Puttur: ಕುಂಟುತ್ತಾ ಸಾಗಿದೆ ವಿಕಲ ಚೇತನರ ವಿಶಿಷ್ಟ ಗುರುತು ಪತ್ರ ಅಭಿಯಾನ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೆ 20,925 ಮಂದಿ ವಿಕಲ ಚೇತರನ್ನು ಗುರುತಿಸಲಾಗಿತ್ತು. ನಾನಾ ಕಾರಣಗಳಿಂದ ಈ ಸಂಖ್ಯೆ ಇಳಿಮುಖಗೊಂಡಿದ್ದು, 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 17,629 ಮಂದಿ ವಿಕಲ ಚೇತನರಿದ್ದಾರೆ. ಇವರಲ್ಲಿ ಇದುವರೆಗೆ 10,315 ಜನರಿಗೆ ಯುಡಿಐಡಿ ಕಾರ್ಡ್ ನೀಡಲಾಗಿದ್ದು, 6500 ಜನರಿಗೆ ನೀಡಲು ಬಾಕಿ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪುತ್ತೂರು(ಜು.19): ಭಿನ್ನ ಸಾಮರ್ಥ್ಯದ ಜನರಿಗೆ ಭವಿಷ್ಯದಲ್ಲಿ ಸರಕಾರದಿಂದ ಸಿಗುವ ಸೌಲಭ್ಯಗಳೂ ಸೇರಿದಂತೆ ಎಲ್ಲ ಬಗೆಯ ಸೌಕರ್ಯಗಳನ್ನು (Facility) ನೀಡುವಲ್ಲಿ ಸಹಕಾರಿಯಾಗುವ ವಿಶಿಷ್ಟ ಗುರುತಿನ ಕಾರ್ಡ್ (Identity Card) ಪೂರೈಸುವ ಯೋಜನೆ ವರ್ಷದಿಂದ ಜಾರಿಯಲ್ಲಿದ್ದರೂ, ಇನ್ನೂ ಕೂಡ ಎಲ್ಲ ವಿಕಲ ಚೇತನರಿಗೆ ಕಾರ್ಡ್ ನೀಡುವಲ್ಲಿ ಸಫಲತೆ ಸಾಧಿಸಲಾಗಿಲ್ಲ. ಕೆಲವೇ ಸಾವಿರ ಮಂದಿಗೆ ಕಾರ್ಡ್ ನೀಡುವ ಅನಿವಾರ್ಯತೆ ಕಣ್ಣ ಮುಂದಿದ್ದರೂ ಇನ್ನೂ ಕೂಡ ಈ ನಿಟ್ಟಿನಲ್ಲಿ ಪೂರ್ಣತೆ ಸಾಧಿಸಲಾಗದೇ ಇರುವುದು ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಹಿಂದೆ 20,925 ಮಂದಿ ವಿಕಲ ಚೇತರನ್ನು ಗುರುತಿಸಲಾಗಿತ್ತು.

ನಾನಾ ಕಾರಣಗಳಿಂದ ಈ ಸಂಖ್ಯೆ ಇಳಿಮುಖಗೊಂಡಿದ್ದು, 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 17,629 ಮಂದಿ ವಿಕಲ ಚೇತನರಿದ್ದಾರೆ. ಇವರಲ್ಲಿ ಇದುವರೆಗೆ 10,315 ಜನರಿಗೆ ಯುಡಿಐಡಿ ಕಾರ್ಡ್ ನೀಡಲಾಗಿದ್ದು, 6500 ಜನರಿಗೆ ನೀಡಲು ಬಾಕಿ ಇದೆ. ವಿಕಲ ಚೇತನರಿಗೆ ಸಂಬಂಧಿಸಿದ ಸಭೆಗಳು, ಎಂಡೋಪಾಲನಾ ಕೇಂದ್ರಗಳು ಮತ್ತು ಎಂಡೋಪೀಡಿತರ ಉಪಚಾರಕ್ಕೆ ಸಂಬಂಧಿಸಿದ ಸಭೆಗಳಲ್ಲಿ ಈ ವಿಷಯ ಅನೇಕ ಬಾರಿ ಚರ್ಚೆಗೆ ಒಳಗಾಗಿತ್ತು.

ಯುಡಿಐಡಿ ಕಾರ್ಡ್ ವಿತರಣೆ

3 ತಿಂಗಳ ಹಿಂದೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಪುತ್ತೂರಿಗೆ ಬಂದಿದ್ದ ಸಂದರ್ಭದಲ್ಲಿ ಇದೇ ವಿಚಾರದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ನೇತೃತ್ವದಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಮೂಲಕ ವಿಕಲ ಚೇತನರಿಗೆ ಸವಲತ್ತುಗಳ ಪೂರೈಕೆ ನಡೆಯುತ್ತಿದ್ದು, ಯುಡಿಐಡಿ ಕಾರ್ಡ್ ವಿತರಣೆಗೂ ಇದೇ ನೆಟ್‍ವರ್ಕ್ ಬಳಸಲಾಗುತ್ತಿದೆ.

ವಿಶಿಷ್ಟ ಗುರುತಿನ ಚೀಟಿ

ವಿಶಿಷ್ಟ ಗುರುತುಪತ್ರ ನೋಂದಣಿಯಾದ ವಿಕಲಚೇತರಿಗೆ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸೇವಾ ಇಲಾಖೆಯ ಮೂಲಕ ಹಿಂದೆಯೇ ಗುರುತಿನ ಚೀಟಿ ನೀಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹೊಸದಾಗಿ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ- ಯೂನಿಕ್ ಡಿಸೇಬಿಲಿಟಿ ಐಡಿಡೆಂಟಿ ಕಾರ್ಡ್) ನೀಡುವ ಪ್ರಕ್ರಿಯೆಯನ್ನು ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಇಲಾಖೆಯ ವಿಕಲ ಚೇತನರ ಕಲ್ಯಾಣ ವಿಭಾಗವು ಆರಂಭಿಸಿದೆ.

ರಾಷ್ಟ್ರವ್ಯಾಪಿಯಾಗಿ ಏಕರೂಪದ ಕಾರ್ಡ್ ನೀಡುವುದು ಇದರ ಮೂಲ ಉದ್ದೇಶ. ಸವಲತ್ತು ನೀಡಿಕೆಯಲ್ಲಿ ಪಾರದರ್ಶಕತೆ, ಮಧ್ಯವರ್ತಿಗಳನ್ನು ತಪ್ಪಿಸುವುದು, ದಕ್ಷತೆ ತರುವುದು ಇನ್ನಿತರ ಉದ್ದೇಶ. ಜಿಲ್ಲೆಯಲ್ಲಿ ಇನ್ನೂ ಕೂಡ ಆರೂವರೆ ಸಾವಿರ ಜನರಿಗೆ ಕಾರ್ಡ್ ನೀಡಲು ಬಾಕಿ ಇದ್ದು, ಇದನ್ನು ಮುಗಿಸಲು ಶ್ರಮಿಸಲಾಗುತ್ತಿದೆ ಎಂದು ದ.ಕ. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ ತಿಳಿಸಿದ್ದಾರೆ.

ಈ ಗುರುತು ಪತ್ರ ಪಡೆದ ವಿಕಲಚೇತನ ವ್ಯಕ್ತಿ ನಾನಾ ಬಗೆಯ ದಾಖಲೆಗಳನ್ನು ಜೋಡಿಸಿಕೊಂಡು ಇಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಯಾವುದೇ ಸವಲತ್ತು ಪಡೆಯಲು ಇದೊಂದೇ ಕಾರ್ಡ್ ಸಾಕಾಗುತ್ತದೆ. ವಿಕಲಚೇತನರ ಆರ್ಥಿಕ ಮಟ್ಟವನ್ನು ಅಳೆಯಲು ಕೂಡ ಇದು ಸಹಕಾರಿ.

ಇದನ್ನೂ ಓದಿ: Chola Temple: ಕರ್ನಾಟಕದಲ್ಲಿ ಚೋಳರು ನಿರ್ಮಿಸಿದ್ದ 1,000 ವರ್ಷ ಹಳೆಯ ದೇಗುಲ ನಾಪತ್ತೆ!?

ಗುರುತಿನ ಚೀಟಿ ನೀಡುವಲ್ಲಿ ವಿಳಂಬ

ವಿಕಲ ಚೇತನರಿಗೆ ವಿಶಿಷ್ಟ ಗುರುತಿನ ಚೀಟಿ ನೀಡುವಲ್ಲಿ ವಿಳಂಬ ಮಾಡುವುದು ಸರಿಯಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ 15 ದಿನಗಳಲ್ಲಿ ಪುತ್ತೂರು ಉಪ ವಿಭಾಗದ ಪ್ರಗತಿಯ ಬಗ್ಗೆ ಸಭೆ ನಡೆಸಲಾಗುವುದು. ಅದರಲ್ಲಿ ಈ ವಿಚಾರ ಪರಾಮರ್ಶೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಸಹಾಯಕ ಆಯುಕ್ತ ಗಿರೀಶ್ ನಂದನ್ ಪ್ರತಿಕ್ರಿಯಿಸಿದ್ದಾರೆ.

ಪಿಂಚಣಿದಾರರು 16 ಸಾವಿರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16,000 ವಿಕಲ ಚೇತನರು ಮಾಸಿಕ ಪಿಂಚಣಿಯನ್ನು ಸರಕಾರದಿಂದ ಪಡೆಯುತ್ತಿದ್ದಾರೆ. ಶೇ.75ಕ್ಕಿಂತ ಹೆಚ್ಚಿನ ವೈಕಲ್ಯವಿದ್ದಲ್ಲಿ, ಅದನ್ನು ವೈದ್ಯಕೀಯವಾಗಿ ದೃಢಪಡಿಸಿಕೊಂಡು ಅಂಥವರಿಗೆ ಮಾಸಿಕ 1400 ರೂ. ಪಿಂಚಣಿ ನೀಡಲಾಗುತ್ತಿದೆ. ಶೇ. 75ಕ್ಕಿಂತ ಕಡಿಮೆ ವೈಕಲ್ಯವಿದ್ದವರಿಗೆ 800 ರೂ. ನೀಡಲಾಗುತ್ತಿದೆ.

ಇದನ್ನೂ ಓದಿ: Mangaluru Alert: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ 10 ಬೆಡ್​ಗಳ ವಿಶೇಷ ವಾರ್ಡ್; ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟು

ಇದನ್ನು  ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸೇವಾ ಇಲಾಖೆಯ ಮೂಲಕ ನೀಡಲಾಗುತ್ತಿದೆ. ಇದಲ್ಲದೆ ಎಂಡೋ ಪೀಡಿತರಿಗೆ ಆರೋಗ್ಯ ಇಲಾಖೆಯ ಮೂಲಕ ಅವರವರ ವೈಕಲ್ಯದ ಆಧಾರದಲ್ಲಿ 2 ಸಾವಿರ, 3 ಸಾವಿರ ಮತ್ತು 4 ಸಾವಿರ ರೂ. ನೀಡಲಾಗುತ್ತಿದೆ. ಹಿಂದೆ ನೀಡಲಾಗಿರುವ ಪಿಂಚಣಿ ಪಡೆಯಲು ಹಿಂದಿನ ಗುರುತಿನ ಚೀಟಿ ಸಾಕಾಗುತ್ತದೆ. ಆದರೆ ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕಾಗಿ ಅಧುನಿಕ ಮಾದರಿಯ ಯುಡಿಐಡಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Published by:Divya D
First published: