ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಡ್ರಗ್ಸ್ ಜಾಲದ ತವರೂರು ಆಗ್ತಿದ್ಯಾ. ಹೀಗೊಂದು ಅನುಮಾನ ಪೊಲೀಸರು ಮತ್ತು ಜನಸಾಮಾನ್ಯರಲ್ಲಿ ಮನೆ ಮಾಡತೊಡಗಿದೆ. ಯಾಕಂದ್ರೆ ನಗರದಲ್ಲಿ ಡ್ರಗ್ ಹಾವಳಿ ಮಟ್ಟ ಹಾಕಲು ಖಾಕಿ ಪಡೆ ಪ್ರತಿದಿನ ಇನ್ನಿಲ್ಲದ ಮಸಲತ್ತು ಮಾಡ್ತಿದ್ರು ಖದೀಮರು ಮಾತ್ರ ಕಾಳಸಂತೆಯಲ್ಲಿ ಡ್ರಗ್ ಮಾರಾಟ ನಡೆಸುತ್ತಲೇ ಇದ್ದಾರೆ. ಇಂದು ಸಹ ಇಬ್ಬರು ವಿದೇಶಿ ಡ್ರಗ್ ಡೀಲರ್ ಗಳು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹೌದು, ಕಳೆದ ಆರೇಳು ತಿಂಗಳಲ್ಲಿ ಬೆಂಗಳೂರು ಪೊಲೀಸರು ಡ್ರಗ್ಸ್ ಜಾಲದ ಬೆನ್ನತ್ತಿದ್ದು ನಗರದಲ್ಲಿ ಮಾದಕವಸ್ತು ಮಾರಾಟ ಮಾಡುವ ಗ್ಯಾಂಗ್ ಗಳ ಹೆಡೆಮುರಿ ಕಟ್ಟಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ನಗರದಲ್ಲಿ ದೇಶೀಯ ಮತ್ತು ವಿದೇಶಿ ಪ್ರಜೆಗಳು ಡ್ರಗ್ ಮಾರಾಟ ಜಾಲ ನಡೆಸುತ್ತಿದ್ದು ಹಲವಾರು ಮಂದಿಯನ್ನ ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಅದರಲ್ಲೂ ನೈಜೀರಿಯಾ ಮೂಲದ ಡ್ರಗ್ ಡೀಲರ್ ಗಳು ನಗರದಲ್ಲಿ ವ್ಯಾಪಕವಾಗಿ ಬೀಡು ಬಿಟ್ಟಿದ್ದು ಸಿಸಿಬಿ ಪೊಲೀಸರು ಅವರ ಬೇಟೆಗೆ ನಿರಂತರ ಕಾರ್ಯಾಚರಣೆ ನಡೆಸಿದ್ದಾರೆ.
ನಿನ್ನೆ ನಗರದ ಎರಡು ಕಡೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಮೂಲದ ವ್ಯಕ್ತಿಗಳನ್ನ ಸಿಸಿಬಿ ಪೊಲೀಸರು ಬಂಧಿಸಿದ್ದು ಅವರಿಂದ ಲಕ್ಷಾಂತರ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಬೆಂಗಳೂರಿನ ಅಮೃತಹಳ್ಳಿಯಲ್ಲಿ ಓಜೋಚುಕ್ವು ಮಾರ್ಕ್ ಮೌರಿಸ್ ಎಂಬಾತನನ್ನ ಸಿಸಿಬಿ ಪೊಲೀಸರು ಬಂಧಿಸಿದ್ದು ಆತನಿಂದ ಸುಮಾರು 50 ಲಕ್ಷ ರೂ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ನೈಜೀರಿಯಾ ಮೂಲದ ಮಾರ್ಕ್ ಮೌರಿಸ್ 56 ಎಲ್ಎಸ್ಡಿ ಪೇಪರ್, 100 ಗ್ರಾಂ ಬ್ರೌನ್ ಎಂಡಿಎಂಎ, 400 ಗ್ರಾಂ ಎಂಡಿಎಂಎ ಹಾಗೂ 91 ಎಕ್ಸಾಟೇಸಿ ಮಾತ್ರೆಗಳನ್ನ ಇಟ್ಟುಕೊಂಡು ಮಾರಾಟ ಮಾಡ್ತಿದ್ದ ಎನ್ನಲಾಗಿದೆ.
ಇದನ್ನು ಓದಿ: ಯಡಿಯೂರಪ್ಪ ವಿರುದ್ಧ ಮತ್ತೆ ಯತ್ನಾಳ್ ಕಿಡಿ: ತಾಕತ್ತಿದ್ದರೆ ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಸವಾಲು!
ಆರೋಪಿ ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ. ಆರೋಪಿ ವೀಸಾ ಮತ್ತು ಪಾಸ್ಪೋರ್ಟ್ ನಿಯಮಗಳನ್ನ ಉಲ್ಲಂಘಿಸಿ ನಗರದಲ್ಲಿ ವಾಸ್ತವ್ಯ ಹೂಡಿದ್ದ. ಆರೋಪಿಯ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅದೇ ರೀತಿ ನೈಜೀರಿಯಾದ ಜೋಸೆಫ್ ಎನ್ಡುಕ್ವೆ ಎಂಬಾತ ಜಕ್ಕೂರು ಬಳಿ ಕೊಕೇನ್, ಎಂಡಿಎಂಎ, ಎಲ್ಎಸ್ಡಿ ಮತ್ತು ಎಕ್ಸಟೇಸಿ ಮಾತ್ರೆಗಳ ಮಾರಾಟ ಮಾಡುತ್ತಿದ್ದ. ಈ ವೇಳೆ ಖಚಿತ ಮಾಹಿತಿ ಮೇರೆಗೆ ಆತನ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು 15 ಲಕ್ಷ ಮೌಲ್ಯದ ಡ್ರಗ್ಸ್ ಪತ್ತೆ ಹಚ್ಚಿ ಆರೋಪಿಯನ್ನ ಬಲೆಗೆ ಬೀಳಿಸಿದ್ಧಾರೆ.
ಆರೋಪಿ ಟೂರಿಸ್ಟ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದು ವೀಸಾ ಅವಧಿ ಮುಗಿದಿದ್ದರೂ ನಗರದಲ್ಲಿ ಅಕ್ರಮವಾಗಿ ನೆಲೆಸಿ ಡ್ರಗ್ಸ್ ದಂಧೆ ನಡೆಸುತ್ತಿದ್ದ. ಸದ್ಯ ಈ ಬಗ್ಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿ ಪೂರ್ವಾಪರ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಬಂಧಿತ ಇಬ್ಬರು ಆರೋಪಿಗಳು ನೈಜೀರಿಯಾ ಮೂಲದವರಾಗಿದ್ದು ನಗರದಲ್ಲಿ ಅಕ್ರಮವಾಗಿ ನೆಲೆಯೂರಿ ಮಾದಕವಸ್ತುಗಳ ಜಾಲ ವಿಸ್ತರಿಸಲು ಕಸರತ್ತು ನಡೆಸಿದ್ದರು ಎಂದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ