ಸಿದ್ದರಾಮಯ್ಯ ಕ್ಷೇತ್ರದಲ್ಲಿ ಆನ್​ಲೈನ್​ ಶಿಕ್ಷಣಕ್ಕಾಗಿ ಕೂಲಿ ಹಣದಲ್ಲಿ ಮೊಬೈಲ್ ಖರೀದಿಸಿದ ಅಕ್ಕ-ತಂಗಿ; ಹಗಲಲ್ಲಿ ಕೂಲಿ ಕೆಲಸ: ರಾತ್ರಿ ಆಫ್​ಲೈನ್ ಕ್ಲಾಸ್

ಕೂಲಿ ಮುಗಿಸಿ ಬಂದ ಬಳಿಕ ರಾತ್ರಿ ಮಹಾದೇವಿ ಅಧ್ಯಯನ ಮಾಡಿದರೆ, ಕೂಲಿಗೆ ಹೋಗುವ ಮುನ್ನ ಅಕ್ಕ ಸವಿತಾ ಅಧ್ಯಯನ ಮಾಡುತ್ತಾಳೆ. ಆ ಬಳಿಕ ಬುತ್ತಿ ಕಟ್ಟಿಕೊಂಡು, ಕುರ್ಪಿ ಹಿಡಿದುಕೊಂಡು ಹೊಲಕ್ಕೆ ಹೋಗಿ ಕಳೆ ತೆಗೆಯುವ ಕೆಲಸ ಮಾಡುತ್ತಿದ್ದಾರೆ.

news18-kannada
Updated:August 1, 2020, 5:21 PM IST
ಸಿದ್ದರಾಮಯ್ಯ ಕ್ಷೇತ್ರದಲ್ಲಿ ಆನ್​ಲೈನ್​ ಶಿಕ್ಷಣಕ್ಕಾಗಿ ಕೂಲಿ ಹಣದಲ್ಲಿ ಮೊಬೈಲ್ ಖರೀದಿಸಿದ ಅಕ್ಕ-ತಂಗಿ; ಹಗಲಲ್ಲಿ ಕೂಲಿ ಕೆಲಸ: ರಾತ್ರಿ ಆಫ್​ಲೈನ್ ಕ್ಲಾಸ್
ಅಕ್ಕ-ತಂಗಿ
  • Share this:
ಬಾಗಲಕೋಟೆ(ಆ.01): ಕೊರೋನಾ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಆನ್​ಲೈನ್​ ಶಿಕ್ಷಣ ಆರಂಭಿಸಿದೆ. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು, ಪೋಷಕರು ಆನ್​ಲೈನ್​ ಶಿಕ್ಷಣ ಕಲಿಕೆಗಾಗಿ ಸಂಕಷ್ಟ ಪಡುವಂತಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಸಹೋದರಿಯರಿಬ್ಬರು ಆನ್​ಲೈನ್ ತರಗತಿಗಾಗಿ ಕೂಲಿ ಮಾಡಿ ಹಣ ಕೂಡಿಟ್ಟು ಮೊಬೈಲ್ ಖರೀದಿಸಿದ್ದಾರೆ. ಹಗಲಲ್ಲಿ ಕೂಲಿ ಕೆಲಸ ಮಾಡಿ, ರಾತ್ರಿ ಮತ್ತು ಬೆಳಿಗ್ಗೆ ಆನ್​ಲೈನ್​ ತರಗತಿಗಳನ್ನು ಆಫ್​ಲೈನ್​ನಲ್ಲಿ ಕೇಳಿಕೊಂಡು ಕಲಿಯುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಮುತ್ತಲಗೇರಿ ಗ್ರಾಮದ ಹನುಮಂತ ಕುರಿ ಎಂಬುವರಿಗೆ 7 ಜನ ಹೆಣ್ಣು ಮಕ್ಕಳಿದ್ದಾರೆ. ಗ್ರಾಮದ ಆರ್ ಎಂ ಎಸ್ ಎ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ಸವಿತಾ, 8ನೇ ತರಗತಿಯಲ್ಲಿ ಮಹಾದೇವಿ ಅಧ್ಯಯನ ಮಾಡುತ್ತಿದ್ದಾರೆ. ಹನಮಂತ ಕುರಿ ಎಂಬುವರಿಗೆ 2ಎಕರೆ ಜಮೀನಿದ್ದು, ಕಡುಬಡತನದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ.

ಜೊತೆಗೆ ಕೂಲಿ ಅರಸಿ ಎರಡು ವರ್ಷಗಳ ಹಿಂದೆ, ಗೌಂಡಿ ಕೆಲಸಕ್ಕೆಂದು ಹನಮಂತಮತ್ತು ಆತನ ಪತ್ನಿ ಮಂಗಳೂರಿಗೆ ಹೋಗಿದ್ದರು. ಹೀಗಾಗಿ ಮಕ್ಕಳು ಸ್ವಾವಲಂಬಿ ಬದುಕು ಕಂಡುಕೊಂಡಿದ್ದಾರೆ. ಇದೀಗ ಹನಮಂತ ಕೂಡಾ ಕೂಲಿ ಮಾಡಿಯೇ ಜೀವನ ಸಾಗಿಸುತ್ತಿದ್ದಾರೆ. ಆದರೆ ಮಕ್ಕಳ ಓದಿಗೆ ಮಾತ್ರ ತೊಂದರೆ ಮಾಡಿಲ್ಲ. ಹೆಣ್ಣು ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಕೊರೋನಾ ಎಫೆಕ್ಟ್ ಹಿನ್ನೆಲೆ ಸರ್ಕಾರ ಆನ್​ಲೈನ್​ ಕ್ಲಾಸ್ ಆರಂಭಿಸಿದಾಗ ಮಕ್ಕಳ ಕಲಿಕೆಗೆ ತೊಂದರೆ ಆಗಿದೆ. ಕಲಿಕೆಯಲ್ಲಿ ಆಸಕ್ತಿ ಇರುವ ಮಹಾದೇವಿ ಕುರಿಗೆ ಕೆಲ ಸಹಪಾಠಿಗಳು ಮುಂದೆ ಆನ್​ಲೈನ್​ ಕ್ಲಾಸ್ ಆಧರಿ‌ಸಿಯೇ ಪರೀಕ್ಷೆ ನಡೆಸುತ್ತಾರೆ ಎಂದಿದ್ದಾರೆ. ಆಗ ಸ್ಮಾರ್ಟ್ ಫೋನ್ ಖರೀದಿಸುವ ಆಲೋಚನೆ ಮಾಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಇವರಿಬ್ಬರು ಜಮೀನಿನಲ್ಲಿ ಕೂಲಿ  ಕೆಲಸ ಮಾಡಿ  ಬಂದಿದ್ದ 5ಸಾವಿರ ಜೊತೆಗೆ 4ಸಾವಿರ ಸ್ಕಾಲರ್ ಶಿಪ್ ನಿಂದ ಬಂದಿದ್ದ ಹಣವನ್ನು ಸೇರಿಸಿ ಮೊಬೈಲ್ ಖರೀದಿಸಿದ್ದಾರೆ. ಬಡತನ ಮಧ್ಯೆ ಕೂಲಿಯೊಂದಿಗೆ ಕಲಿಕೆ ಮುಂದುವರಿಸಿದ್ದಾರೆ.

ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ; ಯಾವುದೇ ಪ್ರಾಣಹಾನಿ ಇಲ್ಲ

ಹಗಲಲ್ಲಿ ಕೂಲಿ ಹೊರೆ: ರಾತ್ರಿ, ಬೆಳಿಗ್ಗೆ ಆಫ್​ಲೈನ್​ ವಿಡಿಯೋ ಮೂಲಕ ಕಲಿಕೆ...!!

ಸವಿತಾ ಹಾಗೂ ಮಹಾದೇವಿ ಸಹೋದರಿಯರು ಒಂದೇ ಮೊಬೈಲ್​ನಲ್ಲಿ  ಚಂದನ ವಾಹಿನಿಯ ಆನ್ಲೈನ್ ಕ್ಲಾಸ್ ವಿಡಿಯೋಗಳನ್ನು ಯುಟ್ಯೂಬ್ ನಲ್ಲಿ ಡೌನ್​ಲೌಡ್ ಮಾಡಿಕೊಳ್ಳುತ್ತಾರೆ. ಕೂಲಿ ಮುಗಿಸಿ ಬಂದ ಬಳಿಕ ರಾತ್ರಿ ಮಹಾದೇವಿ ಅಧ್ಯಯನ ಮಾಡಿದರೆ, ಕೂಲಿಗೆ ಹೋಗುವ ಮುನ್ನ ಅಕ್ಕ ಸವಿತಾ ಅಧ್ಯಯನ ಮಾಡುತ್ತಾಳೆ. ಆ ಬಳಿಕ ಬುತ್ತಿ ಕಟ್ಟಿಕೊಂಡು, ಕುರ್ಪಿ ಹಿಡಿದುಕೊಂಡು ಹೊಲಕ್ಕೆ ಹೋಗಿ ಕಳೆ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಬಡತನ ಹಿನ್ನೆಲೆ ರಜೆ ಅವಧಿಯಲ್ಲಿ  ಪೋಷಕರಿಗೆ ಆಸರೆಯಾಗಲು ಕೂಲಿಯೊಂದಿಗೆ ಕಲಿಯುತ್ತಿದ್ದೇವೆ. ಆನ್​ಲೈನ್​ ಕಲಿಕೆಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ‌. ಸ್ಕ್ರೀನ್ ನೋಡುವುದರಿಂದ ಕಣ್ಣು ನೋವು ಆಗುತ್ತಿದೆ. ಇನ್ನು ಎಲ್ಲರ ಮನೆಯಲ್ಲೂ ಮೊಬೈಲ್, ಟಿವಿ ಇರುವುದಿಲ್ಲ. ಜೊತೆಗೆ ನೆಟ್ವರ್ಕ್ ಸಮಸ್ಯೆಯಿಂದ ಆನ್ಲೈನ್ ಕ್ಲಾಸ್ ಹೊರೆಯಾಗುತ್ತದೆ ಎಂದು ನ್ಯೂಸ್ 18ನೊಂದಿಗೆ ವಿದ್ಯಾರ್ಥಿನಿ ಮಹಾದೇವಿ  ಹಂಚಿಕೊಂಡಿದ್ದಾರೆ. ಕ್ಷೇತ್ರದ ಶಾಸಕ, ವಿಪಕ್ಷ ನಾಯಕ ಸಿದ್ದರಾಮಯ್ಯ ಕೊರೋನಾ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.ಕೊರೋನಾ ಕಾಲದ ರಜೆಯಲ್ಲಿ  ಕೂಲಿಯತ್ತ ಕಂದಮ್ಮಗಳು..!!

ಹೌದು, ಕೊರೋನಾ ಲಾಕ್​ಡೌನ್​ನಿಂದಾಗಿ ಕಲಿಯುವ ಕಂದಮ್ಮಗಳು ಕೂಲಿ ಕೆಲಸದತ್ತ ಮುಖಮಾಡಿದ್ದಾರೆ. ಹಿಂದೆ ಬೇಸಿಗೆ ರಜೆ, ಹಾಗೂ ದಸರಾ ರಜೆ ಅವಧಿಯಲ್ಲಿ ಶಾಲಾ ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು‌. ಆದರೆ ಈ ಬಾರಿ ಕೊರೋನಾದಿಂದ ರಜಾವಧಿ ಹೆಚ್ಚಾಗಿದ್ದು, ಶಾಲಾ ಮಕ್ಕಳು ಬಡತನದಿಂದಾಗಿ ಕೃಷಿ ಕೂಲಿಕೆಲಸ ಮಾಡುವುದಕ್ಕೆ ಹೋಗುತ್ತಿದ್ದು, ಅದರ ಜೊತೆಗೆ ಆನ್ಲೈನ್ ಕಲಿಕೆ ಮುಂದುವರಿಸಿದ್ದಾರೆ.

ಆನ್ಲೈನ್ ಶಿಕ್ಷಣದಿಂದ ಮೊಬೈಲ್, ಟಿವಿ ಖರೀದಿಸುವುದಕ್ಕೆಂದು ಜೊತೆಗೆ ಮಕ್ಕಳು ಪೋಷಕರಿಗೆ ಆಸರೆಯಾಗುವ ನಿಟ್ಟಿನಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಾಗುವ ಆತಂಕ ಬಾಲ ಕಾರ್ಮಿಕ ನಿರ್ಮೂಲನೆಯಲ್ಲಿ ತೊಡಗಿಸಿಕೊಂಡ ಅಧಿಕಾರಿಗಳು,ಮಕ್ಕಳ ಹಕ್ಕುಗಳ ಹೋರಾಟಗಾರರಲ್ಲಿದೆ‌.

ಇನ್ನು ಸಾಮಾಜಿಕ ಅಂತರ, ಸುರಕ್ಷಿತ ಕ್ರಮದೊಂದಿಗೆ ಶಾಲೆಗಳನ್ನು ಆರಂಭಿಸಬೇಕು, ಮಹಾದೇವಿ ವಿದ್ಯಾರ್ಥಿನಿ ಬಡತನದ ಮಧ್ಯೆಯೂ ಕಲಿಕೆಯಲ್ಲಿ ಉತ್ತಮವಾಗಿದ್ದಾಳೆ, ಸಹೋದರಿಯರಿಬ್ಬರು ಸೇರಿ ಕೂಲಿ ಹಣದಲ್ಲಿ ಮೊಬೈಲ್ ಖರೀದಿಸಿದ್ದಾರೆ. ಇದು ಕಲಿಕಾಸಕ್ತಿ ತೋರಿಸುತ್ತಿದೆ ಎನ್ನುತ್ತಾರೆ ಆರ್ ಎಂಎಸ್ ಎ ಸರ್ಕಾರಿ ಪ್ರೌಢಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಈಶ್ವರ ತೆಗ್ಗಿನಮನಿ.

ಏನೇ ಆಗಲಿ ಕೊರೊನಾ ಸಂಕಷ್ಟದಿಂದಾಗಿ ಶಿಕ್ಷಣ ಮುಂದುವರೆಸುವದಕ್ಕಾಗಿ ಪೋಷಕರು, ವಿದ್ಯಾರ್ಥಿಗಳು ಆತಂಕದ ಮಧ್ಯೆ ಮಕ್ಕಳ ಆನ್ಲೈನ್ ಶಿಕ್ಷಣಕ್ಕಾಗಿ ಪರದಾಡುತ್ತಿದ್ದಾರೆ. ಸರ್ಕಾರ ಹಾಗೂ ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಬಡಮಕ್ಕಳ ಆನ್ಲೈನ್ ಕಲಿಕೆಗೆ ಸೂಕ್ತ ನೆರವು ನೀಡಬೇಕೆನ್ನುವುದು ಬಡವಿದ್ಯಾರ್ಥಿಗಳ, ಪೋಷಕರ ಮನವಿಯಾಗಿದೆ.
Published by: Latha CG
First published: August 1, 2020, 5:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading