ದೊಡ್ಡಬಳ್ಳಾಪುರ(ನ.25): ಅವನಿಗೂ ಮದುವೆಯಾಗಿತ್ತು, ಇವಳಿಗೂ ಮದುವೆಯಾಗಿತ್ತು.. ಆದರೆ ಅವಳು ಗಂಡನನ್ನು ಬಿಟ್ಟಳು, ಇವನು ಹೆಂಡತಿ ಬಿಟ್ಟು ಇಬ್ಬರು ಸಂಸಾರ ನಡೆಸಿದ್ರು, ಈಗ ಅವಳ ಮೊದಲ ಗಂಡ, ಇವನ ಮೊದಲ ಹೆಂಡತಿ ಪೊಲೀಸ್ ಸ್ಟೇಷನ್ ನಲ್ಲಿ ನನ್ನ ಹೆಂಡತಿ ಬೇಕು, ನನ್ನ ಗಂಡ ಬೇಕೆಂದು ಹೈಡ್ರಾಮ ನಡೆಸಿದ್ದಾರೆ. ಹೌದು, ಶಿವಮೊಗ್ಗ ಮೂಲದ ಚೈತ್ರಾ ಕುಟುಂಬ ದೊಡ್ಡಬಳ್ಳಾಪುರ ತಾಲೂಕಿನ ದರ್ಗಾಜೋಗಹಳ್ಳಿಯಲ್ಲಿ ವಾಸವಾಗಿತ್ತು. ನಾಲ್ಕು ವರ್ಷಗಳ ನಂತರ ಚೈತ್ರಾ ಹತ್ತಿರದಲ್ಲಿಯೇ ಇದ್ದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಗಾರ್ಮೆಂಟ್ಸ್ ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಗಾರ್ಮೆಂಟ್ಸ್ ನಲ್ಲಿಯೇ ಕೆಲಸ ಮಾಡುತ್ತಿದ್ದ ಹರೀಶ್ ನೊಂದಿಗೆ ಪ್ರೀತಿ ಶುರುವಾಯಿತು. ಪ್ರೀತಿಸಿ ಮದುವೆಯಾದ ಚೈತ್ರಾ ಮತ್ತು ಹರೀಶ್ ದರ್ಗಾಜೋಗಹಳ್ಳಿಯಲ್ಲಿ ಸಂಸಾರ ಶುರು ಮಾಡಿದ್ದರು.
ಈ ನಡುವೆ ಹರೀಶ್ ಕೆಲಸಕ್ಕೆ ಹೋಗುತ್ತಿರಲಿಲ್ಲ ಹೆಂಡತಿ ಚೈತ್ರಾಗೆ ಹೊಡೆಯುತ್ತಿದ್ದ ಎಂದು ತಿಳಿದುಬಂದಿದೆ. ಗಂಡನ ಕಿರುಕುಳದಿಂದ ನೊಂದ ಚೈತ್ರಾ ಶಿವಮೊಗ್ಗದ ತವರು ಮನೆಗೆ ಹೋಗಿದ್ದಳು. ಈ ನಡುವೆ ಚೈತ್ರಾಗೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ನರೇಂದ್ರನ ಪರಿಚಯವಾಗಿದೆ. ಎರಡು ವರ್ಷಗಳ ಹಿಂದೆ ಚೈತ್ರಾ ಮತ್ತು ನರೇಂದ್ರ ದೊಡ್ಡಬಳ್ಳಾಪುರದ ಕಂಟನಕುಂಟೆಯಲ್ಲಿ ಜೊತೆಯಲ್ಲಿ ವಾಸವಾಗಿದ್ದರು.
ಸೀರೆಯುಟ್ಟು ವೇಯ್ಟ್ ಲಿಫ್ಟಿಂಗ್ ಮಾಡಿದ 82ರ ಅಜ್ಜಿ; ವಿಡಿಯೋ ವೈರಲ್
ನರೇಂದ್ರ ನಾಲ್ಕು ವರ್ಷಗಳ ಹಿಂದೆ ತಮಿಳುನಾಡಿನ ಪವಿತ್ರಾ ಎಂಬ ಹುಡುಗಿಯನ್ನ ಮದುವೆಯಾಗಿದ್ದ, ಇಬ್ಬರಿಗೂ ಒಂದು ಹೆಣ್ಣು ಮಗು ಸಹ ಇದೆ, ಆದರೆ ಈ ನರೇಂದ್ರ ತನ್ನ ಹೆಂಡತಿ ಪವಿತ್ರಾಳನ್ನು ಬಿಟ್ಟು ಚೈತ್ರಾ ಜೊತೆ ವಾಸವಾಗಿದ್ದ. ಪವಿತ್ರ ಸಹ ಗಂಡ ನರೇಂದ್ರನ ಬಳಿಗೆ ಬಂದಿದ್ದಳು, ಕಂಟನಕುಂಟೆ ಮನೆಯಲ್ಲಿ ಚೈತ್ರಾ, ನರೇಂದ್ರ, ಪವಿತ್ರ ಮೂವರು ವಾಸವಾಗಿದ್ದರು.
ಇದರ ನಡುವೆ ಚೈತ್ರಾಳ ಗಂಡ ಹರೀಶ್ ತನಗೆ ಹೆಂಡತಿ ಬೇಕೆಂದು ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ಬಂದಿದ್ದಾನೆ. ನರೇಂದ್ರನನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಚೈತ್ರಾ, ನರೇಂದ್ರನನ್ನ ಬಿಟ್ಟು ಬಿಡಿ ನಾನು ಅವನ ಜೊತೆ ಹೋಗುತ್ತೇನೆ ಹರೀಶ್ ಬೇಡವೆಂದು ಹಠ ಮಾಡುತ್ತಿದ್ದಾರೆ. ಹರೀಶ್ ತನಗೆ ಹೆಂಡತಿ ಬೇಕೆಂದು ಕೇಳುತ್ತಿದ್ದಾನೆ.
ಇನ್ನು, ಪವಿತ್ರಾ ನನಗೆ ಗಂಡ ಬೇಕು, ಮಗಳಿಗೆ ಅಪ್ಪ ಬೇಕು ನರೇಂದ್ರನನ್ನು ಬಿಟ್ಟುಬಿಡಿ ಎಂದು ಕೇಳುತ್ತಿದ್ದಾಳೆ. ಸದ್ಯ ಮೂರು ಸಂಸಾರಗಳನ್ನ ಸರಿ ಮಾಡುವ ಹೊಣೆ ದೊಡ್ಡಬಳ್ಳಾಪುರ ಮಹಿಳಾ ಠಾಣೆಯ ಪೊಲೀಸರ ಮೇಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ