• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮಾಸ್ಟರ್​ ಪ್ಲ್ಯಾನ್ ಮೂಲಕ ಬ್ಯಾಂಕ್ ದರೋಡೆ: 2 ವಾರದಲ್ಲೇ ಖತರ್ನಾಕ್ ಕಳ್ಳರನ್ನು ಅಂದರ್ ಮಾಡಿದ ಲೇಡಿ ಸಿಂಗಂ..!

ಮಾಸ್ಟರ್​ ಪ್ಲ್ಯಾನ್ ಮೂಲಕ ಬ್ಯಾಂಕ್ ದರೋಡೆ: 2 ವಾರದಲ್ಲೇ ಖತರ್ನಾಕ್ ಕಳ್ಳರನ್ನು ಅಂದರ್ ಮಾಡಿದ ಲೇಡಿ ಸಿಂಗಂ..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೊಪ್ಪಳ ಎಸ್​ಪಿ ಜಿ.ಸಂಗೀತಾ, ಜಿಲ್ಲೆಗೆ ಬಂದಾಗಿನಿಂದ ಮಾತು ತುಂಬಾನೇ ಕಮ್ಮಿ. ಆದರೆ ಕೆಲಸದ ವಿಷಯದಲ್ಲಿ ಮರು ಮಾತಿಲ್ಲ ಎಂಬಂತೆ ಸೈಲೆಂಟ್ ಲೇಡಿ ಸಿಂಗಂ ಎನಿಸಿಕೊಂಡಿದ್ದಾರೆ. ಮಾಧ್ಯಮ ಮಿತ್ರರೊಂದಿಗೂ ಅವರು ಮಿತಭಾಷಿ.

  • Share this:

ಕೊಪ್ಪಳ: ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ದರೋಡೆ ಪ್ರಕರಣ ಎಂದು ಕರೆಯಲ್ಪಟ್ಟಿದ್ದ ಬೇವೂರು ಬ್ಯಾಂಕ್  ದರೋಡೆ ಪ್ರಕರಣವನ್ನು ಕೊಪ್ಪಳ ಪೊಲೀಸರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತಾರಾಜ್ಯ ಖದೀಮರನ್ನು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರನ್ನು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಮಾಡಾ ತಾಲೂಕಿನ ಭಾವಿ ಗ್ರಾಮದ ಪ್ರಶಾಂತ ಅಲಿಯಾಸ್ ಗೋಟುದಾದಾ ಮೋರೆ (30) ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಾಸಿರಸ ತಾಲೂಕಿನ ಆಕಲೋಜ ಗ್ರಾಮದ ಹರಿದಾಸ ಅಲಿಯಾಸ್ ಹರ್ಷರಾಜ ಟೋಂಬ್ರೆ (35) ಎಂದು ಗುರುತಿಸಲಾಗಿದೆ.


ಸೆಪ್ಟೆಂಬರ್ 23ರಂದು ಖದೀಮರ ತಂಡ ಬೇವೂರು ಬ್ಯಾಂಕ್‌ಗೆ ಕನ್ನ ಹಾಕಿದ್ದರು. ದರೋಡೆಗೂ ಮುನ್ನ ಬ್ಯಾಂಕ್‌‌ನ ಸಿಸಿ ಕ್ಯಾಮೆರಾ ಫೂಟೇಜ್ ಸಿಗದಂತೆ ಕನೆಕ್ಷನ್ ಕೇಬಲ್ ಕತ್ತರಿಸಿದ್ದರು. ಗ್ಯಾಸ್ ಕಟರ್ ಮಷಿನ್‌ನಿಂದ ಲಾಕರ್ ಮುರಿದು, ಅಲ್ಲಿದ್ದ ಸುಮಾರು 1.46 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ದೋಚಿದ್ದರು. ಈ ಕೃತ್ಯದಲ್ಲಿ ಮಹಾರಾಷ್ಟ್ರದ ನಾಲ್ವರಿದ್ದು, ಇಬ್ಬರನ್ನು ಬಂಧಿಸಲಾಗಿದೆ.


ಮಹಾರಾಷ್ಟ್ರದ ಸಂತೋಷ್ ಎಂಬಾತ ಈ ಗ್ಯಾಂಗ್‌ನ ಪ್ರಮುಖ ರೂವಾರಿ. ಸಂತೋಷ್ ಹಾಗೂ ಮತ್ತೊಬ್ಬನ ಪತ್ತೆಗೆ ಜಾಲ ಬೀಸಲಾಗಿದೆ. ಜೊತೆಗೆ ಉತ್ತರ ಪ್ರದೇಶದ 6 ಜನರು ಸಹ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ಶೀಘ್ರದಲ್ಲೇ ಬಲೆಗೆ ಬೀಳಲಿದ್ದಾರೆ ಎಂದು ಎಸ್​ಪಿ ಜಿ.ಸಂಗೀತಾ ತಿಳಿಸಿದರು.


ಬಂಧಿತರಿಂದ 13.81 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ದರೋಡೆ ಕೃತ್ಯಕ್ಕೆ ಬಳಸಿದ ಸ್ಕಾರ್ಪಿಯೋ, ಮಾರುತಿ ಸ್ವಿಫ್ಟ್ ಕಾರು ಮತ್ತು ಮೂರು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದರು.


ಪೊಲೀಸ್ ತಂಡಕ್ಕೆ ಬಹುಮಾನ ಘೋಷಣೆ:


ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳು ಹಾಗೂ ವಸ್ತುಗಳ ಪತ್ತೆಗೆ ಎಸ್​ಪಿ ಜಿ.ಸಂಗೀತಾ, ಗಂಗಾವತಿ ಡಿವೈಎಸ್‌ಪಿ ಆರ್.ಎಸ್.ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಯಲಬುರ್ಗಾ ಸಿಪಿಐ ಎಂ‌.ನಾಗಿರೆಡ್ಡಿ ನೇತೃತ್ವದಲ್ಲಿ  ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡದಲ್ಲಿ ಕೊಪ್ಪಳ ಡಿಎಸ್‌ಆರ್‌ಬಿ ಘಟಕದ ಪಿಐ ಶಿವರಾಜ ಇಂಗಳೆ, ಕುಕನೂರು ಪಿಎಸ್ಐ ವೆಂಕಟೇಶ ಎನ್., ಕೊಪ್ಪಳ ಡಿಎಸ್ಆರ್‌ಬಿ ಘಟಕದ ಪಿಎಸ್ಐ ಅಮರೇಶ ಹುಬ್ಬಳ್ಳಿ ಕಾರ್ಯಾಚರಣೆಗೆ ಇಳಿದಿದ್ದರು. ಅಲ್ಲದೆ ಇವರೊಂದಿಗೆ ಪೊಲೀಸ್ ಸಿಬ್ಬಂದಿಗಳಾದ ವೆಂಕಟೇಶ, ಸಣ್ಣವೀರಣ್ಣ, ಅಶೋಕ, ತಾರಾಸಿಂಗ್, ಕೊಟೇಶ್, ದೇವೇಂದ್ರಪ್ಪ, ರವಿ ರಾಠೋಡ್, ವಿಶ್ವನಾಥ, ಶರಣಪ್ಪ, ಮಹಾಂತಗೌಡ, ರವಿಶಂಕರ ಹಾಗೂ ತಾಂತ್ರಿಕ ವಿಭಾಗದ ಪ್ರಸಾದ ಅವರು ಶ್ರಮಿಸಿದ್ದರು. ಇದೀಗ ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿರುವ ತಂಡಕ್ಕೆ ಎಸ್​ಪಿ .ಜಿ.ಸಂಗೀತಾ ಬಹುಮಾನ ಘೋಷಿಸಿದ್ದಾರೆ.


ಸೈಲೆಂಟ್ ಲೇಡಿ ಸಿಂಗಂ..!


ಕೊಪ್ಪಳ ಎಸ್​ಪಿ ಜಿ.ಸಂಗೀತಾ, ಜಿಲ್ಲೆಗೆ ಬಂದಾಗಿನಿಂದ ಮಾತು ತುಂಬಾನೇ ಕಮ್ಮಿ. ಆದರೆ ಕೆಲಸದ ವಿಷಯದಲ್ಲಿ ಮರು ಮಾತಿಲ್ಲ ಎಂಬಂತೆ ಸೈಲೆಂಟ್ ಲೇಡಿ ಸಿಂಗಂ ಎನಿಸಿಕೊಂಡಿದ್ದಾರೆ. ಮಾಧ್ಯಮ ಮಿತ್ರರೊಂದಿಗೂ ಅವರು ಮಿತಭಾಷಿ. ಬ್ಯಾಂಕ್ ದರೋಡೆ ಪ್ರಕರಣವನ್ನು ಘಟನೆ ನಡೆದು‌ ಕೇವಲ 13 ದಿನಗಳಲ್ಲಿ ಪತ್ತೆ ಹಚ್ಚಿರುವ ಸಾಧನೆ ಶ್ಲಾಘಿಸಿ, ಅವರ ಕಾರ್ಯವೈಖರಿಯನ್ನು ಕಂಡ ಸಾರ್ವಜನಿಕರು ಅಭಿಮಾನಪೂರ್ವಕವಾಗಿ ಎಸ್​ಪಿ ಸಂಗೀತಾ ಅವರನ್ನು ಸೈಲೆಂಟ್ ಲೇಡಿ ಸಿಂಗಂ ಎಂಬ ಟೈಟಲ್‌ನಿಂದ ಶ್ಲಾಘಿಸುತ್ತಿದ್ದಾರೆ.


ಇದನ್ನೂ ಓದಿ: IPL Records: ಇವರೇ ಚೊಚ್ಚಲ ಐಪಿಎಲ್​ನ ಹೀರೋಗಳು..!

Published by:zahir
First published: