ಹಾಸನ: ಖಾಸಗಿ ಕಾರ್ಯಕ್ರಮದ ನಿಮಿತ್ತ ಡಿಸಿಎಂ ಅಶ್ವತ್ಥ್ ನಾರಾಯಣ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಅವರು ಇಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣಕ್ಕೆ ಆಗಮಿಸಿದ್ದರು. ವಿಶೇಷ ಅಂದರೆ ಇಬ್ಬರು ಸಚಿವರು ಪ್ರತ್ಯೇಕ ಹೆಲಿಕಾಪ್ಟರ್ಗಳಲ್ಲಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು.
ಕಾಶಿ ಜಂಗಮವಾಡಿ ಮಠದ ದತ್ತಾತ್ರೇಯ ಅವಧೂತ ಸ್ವಾಮೀಜಿ ಅವರ ತಂಗಿ ನಾಗರತ್ನ ಎಂಬುವರ ಪೆಟ್ರೋಲ್ ಬಂಕ್ ಉದ್ಘಾಟನೆಗಾಗಿ ಇಬ್ಬರು ಸಚಿವರು ಇಂದು ಪ್ರತ್ಯೇಕ ಹೆಲಿಕಾಪ್ಟರ್ನಲ್ಲಿ ಆಗಮಿಸಿ ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದರು. ಇಬ್ಬರೂ ಬೆಂಗಳೂರಿನಿಂದ ಕಾರಿನಲ್ಲೇ ಬರಬಹುದಿತ್ತು. ಇಲ್ಲವೇ, ಒಂದೇ ಹೆಲಿಕಾಪ್ಟರ್ನಲ್ಲಿ ಬರಬಹುದಿತ್ತು. ಅದನ್ನು ಬಿಟ್ಟು ಇಷ್ಟೊಂದು ದುಂದು ವೆಚ್ಚದ ಪ್ರಯಾಣ ಮಾಡಿದ್ದಾದರೂ ಏಕೆ ಎಂಬ ಅನುಮಾನ, ಪ್ರಶ್ನೆ ಅಲ್ಲಿದ್ದ ಎಲ್ಲರಲ್ಲೂ ಮೂಡಿತ್ತು. ಇದೇ ವಿಚಾರವಾಗಿ ಇಬ್ಬರೂ ಸಚಿವರು ಸ್ಪಷ್ಟನೆಯನ್ನು ಸಹ ನೀಡಿದ್ದಾರೆ.
ಡಿಸಿಎಂ ಅಶ್ವತ್ಥ್ ನಾರಾಯಣ ಮಾತನಾಡಿ, ನಾನು ಮತ್ತು ಶ್ರೀರಾಮುಲು ಇಬ್ಬರೂ ಕಾರಿನಲ್ಲೇ ಬರುತ್ತಿದ್ದೆವು. ಕಾಶಿ ಜಂಗಮವಾಡಿ ಮಠದ ದತ್ತಾತ್ರೇಯ ಅವಧೂತ ಸ್ವಾಮೀಜಿಯವರು ನಮಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದರು. ಹೀಗಾಗಿ ಹೆಲಿಕಾಪ್ಟರ್ನಲ್ಲಿ ಬಂದೆವು ಎಂದು ಪೆಟ್ರೋಲ್ ಬಂಕ್ ಉದ್ಘಾಟನೆ ಬಳಿಕ ಸ್ಪಷ್ಟನೆ ನೀಡಿದರು.
ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು, ನಾವಿಬ್ಬರು ಪ್ರತ್ಯೇಕ ಹೆಲಿಕಾಪ್ಟರ್ನಲ್ಲಿ ಬಂದೆವು. ಇದಕ್ಕೆ ಸುಮಾರು 15 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಿದೆ. ಗುರೂಜಿಗಳೇ ನಮಗೆ ಈ ಹಿಂದೆ ಕಾರ್ಯಕ್ರಮ ನಿಗದಿ ಮಾಡಿದ್ದರು. ಅವರೇ ಹೆಲಿಕಾಪ್ಟರ್ ವ್ಯವಸ್ಥೆಯನ್ನು ಮಾಡಿದ್ದರು. ಆ 15 ಲಕ್ಷ ಹಣವನ್ನೇ ನನಗೇ ಕೊಟ್ಟಿದ್ದರೆ ಜೇಬಿನಲ್ಲಿ ಇಟ್ಟುಕೊಂಡು ಹೋಗುತ್ತಿದ್ದೆ ಎಂದು ವ್ಯಂಗ್ಯವಾಗಿ ಹೇಳಿದರು.
ಹುದ್ದೆಗಿಂತ ಪಕ್ಷ ಮುಖ್ಯ; ಶ್ರೀರಾಮುಲು
ಶ್ರೀರಾಮುಲು ಉಪಮುಖ್ಯಮಂತ್ರಿಯಾಗಬೇಕು ಎಂಬ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀರಾಮುಲು, ನಾವೆಲ್ಲರೂ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು. ಭಗವಂತನ ಆಶೀರ್ವಾದದಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಾನು ಉಪ ಮುಖ್ಯಮಂತ್ರಿಯಾಗಬೇಕು ಎಂಬುದು ಜನರ ಬೇಡಿಕೆಯಾಗಿದೆ. ನಮಗೆ ಪಕ್ಷ ಮುಖ್ಯವೇ ಹೊರತು ಹುದ್ದೆ ಅಲ್ಲಾ ಎಂದು ಹೇಳಿದರು.
ಇದನ್ನು ಓದಿ: ನಾವೆಲ್ಲಾ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು - ಆದ್ರೆ ನಾನು ಡಿಸಿಎಂ ಆಗ್ಬೇಕಂತ ಜನರ ಅಪೇಕ್ಷೆ ; ಶ್ರೀರಾಮುಲು ಪುನರುಚ್ಚಾರ
ಪಕ್ಷ ಎಲ್ಲರಿಗೂ ಒಳ್ಳೆಯದು ಮಾಡಲಿದೆ; ಅಶ್ವತ್ಥ್ ನಾರಾಯಣ
ಮಂತ್ರಿ ಮಂಡಲ ವಿಸ್ತರಣೆ ವಿಚಾರ ಕಗ್ಗಂಟೇನು ಅಲ್ಲಾ. ಮಂತ್ರಿ ಮಂಡಲ ವಿಸ್ತರಣೆಯಾಗಲಿದೆ. ಗೊಂದಲ ಏನೂ ಇಲ್ಲಾ, ಸಿಎಂಗೆ ಎಲ್ಲಾ ಅಧಿಕಾರವಿದೆ ತಿಳಿಸುತ್ತಾರೆ. ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಗೆದ್ದವರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂದಿದೆ. ಸೋತವರ ಬಗ್ಗೆ ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ. ನಮ್ಮ ಪಕ್ಷ ಎಲ್ಲರಿಗೂ ಒಳ್ಳೆಯದು ಮಾಡಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ