Udupi: 10 ಸಾವಿರ ಉಚಿತ ಹೆರಿಗೆ ಮಾಡಿಸಿದ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಆಸ್ಪತ್ರೆ!

BR Shetty: 10 ಸಾವಿರ ಉಚಿತ ಹೆರಿಗೆ ಮಾಡಿಸಿರೋ ಈ ಆಸ್ಪತ್ರೆ ಹೆಸರು ಉಡುಪಿ ನಗರದಲ್ಲಿರೋ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಸರಕಾರಿ ಆಸ್ಪತ್ರೆ. ಉಡುಪಿ ಮೂಲದ, ವಿಶ್ವದಾದ್ಯಂತ 250ಕ್ಕಿಂತಲೂ ಹೆಚ್ಚು ಆಸ್ಪತ್ರೆಗಳನ್ನು ಹೊಂದಿರುವ ಬಿ.ಆರ್ ಶೆಟ್ಟಿ ಅವರ ಕನಸಿನ ಕೂಸಿದು.

ಬಿ.ಆರ್​ ಶೆಟ್ಟಿ ಜೊತೆ ಆಸ್ಪತ್ರೆ ವೈದ್ಯರ ತಂಡ

ಬಿ.ಆರ್​ ಶೆಟ್ಟಿ ಜೊತೆ ಆಸ್ಪತ್ರೆ ವೈದ್ಯರ ತಂಡ

  • Share this:
ಉಡುಪಿ (ಮಾ. 5): ಕಾಸು ಕೊಟ್ಟಿಲ್ಲ ಅಂದರೆ ಖಾಸಗಿ ಆಸ್ಪತ್ರೆಗೆ ಬಡವರಿಗೆ ಪ್ರವೇಶವೇ ಇಲ್ಲ. ಮೊದಲು ಫೈಲ್ ಮಾಡಿ ಬಿಲ್‌ ಕಟ್ಟಿದ ಬಳಿಕವೇ ಚಿಕಿತ್ಸೆ ಶುರು. ಇನ್ನು ಸರಕಾರಿ ಆಸ್ಪತ್ರೆಯಲ್ಲಿ ಮಿನಿಮಮ್ 10 ರೂ. ರಿಜಿಸ್ಟ್ರೇಷನ್ ಫೀಸ್ ಇದ್ದೇ ಇರುತ್ತದೆ. ಆದರೆ ಸೆಂಟ್ರಲ್ ಎಸಿ ಇರುವ ಇಂಟರ್​ನ್ಯಾಷನಲ್ ಲೆವೆಲ್ ನ 6 ಫ್ಲೋರ್ ನ ಈ ಆಸ್ಪತ್ರೆ ಉಚಿತವಾಗಿ 10 ಸಾವಿರ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದೆ.

ಖಾಸಗಿ ಆಸ್ಪತ್ರೆಗಳು ಅಂದರೆ ಜನಸಾಮಾನ್ಯರು ಬೆಚ್ಚಿಬೀಳುವ ಪರಿಸ್ಥಿತಿ ಎದುರಾಗಿದೆ. ಪ್ರಾಣ ಉಳಿಸುವ ಆಸ್ಪತ್ರೆಗಳು ಕಾಸು ಮಾಡುವ ಕೆಲಸಕ್ಕೆ ಇಳಿದಿರುವುದು ಇದಕ್ಕೆ ಕಾರಣ. ಆಸ್ಪತ್ರೆಗೆ ಕಾಲಿಟ್ಟ ಕೂಡಲೇ ಎಲ್ಲಾ ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ‌ ಆಸ್ಪತ್ರೆಯಲ್ಲಿ‌ ಮೊದಲು ಕಾಣುವುದು ಬಿಲ್ಲಿಂಗ್ ಕೌಂಟರ್.‌ ಸರ್ಕಾರಿ ಆಸ್ಪತ್ರೆಯಲ್ಲಿ ಮಿನಿಮಮ್ 10 ರೂಪಾಯಿ‌ ಚಾರ್ಜ್ ಮಾಡಿದ್ರೆ ಖಾಸಗಿ ಆಸ್ಪತ್ರೆಯಲ್ಲಿ 500ರಿಂದ 1 ಸಾವಿರ ರೂ. ಇನ್ನು ‌ಹೆರಿಗೆಗೆಂದು ಖಾಸಗಿ‌ ಆಸ್ಪತ್ರೆಗೆ ಹೋದರೆ 25ರಿಂದ 50 ಸಾವಿರ ತೆಗೆದಿಡಲೇಬೇಕು. ಅದರ ಮೇಲೆ ಸಾವಿರಾರು ರೂ.ಗಳ ಮೆಡಿಸಿನ್‌ ಬೇರೆ.

ಇದನ್ನೂ ಓದಿ: ಅಡ್ವಾಣಿ ಮನೆಯಲ್ಲೂ ತಿಂಡಿ ತಿಂದಿದ್ದೆ, ದೇವೇಗೌಡರ ಜೊತೆಯೂ ಚೆನ್ನಾಗಿದ್ದೇನೆ; ಸಿ.ಎಂ ಇಬ್ರಾಹಿಂ ಸ್ಪಷ್ಟನೆ

ಆದರೆ, ಉಡುಪಿಯ ಈ ಆಸ್ಪತ್ರೆಯಲ್ಲಿ ಎರಡೂವರೆ ವರ್ಷದಿಂದ ಉಚಿತವಾಗಿ ಹೆರಿಗೆ ಮಾಡಿಸಲಾಗುತ್ತಿದೆ. 10 ಸಾವಿರ ಉಚಿತ ಹೆರಿಗೆ ಮಾಡಿಸಿರೋ ಈ ಆಸ್ಪತ್ರೆ ಹೆಸರು ಉಡುಪಿ ನಗರದಲ್ಲಿರೋ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಸರಕಾರಿ ಆಸ್ಪತ್ರೆ. ಈ ಆಸ್ಪತ್ರೆ ಆರಂಭವಾಗಿ ಎರಡೂವರೆ ವರ್ಷ ಕಳೆಯುವ ಮೊದಲೇ ಇಲ್ಲಿ 10,000 ಕಂದಮ್ಮಗಳು ಜನ್ಮ ಪಡೆದಿವೆ. ಗರ್ಭಿಣಿ ಮಹಿಳೆ ಆಸ್ಪತ್ರೆಗೆ ಭೇಟಿ ಕೊಟ್ಟು ಹೆರಿಗೆಯಾಗಿ ಮನೆಗೆ ಮರಳುವ ತನಕ ಈ ಆಸ್ಪತ್ರೆಯಲ್ಲಿ ಎಲ್ಲವೂ ಉಚಿತ.. ಉಚಿತ.. ಇಲ್ಲಿ ಹುಡುಕಿದರೂ ಬಿಲ್ಲಿಂಗ್ ಮಾಡೋ ಕೌಂಟರ್ ಕಾಣೋದಿಲ್ಲ.‌

ಉಡುಪಿ ಮೂಲದ, ವಿಶ್ವದಾದ್ಯಂತ 250ಕ್ಕಿಂತಲೂ ಹೆಚ್ಚು ಆಸ್ಪತ್ರೆಗಳನ್ನು ಹೊಂದಿರುವ ಬಿ.ಆರ್ ಶೆಟ್ಟಿ ಅವರ ಕನಸಿನ ಕೂಸಿದು. ಉಡುಪಿ ನಗರಸಭೆಯ ಮುಂಭಾಗ ಸರಕಾರಿ ಜಮೀನನ್ನು ಪಡೆದು ಮೂರು ಅಂತಸ್ತಿನ ಸುಸಜ್ಜಿತ ಆಸ್ಪತ್ರೆಯನ್ನು ಕಟ್ಟಿ 30 ವರ್ಷ ಲೀಸ್ ಪಡೆದು ಸರಕಾರಕ್ಕೆ ಬರೆದುಕೊಟ್ಟಿದ್ದಾರೆ. 2018ರಲ್ಲಿ ಆರಂಭವಾದ ಈ ಆಸ್ಪತ್ರೆಯಲ್ಲಿ ನಿರಂತರವಾಗಿ ಪ್ರತಿದಿನ ಎಂಟರಿಂದ ಹತ್ತು ಮಕ್ಕಳ ಜನನವಾಗುತ್ತದೆ. ಇದೀಗ ಹತ್ತು ಸಾವಿರನೇ ಮಗು ಹುಟ್ಟಿದ್ದನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಮೊದಲ ಮಗು ಕಶ್ವಿಗೂ ಆಕೆಯ ಅಮ್ಮನನ್ನು ಸನ್ಮಾನಿಸಲಾಯಿತು. ಹತ್ತು ಸಾವಿರನೇ ಮಗು ಮಹಮ್ಮದ್ ಸಾಜಿಲ್ ಗೂ ತಾಯಿ ಉಮೈ ಬಾನುರನ್ನು ಗೌರವಿಸಲಾಯ್ತು.

ಹುಟ್ಟಿದ ಊರಿಗೆ ಉಡುಗೊರೆಯಾಗಿ ಬಿಆರ್ ಶೆಟ್ಟಿ ಈ ಆಸ್ಪತ್ರೆ ಕಟ್ಟಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಯ, ನೇಪಾಳದ ಮಹಿಳೆಯರು ಇಲ್ಲಿ ಉಚಿತವಾಗಿ ಹೆರಿಗೆ ಮಾಡಿಸಿಕೊಂಡಿದ್ದಾರೆ.  ಪ್ರತಿ ಜಿಲ್ಲೆಯ ಒಬ್ಬ ಉದ್ಯಮಿ ಒಬ್ಬ ಶ್ರೀಮಂತ ದೊಡ್ಡ ಮನಸ್ಸು ಮಾಡಿ, ಸರಕಾರದ ಜೊತೆ ಒಡಂಬಡಿಕೆ ಮಾಡಿ ಆಸ್ಪತ್ರೆಯ ಕಟ್ಟಿಸಿದರೆ  ಅದೆಷ್ಟೋ ಜನಕ್ಕೆ ಉಪಕಾರವಾಗುತ್ತದೆ.

(ವರದಿ-ಪರೀಕ್ಷಿತ್ ಶೇಟ್)
Published by:Sushma Chakre
First published: