ಉಡುಪಿ (ಆ. 19): ಕರಾವಳಿಯ ಹೆಮ್ಮೆಯ ಕಂಪೆನಿಯಾಗಿ, ಹಲವು ಮಂದಿ ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗ ನೀಡಿದ್ದ ರೋಬೋಸಾಫ್ಟ್ ಕಂಪನಿ ಇದೀಗ ಪರ ರಾಷ್ಟ್ರದ ಪಾಲಾಗಿದೆ. ಜಪಾನ್ ಮೂಲದ ಟೆಕ್ನೋಪ್ರೋ ಹೋಲ್ಡಿಂಗ್ ಕಂಪೆನಿ ಉಡುಪಿಯ ಡಿಜಿಟಲ್ ಟ್ರಾನ್ಸ್ಫಾರ್ಮೇಶನ್ ಸೆಲ್ಯೂಷನ್ಸ್ ಸಂಸ್ಥೆಯಾಗಿರುವ ರೋಬೋಸಾಫ್ಟ್ನ ಶೇ. 100 ಷೇರು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ತಂತ್ರಾಂಶ ಅಭಿವೃದ್ದಿ ಆಪ್ಗಳ ನಿರ್ಮಾಣ ಸೇರಿದಂತೆ ಸಾಫ್ಟ್ವೇರ್ ಕ್ಷೇತ್ರಕ್ಕೆ ಸಂಬಂಧಪಟ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ರೋಬೋಸಾಫ್ಟ್. ಮಾಧ್ಯಮ ಲೋಕದಲ್ಲಿ ಮೊಬೈಲ್ ಆಪ್ಗಳನ್ನು ಅಭಿವೃದ್ದಿ ಪಡಿಸಿದ ಹೆಗ್ಗಳಿಕೆ ರೋಬೋಸಾಫ್ಟ್ಗೆ ಸಲ್ಲುತ್ತದೆ. ಅಷ್ಟೇ ಅಲ್ಲ, ಕೇವಲ ಭಾರತ ಮಾತ್ರವಲ್ಲದೇ ಅಮೇರಿಕಾ, ಜಪಾನ್ ಸೇರಿದಂತೆ ವಿಶ್ವದ ಹಲವು ಕಡೆಗಳಲ್ಲಿಯೂ ತನ್ನ ವ್ಯವಹಾರವನ್ನು ವಿಸ್ತರಣೆ ಮಾಡಿದೆ.
1996ರಲ್ಲಿ ಉಡುಪಿಯ ರೋಹಿತ್ ಭಟ್ ಆರಂಭಿಸಿದ್ದ ರೋಬೋ ಸಾಫ್ಟ್ ಉಡುಪಿ ಜಿಲ್ಲೆಯ ಪಾಲಿನ ಮೊದಲ ಸಾಫ್ಟ್ವೇರ್ ಕಂಪೆನಿ. ಸಣ್ಣ ಮಟ್ಟದಲ್ಲಿ ಆರಂಭಗೊಂಡ ಕಂಪೆನಿಯಲ್ಲಿ ಇಂದು ಬರೋಬ್ಬರಿ ಸಾವಿರಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಮುಖ್ಯವಾಗಿ ಸ್ಥಳೀಯ ಸಾಫ್ಟ್ ವೇರ್ ಪ್ರತಿಭೆಗಳಿಗೆ ಪ್ರಥಮ ಪ್ರಾಮುಖ್ಯತೆ ನೀಡುತ್ತಾ ಬಂದಿದೆ ಉಡುಪಿಯ ರೋಬೋಸಾಫ್ಟ್. ಪ್ರತಿಷ್ಠಿತ ಮೊಬೈಲ್ ಕಂಪೆನಿಗಳಲ್ಲೊಂದಾಗಿರುವ ಆಪಲ್ ಜೊತೆಗೂ ವ್ಯವಹಾರಿಕ ಸಂಬಂಧವನ್ನು ಹೊಂದಿದೆ.
ಜಪಾನ್ ಮೂಲದ ಟೆಕ್ನೋಪ್ರೋ ಸಂಸ್ಥೆಗೆ ರೋಬೋಸಾಫ್ಟ್ನ ಶೇಕಡಾ 100 ರಷ್ಟು ಷೇರುಗಳನ್ನು ಮಾರಾಟ ಮಾಡುವ ಕುರಿತು ಖುದ್ದು ರೋಬೋಸಾಫ್ಟ್ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಭಟ್ ಟ್ವೀಟ್ ಮಾಡಿದ್ದಾರೆ. ಕಳೆದ ಎರಡು ದಶಕಗಳಿಂದಲೂ ರೋಬೋಸಾಫ್ಟ್ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿದೆ. ಇದೀಗ ಟೆಕ್ನೋಪ್ರೋ ನಂತಹ ಜಾಗತಿಕ ಸಾಫ್ಟ್ವೇರ್ ದೈತ್ಯ ಕಂಪೆನಿ ರೊಬೋಸಾಫ್ಟ್ ಖರೀದಿ ಮಾಡುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.
ಇದನ್ನು ಓದಿ: ವರ ಮಹಾಲಕ್ಷ್ಮಿಯಂದು ಭಕ್ತರಿಗಿಲ್ಲ ಗೊರವನಹಳ್ಳಿ ಲಕ್ಷ್ಮಿದೇವಿ ದರ್ಶನ
ಉಡುಪಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ರೊಬೊಸಾಫ್ಟ್, ಬೆಂಗಳೂರು ಹಾಗೂ ಮುಂಬೈನಲ್ಲಿ ಡೆಲಿವರಿ ಕೇಂದ್ರ ಹಾಗೂ ಅಮೆರಿಕಾ, ಜಪಾನ್ ಸೇರಿದಂತೆ ಹಲವೆಡೆ ಮಾರಾಟ ಕೇಂದ್ರಗಳನ್ನು ಹೊಂದಿದೆ. 2008ರಲ್ಲಿ ಮೊಬೈಲ್ ಆ್ಯಪ್ಗಳನ್ನು ಸಿದ್ಧಪಡಿಸುವ ಮೂಲಕ ಜಾಗತಿಕವಾಗಿ ಉದ್ಯಮವನ್ನು ವಿಸ್ತರಿಸಿಕೊಂಡಿತ್ತು. ರೋಬೋಸಾಫ್ಟ್ ಕಂಪೆನಿ ಪ್ರಸ್ತುತ ಹಣಕಾಸಿನ ವರ್ಷದಲ್ಲಿ ಭರ್ಜರಿ 184 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ. ಕಳೆದ ಸಾಲಿನಲ್ಲಿ 97.4ಕೋಟಿ ಲಾಭ ಗಳಿಸಿತ್ತು. ಆದರೆ ಈ ಬಾರಿ ತನ್ನ ಲಾಭದ ಪ್ರಮಾಣವನ್ನು ಶೇ. 89 ರಷ್ಟು ಹೆಚ್ಚಳ ಮಾಡಿಕೊಂಡಿತ್ತು. ಇದೀಗ ಉಡುಪಿ ಮೂಲದ ಕಂಪೆನಿಯೊಂದು ಪ್ರಖ್ಯಾತ ಕಂಪೆನಿಯ ಪಾಲಾಗಿದೆ.
ಸದ್ಯ ಚಾಲ್ತಿಯಲ್ಲಿರುವ ಆಡಳಿತ ಮಂಡಳಿಯೇ ಕಂಪನಿಯನ್ನು ಮುನ್ನಡೆಸಿಕೊಂಡು ಹೋಗಲಿದೆ. ರವಿತೇಜ ಬೊಮಿರೆಡ್ಡಿ ಪಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಮುಂದುವರಿಯಲಿದ್ದಾರೆ ಎಂದು ರೋಬೋಸಾಫ್ಟ್ ಟೆಕ್ನೋಲಜಿಸ್ ಸ್ಪಷ್ಟಪಡಿಸಿದೆ. ಇನ್ನು ಜಪಾನ್ ಪಾಲಾದ ರೋಬೋಸಾಫ್ಟ್ ಮತ್ತಷ್ಟು ಉತ್ತುಂಗಕ್ಕೆ ಏರಿ ಇನ್ನಷ್ಟು ಸ್ಥಳೀಯರಿಗೆ ಉದ್ಯೋಗ ನೀಡುವ ಸಂಸ್ಥೆಯಾಗಿ ಬೆಳೆಯಬೇಕಿದೆ. ಇದೀಗ ರೋಬೋಸಾಫ್ಟ್ ಷೇರು ಖರೀದಿಸಿದ ಜಪಾನ್ ಕಂಪೆನಿ ಕರಾವಳಿಯಲ್ಲಿ ಅದರಲ್ಲೂ ಮುಖ್ಯವಾಗಿ ಉಡುಪಿಯಲ್ಲಿ ಮುಂದುವರೆದು ಮತ್ತಷ್ಟು ರಾರಾಜಿಸುವಂತಾಗಲಿ ಅನ್ನೋದು ಕರಾವಳಿಗರ ಆಶಯ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ