ಕೊಡಗು (ಮಾ. 1) : ನೆಗಡಿ (Cold) ಆಗಿದೆ ಎಂದು ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎರಡು ತಿಂಗಳ ಅಸುಗೂಸು (Two Month Baby) ಅನುಮಾನಾಸ್ಪದವಾಗಿ ಮೃತಪಟ್ಟಿದೆ. ಜಿಲ್ಲೆಯ ನಾಪೋಕ್ಲು (Napoklu) ಸಮೀಪದ ಬಲ್ಲಮಾವುಟಿ ಗ್ರಾಮದ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಅಣ್ಣಪ್ಪ ಎಂಬುವರ ಎರಡು ತಿಂಗಳ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ಸಾವಿಗೆ ನಿಖರ ಕಾರಣ ಏನು ಎಂಬುದು ವೈದ್ಯರು (Doctor) ಕೂಡ ಖಚಿತ ಪಡಿಸಿಲ್ಲ. ಮಗುವನ್ನು ಕಳೆದುಕೊಂಡ ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ.
ಶೀತಕ್ಕೆ ಕೊಟ್ಟ ಚಿಕಿತ್ಸೆಯೇ ಸಾವಿಗೆ ಕಾರಣವಾ
ನಾಪೋಕ್ಲು ಸಮೀಪದ ಚೆರಿಯಪರಂಬು ಪೈಸಾರಿಯ ಅಣ್ಣಪ್ಪ ಬಲ್ಲಮಾವುಟಿಯ ಕಾಫಿ ತೋಟ ಒಂದರಲ್ಲಿ ಕಳೆದ ಒಂದು ತಿಂಗಳಿಂದ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ತಮ್ಮ ಮಗುವಿಗೆ ಶೀತವಾಗಿದ್ದರಿಂದ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಪಟ್ಟಣದಲ್ಲಿರುವ ಸಿಎಂಸಿ ಹೆಲ್ತ್ ಕೇರ್ ಕೇಂದ್ರಕ್ಕೆ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಈ ವೇಳೆ ಆಸ್ಪತ್ರೆ ವೈದ್ಯ ಬಾದ್ಷಾ ಅವರು ಚಿಕಿತ್ಸೆ ನೀಡಿ ಶೀತ ಕಡಿಮೆ ಆಗಲಿ ಎಂದು ಮಗುವಿಗೆ ಮಾಸ್ಕ್ ಅಳವಡಿಸಿ ನೆಬ್ಲೆಝ್ಯೆಷನ್ ಹಾಕಿದ್ದರಂತೆ. ಈ ವೇಳೆ ಮಗುವಿಗೆ ಔಷಧಿ ಜಾಸ್ತಿಯಾಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಪೋಷಕರು ದೂರಿದ್ದಾರೆ.
ವೈದ್ಯರ ನಿರ್ಲಕ್ಷ್ಯ ಎಂಬ ಆರೋಪ
ಮಗು ಉಸಿರುಗಟ್ಟುತ್ತಿದ್ದಂತೆ ಗಾಬರಿಗೊಂಡ ಪೋಷಕರು, ಡಾಕ್ಟರ್ ಮತ್ತು ಸಿಬ್ಬಂದಿಗಳನ್ನು ಕರೆದಿದ್ದಾರೆ. ತಕ್ಷಣವೇ ವೈದ್ಯ ಬಾದ ಷಾ ಅವರು ಆ್ಯಂಬುಲೆನ್ಸ್ ಕರೆಯಿಸಿ ಪಟ್ಟಣದ ದೇವದಾಸಿ ಅವರ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿದ್ದಾರೆ. ಅಲ್ಲಿಯೂ ಡಾಕ್ಟರ್ ಮಗುವಿನ ಉಸಿರಾಟ ಆಗಲೇ ನಿಂತು ಹೋಗಿದೆ ಎಂದು ತಿಳಿಸಿದ್ದಾರೆ. ನಂತರ ಸಿಎಂಸಿ ಡಾಕ್ಟರ್ ಮತ್ತು ಸಿಬ್ಬಂದಿಗಳು ಮಗುವಿನ ತಂದೆ ತಾಯಿಯ ಮುಂದೆ ಇವರ ತಪ್ಪನ್ನು ಮುಚ್ಚಿಕೊಳ್ಳಲು, ಅಂಬುಲೆನ್ಸ್ ಕರೆಸಿ ಮಡಿಕೇರಿಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸರ್ಕಾರದ ನಿರ್ಲಕ್ಷ್ಯದಿಂದ ನವೀನ್ ಸಾವು ಎಂದ Siddaramaiah; ರಕ್ಷಣಾ ಕಾರ್ಯ ಚುರುಕಿಗೆ HDK ಒತ್ತಾಯ
ಎದೆಯಲ್ಲಿ ಕಫ
ಅಲ್ಲಿಯೂ ವೈದ್ಯರು ಮಗು ಮೃತಪಟ್ಟಿರುವುದನ್ನು ಖಚಿತ ಪಡಿಸಿದ್ದಾರೆ. ನಂತರ ಅದೇ ಆಂಬುಲೆನ್ಸ್ ಮೂಲಕ ವಾಪಸ್ ನಾಪೋಕ್ಲಿಗೆ ಕರೆತಂದಿದ್ದಾರೆ. ಈ ವೇಳೆ ನಾಪೋಕ್ಲಿನಲ್ಲಿ ಯುವಕರ ಗುಂಪು ಅಂಬುಲೆನ್ಸ್ ಅಡ್ಡಗಟ್ಟಿ ನಾಪೋಕ್ಲು ಠಾಣೆಗೆ ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ದೂರು ನೀಡಿದ್ದಾರೆ. ಘಟನೆ ಸಂಬಂಧ ಪಟ್ಟಂತೆ ಪ್ರತಿಕ್ರಿಯಿಸಿರುವ ಡಾಕ್ಟರ್ ಬಾದಷಾ ಅವರು ಮಗುವಿನ ಎದೆಯಲ್ಲಿ ತೀವ್ರ ಕಫ ಕಟ್ಟಿಕೊಂಡಿತ್ತು. ಅವರು ಮಗುವನ್ನು ನಮ್ಮ ಕ್ಲಿನಿಕ್ ಗೆ ಕರೆ ತರುವ ಮುನ್ನವೇ ಮಗುವಿನ ಉಸಿರಾಟದಲ್ಲಿ ತೀವ್ರ ಏರುಪೇರಾಗಿತ್ತು.
ಇದನ್ನೂ ಓದಿ: ಮೃತ Naveen ಕುಟುಂಬಕ್ಕೆ CM ಸಾಂತ್ವನ; ಬೆಳಗ್ಗೆ ಅಷ್ಟೇ ಮಗ ಮಾತನಾಡಿದ್ದ ಎಂದು ಕಣ್ಣೀರಿಟ್ಟ ತಂದೆ
ಮರಣೋತ್ತರ ಪರೀಕ್ಷೆ ಬಳಿಕ ಅಸಲಿ ವಿಚಾರ
ಉಸಿರಾಟಕ್ಕೆ ಅನುಕೂಲವಾಗಲೆಂದು ನೆಬ್ಲೆಝ್ಯೆಷನ್ ಹಾಕಲಾಗಿತ್ತು. ಈ ವೇಳೆ ಮಗು ಅಳುತ್ತಿದೆ ಎಂದು ಮಗುವಿನ ತಾಯಿ ಹಾಲುಣಿಸಿದ್ದಾರೆ. ಇದರಿಂದ ಮಗು ಉಸಿರುಗಟ್ಟಿತ್ತು. ಇದನ್ನು ಪೋಷಕರಿಗೆ ಹೇಳಿಯೇ ತಕ್ಷಣವೇ ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದೆ. ಅಲ್ಲಿಗೆ ಹೋಗುವಷ್ಟರಲ್ಲಿ ಮಗು ಮೃತಪಟ್ಟಿದೆ. ಜೊತೆಗೆ ಮಗುವಿಗೆ ಹಾಲು ಕುಡಿಯಲು ಸಾಧ್ಯವಾಗದೆ ಮೃತಪಟ್ಟಿದೆ ಎಂದು ಮಡಿಕೇರಿಯಲ್ಲೂ ಮಕ್ಕಳ ತಜ್ಞ ವೈದ್ಯರು ದೃಢಪಡಿಸಿದ್ದಾರೆ ಎಂದು ಡಾ ಬಾದಷಾ ಹೇಳಿದ್ದಾರೆ. ಸದ್ಯ ಮಗುವಿನ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ವರದಿ ಬಂದ ಬಳಿಕವಷ್ಟೇ ಮಗುವಿನ ಸಾವಿಗೆ ನೈಜ ಕಾರಣ ಏನೆಂಬುದು ಗೊತ್ತಾಗಲಿದೆ. ಸದ್ಯ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ವರದಿ ಆಧರಿಸಿ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ