• Home
  • »
  • News
  • »
  • state
  • »
  • ಅಂಗಳದಲ್ಲೇ ಭತ್ತದ ಕೃಷಿ ಬೆಳೆದು ಮಾದರಿಯಾದ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು

ಅಂಗಳದಲ್ಲೇ ಭತ್ತದ ಕೃಷಿ ಬೆಳೆದು ಮಾದರಿಯಾದ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು

ಮನೆಯ ಅಂಗಳದಲ್ಲಿ ಭತ್ತ ಬೆಳೆದಿರುವ ವಿದ್ಯಾರ್ಥಿಗಳು

ಮನೆಯ ಅಂಗಳದಲ್ಲಿ ಭತ್ತ ಬೆಳೆದಿರುವ ವಿದ್ಯಾರ್ಥಿಗಳು

ಕಳೆದ ಮೂರು ವರ್ಷದ ಹಿಂದೆ ಅಂಗಳದಲ್ಲೇ ಭತ್ತ ಬೆಳೆಯುವುದನ್ನು ಆರಂಭಿಸಿದ್ದ ಈ ವಿದ್ಯಾರ್ಥಿಗಳು, ಈ ಬಾರಿ ಕೊನೆಯ ಪರೀಕ್ಷೆಯನ್ನು ಎದುರಿಸುತ್ತಿರುವ ಕಾರಣಕ್ಕಾಗಿ ಕೊಂಚ ಕಡಿಮೆ ಸ್ಥಳದಲ್ಲಿ ಭತ್ತದ ನಾಟಿ ಮಾಡಿದ್ದಾರೆ.

  • Share this:

ದಕ್ಷಿಣ ಕನ್ನಡ(ಸೆ.25): ಇಂದಿನ ಹೊಸ ತಲೆಮಾರಿಗೆ ಭತ್ತ ಗಿಡದಲ್ಲಿ ಆಗೋದಾ, ಮರದಲ್ಲಿ ಆಗೋದಾ ಎನ್ನುವ ಬಗ್ಗೆ ಗೊಂದಲವಿದೆ. ಇಂಥಹುದೇ ಗೊಂದಲವಿದ್ದ ತಮ್ಮ ತಂಗಿಗೆ ಭತ್ತದ ಕೃಷಿಯನ್ನು ಅಂಗಳದಲ್ಲೇ ಮಾಡಿ ತೋರಿಸಿದ್ದಾರೆ ದಕ್ಷಿಣಕನ್ನಡ ಜಿಲ್ಲೆಯ  ಅವಳಿ ಸಹೋದರರು. ಆನ್ ಲೈನ್ ತರಗತಿಯ ನಡುವೆಯೇ ಬಿಡುವು ಮಾಡಿಕೊಂಡು ಈ ಸಹೋದರರು ಈ ಬೆಳೆ ಮಾಡಿದ್ದು, ಇನ್ನೇನು ಕಟಾವಿಗೆ ಸಿದ್ಧಗೊಂಡಿದೆ. ಹೌದು, ಇದು ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಭುವನ್ ಮತ್ತು ಭವನ್ ಎನ್ನುವ ಸಹೋದರರ ಭತ್ತದ ಬೆಳೆಯ ವಿಶೇಷತೆ. ಭತ್ತವನ್ನೇ ಬೆಳೆದು ಕೃಷಿ ಮಾಡುತ್ತಿದ್ದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಹೆಚ್ಚಿನ ಕಡೆಗಳಲ್ಲಿ ಭತ್ತದ ಗದ್ದೆಗಳೇ ಮರೆಯಾಗುತ್ತಿದೆ. ಭತ್ತದ ಗದ್ದೆಗಳ ಜಾಗಗಳು ಇಂದು ವಾಣಿಜ್ಯ ಬೆಳೆಗಳ ತೋಟಗಳಾಗಿ ಪರಿವರ್ತಿತಗೊಂಡಿದೆ. ಇದರಿಂದಾಗಿ ಜಿಲ್ಲೆಯ ಹೊಸ ತಲೆಮಾರಿಗೆ ಭತ್ತದ ಕೃಷಿಯ ಬಗ್ಗೆ ಅರಿವೇ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ.


ಇಂಥಹುದೇ ಒಂದು ರೀತಿಯ ಪ್ರಶ್ನೆಯನ್ನು ಅವಳಿಗಳಾದ ಭುವನ್ ಮತ್ತು ಭವನ್ ಮುಂದೆ  ಪುಟ್ಟ ಸಹೋದರಿಯೂ ಮಾಡಿದ್ದಳು. ತಿನ್ನುವ ಅಕ್ಕಿ ಎಲ್ಲಿ ಸಿಗುತ್ತೆ, ಹೇಗೆ ಸಿಗುತ್ತೆ ಎನ್ನುವ ಪ್ರಶ್ನೆಗೆ ತಂಗಿಯ ಪ್ರಶ್ನೆ ವಿದ್ಯಾರ್ಥಿಗಳಾಗಿರುವ ಭವನ್ ಹಾಗೂ ಭುವನ್ ಗೆ ಭತ್ತದ ಕೃಷಿಯ ಮಹತ್ವವನ್ನು ತಿಳಿಸಿತ್ತು. ಈ ಕಾರಣಕ್ಕಾಗಿ ಮನೆಯ ಅಂಗಳದಲ್ಲೇ ಭತ್ತವನ್ನು ಬಿತ್ತಿ ಭತ್ತದ ಕೃಷಿಗೆ ಮುಂದಾದ ಈ ವಿದ್ಯಾರ್ಥಿಗಳು ಭತ್ತದ ಕೃಷಿಯನ್ನು ಮಹತ್ವವನ್ನು ತಿಳಿಸಲು ಮುಂದಾಗಿದ್ದಾರೆ.


ಅಂಗಳವನ್ನು ಮಣ್ಣು ಹಾಕಿ ಹದ ಮಾಡಿ, ಮಣ್ಣು ಸವೆದು ಹೋಗದಂತೆ ಸುತ್ತ ಕಟ್ಟೆ ಕಟ್ಟಿ ನೀರಿನ ಒರತೆಯಿರುವಂತೆ ನೋಡಿಕೊಂಡಿದ್ದಾರೆ. ಭತ್ತದ ಗಿಡಗಳ ಮಧ್ಯೆ ಹುಲ್ಲು ಬೆಳೆಯದಿರಲಿ ಎನ್ನುವ ಕಾರಣಕ್ಕೆ ತೆಂಗಿನ ಸೋಗೆ ಹಾಗೂ ಅಡಿಕೆ ಸಿಪ್ಪೆಗಳನ್ನು ಹರಡಿದ್ದು, ಇದೀಗ ಉತ್ತಮ ಫಸಲು ಬೆಳೆದು ನಿಂತಿದೆ. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ತೃತೀಯ ವರ್ಷದ ಬಿಎಸ್ಸಿ ವಿದ್ಯಾಭ್ಯಾಸವನ್ನು ಮಾಡಿಕೊಂಡಿರುವ ಈ ಅವಳಿ ಸಹೋದರರು ಕೊರೋನಾ ಕಾರಣದಿಂದ ಮನೆಯಲ್ಲೇ ಉಳಿದುಕೊಂಡಿದ್ದರು.


Karnataka Bandh: ಮೈಸೂರಿನಲ್ಲಿ ಮುಂದುವರೆದ ಅನ್ನದಾತರ ಪ್ರತಿಭಟನೆ; 100ಕ್ಕೂ ಹೆಚ್ಚು ರೈತರು ಪೊಲೀಸ್ ವಶಕ್ಕೆ


ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡ ಈ ವಿದ್ಯಾರ್ಥಿಗಳು ಮನೆಯ ಮುಂದಿನ ಅಂಗಳದಲ್ಲಿ ಭತ್ತ ಬೆಳೆಯುವ ಯೋಜನೆಯನ್ನು ಹಾಕಿ ಇದೀಗ ಅದರಲ್ಲಿ ಸಫಲನೆಯನ್ನೂ ಪಡೆದುಕೊಂಡಿದ್ದಾರೆ. ಈಗಾಗಲೇ ಕೊಯಿಲಿಗೆ ಸಿದ್ಧಗೊಂಡಿದ್ದು, ಮನೆಯ ಖರ್ಚು ಹಾಗೂ ಧಾರ್ಮಿಕ ವಿಧಿ ವಿಧಾನಗಳಿಗೆ ಬೇಕಾದ ಭತ್ತದ ಕೃಷಿಯನ್ನು ಮಾಡಿದ್ದಾರೆ.


ಕಳೆದ ಮೂರು ವರ್ಷದ ಹಿಂದೆ ಅಂಗಳದಲ್ಲೇ ಭತ್ತ ಬೆಳೆಯುವುದನ್ನು ಆರಂಭಿಸಿದ್ದ ಈ ವಿದ್ಯಾರ್ಥಿಗಳು, ಈ ಬಾರಿ ಕೊನೆಯ ಪರೀಕ್ಷೆಯನ್ನು ಎದುರಿಸುತ್ತಿರುವ ಕಾರಣಕ್ಕಾಗಿ ಕೊಂಚ ಕಡಿಮೆ ಸ್ಥಳದಲ್ಲಿ ಭತ್ತದ ನಾಟಿ ಮಾಡಿದ್ದಾರೆ. ಒಂದೆಡೆ ಕರಾವಳಿಯಲ್ಲಿ ಭತ್ತದ ಕೃಷಿಯಲ್ಲಿ ತೊಡಗಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಭತ್ತದ ಕೃಷಿಯ ಬಗ್ಗೆ ಅನಿವಾರ್ಯತೆಯನ್ನು ತೋರಿಸುವ ಪ್ರಯತ್ನವನ್ನೂ ಈ ವಿದ್ಯಾರ್ಥಿಗಳು ಮಾಡಿದ್ದಾರೆ.


ಭತ್ತದ ಕೃಷಿಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಈ ಇಬ್ಬರೇ ಮಾಡಿಕೊಂಡಿದ್ದು, ಮನೆ ಮಂದಿಯೂ ಇವರಿಗೆ ಬೇಕಾದ ಸಹಕಾರಗಳನ್ನು ನೀಡಿದ್ದಾರೆ. ದೊಡ್ಡ ದೊಡ್ಡ ಗದ್ದೆಗಳಿದ್ದರೆ ಮಾತ್ರ ಭತ್ತದ ಕೃಷಿಗೆ ಅನುಕೂಲ ಎನ್ನುವ ಮಾತನ್ನೂ ಈ ಯುವ ಕೃಷಿಕರು ಸುಳ್ಳಾಗಿಸಿದ್ದಾರೆ.

Published by:Latha CG
First published: