HOME » NEWS » State » UDUPI RAIN REPORT HEAVY RAIN CAUSES FLOOD IN UDUPI GNR

Udupi Rain: ಉಡುಪಿಯಲ್ಲಿ ಜಲಪ್ರಳಯ: ಮನೆಗಳಿಗೆ ನುಗ್ಗಿದ ನೀರು; ಸ್ಥಳೀಯರ ಪರದಾಟ

ನಗರದ ಅಂಗಡಿ, ಗೋದಾಮುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.‌ ಹಿರಿಯಡ್ಕ ಬಜೆ‌ ಅಣೆಕಟ್ಟಿನಲ್ಲಿ ಸ್ವರ್ಣ ನದಿ‌ ಉಕ್ಕಿ ‌ಹರಿದ‌ ಕಾರಣ ಜಲವಿದ್ಯುತ್ ಘಟಕದಲ್ಲಿ ಸಿಲುಕಿದ್ದ ಮಂಜು‌ ಹಾಗೂ ಗೋವಿಂದ ಇಬ್ಬರು ಸಿಬ್ಬಂದಿಗಳನ್ನ ರಕ್ಷಣೆ ಮಾಡಲಾಗಿದೆ.

news18-kannada
Updated:September 21, 2020, 8:49 AM IST
Udupi Rain: ಉಡುಪಿಯಲ್ಲಿ ಜಲಪ್ರಳಯ: ಮನೆಗಳಿಗೆ ನುಗ್ಗಿದ ನೀರು; ಸ್ಥಳೀಯರ ಪರದಾಟ
ಉಡುಪಿ ಮಳೆ
  • Share this:
Udupi Rain: ಉಡುಪಿ(ಸೆ.20): ಉಡುಪಿ ಜಿಲ್ಲೆಯಲ್ಲಿ ನಾಲ್ಕು ದಶಕಗಳ ಬಳಿಕ‌ ಕಂಡು ಕೇಳರಿಯದ ರೀತಿಯಲ್ಲಿ ಜಲಪ್ರಳಯ ಅವಾಂತರ ಸೃಷ್ಟಿಸಿದೆ.‌ ಒಂದೇ ರಾತ್ರಿ‌‌ ಸುರಿದ 266 ಮಿಲಿಮೀಟರ್ ಮಳೆಗೆ ಕೃಷ್ಣ ನಗರಿ‌ ಉಡುಪಿ ಜಲಸ್ಥಂಭನಗೊಂಡಿದೆ. ಉಡುಪಿ‌ ಜಿಲ್ಲೆಯ‌ ಚಿತ್ರಣವೇ ಬದಲಾಗಿದೆ. ಹಾಗಾದ್ರೆ ಜನಪ್ರಳಯಕ್ಕೆ ತುತ್ತಾದ ಜಿಲ್ಲೆಯ ಚಿತ್ರಣ ಹೇಗಿತ್ತು ಬನ್ನಿ‌ ನೋಡೋಣ. ನೀರಿನಲ್ಲಿ ಮುಳುಗಿರುವ ಕಾರುಗಳು, ಧರೆಗುರುಳಿರುವ ಮನೆಗಳು, ಅಂಗಡಿ, ಗೋಡೌನ್ ಒಳಗೆಲ್ಲ ನೀರು, ರಸ್ತೆಗುರುಳಿರುವ ಗುಡ್ಡದ ಮಣ್ಣು, ಅಣೆಕಟ್ಟಿನ ಮೇಲೆ ಉಕ್ಕೇರುತ್ತಿರುವ ಸ್ವರ್ಣೆ ನದಿ, ಸೀತಾ ನದಿ ಹೀಗೆ ನಗರ, ಗ್ರಾಮವೆಲ್ಲ ಜಲಾವೃತಗೊಂಡ ದೃಶ್ಯ ಜಲಪ್ರಳಯದ ಭೀಕರತೆಯ ಹೈಲೈಟ್. ಹೌದು, ಇದು ಉಡುಪಿ‌ ಜಿಲ್ಲೆಯಲ್ಲಿ‌ ಸೃಷ್ಟಿಯಾದ ಜಲಪ್ರಳಯದ ಅವಾಂತರ. ರಾತ್ರಿ ಎಡೆಬಿಡದೆ‌ ಸುರಿದ‌ ಮಳೆ ಜಿಲ್ಲೆಯ ಜನರನ್ನ ಹೈರಾಣಾಗಿಸಿದೆ. ರಾತ್ರಿಯಿಡೀ‌ ಸುರಿದ ಮಳೆಯಿಂದ ಉಡುಪಿ ನಗರ ಹಾಗೂ ತಗ್ಗುಪ್ರದೇಶಗಳಾದ ಕಲ್ಸಂಕ, ಮಠದ ಕೆರೆ, ಬೈಲಕೆರೆ, ನಿಟ್ಟೂರು, ಕೊಡಂಕೂರು ಪ್ರದೇಶಗಳಲ್ಲಿ ನೆರೆ ಸೃಷ್ಟಿಯಾಗಿದೆ.

ನಗರದ ಅಂಗಡಿ, ಗೋದಾಮುಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.‌ ಹಿರಿಯಡ್ಕ ಬಜೆ‌ ಅಣೆಕಟ್ಟಿನಲ್ಲಿ ಸ್ವರ್ಣ ನದಿ‌ ಉಕ್ಕಿ ‌ಹರಿದ‌ ಕಾರಣ ಜಲವಿದ್ಯುತ್ ಘಟಕದಲ್ಲಿ ಸಿಲುಕಿದ್ದ ಮಂಜು‌ ಹಾಗೂ ಗೋವಿಂದ ಇಬ್ಬರು ಸಿಬ್ಬಂದಿಗಳನ್ನ ರಕ್ಷಣೆ ಮಾಡಲಾಗಿದೆ. ಇವರಿಬ್ಬರು ಪಂಪ್ ಹೌಸ್​ನಲ್ಲಿ ಮಲಗಿದ್ದ ವೇಳೆ ನೀರು ಹೆಚ್ಚಾದ ಕಾರಣ ಜನರೇಟರ್ ಮೇಲೆ‌ ಕುಳಿತು‌ ಜೀವ ಉಳಿಸಿಕೊಂಡು ಅತಂತ್ರರಾಗಿದ್ದರು.

ಇವರನ್ನ ‌ಎನ್​​​ಡಿಆರ್​​​ಎಫ್ ತಂಡ ರೆಸ್ಕ್ಯೂ ಮಾಡಿದೆ.‌ ಇನ್ನು ಕಾಪು ತಾಲೂಕಿನಲ್ಲಿ ಗದ್ದೆಗಳಿಗೆ ನೀರು ನುಗ್ಗಿದ್ದು ಗದ್ದೆಯ ಪಕ್ಕದಲ್ಲಿರುವ ಮನೆಗಳಿಗೂ ನೆರೆನೀರು ಎಂಟ್ರಿಯಾಗಿದೆ.‌‌ ಗ್ರಾಮದ ಜನರು ಸಾಕು ಪ್ರಾಣಿಗಳ ರಕ್ಷಣೆಗೆ ಗ್ರಾಮಸ್ಥರ ಹರಸಾಹಸ ಪಟ್ಟಿದ್ದಾರೆ.‌ ಕುತ್ತಿಗೆ ಮಟ್ಟ ನೀರಿನಲ್ಲಿ ಹಸು ನಾಯಿಗಳನ್ನು ಸಾಗಿಸುತ್ತಿರುವ ದೃಶ್ಯ ಮನಕಲುಕುವಂತಿತ್ತು.

ಕೃಷ್ಣಮಠ ಕೂಡ ನೆರೆಗೆ‌ ತುತ್ತಾಗಿದ್ದು ರಥಬೀದಿ, ಬೈಲಕೆರೆ, ಗುಂಡಿಬೈಲು ಪ್ರದೇಶದಲ್ಲಿ ನೀರು‌ ನುಗ್ಗಿದೆ‌.‌ ಬ್ರಹ್ಮಾವರ ತಾಲೂಕು, ಕಾರ್ಕಳ ತಾಲೂಕಿನಲ್ಲಿ ಬರುವ ಗ್ರಾಮಗಳೆಲ್ಲ ನೆರೆಗೆ ತುತ್ತಾಗಿದ್ದು, ನೆರೆಯಲ್ಲಿ‌ ಸಿಲುಕಿರುವ ಜನರನ್ನ ಎನ್‌ಡಿಆರ್​​​ಎಫ್ ಹಾಗೂ ಎಸ್​​​ಡಿಆರ್​​ಎಫ್​​ ತಂಡ ದೋಣಿ ಮೂಲಕ ರಕ್ಷಿಸಿ ‌ ಸುರಕ್ಷಿತ ಸ್ಥಳಕ್ಕೆ ರವಾನೆ ಮಾಡಲಾಗಿದೆ.‌ ಈ‌ ನೆರೆ ನಡುವೆ ಕಾರ್ಕಳ ತಾಲೂಕಿನಲ್ಲಿ ಬರುವ ಮಾಳಾಘಾಟ್​ನಲ್ಲಿ‌ ಗುಡ್ಡ ಕುಸಿತ ಸಂಭವಿಸಿದ್ರೆ ಮಲ್ಪೆ ಕಡಲಿನಲ್ಲಿ ಮೂರು ಮೀನುಗಾರಿಕಾ ಬೋಟು ಅವಘಡಕ್ಕೆ ತುತ್ತಾಗಿದೆ.‌

ಅವಘಡದಲ್ಲಿ ಈಜಿ ಸೈಂಟ್ ಮೇರಿಸ್ ದ್ವೀಪದಲ್ಲಿ ಸಿಲುಕಿದ್ದ 10ಮಂದಿ ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ. ಇನ್ನು ನೆರೆಯಲ್ಲಿ‌ ಸಿಲುಕಿರುವ ಸಂತ್ರಸ್ಥರ ರಕ್ಚಣೆಗೆ ಕಾರವಾರ ನೌಕಾನೆಲೆಯಿಂದ ಎರಡು ಹೆಲಿಕಾಪ್ಟರ್ ಕಳುಹಿಸುವ ವ್ಯವಸ್ಥೆ ಸಂಸದೆ‌ ಶೋಭಾ ಕರಂದ್ಲಾಜೆ‌ ಮಾಡಿದ್ದಾರೆ.

ಉಡುಪಿ ಜಿಲ್ಲೆಯಾದ್ಯಂತ ಪ್ರವಾಹದ ವಾತಾವರಣ ಇದೆ. ಮುಂದಿನ ಎರಡು ದಿನ ರೆಡ್ ಅಲರ್ಟ್ ಘೋಷಣೆ ಆಗಿರುವುದರಿಂದ ನದಿ ಪಾತ್ರದ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಕುದ್ರು ಪ್ರದೇಶದ ಜನ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಿ ರಾತ್ರಿ ವೇಳೆ ಮನೆ ಮುಳುಗಡೆ ಯಾದರೆ ರಕ್ಷಣಾಕಾರ್ಯ ಕಷ್ಟವಾಗುತ್ತದೆ. ಜಿಲ್ಲಾಡಳಿತದ ಜೊತೆ ಜನ ಕೈಜೋಡಿಸಿ ಅಂತ ಜಿಲ್ಲಾಧಿಕಾರಿ‌ ಜಗದೀಶ್ ‌ಮನವಿ‌ ಮಾಡಿದ್ದಾರೆ.
ಇದನ್ನೂ ಓದಿ: ಇನ್ನೊಂದು ವಾರ ರಾಜ್ಯದಲ್ಲಿ ಭಾರೀ ಮಳೆ - ಕರಾವಳಿ ಮತ್ತು ಮಲೆನಾಡಿನಲ್ಲಿ ರೆಡ್, ಆರೆಂಜ್ ಅಲರ್ಟ್

ಒಟ್ಟಾರೆ‌ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 700 ಮನೆಗಳು ಮುಳುಗಿದೆ. ಜಿಲ್ಲೆಯಲ್ಲಿ ಸುಮಾರು 2500 ಜನರ ರಕ್ಷಣೆ ಮಾಡಲಾಗಿದೆ ಇನ್ನಷ್ಟು ಗ್ರಾಮಗಳಲ್ಲಿ ನೀರಿನ ಮಟ್ಟ ಅಪಾಯದ ಮಟ್ಟಕ್ಕೆ ತಲುಪಿರುವುದರಿಂದ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ.
Published by: Ganesh Nachikethu
First published: September 20, 2020, 9:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories