Udupi Murder: ಉಡುಪಿಯಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆ

Crime News: ಉಡುಪಿಯ ಕಾಪು ತಾಲೂಕಿನ ಕಿಶನ್ ಹೆಗ್ಡೆ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ. ಸಣ್ಣಪುಟ್ಟ ಅಪರಾಧ ಚಟುವಟಿಕೆಗಳಲ್ಲೂ ಕೂಡ ಭಾಗಿಯಾಗಿದ್ದ. ಆತನನ್ನು ನಿನ್ನೆ ನಡುರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

news18-kannada
Updated:September 25, 2020, 7:49 AM IST
Udupi Murder: ಉಡುಪಿಯಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆ
ಉಡುಪಿಯಲ್ಲಿ ಕೊಲೆಯಾದ ಕಿಶನ್ ಹೆಗ್ಡೆ
  • Share this:
ಉಡುಪಿ (ಸೆ. 25): ಹಾಡಹಗಲೇ ಯುವಕನೊಬ್ಬನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ನಡೆದಿದೆ. ಸಾರ್ವಜನಿಕ ‌ಸ್ಥಳದಲ್ಲೇ ಎಲ್ಲರೂ ನೋಡನೋಡುತ್ತಿದ್ದಂತೆ  ಅಟ್ಟಾಡಿಸಿ  ಮಚ್ಚಿನಲ್ಲಿ ಹೊಡೆದು ಬರ್ಬರವಾಗಿ ಕೊಲೆಗೈಯಲಾಗಿದೆ.‌ ಇನ್ನು ಬದುಕಲು ಅಸಾಧ್ಯ ಎಂಬ ರೀತಿಯಲ್ಲಿ‌ ತಲೆಗೆ ಮಚ್ಚು ಬೀಸಿ ಕಡಿಯಲಾಗಿದೆ. ಹಿರಿಯಡ್ಕ ಸಿಂಡಿಕೇಟ್ ಬ್ಯಾಂಕ್ ಮುಂಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ಬಂದು ಬರ್ಬರವಾಗಿ ಕೊಲೆ ಮಾಡಿದೆ. ಕಾಪು ತಾಲೂಕಿನ ಇನ್ನ ಗ್ರಾಮದ ಕಿಶನ್ ಹೆಗ್ಡೆ ಮೃತಪಟ್ಟ ಯುವಕ. ತನ್ನ ಗೆಳೆಯನ ಜೊತೆ ಕಾರಿನಲ್ಲಿ ಕುಳಿತಿದ್ದಾಗ ಉಡುಪಿ ಕಡೆಯಿಂದ ಇನ್ನೋವಾ ಮತ್ತು ರಿಟ್ಜ್​ ಕಾರು ಬಂದಿತ್ತು. ಕಾರಿನಲ್ಲಿ 8 ಯುವಕರು ಇದ್ದರು ಎನ್ನಲಾಗಿದೆ.

ಸ್ಥಳದಲ್ಲಿ ಕೆಲಕಾಲ ವಾಗ್ವಾದ ನಡೆದು ಕಿಶನ್ ಹೆಗ್ಡೆ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಯುವಕರ ತಂಡ ಮಾರಕಾಸ್ತ್ರಗಳಿಂದ ದಾಳಿ ಮಾಡಿದೆ. ತಲೆಯ ಹಿಂಭಾಗಕ್ಕೆ ಮತ್ತು ಕುತ್ತಿಗೆಗೆ ಬಲವಾದ ಪೆಟ್ಟಾಗಿದೆ. ಹರಿತ  ಮಾರಕಾಯುಧವಾಗಿದ್ದರಿಂದ ಕಿಶನ್ ಹೆಗ್ಡೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ವಿವರ ನೀಡಿದ್ದಾರೆ. ಕಿಶನ್ ಹೆಗ್ಡೆ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ. ಸಣ್ಣಪುಟ್ಟ ಅಪರಾಧ ಚಟುವಟಿಕೆಗಳಲ್ಲೂ ಕೂಡ ಭಾಗಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆಯಾದ ಕಿಶನ್ ಹೆಗಡೆ ಗುಲ್ಬರ್ಗದಲ್ಲಿ ತನ್ನ ಅಣ್ಣನ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ.  ಅಲ್ಲಿ ನಡೆದ ಪುಟ್ಟ ಗಲಾಟೆಯ ಬಳಿಕ ಪಾತಕ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಕಿಶನ್ ಊರಿಗೆ ಬಂದು ಅದನ್ನೇ ಮುಂದುವರಿಸಿದ್ದ.

ಇದನ್ನೂ ಓದಿ: ತುಮಕೂರು: ಕೊರೋನಾ ನೆಪದಲ್ಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಂದ‌ ಭಾರೀ ಸುಲಿಗೆ

ಮಂಗಳೂರಿನ ಕೋಡಿಕೆರೆ ಮನೋಜ್ ತಂಡದ ಜೊತೆ ಈತ ಗುರುತಿಸಿಕೊಂಡು ಒಂದಷ್ಟು ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ. ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಕಿಶನ್ ಮಂಗಳೂರಿನಲ್ಲಿ ಮನೆ ಮಾಡಿಕೊಂಡಿದ್ದ. ಕಿಶನ್ ಹೆಗಡೆ ಕ್ರಿಮಿನಲ್ ಹಿನ್ನೆಲೆ ಉಳ್ಳ ತನ್ನ ಸ್ನೇಹಿತರೊಂದಿಗೆ ಹಣದ ವ್ಯವಹಾರ ಹೊಂದಿದ್ದು ಇದೇ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಹಲವಾರು ಬಾರಿ ವಾಗ್ವಾದಗಳು ನಡೆದಿದ್ದು ಇದೀಗ ಅದು ಕೊಲೆಯಲ್ಲಿ ಕೊನೆಯಾಗಿದೆ ಎಂಬ ಮಾಹಿತಿ ಲಭಿಸಿದೆ.  ಹಿರಿಯಡ್ಕ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮಣಿಪಾಲ ಕಸ್ತೂರ್​ಬಾ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ದುಷ್ಕರ್ಮಿಗಳ ತಂಡ ಯಾವುದು , ದುಷ್ಕೃತ್ಯ ಎಸಗಿ ತಂಡ ಪರಾರಿಯಾಗಿ ಎಲ್ಲಿ ತಲೆಮರೆಸಿಕೊಂಡಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಹಿಂದೆ ಪಡುಬಿದ್ರೆಯಲ್ಲಿ ನಡೆದ ನವೀನ್ ಡಿಸೋಜ ಕೊಲೆಯಲ್ಲಿ ಕಿಶನ್ ಹೆಗಡೆ ಹೆಸರು ಕೇಳಿಬಂದಿತ್ತು. ಹಲವಾರು ಸಣ್ಣಪುಟ್ಟ ಅಪರಾಧ ಚಟುವಟಿಕೆಯಲ್ಲಿ ಭಾಗವಹಿಸಿ ಕುಖ್ಯಾತನಾಗಿದ್ದ ಕಿಶನ್ ಹೆಗಡೆ ಇತ್ತೀಚೆಗೆ ಅದನ್ನೆಲ್ಲ ಬಿಟ್ಟು ಪೂನಾದಲ್ಲಿ ಹೋಟೆಲ್ ವ್ಯವಹಾರ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಕೆಲ ತಿಂಗಳುಗಳಿಂದ ತಣ್ಣಗಿದ್ದ ಕರಾವಳಿಯ ಪಾತಕಲೋಕ ಈಗ ಮತ್ತೆ ತನ್ನ ಚಟುವಟಿಕೆ ಆರಂಭಿಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಏನು ಕ್ರಮ ಕೈಗೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
Published by: Sushma Chakre
First published: September 25, 2020, 7:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading