Hijab Controversy: ಹೈಕೋರ್ಟ್‌ ಮೆಟ್ಟಿಲೇರಿದ ಹಿಜಾಬ್ ವಿವಾದ, ಮುಂದುವರೆದ ಪರ-ವಿರೋಧಿ ಹೋರಾಟ

ಉಡುಪಿ ವಿದ್ಯಾರ್ಥಿನಿಯರ ಹಿಜಾಬ್ ಹೋರಾಟ ಮುಂದುವರೆದಿದೆ. ವಿದ್ಯಾರ್ಥಿನಿಯೊಬ್ಬರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಪ್ರಕರಣ ಮತ್ತಷ್ಟು ಕಾವು ಪಡೆದಿದೆ.

ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್

  • Share this:
ಉಡುಪಿ (Udupi) ಸರ್ಕಾರಿ ಕಾಲೇಜ್ (Government College) ವಿದ್ಯಾರ್ಥಿನಿಯರ ಹಿಜಾಬ್ (Hijab) ವಿವಾದ ಸದ್ಯ ಮುಗಿಯುವ ಲಕ್ಷಣವಂತೂ ಕಾಣಿಸುತ್ತಿಲ್ಲ. ನಿನ್ನೆ ಕಾಲೇಜು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡೇ ಕಾಲೇಜ್‌ಗೆ ಬಂದಿದ್ದರು. ಆದರೆ ಕಾಲೇಜ್‌ ಆಡಳಿತ ಮಂಡಳಿ (College Management) ಅವರಿಗೆ ತರಗತಿ ಪ್ರವೇಶವನ್ನು ನಿರಾಕರಿಸಿತು. ಜನವರಿ 31ರಂದು ಸಭೆ ನಡೆಸಿದ್ದ ಕಾಲೇಜು ಅಭಿವೃದ್ಧಿ ಮೇಲ್ವಿಚಾರಣಾ ಸಮಿತಿ (CDMC), ಹಿಜಾಬ್ ಧರಿಸಿ ಕ್ಲಾಸ್‌ಗೆ ಬರುವ ವಿದ್ಯಾರ್ಥಿನಿಯರಿಗೆ ಪ್ರವೇಶ ನಿಡದೇ ಇರಲು ನಿರ್ಧರಿಸಿತ್ತು. ಅದರಂತೆ ನಿನ್ನೆ ಹಿಜಾಬ್ ಧರಿಸಿ ಬಂದಿದ್ದವರಿಗೆ ಪ್ರವೇಶ ನೀಡಲಿಲ್ಲ. ಇದಕ್ಕೆ ಹಿಜಾಬ್ ಧರಿಸಿ ಬಂದಿದ್ದ 6 ವಿದ್ಯಾರ್ಥಿನಿಯರು ಆಕ್ಷೇಪ ವ್ಯಕ್ತಪಡಿಸಿದರು. ಕ್ಯಾಂಪಸ್‌ನೊಳಗೆ ಕೂತು ಪ್ರತಿಭಟನೆ ನಡೆಸಿದರು. ಇದು ಮತ್ತಷ್ಟು ವಿವಾದಕ್ಕೆ ಕಾರಣವಾಯಿತು.  ಇದೀಗ ವಿವಾದ ಹೈಕೋರ್ಟ್‌ (High Court) ಮೆಟ್ಟಿಲೇರಿದೆ.

ಹಿಬಾಜ್ ಧರಿಸಿ ಬರುವಂತಿಲ್ಲ ಎಂದಿರುವ ಶಾಸಕರು

ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವಂತಿಲ್ಲ ಎಂದು ಉಡುಪಿ ಶಾಸಕ ಹಾಗೂ ಸಿಡಿಎಂಸಿ ಅಧ್ಯಕ್ಷ ಕೆ.ರಘುಪತಿ ಭಟ್ ಹೇಳಿದ್ದಾರೆ. “ನಾವು ವಿದ್ಯಾರ್ಥಿನಿಯರ ಪೋಷಕರನ್ನು ಭೇಟಿ ಮಾಡಿದ್ದೇವೆ. ಅವರ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ ಎಂದಿದ್ದಾರೆ. ವಿದ್ಯಾರ್ಥಿನಿಯರು ಕಾಲೇಜ್‌ಗೆ ಹಿಜಾಬ್ ಧರಿಸಲು ನಿರ್ಧರಿಸಿದ್ದರೆ, ಅವರು ಬರುವ ಅಗತ್ಯವಿಲ್ಲ ಎಂದಿದ್ದಾರೆ.  ಈ ಘಟನೆಯಿಂದಾಗಿಯೇ ಇತರೇ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಇದರಿಂದ ಕಾಲೇಜಿನ ವಾತಾವರಣ ಕಲುಷಿತಗೊಂಡಿದೆ. ಇನ್ನು ಎರಡೇ ತಿಂಗಳ ನಂತರ ಪರೀಕ್ಷೆಗಳು ಇರುತ್ತವೆ, ಹೀಗಾಗಿ ಇತರೇ ವಿದ್ಯಾರ್ಥಿಗಳು, ಅವರ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆಗೂ ತಿಳಿಸಿದ್ದೇವೆ ಅಂತ ಶಾಸಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹೈಕೋರ್ಟ್‌ ಮೆಟ್ಟಿಲೇರಿದ ಹಿಜಾಬ್ ಪ್ರಕರಣ

ಇದೀಗ ವಿವಾದ ಮತ್ತಷ್ಟು ಕಾವು ಪಡೆದುಕೊಂಡಿದೆ. ಹಿಜಾಬ್ ಧರಿಸಿ ತರಗತಿಗೆ ಬರುವುದಕ್ಕೆ ಅವಕಾಶ ನೀಡುವಂತೆ ವಿದ್ಯಾರ್ಥಿಯೊಬ್ಬರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ರೇಶಮ್ ಎಂಬ ವಿದ್ಯಾರ್ಥಿನಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ಭಾರತೀಯ ಸಂವಿಧಾನದ 14 ಮತ್ತು 25 ನೇ ವಿಧಿ ಅಡಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡುವಂತೆ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Budget 2022: ಏನಿದು ನದಿ ಜೋಡಣೆ ಯೋಜನೆ? ಕಾವೇರಿ-ಪೆನ್ನಾರ್ ನದಿ ಜೋಡಣೆಯಿಂದ ರಾಜ್ಯಕ್ಕೆ ಏನು ಲಾಭ?

“ತರಗತಿಗೆ ಹಾಜರಾಗದಂತೆ ನಮ್ಮನ್ನು ತಡೆಯಲಾಗಿದೆ”

ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿನಿ ರೇಶಮ್, ನಮ್ಮನ್ನು ತರಗತಿಗೆ ಪ್ರವೇಶಿಸದಂತೆ ತಡೆಯಲಾಗಿದೆ ಅಂತ ಆರೋಪಿಸಿದ್ದಾರೆ. ಇಸ್ಲಾಂ ಧರ್ಮದಂತೆ ನಾವೆಲ್ಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕ್ಲಾಸ್‌ಗೆ ಹೋಗುತ್ತಿದ್ದೆವು. ಆದರೆ ಕಾಲೇಜು ಆಡಳಿತ ಮಂಡಳಿ ನಮ್ಮನ್ನು ತಡೆದಿದೆ ಅಂತ ತಿಳಿಸಿದ್ದಾರೆ.

ಅರ್ಜಿಯಲ್ಲಿ ಹೇಳಿದ್ದೇನು?

ಹಿಜಾಬ್‌ ಧರಿಸಲಾಗುತ್ತಿದೆ ಎಂಬ ಕಾರಣಕ್ಕೆ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಅರ್ಜಿದಾರರು ಸೇರಿದಂತೆ ಮುಸ್ಲಿಂ ಹೆಣ್ಣು ಮಕ್ಕಳಿಗೆ 2021ರ ಡಿ.28ರಿಂದ ಕಾಲೇಜು ಪ್ರವೇಶ ನಿರ್ಬಂಧಿಸಲಾಗಿದೆ. ಇದರಿಂದ ಅವರು ತರಗತಿಗಳಿಗೆ ಹಾಜರಾಗಲು ಅವಕಾಶವಾಗುತ್ತಿಲ್ಲ. ಪ್ರತಿಯೊಬ್ಬರಿಗೂ ತಮ್ಮದೇ ಆದ ಧಾರ್ಮಿಕ ಆಚರಣೆಗಳನ್ನು ಆಚರಿಸಲು ಭಾರತೀಯ ಸಂವಿಧಾನದಲ್ಲಿ ಅವಕಾಶವಿದೆ. ಧಾರ್ಮಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ,

ವಿದ್ಯಾರ್ಥಿನಿಯರ ಹಿಜಾಬ್ ಹೋರಾಟಕ್ಕೆ ಸಿಎಫ್‌ಐ ಬೆಂಬಲ

ಉಡುಪಿ ಸರ್ಕಾರಿ ಕಾಲೇಜ್‌ ವಿದ್ಯಾರ್ಥಿನಿಯರ ಹಿಜಾಬ್‌ ಹೋರಾಟಕ್ಕೆ ಅನೇಕ ಮುಸ್ಲಿಂ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಜೊತೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ವಿದ್ಯಾರ್ಥಿ ಘಟಕವಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಇದಕ್ಕೆ ಬೆಂಬಲ ಸೂಚಿಸಿದೆ. ವಿದ್ಯಾರ್ಥಿನಿಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ನಮ್ಮ ಬೆಂಬಲವಿದೆ ಅಂತ ಸಿಎಫ್‌ಐ ಹೇಳಿದೆ.

ಇದನ್ನೂ ಓದಿ:  Karnataka Weather Today: ಇಂದು-ನಾಳೆ ಈ ರಾಜ್ಯಗಳಲ್ಲಿ ಮಳೆ ಸಾಧ್ಯತೆ, ಹಿಮಪಾತದ ಮುನ್ಸೂಚನೆ ನೀಡಿದ IMD

ಮುಂದುವರೆದ ಹಿಂದೂ ಸಂಘಟನೆಗಳ ವಿರೋಧ

ಮತ್ತೊಂದೆಡೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬರುವುದಕ್ಕೆ ಹಿಂದೂ ಪರ ಸಂಘಟನೆಗಳು ಭಾರೀ ವಿರೋಧ ವ್ಯಕ್ತಪಡಿಸಿವೆ.  ಮುಂಸ್ಲಿಂ ವಿದ್ಯಾರ್ಥಿನಿಯರು ತರಗತಿಯೊಳಗೆ ಹಿಜಾಬ್ ಧರಿಸಿ ಬಂದರೆ ನಾವು ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬರುತ್ತೇವೆ ಅಂತ ಘೋಷಿಸಿದ್ದಾರೆ.
Published by:Annappa Achari
First published: