ಅನ್ನೋದನ್ನ ಹೇಳ್ತೀವಿ ಕೇಳಿ. ಯೆಸ್  ಹೀಗೆ ಬೆಂಕಿಯ ಕೆನ್ನಾಲೆಯಲ್ಲಿ ಉರಿಯುತ್ತಿರುವ ಸ್ವಿಫ್ಟ್ ಡಿಸೈರ್ ಕಾರು (Car).‌ ಸುಟ್ಟ ಕಾರಿನಿಂದ ತಬ್ಬಿಕೊಂಡ ಸ್ಥಿತಿಯಲ್ಲಿ ಹೊರಬಿದ್ದ ಪ್ರೇಮಿಗಳ ಸಂಪೂರ್ಣ ಸುಟ್ಟ ದೇಹ. ಹೌದು ಹೀಗೆ ಜೀವನಕ್ಕೆ ಅಂತ್ಯ ಹಾಡಿದ್ದಾರೆ ಈ ಭಾವಚಿತ್ರದಲ್ಲಿರೋ  23 ವಯಸ್ಸಿನ ಯಶವಂತ್ ಹಾಗೂ 19ರ ಹದಿ ವಯಸ್ಸಿನ ಜ್ಯೋತಿ ಎಂಬ ಯುವ ಪ್ರೇಮಿಗಳು.

ಯಶವಂತ್ ಹಾಗೂ ಜ್ಯೋತಿ ಇಬ್ಬರು ಬೆಂಗಳೂರಿನ ಆರ್ ಟಿ ನಗರದ ನಿವಾಸಿಗಳು. ಇಬ್ಬರದ್ದು ಓದೋ ವಯಸ್ಸು. ಜ್ಯೋತಿ ಬಿಕಾಂ ಮುಗಿಸಿದ್ರೆ ಯಶವಂತ್ ಕಂಪ್ಯೂಟರ್ ಕ್ಲಾಸ್ ಹೋಗ್ತಿದ್ದನು. ಇವರಿಬ್ಬರ ಮನೆ ಅಕ್ಕ ಪಕ್ಕದಲ್ಲಿಯೇ ಇದೆ. ಕಾಲೇಜು ಮುಗಿದ ಮೇಲೆ ಹೇಗೋ ಇಬ್ಬರಿಗೂ ಪರಿಚಯವಾಗಿ ನಂಬರ್ ಎಕ್ಸ್ ಚೇಂಜ್ ಆಗಿದೆ. ಕೆಲವೇ ದಿನಗಳ ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿದೆ.

ಪ್ರೀತಿಗೆ ಒಪ್ಪಿಗೆ ನೀಡದ ಯಶವಂತ್ ಪೋಷಕರು

ಎರಡು ವರ್ಷ ಪ್ರೀತಿ ಮಾಡಿದ್ದ ಯಶವಂತ್ ಮತ್ತು ಜ್ಯೋತಿಯ ವಿಚಾರ ಅದ್ಹೇಗೋ ಯಶವಂತ್ ಮನೆಯಲ್ಲಿ ಗೊತ್ತಾಗುತ್ತೆ. ಮರಾಠ ಸಮುದಾಯಕ್ಕೆ ಸೇರಿದ್ದ ಯಶವಂತ್ ಕುಟುಂಬ ಜ್ಯೋತಿ ಪರಿಶಿಷ್ಡ ಜಾತಿ ಸೇರಿದ್ದಾಳೆ ಅನ್ನೋ ಕಾರಣಕ್ಕೆ ಪ್ರೀತಿಯನ್ನು ನಿರಾಕರಿಸುತ್ತಾರೆ. ಕೊನೆಗೆ ಬಿಟ್ಟಿಲರಾದ ಸ್ಟೇಜ್ ತಲುಪಿದ್ದ ಯಶವಂತ್ ಹಾಗೂ ಜ್ಯೋತಿ ಅದೊಂದು ದಿನ ಓಡಿ ಹೋಗೋ ದುಡುಕು ನಿರ್ಧಾರಕ್ಕೆ ಬರ್ತಾರೆ.

ಇದನ್ನೂ ಓದಿ:  Hubballi Accident: ಸಾವಿನ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ; ಏಳು ಸಾವು, 25 ಗಾಯ

ಅದೊಂದು ದಿನ ಯಶವಂತ್ ಹಾಗೂ ಜ್ಯೋತಿ ತಮ್ಮ ತಂದೆಯ ಮೊಬೈಲ್ ನಿಂದ ಹಣವನ್ನ ತಮ್ಮ ಅಕೌಂಟ್ ಗೆ ಟ್ರಾನ್ಸ್ ಫರ್ ಮಾಡಿಕೊಳ್ತಾರೆ. ಮುಂದೆ ಜೀವನ ಹೇಗೆ ಅನ್ನೋದನ್ನ ಒಂಚೂರು ಆಲೋಚನೆ ಮಾಡದೆ ಮೇ 18 ರಂದು ಮನೆಯಿಂದ ಓಡಿ ಹೋಗೇ ಬಿಡ್ತಾರೆ.

ಬೆಂಗಳೂರಿನಿಂದ ಮಂಗಳೂರಿಗೆ ಬಂದ ಜೋಡಿ

ಜ್ಯೋತಿ ತಾನು ಇಂಟರ್ ವ್ಯೂ ಕಾರಣ ಹೇಳಿದ್ರೆ ಯಶವಂತ್ ತಾನು ಕಂಪ್ಯೂಟರ್ ತರಗತಿ ಹೇಳಿ ಬೈಕ್ ನಲ್ಲಿ ಬೆಂಗಳೂರು ಬಿಟ್ಟು ಮಂಗಳೂರು ತಲುಪ್ತಾರೆ. ಇಲ್ಲಿ ತಮ್ಮ ಮಕ್ಕಳು ರಾತ್ರಿ ಆದ್ರೂ ಬಾರದಿರುವುದರಿಂದ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನ ಕೂಡ ದಾಖಲಿಸುತ್ತಾರೆ. ಹೀಗೆ ಓಡಿ ಹೋದ ಮೇಲೆ ಈ ಪ್ರೇಮಿಗಳಿಗೆ ಒಂದೊಂದೇ ನಿಜ ಜೀವನದ ಸತ್ಯ ಅರಿವಾಗುತ್ತೆ.

ಕೈಯಲ್ಲಿ ಹಣ ಇದ್ದಷ್ಟು ದಿನ ಖುಷಿಯಾಗಿದ್ದ ಪ್ರೇಮಿಗಳು ಹಣ ಖಾಲಿಯಾಗ್ತಾಯಿದ್ದಂತೆ ಎರಡು ದಿನದ ಸಂಸಾರದ ಖುಷಿ ನುಚ್ಚು ನೂರಾಗಿದೆ. ಮುಂದೇನು ಅನ್ನೋ ಚಿಂತೆಯಲ್ಲೇ ಜೀವನಕ್ಕೆ ಅಂತ್ಯ ಹಾಡಿದ್ದಾರೆ ಈ ಪಾಗಲ್ ಪ್ರೇಮಿಗಳು. ಹಾಗಾದ್ರೆ ಅವರ ಮನೆ ಬಿಟ್ಟ ಬಳಿಕ ಜೀವನ‌ ಹೇಗಿತ್ತು ಅನ್ನೋದನ್ನ ಹೇಳ್ತೀವಿ ಕೇಳಿ.

ನಿರ್ಜನ ಪ್ರದೇಶಕ್ಕೆ ಕಾರ್ ತಂದು ನಿಲ್ಲಿಸಿದ ಜೋಡಿ

ಮನೆ ಬಿಟ್ಟು ಮಂಗಳೂರಿಗೆ ಬಂದಿದ್ದ ಯಶವಂತ್ ಹಾಗೂ ಜ್ಯೋತಿ ದಂಪತಿಗಳೆಂದು ಹೇಳಿ 12 ಸಾವಿರ ಕೊಟ್ಟು ಬಾಡಿಗೆ ಮನೆ ಪಡೆದುಕೊಳ್ತಾರೆ. ಒಂದಷ್ಟು ಸಮಯ ಸುಖವಾಗಿ‌ ಕಾಲ‌ ಕಳೆದ ಇವರಿಬ್ಬರು ಮುಂದೆ ಬದುಕಲು ಆಗದಿದ್ದರೆ ಅನ್ನೋ ದುರಾಲೋಚನೆಯಿಂದ ಒಂದು ಡೆತ್ ನೋಟ್ ಕೂಡ ಬರಿತಾರೆ.‌ ಆ ಬಳಿಕ ಆ ಡೆತ್ ನೋಟ್ ಬಿಟ್ಟು ‌ಅಲ್ಮಿಸ್ಬಾ ಕಾರ್ ರೆಂಟಲ್ ಕಂಪೆನಿಯಿಂದ ಸ್ವಿಫ್ಟ್ ಡಿಸೈರ್ ಕಾರು ಪಡೆದು ಸುತ್ತಾಡಲು ಹೋಗ್ತಾರೆ.  ಗೋವಾ ಸೇರಿದಂತೆ ಹಲವಾರು‌ ಬೀಚ್ ಸುತ್ತಿ ಕೊನೆಗೆ ಉಡುಪಿಯ ಬ್ರಹ್ಮಾವರ ತಾಲೂಕಿನ ಮಂದಾರ್ಥಿಯ ಸಮೀಪ ಹೆಗ್ಗುಂಜೆ ಗ್ರಾಮದ ನಿರ್ಜನ ಪ್ರದೇಶಕ್ಕೆ ಬಂದು ಕಾರು ಪಾರ್ಕ್ ಮಾಡ್ತಾರೆ‌ ಅದು ಮಧ್ಯರಾತ್ರಿ 2-3 ಗಂಟೆ.‌ಹೀಗೆ ಕೆಲ ಹೊತ್ತು ಕಾರಲ್ಲೇ ಇದ್ದ ಪ್ರೇಮಿಗಳು ಹಣ ಕೂಡ ಖಾಲಿಯಾಗಿದೆ ಮನೆಗೆ ಹೋದ್ರೆ ಪ್ರೀತಿ‌ ಒಪ್ಪಲ್ಲ. ಮನೆಯವರಿಗೆ ಮೋಸನೂ ಮಾಡಕ್ಕೆ ಮನಸ್ಸಿಲ್ಲ ಮುಂದೆ ಜೀವನ ಕಷ್ಟ ಅಂತ ತಮ್ಮ ಮನೆಯವರಿಗೆ 3 ಗಂಟೆ 7 ನಿಮಿಷಕ್ಕೆ ಮೆಸೇಜ್ ಮಾಡಿ ತಾವಿದ್ದ ಲೊಕೇಶನ್ ಕೂಡ ಶೇರ್ ಮಾಡ್ತಾರೆ. ಆ ಮೇಲೆ ಆಗಿದ್ದೇ ದುರಂತ.

ದೇಹವನ್ನು ನೋಡಿದವರು ಶಾಕ್ ಆಗಿದ್ರು!

ಬರ್ತಾ ತಂದಿದ್ದ ಪೆಟ್ರೋಲ್ ಕ್ಯಾನ್ ಇಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚೇ ಬಿಡ್ತಾರೆ. ಕಾರಿನ ಜೊತೆ ಪ್ರೇಮಿಗಳು ಸುಟ್ಟು ದುರಂತ ಸಾವನ್ನ ಕಾಣ್ತಾರೆ. ಬೆಂಕಿಯಿಂದ ಡೋರ್ ಬ್ಲಾಸ್ಟ್ ಆದ ಕಾರಣ ಇಬ್ಬರ ಬಾಡಿ ಹೊರಗೆ ಬೀಳತ್ತೆ. ಜ್ಯೋತಿ ದೇಹದ ತಲೆ ಮತ್ತು ಎದೆ ಬಿಟ್ಟರೆ ಉಳಿದೆಲ್ಲ ಬೂದಿ. ಎಲುಬು ಮಾತ್ರ ಉಳಿಯುತ್ತೆ. ದೇಹವನ್ನ ನೋಡಿದವರು ಶಾಕ್ ಆಗ್ತಾರೆ.

ಪೊಲೀಸರು ಸ್ಥಳ ಮಹಜರು, ಫಾರೆನ್ಸಿಕ್ ತಜ್ಞರು ಮಹಜರು ಬಳಿಕ ಶವದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿಯೇ ನಡೆಸಲಾಗುತ್ತೆ. ನಡುರಾತ್ರಿ ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆ, ರಾತ್ರಿ‌ ಓಡೋಡಿ ಬಂದಿದ್ದ ಎರಡು ಕುಟುಂಬಿಕರು ಸೇರಿ ಶವಗಳ ಅಂತಿಮ ಸಂಸ್ಕಾರ ನಡೆಸಲು ತೀರ್ಮಾನಿಸ್ತಾರೆ. ಅಲ್ಲಿ ಸಂಸ್ಕಾರ ಮಾಡುವುದಕ್ಕೆ ಏನೂ ಉಳಿದಿರಲಿಲ್ಲ.‌ ಘಟನಾ ಸ್ಥಳದಲ್ಲೇ ಶವ ಸಂಪೂರ್ಣ ಸುಟ್ಟು ಹೋಗಿತ್ತು. ಆದರೆ ಶಾಸ್ತ್ರ ಪ್ರಕಾರ ಅಂತಿಮ ಸಂಸ್ಕಾರ ನಡೆಸಲೇಬೇಕು.‌

ಇಂದ್ರಾಳಿ ಸ್ಮಶಾನದಲ್ಲಿಯೇ ಅಂತ್ಯಸಂಸ್ಕಾರ

ಹಾಗಾಗಿ ಸುಟ್ಟು ಕರಕಲಾದ ಶವವನ್ನು ಬೆಂಗಳೂರಿಗೆ ಕೊಂಡೊಯ್ಯುವುದು ಬದಲಾಗಿ ಉಡುಪಿಯಲ್ಲೇ ಸಂಸ್ಕಾರ ಮಾಡಲು ಎರಡು ಕುಟುಂಬಿಕರು ತೀರ್ಮಾನ ನಡೆಸಿದ್ದರು. ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆ ಮಣಿಪಾಲದಿಂದ ಸ್ವಲ್ಪವೇ ದೂರದಲ್ಲಿರುವ ಇಂದ್ರಾಳಿ ಸ್ಮಶಾನದಲ್ಲಿ, ಅಂತಿಮ ಸಂಸ್ಕಾರ ನಡೆಸಲಾಯಿತು.

ಶವ ಪತ್ತೆಯಾದಾಗಲೂ  ಈ ಯುವಜೋಡಿ ಕಾರಿನ ಹಿಂದಿನ ಸೀಟಿನಲ್ಲಿ ಪರಸ್ಪರ ತಬ್ಬಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಸುಟ್ಟು ಕರಕಲಾದರೂ ಒಬ್ಬರಿಗೊಬ್ಬರು ಅಂಟಿಕೊಂಡಿದ್ದರು. ಕೊನೆಗೆ ಅಂತಿಮ ಸಂಸ್ಕಾರವನ್ನು ಕೂಡ, ಒಂದೇ ಚಿತೆಯಲ್ಲಿ ನಡೆಸಲಾಯಿತು. ಎರಡು ದೇಹಗಳನ್ನು ಒಂದೇ ಚಿತೆಯಲ್ಲಿಟ್ಟು ಸುಡಲಾಯಿತು. ಬಳಿಕ ಬೂದಿಯನ್ನು ಎರಡು ಕುಟುಂಬಗಳು ಬೆಂಗಳೂರಿಗೆ ತೆಗೆದುಕೊಂಡು ಹೋಗಿದ್ದಾರೆ.

ಮಕ್ಕಳ ಪ್ರೀತಿ ವಿರೋಧ ಮರೆಮಾಚಲು ಪೋಷಕರ ಯತ್ನ

ಪ್ರೀತಿಸಿ ಮದುವೆಯಾಗಿದ್ದಕ್ಕೆ ಮನೆಯವರು ವಿರೋಧಿಸಿದರೆಂದು ಯುವಜೋಡಿ ಆತ್ಮಹತ್ಯೆ ಮಾಡಿಕೊಂಡಿತ್ತು. ಕೊನೆಯದಾಗಿ ಕಳಿಸಿದ್ದ ವಾಟ್ಸಪ್ ಮೆಸೇಜ್ ನಲ್ಲಿ ಇದೆ ವಿಚಾರ ಬರೆಯಲಾಗಿತ್ತು. ಮನೆಯವರನ್ನು ಬಿಟ್ಟಿರೋದು ಸಾಧ್ಯವಿಲ್ಲ ನಾವಿಬ್ಬರೂ ಬೇರೆ ಆಗುವುದಿಲ್ಲ, ಹಾಗಾಗಿ ಈ ಕೆಟ್ಟ ನಿರ್ಧಾರಕ್ಕೆ ಬಂದಿದ್ದೇವೆ ಕ್ಷಮಿಸಿ ಎಂದು ಬರೆಯಲಾಗಿತ್ತು. ಆದರೆ ಈ ಯುವಜೋಡಿಗಳ ಎರಡು ಕುಟುಂಬದವರು ಹೇಳುವುದೇ ಬೇರೆ.

ಪ್ರೀತಿ ಮಾಡಿ ಏಕೆ ಓಡಿಹೋಗಬೇಕಿತ್ತು?

ನಮ್ಮ ಮಕ್ಕಳು ಪ್ರೀತಿಯಲ್ಲಿ ಬಿದ್ದಿರುವುದೇ ಗೊತ್ತಿಲ್ಲ ಎಂದು ಜ್ಯೋತಿಯ ಮನೆಯವರು ಹೇಳುತ್ತಾರೆ.ಪ್ರೀತಿ ವಿಷಯ ಪ್ರಸ್ತಾಪ ಮಾಡಿದಿದ್ದರೆ ಕೂತು ಮಾತಾಡಿ ಮದುವೆ ಆದರೂ ಮಾಡಿಸ್ತಾಯಿದ್ದೆವು.ಹಣ ಕಾಲಿಯಾಗುವವರೆಗೆ ಸುತ್ತಾಡಿ ಕೈಯಲ್ಲಿ ಹಣ ಇಲ್ಲದಿದ್ದಾಗ ಬದುಕುವ ಧೈರ್ಯ ಇಲ್ಲದೇ ಹೀಗೆ ಮಾಡಿಕೊಂಡಿದ್ದಾರೆ. ಕಷ್ಟ ಪಟ್ಟು ದುಡಿದು ಸಾಕುವ ತಾಕತ್ತು ಇಲ್ಲದ ಮೇಲೆ ಪ್ರೀತಿ ಮಾಡಿ ಏಕೆ ಓಡಿಹೋಗಬೇಕಿತ್ತು? ಪ್ರೀತಿ ಮಾಡಿ ಹುಡುಗಿಯನ್ನ ಕರೆದುಕೊಂಡು ಹೋಗಿ ಶೋಕಿ ಮಾಡಬಾರದು.ಕೂಲಿ ನಾಲಿ ಮಾಡಿ ಹುಡುಗಿಯನ್ನು ಸಾಕಬೇಕು. ಭಯಬಿದ್ದು ಜೀವ ತೆಗೆದುಕೊಳ್ಳೋದು ತುಂಬಾ ‌ತಪ್ಪು ಎಂದು ಬೇಸರದ ಮಾತನಾಡಿದ್ದಾರೆ ಜ್ಯೋತಿ ಸಂಬಂಧಿಕರು.

ತಮ್ಮ ಮಕ್ಕಳ ಪ್ರೀತಿ ವಿರೋಧ ಮರೆಮಾಚಲು ಯತ್ನಿಸಿದ ಎರಡೂ ಕಡೆ ಕುಟುಂಬಸ್ಥರು ಹೇಳೋದಿಷ್ಟು,  ಜ್ಯೋತಿ ಮನೆಯವರು ತಮ್ಮ ಮಗಳು ಬಿಕಾಂ ಓದಿದ್ದಾಳೆ. ಬುದ್ದಿವಂತೆ ಕೂಡ ಆದರೆ ಭಯದ ಸ್ವಭಾವ.ಎರಡು ವರ್ಷದಿಂದ ಮನೆಯಲ್ಲೇ ಇದ್ಲು ಎಲ್ಲೂ ಆಚೆ ಹೋಗ್ತಿರಲಿಲ್ಲ.ಅದ್ಹೇಗೆ ಈ ಹುಡುಗನೊಂದಿಗೆ ಸಂಪರ್ಕ ಆಯಿತು ಗೊತ್ತಿಲ್ಲ ಎನ್ನುತ್ತಾರೆ.

ಇದನ್ನೂ ಓದಿ:  Udupi: ಕಾರ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ಜೋಡಿ ಆತ್ಮಹತ್ಯೆ; ಇಬ್ಬರ ಪೋಷಕರು ಹೇಳಿದ್ದೇನು?

3 ಗಂಟೆ 7 ನಿಮಿಷಕ್ಕೆ ಲಾಸ್ಟ್ ಮೆಸೇಜ್ 

ಇನ್ನು ಮೃತ ಯಶವಂತ್ ತಂದೆ ವೆಂಕಟರಾವ್ ಮಗ ಈ ರೀತಿ ಮಾಡಿಕೊಳ್ಳುತ್ತಾನೆ ಅಂತ ಎಂದುಕೋಂಡಿರಲೇ ಇರಲಿಲ್ಲ ಎನ್ನುತ್ತಾರೆ. ನನ್ಗ ಮಗ ತುಂಬ ಮುಗ್ಧ ಸ್ವಭಾವದವನು ಈಗ ಈ ನಿರ್ಧಾರಕ್ಕೆ ಬಂದು ಅನಾಹುತ ಮಾಡಿಕೊಂಡಿದ್ದಾನೆ.ಬುಧವಾರ ಮಧ್ಯಾಹ್ನ ಲ್ಯಾಪ್ ಟ್ಯಾಪ್ ತೆಗೆದುಕೊಂಡು ಕಂಪ್ಯೂಟರ್ ತರಗತಿಗೆ ಎಂದು ಹೋಗಿದ್ದಾನೆ.ಆ ಬಳಿಕ ಮೊಬೈಕ್ ಸ್ವಿಚ್ ಆಫ್ ಮಾಡಿದವ ಈವರೆಗೂ ಆನ್ ಮಾಡಿಲ್ಲ.ಬೇರೆಯವರ ಮೊಬೈಲ್ ನಿಂದ 3 ಗಂಟೆ ಏಳು ನಿಮಿಷಕ್ಕೆ ಲಾಸ್ಟ್ ಮೆಸೆಜ್ ಮಾಡಿದ್ದಾನೆ.

ಸಾರಿ ತಂದೆ ತಾಯಿಗೆ ತುಂಬ ನೋವು ಕೊಟ್ಟಿದ್ದೇನೆ. ನಾನು ಒಬ್ಬನೇ ಇರಕ್ಕಾಗುತ್ತಿಲ್ಲ ನಾನು ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಸಂದೇಶ ಕಳುಹಿಸಿದ್ದಾನೆ. ಹುಡುಗಿ ಬಗ್ಗೆ ಈವರೆಗೂ ನಮಗೆ ಗೊತ್ತೇ ಇಲ್ಲ ಈ ಮೊದಲು ಮನೆಯಲ್ಲೂ ಹೇಳಿಕೊಂಡಿಲ್ಲ. ಹೊರಗೆ ಸ್ನೇಹಿತರೂ ಕಡಿಮೆ , ಹಾಗಾಗಿ ಹೆಚ್ವಾಗಿ ಮನೆಯಲ್ಲಿ ಇರುತ್ತಿದ್ದ.ಟಿವಿ ನೋಡುವುದು ಬಿಟ್ಟರೆ‌ ಮೊಬೈಲ್ ನಲ್ಲೇ ಹೆಚ್ಚು ಇರುತ್ತಿದ್ದ . ಕೇಳಿದಾಗಲೆಲ್ಲ ಬ್ಯಾಂಕ್ ಎಕ್ಸಾಮ್ ಗೆ ತಯಾರಿ ನಡೆಸುತ್ತಿದ್ದೇನೆ ಎನ್ನುತ್ತಿದ್ದ. ಆದರೆ ಈ ಘಟನೆ ಬಳಿಕ ನಮಗೆ ಶಾಕ್ ಆಗಿದೆ.ಪ್ರೀತಿ ಬಗ್ಗೆ ಹೇಳಿದ್ದರೆ ನಾವೇ ಮದುವೆ ಮಾಡಿ ಕೊಡುತ್ತಿದ್ದೆವು.ಈ ಕೆಟ್ಟ ನಿರ್ಧಾರಕ್ಕೆ ಬರುವ ಮೊದಲು ಹೆತ್ತವರಿಗೆ ಕರೆ ಮಾಡಬಹುದಿತ್ತು ಎಂದು ಹೇಳುತ್ತಾರೆ.ಕೊಲೆಯ ಆಂಗಲ್ ನಲ್ಲೂ ತನಿಖೆ?

ಒಂದು ವೇಳೆ ಇವರು ಹೇಳುತ್ತಿರುವುದು ನಿಜವಾದರೆ , ಆತ್ಮಹತ್ಯೆಯಂತಹಾ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಅನ್ನೋ ಸಂಶಯ ಮೂಡುತ್ತೆ . ಇಲ್ಲಿ ಯಾರು ಹೇಳುತ್ತಿರುವುದು ಸತ್ಯ ಯಾರು ಹೇಳುತ್ತಿರುವುದು ಸುಳ್ಳು ಅನ್ನೋದರ ತನಿಖೆ ಆಗಬೇಕಾಗಿದೆ.

ಈ ಪ್ರಕರಣ ಅಷ್ಟೊಂದು ಸರಳವಾಗಿ ಕಂಡುಬರುತ್ತಿಲ್ಲ. ಮನೆಯವರಿಗೆ ಈ ಪ್ರೀತಿಯ ವಿಚಾರ ಮೊದಲೇ ಗೊತ್ತಿತ್ತು ಅನ್ನೋದು ಪೊಲೀಸ್ ಅಧಿಕಾರಿಗಳ ಹೇಳಿಕೆಯಿಂದ  ಖಚಿತವಾಗಿದೆ. ಜ್ಯೋತಿ ಪರಿಶಿಷ್ಟ ಜಾತಿಗೆ ಸೇರಿದ ಹುಡುಗಿ, ಯಶವಂತ್ ಮರಾಠ ಜನಾಂಗದ ಯುವಕ. ಹಾಗಾಗಿ ಜಾತಿಯ ಕಾರಣಕ್ಕೆ ಇವರ ಮದುವೆಗೆ ವಿರೋಧ ವ್ಯಕ್ತವಾಗಿದ್ದು ಕೂಡ ಸತ್ಯ!

ಸಾವಿನ ಹಿಂದೆ ಹಲವು ಅನುಮಾನಗಳು

ಮಂದಾರ್ತಿ ಯಂತಹಾ ನಿರ್ಜನ ಪ್ರದೇಶದ ವರೆಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶವಾದರೂ ಏನಿತ್ತು ಎನ್ನುವ ಬಗ್ಗೆಯೂ ತನಿಖೆ ನಡೆಯುತ್ತಿದೆ. ಘಟನಾ ಸ್ಥಳವನ್ನು ನೋಡಿದ ಪೊಲೀಸರಲ್ಲೂ ಹಲವು ಸಂಶಯಗಳು ಮೂಡಿದೆ.

ಡಾಮರು ಹಾಕಿದ ರಸ್ತೆ ತುತ್ತತುದಿ ಯವರಿಗೆ ಕಾರನ್ನು ತೆಗೆದುಕೊಂಡು ಹೋದ ಉದ್ದೇಶವೇನು? ಸಾಯುವ ವೇಳೆ ಪ್ರೇಮಿಗಳಿಬ್ಬರು ಹಿಂದಿನ ಸೀಟಿನಲ್ಲಿ ಕುಳಿತು ಕೊಳ್ಳಲು ಕಾರಣವೇನು? ಮುಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದ ಮೂರನೇ ವ್ಯಕ್ತಿ ಯಾರಾದರೂ ಇದ್ದಾರಾ? ಈ ವಿಚಾರವಾಗಿಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇಬ್ಬರನ್ನು ಕೊಲೆ ಮಾಡಿದ್ರಾ?

ಸಾಮಾನ್ಯವಾಗಿ ಯಾರೂ ಕೂಡ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಇದು ಕೂಡ ಪೊಲೀಸರ ಸಂಶಯಕ್ಕೆ ಕಾರಣವಾಗಿದೆ. ಆತ್ಮಹತ್ಯೆಗೂ ಮುನ್ನ ಮಾಡಿರುವ ಮೆಸೇಜುಗಳ ಸತ್ಯಾಸತ್ಯತೆಯನ್ನು ಕೂಡ ಪರಿಶೀಲಿಸಬೇಕಾಗಿದೆ. ಅದು ಯಶವಂತ್ ಮಾಡಿರುವ ವಾಟ್ಸಪ್ ಮೆಸೇಜ್ ಅಥವಾ ಬೇರೆಯವರು ಯಾರಾದರೂ ಮಾಡಿರುವ ಸಾಧ್ಯತೆ ಇದೆಯೇ? ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟು ತನಿಖೆಗೆ ಎಫ್ ಎಸ್ ಎಲ್ ನ ವರದಿ ಮುಖ್ಯವಾಗುತ್ತೆ.

ಹಣ ಖಾಲಿಯಾದ ಬಳಿಕ ಸಾವಿನ ನಿರ್ಧಾರ?

ಇಬ್ಬರಿಗೂ ಇನ್ನೂ ಎಳಸು ಪ್ರಾಯ . ಸರಿಯಾದ ಉದ್ಯೋಗ ಇಲ್ಲ . ಸೂಕ್ತ ನಿರ್ಧಾರ ತೆಗೆದುಕೊಳ್ಳುವಷ್ಟು ಧೈರ್ಯವೂ ಇರಲಿಲ್ಲ ಅನಿಸುತ್ತೆ . ಒಂದು ಕಡೆ ತಮ್ಮ ಪ್ರೀತಿಯನ್ನು ಕುಟುಂಬದವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಅನ್ನುವ ಭಯ, ಮತ್ತೊಂದು ಕಡೆ ಕಿಸೆಯಲ್ಲಿದ್ದ ಹಣವೆಲ್ಲ ಖರ್ಚಾಗಿ, ಭಯದಿಂದಲೇ ಈ ಜೋಡಿ ಸಾವಿನ ನಿರ್ಧಾರ ಕೈಗೊಂಡಿರುವ ಸಾಧ್ಯತೆಯೂ ಇದೆ.

ಒಟ್ಟಾರೆ ಹೆತ್ತವರಿಗೂ ಪ್ರೀತಿಗೂ ಮೋಸ ಮಾಡಿ ಬದುಕುವ ಧೈರ್ಯ ಕಳೆದುಕೊಂಡ ಇಬ್ಬರು ಯುವ ಮನಸ್ಸು ಸುಟ್ಟು ಹೋಗಿದೆ. ಮಕ್ಕಳ ದೇಹವನ್ನು ಎತ್ತಲಾಗದೆ ತಮ್ಮ ಊರಿಗೂ ಕೊಂಡೊಯ್ಯಲಾಗದೆ ಉಡುಪಿಯಲ್ಲೇ ಮಣ್ಣು ಮಾಡುವ ದುಸ್ಥಿತಿ ಹೆತ್ತವರಿಗೆ ಬಂದಿರೋದು‌ ನಿಜಕ್ಕೂ ದುರ್ದೈವ.
Published by:Mahmadrafik K
First published: