ಪುತ್ತೂರು: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಹಾಡಹಗಲೇ ಯುವತಿಗೆ ಚಾಕು ಇರಿದು ಕೊಲೆ (Murder) ಮಾಡಿರುವ ಘಟನೆ ದಕ್ಷಿಣ ಕನ್ನಡ (Dakshina kannada) ಜಿಲ್ಲೆಯ ಪುತ್ತೂರಿನ (Puttur) ಮುಂಡೂರಿನಲ್ಲಿ ನಡೆದಿದೆ. 23 ವರ್ಷದ ಜಯಶ್ರೀ ಎಂಬ ಯುವತಿಯನ್ನು ಕನಕಮಜಲಿನ ಉಮೇಶ ಹತ್ಯೆಗೈದಿದ್ದಾನೆ. ಕೆಲವು ದಿನಗಳಿಂದ ಜಯಶ್ರೀ ಹಾಗೂ ಉಮೇಶ್ ಪ್ರೀತಿಯಲ್ಲಿದ್ದರು ಎನ್ನಲಾಗಿದ್ದು, ಉಮೇಶನ ನಡತೆ ಸರಿಯಿಲ್ಲ ಎಂದು ಯುವತಿ ಆತನಿಂದ ಅಂತರ ಕಾಯ್ದುಕೊಡಿದ್ದಳು. ಇದರಿಂದ ಕುಪಿತಗೊಂಡ ಉಮೇಶ ಕೋಪದಲ್ಲಿ ಯುವತಿಯ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಪುತ್ತೂರು ತಾಲೂಕಿನ ಮುಂಡೂರು ಗ್ರಾಮದವಳಾದ ಜಯಶ್ರೀ ಬಿ.ಎಸ್.ಸಿ. ಪದವಿ ಮುಗಿಸಿ ಮನೆಯಲ್ಲಿಯೆ ಇದ್ದರು. ಇಂದು ಬೆಳಗ್ಗೆ 11ರ ವೇಳೆಯಲ್ಲಿ ತಾಯಿ ಗಿರಿಜಾ ತೋಟಕ್ಕೆ ಹೋಗಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಆರೋಪಿ ಚಾಕು ಇರಿದು ಪರಾರಿಯಾಗಿದ್ದಾನೆ. ಚಾಕು ಇರಿತಕ್ಕೆ ಒಳಗಾದ ಯುವತಿ ತನ್ನ ತಾಯಿಯಿದ್ದ ಸ್ಥಳಕ್ಕೆ ಆಗಮಿಸಿದ್ದಾಳೆ. ಹೊಟ್ಟೆಯಲ್ಲಿ ಗಾಯ ಹಾಗೂ ರಕ್ತಸ್ರಾವವನ್ನು ನೋಡಿದ ಗಿರಿಜಾ ತಕ್ಷಣ ಆಟೋದಲ್ಲಿ ಜಯಶ್ರೀಯನ್ನ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಧ್ಯಾಹ್ನ 12:15ರ ವೇಳೆ ಜಯಶ್ರೀ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Surathkal Murder: ಜಲೀಲ್ ಕೊಲೆ ಹಿಂದೆ ಅವಳ8 ನೆರಳು! ಹಿಂದೂ ಮಹಿಳೆ ಜೊತೆಗಿನ ಅನೈತಿಕ ಸಂಬಂಧವೇ ಮುಳುವಾಯ್ತಾ?
ಆಗಾಗೆ ಮನೆಗೆ ಬರುತ್ತಿದ್ದ ಆರೋಪಿ
ಆರೋಪಿ ಉಮೇಶ ಕೆಲವು ದಿನಗಳಿಂದ ಜಯಶ್ರೀಯನ್ನು ಪ್ರೀತಿಸುತ್ತಿದ್ದು, ಆಗಾಗ್ಗೆ ಗಿರಿಜಾರ ಮನೆಗೆ ಬರುತ್ತಿದ್ದ. ಆದರೆ ಇತ್ತೀಚೆಗೆ ಆತನ ವರ್ತನೆ ಇಷ್ಟವಾಗದ ಕಾರಣ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಆತನಿಂದ ಜಯಶ್ರೀ ಅಂತರ ಕಾಯ್ದುಕೊಂಡಿದ್ದಾಳೆ. ಈ ವಿಚಾರಕ್ಕೆ ಉಮೇಶ ಅಸಮಧಾನಗೊಂಡಿದ್ದ ಎನ್ನಲಾಗಿದೆ. ಆದರೆ ಮಂಗಳವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಅಪರಿಚಿತರು ಮನೆಗೆ ನುಗ್ಗಿ ಕೊಲೆ ಮಾಡಿದ್ದಾರೆ. ಈ ಕೃತ್ಯವನ್ನು ಉಮೇಶನೇ ಮಾಡಿರುವ ಸಾಧ್ಯತೆ ಇದೆ ಎಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಯುವತಿ ತಾಯಿ ದೂರು ದಾಖಲಿಸಿದ್ದಾರೆ. ಪೊಲೀಸರು ಉಮೇಶನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಯಲಹಂಕದಲ್ಲಿ 19 ವರ್ಷದ ಯುವತಿ ಬರ್ಬರ ಕೊಲೆ
ಬೆಂಗಳೂರಿನ ಯಲಹಂಕ ತಾಲೂಕಿನಲ್ಲೂ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಯಲಹಂಕ ತಾಲೂಕಿನ ದಿಬ್ಬೂರು ಗೇಟ್ ಸಮೀಪದ ಶ್ಯಾನಭೋಗನಹಳ್ಳಿಯಲ್ಲಿ ಕಾಲೇಜಿಗೆ ಹೋಗಿ ಹಿಂದಿರುಗುವಾಗ 19 ವರ್ಷದ ರಾಶಿ ಎಂಬ ಯುವತಿಯನ್ನು ಹತ್ಯೆ ಮಾಡಲಾಗಿದೆ.
ಕಾಲೇಜು ಮುಗಿಸಿ ಮನೆಗೆ ತೆರಳುವಾಗ ಘಟನೆ
ಪ್ರಥಮ ಬಿಎ ವ್ಯಾಸಂಗ ಮಾಡುತ್ತಿದ್ದ ರಾಶಿ ಕಾಲೇಜಿನಿಂದ ಹಿಂತಿರುಗುವಾಗ ತೋಟದ ಮನೆಗೆ ಹೋಗಿ ಹಸುಗಳನ್ನು ಹೊಡೆದುಕೊಂಡು ಹೋಗುವಾಗ 5 ಗಂಟೆ ವೇಳೆಯಲ್ಲಿ ದುಷ್ಕರ್ಮಿಗಳು ಯುವತಿಯ ಕತ್ತು ಸೀಳಿ ಪರಾರಿಯಾಗಿದ್ದಾರೆ. ಪ್ರೀತಿಯನ್ನು ನಿರಾಕರಿಸಿದಕ್ಕೆ ಕೊಲೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ರಾಜಾನುಕುಂಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸರಿಯಾಗಿ ಓದುತ್ತಿಲ್ಲ ಬುದ್ದಿ ಹೇಳಿದ್ದಕ್ಕೆ ಆತ್ಮಹತ್ಯೆಗೆ ಯತ್ನ
ಸರಿಯಾಗಿ ಓದುತ್ತಿಲ್ಲ ಎಂದು ಶಾಲೆಗೆ ಪೋಷಕರನ್ನು ಕರೆಸಿ ಬುದ್ದಿ ಹೇಳಿದಕ್ಕೆ 9ನೇ ತರಗತಿ ವಿದ್ಯಾರ್ಥಿನಿ ಶಿಕ್ಷಕರು ಹಾಗೂ ಪೋಷಕರ ಎದುರಲ್ಲೇ ಶಾಲೆಯ ಕಟ್ಟದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರದ ಶ್ರೀನಿವಾಸಪುರ ಪಟ್ಟಣದ ವೇಣು ಶಾಲೆಯಲ್ಲಿ ನಡೆದಿದೆ. ಒಂದನೇ ಮಹಡಿಯಿಂದ ಜಿಗಿದಿದ್ದರಿಂದ ವಿದ್ಯಾರ್ಥಿನಿ ಪ್ರಾಣಕ್ಕೆ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಖಾಸಗಿ ಆಸ್ಪತ್ರೆಗೆ ಬಾಲಕಿಯನ್ನು ರವಾನೆ ಮಾಡಲಾಗಿದೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ