ಹುಟ್ಟಿದ ಕೆಲವೇ ಕ್ಷಣಗಳಲ್ಲಿ ತಾಯಿ ಕಳೆದುಕೊಂಡ ಹಸುಗೂಸು; ಬಾಣಂತಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂಬ ಆರೋಪ

ಮೊದಲ‌ ಹೆರಿಗೆ ಖುಷಿಯಲ್ಲಿದ್ದ ಉಷಾ ಗಂಡು ಮಗುವಿಗೆ ಜನ್ಮ ನೀಡಿದ ಕೆಲವೇ ನಿಮಿಷದಲ್ಲಿ ಇಹ ಲೋಕ ತ್ಯಜಿಸಿದ್ದಾಳೆ.

ಕುಟುಂಬಸ್ಥರ ಪ್ರತಿಭಟನೆ

ಕುಟುಂಬಸ್ಥರ ಪ್ರತಿಭಟನೆ

  • Share this:
ಉಡುಪಿ (ಸೆ. 25):  ಹೆರಿಗೆ ವೇಳೆ ಗಂಡು ಮಗುವಿಗೆ ಜನ್ಮ ನೀಡಿ ಮಹಿಳೆ  ಕೆಲವೇ ಕ್ಷಣದಲ್ಲಿ ಸಾವನ್ನಪ್ಪಿದ್ದಾರೆ. ಹುಟ್ಟಿದ ತಕ್ಷಣವೇ ನವಜಾತ ಶಿಶು ತಾಯಿ ಇಲ್ಲದೆ ಅನಾಥವಾಗಿರುವ ದಾರುಣ  ಘಟನೆ ಉಡುಪಿಯಲ್ಲಿ ನಡೆದಿದೆ. ಇನ್ನು ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಸ್ಪತ್ರೆಗೆ ‌ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರಿ ಸ್ವಾಮ್ಯದಲ್ಲಿರುವ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಬಿಆರ್ ಎಸ್  ಉಚಿತ  ಹೆರಿಗೆ ಆಸ್ಪತ್ರೆ ಪದೇಪದೇ ಸುದ್ದಿಯಾಗುತ್ತಿದೆ. ಸಿಬ್ಬಂದಿಗಳಿಗೆ ಸಂಬಳ ನೀಡದ ಕಾರಣಕ್ಕೆ ಸರಣಿ ಪ್ರತಿಭಟನೆಗಳು ಇಲ್ಲಿ ನಡೆದಿತ್ತು. ಇದೀಗ ವೈದ್ಯರ ನಿರ್ಲಕ್ಷದ ಕಾರಣಕ್ಕೆ ಆಸ್ಪತ್ರೆಯ ವಿರುದ್ಧ ಜನರೇ ಮುಗಿ ಬಿದ್ದಿದ್ದಾರೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟ ನಿವಾಸಿ ಉಷಾ ಚೊಚ್ಚಲ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಈಗಾಗಲೇ 10 ಸಾವಿರಕ್ಕೂ ಅಧಿಕ ಉಚಿತ ಹೆರಿಗೆಗಳನ್ನು ನಡೆಸಿರುವ ಈ ಆಸ್ಪತ್ರೆಯಲ್ಲಿ, ಸುರಕ್ಷಿತ ಹೆರಿಗೆ ಆಗುತ್ತದೆ ಎನ್ನುವುದ ಮನೆಯವರ ವಿಶ್ವಾಸವಾಗಿತ್ತು. ಸಿಸೇರಿಯನ್  ಅಗತ್ಯವಿಲ್ಲ ಸಹಜವಾಗಿಯೇ ಹೆರಿಗೆ ನಡೆಸುತ್ತೇವೆ ಎಂದು ವೈದ್ಯರು ಭರವಸೆಯನ್ನು ಕೂಡ ನೀಡಿದ್ದರು. ಆದರೆ ವೈದ್ಯರ ಭರವಸೆ ಸುಳ್ಳಾಗಿದೆ.

ಕೊನೆ ಕ್ಷಣದಲ್ಲಿ ಕೈ ಚೆಲ್ಲಿದ ವೈದ್ಯರು

ಹೆರಿಗೆಯ ಸಮಯ ಬಂದಾಗ ವೈದ್ಯರು ಕೊನೆ ಕ್ಷಣದಲ್ಲಿ ಕೈ ಚೆಲ್ಲಿದ್ದಾರೆ.  ಇನ್ನು ನಮಗೆ ಚಿಕಿತ್ಸೆ ನೀಡುವುದಕ್ಕೆ ಆಗುವುದಿಲ್ಲ ಎಂದು ಮಣಿಪಾಲಕ್ಕೆ ಕೊಂಡೊಯ್ಯಿರಿ ಎಂದು ಹೇಳಿದ್ದಾರೆ. ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಉಷಾ ಅಸುನೀಗಿದ್ದಾರೆ. ಕಳೆದ ಮೂರು ದಿನಗಳಿಂದ ಬಿಆರ್ ಶೆಟ್ಟಿ ಆಸ್ಪತ್ರೆಯಲ್ಲಿ ಈಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನಾರ್ಮಲ್ ಹೆರಿಗೆ ಸಾಧ್ಯವಿಲ್ಲ ಎಂದಾದರೆ ಸಿಸೇರಿಯನ್ ಮಾಡಬಹುದಿತ್ತು. ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಕಷ್ಟ ಎಂದು ಮೊದಲೇ ತಿಳಿಸಿದ್ದರೆ ಮಣಿಪಾಲಕ್ಕೆ ಕೊಂಡೊಯುತ್ತಿದ್ದೆವು. ಏನನ್ನೂ ಮಾಡದೆ ಇದೀಗ ಶವ ಮನೆಗೆ ಕೊಂಡೊಯ್ಯಬೇಕಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನು ಓದಿ: ಕಾವೇರಿ ತೀರ್ಥೋದ್ಭವಕ್ಕೆ ಕೋವಿಡ್​​ ಆತಂಕ; ಪ್ರವಾಸೋದ್ಯಮ ಬಂದ್​ ಮಾಡುವಂತೆ ಒತ್ತಾಯ

ಮುಗಿಲು ಮುಟ್ಟಿದ ಕುಟುಂಬಸ್ಥರ ಅಳಲು

ಬಾಣಂತಿಯ ಸಾವಿನಿಂದ ಆಕ್ರೋಶಗೊಂಡ ಸಂಬಂಧಿಕರು ಮತ್ತು ಗ್ರಾಮಸ್ಥರು ಆಸ್ಪತ್ರೆ ಆವರಣದಲ್ಲಿ ಸುದೀರ್ಘಕಾಲ ಪ್ರತಿಭಟನೆ ನಡೆಸಿದ್ದಾರೆ. ಕಣ್ಣೀರಿಡುತ್ತಲೇ ಆಸ್ಪತ್ರೆಗೆ ನುಗ್ಗಲು ಎತ್ತಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರನ್ನು ಕೂಡಲೆ ಸ್ಥಳಕ್ಕೆ ಕರೆಸುವಂತೆ ಒತ್ತಾಯ ಮಾಡಿದ್ದಾರೆ. ಅಮಾಯಕ ಜೀವವನ್ನು ಬಲಿ ತೆಗೆದುಕೊಂಡವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಕುಟುಂಬಿಕರ ಆಕ್ರೋಶದಿಂದ ಆಸ್ಪತ್ರೆ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಉಡುಪಿ ನಗರ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಜಿಲ್ಲಾ ಸರ್ಜನ್ ಹಾಗೂ ಹಿರಿಯ ವೈದ್ಯಾಧಿಕಾರಿಗಳು ಸ್ಥಳಕ್ಕೆ ಬಂದರು. ಇಷ್ಟಾದರೂ ಕುಟುಂಬಿಕರು ನ್ಯಾಯಕ್ಕಾಗಿ ಹೋರಾಟ ಮುಂದುವರಿಸಿದ್ದಾರೆ.

ಇದನ್ನು ಓದಿ: ನಗರಾದ್ಯಂತ ಭಾರೀ ಮಳೆ; ಬೆಂಗಳೂರಿಗರ ವೀಕೆಂಡ್​​ ಪ್ಲಾನ್​ಗೆ ತಣ್ಣೀರೆರಚಿದ ವರುಣ

ತನಿಖೆಗೆ ಮುಂದಾದ ಜಿಲ್ಲಾ ಆರೋಗ್ಯ ಇಲಾಖೆ

ಮಹಿಳೆ ದಾಖಲಾಗುವಾಗ ಆರೋಗ್ಯವಾಗಿಯೇ ಇದ್ರು ಆದರೆ ಹೆರಿಗೆಯ ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿ ಉಸಿರಾಟಕ್ಕೆ ಸಮಸ್ಯೆಯಾಗಿದೆ, ಮೂರ್ಛೆ ರೋಗದ ಲಕ್ಷಣಗಳು ಕಂಡು ಬಂದಿದ್ದು, ತಕ್ಷಣವೇ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ರವಾನೆ ಮಾಡಲು ಹೇಳಿದ್ದೇವೆ. ಇದೊಂದು ಆಕಸ್ಮಿಕ ಘಟನೆ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.

ಇಲ್ಲಿ ಮೊದಲ‌ ಹೆರಿಗೆ ಖುಷಿಯಲ್ಲಿದ್ದ ಉಷಾ ಗಂಡು ಮಗುವಿಗೆ ಜನ್ಮ ನೀಡಿದ ಕೆಲವೇ ನಿಮಿಷದಲ್ಲಿ ಇಹ ಲೋಕ ತ್ಯಜಿಸಿದ್ದಾಳೆ. ಈ ಸಾವಿನಿಂದ ಉಷಾಳ ಕುಟುಂಬ ನೋವಲ್ಲಿದೆ.   ಇತ್ತ ಹೆರಿಗೆ ಮಾಡಿಸಿದ ವೈದ್ಯೆ ಸಂಪರ್ಕಕ್ಕೆ‌ ಸಿಗದೆ ಮೌನಕ್ಕೆ ಜಾರಿದ್ದಾರೆ.  ಈ‌ ಬಗ್ಗೆ ತನಿಖೆಗೆ ಮುಂದಾಗಿರುವ ಆರೋಗ್ಯ ಇಲಾಖೆ ಕ್ರಮ ಕೈ ಗೊಳ್ಳುವ ಭರವಸೆ ನೀಡಿದೆ.
Published by:Seema R
First published: