ರಾಜ್ಯದ ಅಭಿವೃದ್ದಿ ಬಗ್ಗೆ ಕೇಳಿ - ಒಂದೇ ವಿಚಾರಕ್ಕೆ ಸೀಮಿತವಾಗಬೇಡಿ ; ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ ಜಿಲ್ಲೆಯ ಉಸ್ತುವಾರಿ ವಿಚಾರ ನನಗೆ ಗೊತ್ತಿಲ್ಲ, ನಾನೇನೂ ಕೇಳಿಯೂ ಇಲ್ಲ. ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಾಗುವುದಿಲ್ಲ. ಸಂಪುಟ ವಿಸ್ತರಣೆಯಲ್ಲಿ ನನಗೆ ಒಳ್ಳೆಯ ಇಲಾಖೆ ಸಿಕ್ಕಿದೆ ಎಂದು ತಿಳಿಸಿದರು.

ಸಚಿವ ರಮೇಶ್​ ಜಾರಕಿಹೊಳಿ

ಸಚಿವ ರಮೇಶ್​ ಜಾರಕಿಹೊಳಿ

  • Share this:
ಬೆಂಗಳೂರು(ಫೆ.13): ಮಹದಾಯಿ ಬಗ್ಗೆ ಕಾನೂನು ಹೋರಾಟ ವಕೀಲರು ಮಾಡುತ್ತಾರೆ ಹೊರತು ಮಂತ್ರಿ ಮಾಡುವುದಿಲ್ಲ. ಕಾನೂನು ವಿಚಾರಕ್ಕೆ ನಾವು ಎಲ್ಲಾ ಸಹಕಾರ ಕೊಡುತ್ತೇವೆ. ರಾಜ್ಯದ ಅಭಿವೃದ್ಧಿ ಬಗ್ಗೆ ಕೇಳಿ, ಆದರೆ, ಒಂದೇ ವಿಚಾರಕ್ಕೆ ಸೀಮಿತವಾಗಬೇಡಿ ಎಂದು ಮಾಧ್ಯಮದವರಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.

ಮಹದಾಯಿ ನೋಟಿಫಿಕೇಶನ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ, ಇನ್ನೂ ಇಲಾಖೆ ಬಗ್ಗೆ ಅಧ್ಯಯನ ಮಾಡಿಲ್ಲ ಸಮಗ್ರ ಅಧ್ಯಯನ ಮಾಡಿದ ಮೇಲೆ ಉತ್ತರ ಕೊಡುತ್ತೇನೆ. ಬಜೆಟ್ ವಿಚಾರವಾಗಿ ನಾಳೆ ಮಧ್ಯಾಹ್ನ 3 ಗಂಟೆಗೆ ಸಿಎಂ ಜೊತೆಗೆ ಸಭೆ ಇದೆ. ನನ್ನ ಸಲಹೆ ಹಾಗೂ ಮನವಿಗಳನ್ನು ಸಿಎಂ ಜೊತೆ ಭೇಟಿ ಮಾಡಿದಾಗ ಹೇಳುತ್ತೇನೆ ಎಂದರು.

ಬೆಳಗಾವಿ ಜಿಲ್ಲೆಯ ಉಸ್ತುವಾರಿ ವಿಚಾರ ನನಗೆ ಗೊತ್ತಿಲ್ಲ, ನಾನೇನೂ ಕೇಳಿಯೂ ಇಲ್ಲ. ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಾಗುವುದಿಲ್ಲ. ಸಂಪುಟ ವಿಸ್ತರಣೆಯಲ್ಲಿ ನನಗೆ ಒಳ್ಳೆಯ ಇಲಾಖೆ ಸಿಕ್ಕಿದೆ ಎಂದು ತಿಳಿಸಿದರು.

ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ನಿಗಮ-ಮಂಡಳಿ ವಿಚಾರಕ್ಕೆ  ಪ್ರತಿಕ್ರಿಯೆ ನೀಡಿದ ಅವರು, ಆ ಬಗ್ಗೆ ಗೊತ್ತಿಲ್ಲ, ಅವರನ್ನೇ ಕೇಳಿ. ಮೊನ್ನೆ ಕೊಟ್ಟಿರುವ ನಿಗಮ ಬೇಡ ಅಂದಿದ್ದಾರಂತೆ, ಅವರಿಗೆ ಬೇಡ ಅಂದರೆ ಬೇಡ. ಇದಕ್ಕಿಂತ ದೊಡ್ಡ ಹುದ್ದೆ ಕೊಡಲು ಸಿಎಂ ವಿಚಾರ ಮಾಡಿರಬಹುದು. ನಾನು ಮಂತ್ರಿ ಸ್ಥಾನವೇ ಬೇಡ ಅಂದಿದ್ದೆ, ಆದರೆ, ಕುಮಟಳ್ಳಿ ಹೇಳಿದ್ದಕ್ಕೆ ನಾನು ಮಂತ್ರಿ ಆಗಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಏನಿದು ಮಹದಾಯಿ ಸಮಸ್ಯೆ?:

ಮಹದಾಯಿ ನದಿ ನೀರು ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾ ರಾಜ್ಯಗಳಲ್ಲಿ  ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿ ನೀರನ್ನು ನಾಲೆಗಳ ಮುಖಾಂತರ ಸ್ವಲ್ಪ ಭಾಗವನ್ನು ತಿರುಗಿಸಿಕೊಂಡು ಕೆಲ ಜಿಲ್ಲೆಗಳಿಗೆ ಕುಡಿಯಲು ಬಳಕೆ ಮಾಡಿಕೊಳ್ಳುತ್ತೇವೆಂಬುದು ಕರ್ನಾಟಕದ ಒತ್ತಾಯ. ಆದರೆ, ಇದಕ್ಕೆ ಗೋವಾ ರಾಜ್ಯ ಒಪ್ಪುತ್ತಿಲ್ಲ. 2018ರ ಆಗಸ್ಟ್ ತಿಂಗಳಲ್ಲಿ ಮಹದಾಯಿ ನದಿ ನೀರು ವ್ಯಾಜ್ಯ ನ್ಯಾಯಮಂಡಳಿ ಈ ಸಮಸ್ಯೆಗೆ ಒಂದು ಪರಿಹಾರ ಒದಗಿಸಿತು. ಅದರಂತೆ ಮಹದಾಯಿ ನದಿ ನೀರನ್ನು ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ರಾಜ್ಯಗಳಿಗೆ ಹಂಚಿಕೆ ಮಾಡಿ ತೀರ್ಪು ನೀಡಿತು. ಅದರಂತೆ ಗೋವಾಗೆ 24 ಟಿಎಂಸಿ, ಕರ್ನಾಟಕಕ್ಕೆ 13.4 ಟಿಎಂಸಿ ಮತ್ತು ಮಹಾರಾಷ್ಟ್ರಕ್ಕೆ 1.3 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿತು. ಕರ್ನಾಟಕದ ಪಾಲಿಗೆ ಬಂದಿರುವ 13.5 ಟಿಎಂಸಿ ನೀರಿನ ಪೈಕಿ 5.5 ಟಿಎಂಸಿ ನೀರನ್ನು ಕುಡಿಯಲು ಬಳಕೆ ಮಾಡಬೇಕು. 4 ಟಿಎಂಸಿ ಅಡಿ ನೀರನ್ನು ವಿದ್ಯುತ್ ಯೋಜನೆಗೆ ಬಳಕೆ ಮಾಡಬಹುದು. ಕುಡಿಯುವ ನೀರಗೆ ಮಲಪ್ರಭ ಜಲಾಶಯದಿಂದ ಕಳಸಾ ಬಂಡೂರಿ ನಾಲೆಗಳ ಮೂಲಕ 5.5 ಟಿಎಂಸಿ ನೀರನ್ನು ಬರಪೀಡಿತ ಬೆಳಗಾವಿ, ಬಾಗಲಕೋಟೆ, ಗದಗ ಮತ್ತು ಧಾರವಾಡ ಜಿಲ್ಲೆಗಳಿಗೆ ಹರಿಸುವುದು ಯೋಜನೆಯ ಆಶಯ.

ಇದನ್ನೂ ಓದಿ :  ನೆರೆ ಇಳಿದು ತಿಂಗಳುಗಳೇ ಕಳೆದರೂ ಇನ್ನೂ ಇಲ್ಲ ಪರಿಹಾರ; ಸಂತ್ರಸ್ತರ ಗೋಳು ಮರೆತಿತಾ ಸರ್ಕಾರ?

ನ್ಯಾಯಮಂಡಳಿ ನೀಡಿದ ಈ ಹಂಚಿಕೆ ನ್ಯಾಯವು ಅನುಷ್ಠಾನಕ್ಕೆ ಬರಬೇಕಾದರೆ ಕೇಂದ್ರ ಸರ್ಕಾರವು ಈ ಸಂಬಂಧ ಗೆಜೆಟ್ ಅಧಿಸೂಚನೆ ಹೊರಡಿಸಬೇಕು. ಆದರೆ, ಕಾರಣಾಂತರಗಳಿಂದ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶ್ ಮಾಡುತ್ತಿಲ್ಲ. ಇದು ಮಹದಾಯಿ ಹೋರಾಟಗಾರರನ್ನು ಹತಾಶೆಗೊಳಿಸಿದೆ. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ಹೆಚ್​ಡಿಕೆ ನೇತೃತ್ವದ ಮೈತ್ರಿ ಸರ್ಕಾರಗಳು ಕೇಂದ್ರದ ಮೇಲೆ ಹೊಣೆ ಹಾಕಿ ಕೈಚೆಲ್ಲಿ ಕೂತಿದ್ದವು. ಆಗ ಯಡಿಯೂರಪ್ಪ ತಾವು ಅಧಿಕಾರಕ್ಕೆ ಬಂದರೆ ಕ್ಷಣಮಾತ್ರದಲ್ಲೇ ಮಹದಾಯಿ ಯೋಜನೆ ಸಮಸ್ಯೆಗೆ ಪರಿಹಾರ ಒದಗಿಸುತ್ತೇನೆಂದು ಅನೇಕ ಬಾರಿ ಹೇಳಿಕೊಂಡಿದ್ದರು. ಈಗ ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಆದರೂ ನ್ಯಾಯಮಂಡಳಿ ಕೊಟ್ಟಿರುವ ನೀರನ್ನು ಬಳಕೆ ಮಾಡಿಕೊಳ್ಳಲು ಕರ್ನಾಟಕಕ್ಕೆ ಅವಕಾಶ ಸಿಗದಂತಾಗಿದೆ.
First published: