ರಾಜಕೀಯದಿಂದ ದೂರ ಉಳಿದಿದ್ದ ರಮ್ಯಾ ಒಮ್ಮೆಲೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮೇಲೆ ಹರಿಹಾಯ್ದು ಸದ್ಯ ರಾಜಕೀಯ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ತಮ್ಮದೇ ಪಕ್ಷದ ನಾಯಕನ ವಿರುದ್ಧ ಅವರಾಡಿದ ಟೀಕೆಗೆ ಡಿಕೆ ಶಿವಕುಮಾರ್ ಬೆಂಬಲಿಗರು ಕಿಡಕಾರಿದ್ದಾರೆ. ಇದೇ ಹಿನ್ನಲೆ ಇಂದು ಮತ್ತೆ ಮಾಜಿ ಸಂಸದೆ ವಿರುದ್ಧ ಹರಿಹಾಯ್ದ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Haris Nalapad) , ರಮ್ಯಾ ಕಾಂಗ್ರೆಸ್ ಪಕ್ಷದವರೋ ಅಲ್ವೋ ನನಗೆ ಗೊತ್ತಿಲ್ಲ. ನಮ್ಮ ಪಕ್ಷದ ಮಾಜಿ ಸಂಸದೆ ಎಂದು ಗೊತ್ತು, ಈಗ ಏನೆಂದು ಗೊತ್ತಿಲ್ಲ. ರಮ್ಯಾಗೆ ಈಗ ಪಕ್ಷದಲ್ಲಿ ಯಾವ ಜವಾಬ್ದಾರಿಯಲ್ಲೂ ಇಲ್ಲ ಎಂದಿದ್ದಾರೆ.
ಸಮಸ್ಯೆ ಇದ್ರೆ ಮಾತನಾಡಲಿ
ಅಲ್ಲದೇ, ಡಿಕೆ ಶಿವಕುಮಾರ್ ಪರವಹಿಸಿದ್ದರ ಕುರಿತು ಮಾತನಾಡಿದ ಅವರು, ನಾನು ನಮ್ಮ ನಾಯಕರ ಪರ ಹೋರಾಟ ಮಾಡಿದ್ದೇವೆ. ರಮ್ಯಾಗೆ ಸಮಸ್ಯೆ ಇದ್ರೆ ನಮ್ಮ ಜೊತೆ ಮಾತನಾಡಲಿ. ನನ್ನ ಬಳಿ ರಮ್ಯಾ ಅವರ ನಂಬರ್ ಇಲ್ಲ. ಇದ್ದಿದ್ದರೆ ನಾನೇ ಮಾತಾಡುತ್ತಿದ್ದೆ. ನಾವೇನೂ ಜಗಳವಾಡುತ್ತಿಲ್ಲ. ಹೇಳಿಕೆ ಗೆ ಪ್ರತಿ ಹೇಳಿಕೆ ಕೊಟ್ಟಿದ್ದೇನೆ. ಇದನ್ನೆ ಜಗಳ ಅಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಚಿಕ್ಕವಯಸ್ಸಿನ ತಪ್ಪನ್ನೇ ಎಷ್ಟು ಸಾರಿ ಹೇಳುತ್ತೀರಾ
ಜಾಮೀನಿನ ಮೇಲೆ ಇರುವ ಹುಡುಗ ನನ್ನ ವಿರುದ್ಧ ಮಾತನಾಡುತ್ತಿದ್ದಾನೆ ಎಂದು ನಲಪಾಡ್ ಹಳೆ ಪ್ರಕರಣಗಳನ್ನು ಕೆದಕಿ ರಮ್ಯಾ ಟ್ವೀಟ್ ಮಾಡಿರುವ ಕುರಿತು ಮಾತನಾಡಿದ ಅವರು, ನನ್ನ ವಿರುದ್ಧ ಪದೇ ಪದೇ ಹಳೆ ಕೇಸ್ ಇಟ್ಟುಕೊಂಡು ಟೀಕೆ ಮಾಡಬೇಡಿ. ಚಿಕ್ಕ ವಯಸ್ಸಿನಲ್ಲಿ ಏನೋ ತಪ್ಪು ಮಾಡಿದ್ದೆ. ಈಗ ತಿದ್ದಿಕೊಂಡಿದ್ದೇನೆ. ನೀವು ಪದೇ ಪದೇ ಅದನ್ನೂ ತೋರಿಸುವುದು ಬೇಡ ಎಂದಿದ್ದಾರೆ.
ಇದನ್ನು ಓದಿ: ಡಿಕೆಶಿ ಕರ್ಮಕಾಂಡಕ್ಕೆ ಪರ್ಮನೆಂಟ್ ಜಾಗ ತಿಹಾರ್ ಜೈಲು ಎಂದ ಅಶ್ವಥ್ ನಾರಾಯಣ್
ಇದೇ ವೇಳೆ ಈ ಬಾರಿ ಚುನಾವಣೆಗೆ ಸ್ಪರ್ಧೆಗೆ ನಲಪಾಡ್ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು 2023 ರ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ಪಕ್ಷ ಅಧಿಕಾರಕ್ಕೆ ತರಲು ಹೋರಾಟ ಮಾಡುತ್ತೇನೆ ಎಂದಿದ್ದಾರೆ.
ಉದಯಪುರದಲ್ಲಿ ಕಾಂಗ್ರೆಸ್ ಸಮಾವೇಶ
ಇತ್ತ ಎಂಬಿ ಪಾಟೀಲ್ ವಿರುದ್ಧ ಡಿಕೆ ಶಿವಕುಮಾರ್ ನೀಡಿದ ಹೇಳಿಕೆ ಇಟ್ಟುಕೊಂಡು ಕಳೆದ ಮೂರು ದಿನಗಳಿಂದ ರಮ್ಯಾ ಕೆಪಿಸಿಸಿ ಅಧ್ಯಕ್ಷರು ಮತ್ತು ಅವರ ಬೆಂಬಲಿಗರ ವಿರುದ್ಧ ಸಮರ ಸಾರುವ ಮೂಲಕ ಕಾಂಗ್ರೆಸ್ನ ನಾಯಕತ್ವದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಬಿಂಬಿಸುತ್ತಿದ್ದಾರೆ. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಾಜ್ಯದ ಕಾಂಗ್ರೆಸ್ ಮಾತ್ರ ನಮ್ಮ ನಡುವೆ ಏನು ಇಲ್ಲ. ನಾವೆಲ್ಲ ಚೆನ್ನಾಗೆ ಇದ್ದೇವೆ ಎಂಬು ಒಗ್ಗಟ್ಟಿನ ಸಂದೇಶವನ್ನು ಉದಯಪುರದಲ್ಲಿ ಸಾರಿದ್ದಾರೆ.
ಇದನ್ನು ಓದಿ: ಎಲ್ಲೋ ಏನೋ ಮಿಸ್ ಫೈರ್ ಆಗಿದೆ ಎಂದ ಡಿಕೆಶಿ; ಕೆಸಿ ವೇಣುಗೋಪಾಲ್ ಮೊರೆ ಹೋದ ರಮ್ಯಾ
ಒಗ್ಗಟ್ಟಿನ ಮಂತ್ರ ಜಪಿಸಿದ ಕಾಂಗ್ರೆಸ್ ನಾಯಕರು
ಉದಯಪುರದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ನಾಯಕರು ಒಟ್ಟಿಗೆ ಫೋಟೋಗೆ ಫೋಸ್ ನೀಡುವ ಮೂಲಕ ಒಗ್ಗಟ್ಟಿನ ಪ್ರದರ್ಶನ ನಡೆಸಿದ್ದಾರೆ. ಎಂಬಿ ಪಾಟಿಲ್ ಮತ್ತು ಡಿಕೆ ಶಿವಕುಮಾರ್ ಸಮಾವೇಶದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಇಬ್ಬರು ಪರಸ್ಪರ ಮಾತುಕತೆ ನಡೆಸಿ, ಸಿದ್ದರಾಮಯ್ಯ ಜೊತೆಗೆ ಫೋಟೋಗೆ ಫೋಸ್ ನೀಡಿದ್ದಾರೆ.
ಇನ್ನು ಇದೇ ವೇಳೆ ಮಾಜಿ ಸಂಸದೆ ರಮ್ಯ ಟ್ವೀಟ್ ಸಮರ ವಿವಾದಕ್ಕೆ ತೆರೆ ಎಳೆಯಲು ಕಾಂಗ್ರೆಸ್ ನಾಯಕರು ಮುಂದಾಗಿದ್ದು, ಇಲ್ಲಿಗೆ ಎಲ್ಲವೂ ಮುಗಿಸೋಣ ಎಂದಿದ್ದಾರೆ. ಈ ಹಿಂದೆ ತಿಳಿಸಿದಂತೆ ವೇದಿಕೆಯಲ್ಲಿ ಪರಸ್ಪರ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಂಡಿದ್ದು, ಇಬ್ಬರು ಯಾವುದೇ ಪ್ರತಿಕ್ರಿಯೆ ಕೊಡುವುದು ಬೇಡ ಎಂದು ಪರಸ್ಪರ ಮಾತಕತೆ ಮೂಲಕ ವಿವಾದ ತಣ್ಣಗಾಗಿಸಲು ತೀರ್ಮಾನ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ