ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಎರಡು ದಿನಗಳ ಕಾಲ ನಡೆಯಲಿರುವ ಈ ಸಾಹಿತ್ಯ ಸಮ್ಮೇಳನಕ್ಕೆ ಮೇಲುಕೋಟೆ ಗ್ರಾಮ ಮಧುವಣ ಗಿತ್ತಿಯಂತೆ ಸಿಂಗಾರಗೊಂಡಿದ್ದು, ಎಲ್ಲೆಲ್ಲೂ ಕನ್ನಡದ ಭಾವುಟ ರಾರಾಜಿಸುತ್ತಿದೆ. ಇನ್ನು ಯೋಗ ನರಸಿಂಹಸ್ವಾಮಿಯ ತಪ್ಪಲಿನಲ್ಲಿ ಸಾಹಿತ್ಯ ಸಮ್ಮೇಳನದ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಬೃಹತ್ ವೇದಿಕೆ ಸಿದ್ದಪಡಿಸಲಾಗಿದೆ. ಅಲ್ಲದೆ ಪುಸ್ತಕ ಮಾರಾಟ ಮಳಿಗಳನ್ನು ಕೂಡ ತೆರಯಲಾಗಿದೆ. ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತಿಗಳು ಸೇರಿದಂತೆ ಸಾಹಿತ್ಯಾಸಕ್ತರಿಗೆ ಅಗತ್ಯ ಮೂಲಭೂತ ಸೌಕರ್ಯದ ವ್ಯವಸ್ಥೆ ಮಾಡಲಾಗಿದೆ.
17ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರನ್ನು ಆಯ್ಕೆ ಮಾಡಲಾಗಿದ್ದು, ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಸಮ್ಮೇಳನಾಧ್ಯಕ್ಷರಾಗಿರುವ ನರಹಳ್ಳಿ ಬಾಲಸುಬ್ರಹ್ಮಣ್ಯ ದಂಪತಿಯನ್ನು ಮೇಲುಕೋಟೆ ಶಾಸಕ ಪುಟ್ಟರಾಜು ಆತ್ಮೀಯವಾಗಿ ಸ್ವಾಗತಿಸಿ, ಸಾಹಿತ್ಯ ಸಮ್ಮೇಳನ ಉದ್ಘಾಟಿಸಲು ಆಮಂತ್ರಿಸಿದ್ದಾರೆ. ಇನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ತಮ್ಮೂರಿನ ಮಗ ಬಾಲಸುಬ್ರಮಣ್ಯ ಮತ್ತು ಅವರ ದಂಪತಿಯನ್ನು ನರಹಳ್ಳಿಯ ಗ್ರಾಮಸ್ಥರು ಬೆಳ್ಳಿ ಕುದುರೆಯ ಸಾರೋಟಿನಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಊರಿನಲ್ಲಿ ಅದ್ದೂರಿಯಾಗಿ ಜಾನಪದ ಕಲಾ ತಂಡಗಳ ಮೆರವಣಿಗೆಯಲ್ಲಿ ಕರೆ ತಂದು ಸನ್ಮಾನಿಸಿ ಗೌರವ ಸೂಚಿಸಿದ್ದಾರೆ.
ಇದನ್ನು ಓದಿ: ಕರೋನಾ ವೈರಸ್ ಭೀತಿ; ಚೀನಾ ದೇಶದ ವಿದ್ಯಾರ್ಥಿಗಳಿಗೆ ಮೈಸೂರಿಗೆ ಮರಳದಂತೆ ಸೂಚನೆ
ಹುಟ್ಟೂರಿನಲ್ಲಿ ಗೌರವ ಸನ್ಮಾನ ಸ್ವೀಕರಿಸಿದ ಸಮ್ಮೇಳನಾಧ್ಯಕ್ಷರು 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಮಾಡುತ್ತಿರುವುದು ನನಗೆ ಬಯಸದೆ ಬಂದ ಭಾಗ್ಯ. ಕನ್ನಡದ ಸೇವೆಗೆ ನಾನು ಸದಾ ಸಿದ್ದ ಎಂದು ಹೇಳುವ ಮೂಲಕ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಕೋರಿದ್ದಾರೆ.
ಒಟ್ಟಾರೆ ಸಕ್ಕರೆ ನಾಡು ಮಂಡ್ಯದ ಮೇಲುಕೋಟೆಯಲ್ಲಿ ಎರಡು ದಿನಗಳ ಕಾಲ ಕನ್ನಡದ ಕಂಪು ಸೂಸುತ್ತಾ, ನುಡಿ ಜಾತ್ರೆಯಲ್ಲಿ ಕನ್ನಡ ಭಾಷೆಯ ಸಾಹಿತ್ಯ ಕಟ್ಟುವ ಕಾರ್ಯ ನಡೆಯಲಿದೆ. ಅದ್ದೂರಿಯಾಗಿ ನಡೆಯಲಿರುವ ಕಾರ್ಯಕ್ರಮಕ್ಕೆ ಕಸಾಪ ರಾಜ್ಯಾಧ್ಯಕ್ಷರು ಸೇರಿದಂತೆ ಪ್ರಮುಖ ಗಣ್ಯರು ಸಾಕ್ಷಿಯಾಗಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ