ಮೈಸೂರಿನ ಜೆಎಸ್ಎಸ್ ಕಾಲೇಜು ಬಸ್ ನಿಲ್ದಾಣದ ಗುಂಬಜ್ ಮಾದರಿ (Gumbaz Model Bus Stand) ಬಿಜೆಪಿ ನಾಯಕರಿಬ್ಬರ (BJP Leaders) ನಡುವಿನ ಜಟಾಪಟಿಗೆ ಸಾಕ್ಷಿಯಾಗಿತ್ತು. ಶಾಸಕ ಎಸ್.ಎ.ರಾಮದಾಸ್ (MLA SA Ramdas) ಮತ್ತು ಸಂಸದ ಪ್ರತಾಪ್ ಸಿಂಹ (MP Pratap Simha) ಇಬ್ಬರು ಒಬ್ಬರ ವಿರುದ್ಧ ಮತ್ತೊಬ್ಬರು ಎಂಬಂತೆ ಮಾಧ್ಯಮಗಳ ಮುಂದೆಯೇ ಹೇಳಿಕೆ ನೀಡಿದ್ದರು. ಕೊನೆಗೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರನ್ನು ಭೇಟಿಯಾಗಿದ್ದ ಶಾಸಕ ರಾಮದಾಸ್ ಬಸ್ ನಿಲ್ದಾಣ ಮಾದರಿಯ ವಿವಾದದ ಬಗ್ಗೆ ವಿವರಣೆಯನ್ನು ನೀಡಿದ್ದರು. ತದನಂತರ ಮಾಧ್ಯಮಗಳ ಜೊತೆ ಮಾತನಾಡಿದ್ದ ರಾಮದಾಸ್, ಗದ್ಗಿತರಾಗಿ ತಮ್ಮ ವಿರುದ್ಧ ಪಕ್ಷದೊಳಗೆಯೇ ಸಂಚು ರೂಪಿಸಲಾಗುತ್ತಿದೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು.
ಇತ್ತ ಗುಂಬಜ್ ಮಾದರಿಯನ್ನು ತೆರವುಗೊಳಿಸೋದಾಗಿ ಗುಡುಗಿದ್ದ ಪ್ರತಾಪ್ ಸಿಂಹ, ನಾಲ್ಕು ದಿನದ ಗಡುವು ನೀಡಿದ್ದರು. ಮತ್ತೊಂದೆಡೆ ಮಧ್ಯೆ ಪ್ರವೇಶಿಸಿದ್ದ ರಾಷ್ಟ್ರೀಯ ಹೆದ್ದಾರಿ ಆಭಿವೃದ್ಧಿ ಪ್ರಾಧಿಕಾರ, ಬಸ್ ನಿಲ್ದಾಣ ಕಾಮಗಾರಿ ಅಕ್ರಮವಾಗಿದ್ದು, ಕೂಡಲೇ ತೆರವುಗೊಳಿಸುವಂತೆ ಪಾಲಿಕೆಗೆ ನೋಟಿಸ್ ನೀಡಿತ್ತು.
ಎರಡು ಗುಂಬಜ್ಗಳ ತೆರವು
ಈ ಎಲ್ಲಾ ಬೆಳವಣಿಗೆಗಳ ಬಳಿಕ ನಾಲ್ಕು ದಿನದ ಗಡುವು ನೀಡಿ ಗುಡುಗಿದ್ದ ಮಾನ್ಯ ಸಂಸದರು ಹೆಜ್ಜೆಯನ್ನು ಹಿಂದೆ ಇರಿಸಿದ್ದರು. ಇಂದು ಶಾಸಕ ರಾಮದಾಸ್ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿ, ಎರಡು ಫೋಟೋಗಳನ್ನ ಹಂಚಿಕೊಂಡಿದ್ದಾರೆ.
ವಿವಾದಿತ ಬಸ್ ನಿಲ್ದಾಣದ ಮೇಲಿದ್ದ ಮೂರು ಗುಂಬಜ್ಗಳ ಪೈಕಿ ಎರಡನ್ನು ತೆರವುಗೊಳಿಸಲಾಗಿದೆ. ಮಧ್ಯದಲ್ಲಿರುವ ಗುಂಬಜ್ ಮಾತ್ರ ಉಳಿಸಿಕೊಂಡಿದ್ದು, ಮುಂದೆ ಇದೇ ಮಾದರಿಯಲ್ಲಿ ಇನ್ನುಳಿದ 12 ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ಸ್ಪಷ್ಟನೆ ನೀಡುವ ಮೂಲಕ ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆ.
ರಾಮದಾಸ್ ಮಾಧ್ಯಮ ಪ್ರಕಟಣೆ
ಮೈಸೂರು ನಗರದ ನನ್ನ ಬಂಧುಗಳಲ್ಲಿ ನಿಮ್ಮ ಪ್ರೀತಿಯ ಎಸ್.ಎ.ರಾಮದಾಸ್ ನಮಸ್ಕಾರಗಳು. ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಪಥಕ್ಕೆ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಮಂತ್ರ ಬಹಳ ಅವಶ್ಯಕವಾದದ್ದು. ಅಭಿವೃದ್ಧಿಯ ಕಾರ್ಯದಲ್ಲಿ ಸರ್ವ ಧರ್ಮ, ಜಾತಿ, ಪಂತ, ಪಕ್ಷ ಬೇದವಿಲ್ಲದೇ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ನನ್ನ 30 ವರ್ಷದ ರಾಜಕೀಯ ಜೀವನದಲ್ಲಿ ಪ್ರಮುಖವಾದದ್ದು.
ಇದನ್ನೂ ಓದಿ: Mysuru: ಬಸ್ ಶೆಲ್ಟರ್ ವಿವಾದಕ್ಕೆ ನಾಟಕೀಯ ತಿರುವು; ಸ್ವಾಮೀಜಿ, ಪ್ರಧಾನಿ, ಸಿಎಂ ಫೋಟೋ ಅಳವಡಿಕೆ
ನಾಗರೀಕರ ಸೌಲಭ್ಯಕ್ಕಾಗಿ ಬಸ್ ನಿಲ್ದಾಣ ನಿರ್ಮಾಣ
ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ವಿವಾದ ಇಂದಿನವರೆಗೂ ನಡೆದಿರೋದಿಲ್ಲ. ನಾಗರೀಕರ ಸೌಲಭ್ಯಕ್ಕಾಗಿ 12 ಬಸ್ ತಂಗುದಾಣವನ್ನು ನಿರ್ಮಿಸಲು ಶಾಸಕರ ನಿಧಿಯಿಂದ ಕಾರ್ಯೋನ್ಮುಖವಾಗಿದ್ದು ಸರಿಯಷ್ಠೆ.
ಅನಾವಶ್ಯಕವಾಗಿ ಧರ್ಮದ ಲೇಪನ
ಮೈಸೂರು ಪಾರಂಪರೀಕ ನಗರವಾಗಿದ್ದು, ಪರಂಪರೆಯ ಮೊದಲು ಕುರುಹು ವಿಶ್ವವಿಖ್ಯಾತ ಮೈಸೂರು ಅರಮನೆ. ಈ ಮಾದರಿಯಲ್ಲೇ ಪಾರಂಪರೀಕ ಬಸ್ ತಂಗುದಾಣ ನಿರ್ಮಾಣ ನನ್ನ ಉದ್ದೇಶವಾಗಿತ್ತು. ಆದರೆ ಇದಕ್ಕೆ ಅನಾವಶ್ಯಕ ಧರ್ಮದ ಲೇಪನ ನೀಡಿರೋದು ವಿವಾದ ಸ್ಥಳವಾಗಿ ಪರಿವರ್ತನೆ ಮಾಡುವ ಪ್ರಯತ್ನ ಮನಸ್ಸಿಗೆ ತುಂಬಾ ನೋವುಂಟು ಮಾಡಿರುತ್ತದೆ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟರು.
ಇದನ್ನೂ ಓದಿ: Mysuru Bus Shelter: ಗುಂಬಜ್ ಮಾದರಿ ಬಸ್ ನಿಲ್ದಾಣದ ವಿವಾದಕ್ಕೆ ಖಾದರ್ ಎಂಟ್ರಿ; ಕಾಂಗ್ರೆಸ್ನಿಂದ ವ್ಯಂಗ್ಯ
ಆದ್ದರಿಂದ ಎಲ್ಲಾ ಹಿರಿಯರು, ಸಲಹೆಗಾರರ ಜೊತೆಯಲ್ಲಿ ನನ್ನ ಅಳಲು ತೋಡಿಕೊಂಡು ಮುಂದೆ ಎಂದೂ ಇದೊಂದು ವಿವಾದಿತ ಕೇಂದ್ರ ಎಂಬ ಕಪ್ಪು ಚುಕ್ಕೆ ಮಾಡಬಾರದು ಎಂದ ಉದ್ದೇಶದಿಂದ ಎರಡು ಗುಂಬಜ್ ತೆರವು ಮಾಡಲಾಗಿದೆ. ಮಧ್ಯದ ಗುಂಬಜ್ (ಡೂಮ್) ಯಥಾಸ್ಥಿತಿಯಲ್ಲಿ ಬಿಟ್ಟು ಇದೇ ಮಾದರಿಯಲ್ಲಿ ನಿರ್ಮಾಣ ಮಾಡಲು ಒಪ್ಪಿಗೆ ಪಡೆಯಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ