PAN Number: ಅವಳಿ ಸಹೋದರರಿಗೆ ಒಂದೇ ಪ್ಯಾನ್ ನಂಬರ್ ; ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ

ನೀವು ಆದಾಯ ತೆರಿಗೆ ಪಾವತಿದಾರರಾಗಿದ್ದು, ಸರಕಾರದಿಂದ ಸಹಾಯ ಧನ ಪಡೆಯಲು ಅನರ್ಹರಾಗಿರುತ್ತೀರಿ. ಹೀಗಾಗಿ ಕೂಡಲೇ ತಾಲೂಕು ಕೃಷಿ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಹಣವನ್ನು ಮರಳಿಸಿ. ಯಾವುದೇ ಸರಕಾರಿ ಯೋಜನೆಗಳು ನಿಮಗೆ ಸಿಗುವುದಿಲ್ಲ ಎಂದು ನೊಟೀಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ

ಪ್ಯಾನ್​​ ಕಾರ್ಡ್​​ಗಳು

ಪ್ಯಾನ್​​ ಕಾರ್ಡ್​​ಗಳು

  • Share this:
ವಿಜಯಪುರ(ಡಿಸೆಂಬರ್​. 10): ಇದು ಯಾರೋ ಮಾಡಿದ ಎಡವಟ್ಟಿಗೆ ಅಮಾಯಕರು ಎದುರಿಸುತ್ತಿರುವ ಸಂಕಷ್ಟದ ಕಥೆ. ಆದಾಯ ತೆರಿಗೆ ಇಲಾಖೆ ಮಾಡಿರುವ ಒಂದು ತಪ್ಪು ಅವಳಿ ಸಹೋದರರಿಗೆ ಕಿರಿಕಿರಿಯಾಗಿ ಪರಿಣಮಿಸಿದೆ. ಈ ತಪ್ಪು ಬೆಳಕಿಗೆ ಬಂದಿದ್ದು ಬರೋಬ್ಬರಿ ಒಂದು ದಶಕದ ನಂತರ. ಅದೂ ಕೂಡ ಕೃಷಿ ಇಲಾಖೆಯಿಂದ ನೊಟೀಸ್ ಬಂದ ಮೇಲೆ, ಅಷ್ಟಕ್ಕೂ ಆಗಿದ್ದೇನೆಂದರೆ, ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ಹಸನಸಾಬ ನಬಿಸಾಬ ಹಳ್ಳಿ ಮತ್ತು ಹುಸೇನಸಾಬ ನಬಿಸಾಬ ಹಳ್ಳಿ ಅವಳಿ-ಜವಳಿ ಸಹೋದರು. ಹಸನಸಾಬ ಹಳ್ಳಿ ರೈತನಾಗಿದ್ದರೆ, ಹುಸೇನಸಾಬ ಹಳ್ಳಿ ಸೇನೆಯಲ್ಲಿ ಸೇವೆ ಸಲ್ಲಿಸಿ ಕೇವಲ 15 ದಿನಗಳ ಹಿಂದಷ್ಟೆ ನಿವೃತ್ತಿಯಾಗಿ ಸ್ವಗ್ರಾಮಕ್ಕೆ ಬಂದಿದ್ದಾರೆ. ಇಬ್ಬರಿಗೂ ತಲಾ 6 ಎಕರೆ ಜಮೀನಿದೆ. ಸೇನೆಯಲ್ಲಿದ್ದ ಹುಸೇನಸಾಬ ಹಳ್ಳಿ 2005ರಲ್ಲಿ ಪ್ಯಾನ್ ಕಾರ್ಡ್ ಮಾಡಿಸಿದ್ದಾರೆ. ಅಲ್ಲದೇ, ಪ್ರತಿ ವರ್ಷ ಸುಮಾರು ತಲಾ 10 ಸಾವಿರ ರೂ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ.

ಹಸನಸಾಬ ಹಳ್ಳಿ 2010ರಲ್ಲಿ ಪ್ಯಾನ್ ಕಾರ್ಡ್ ಮಾಡಿಸಿದ್ದಾರೆ. ಆದರೆ, ಇವರು ಕೃಷಿಕರಾಗಿದ್ದರಿಂದ ಯಾವುದೇ ಆದಾಯ ತೆರಿಗೆ ಹಣ ಪಾವತಿಸುತ್ತಿಲ್ಲ. ಹೀಗಾಗಿ ಇವರು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಸ್ವಯಂ ಘೋಷಣಿ ಸಲ್ಲಿಸಿದ್ದರಿಂದ ಇವರಿಗೆ 10 ಸಾವಿರ ರೂ ಸಹಾಯಧನ ಮಂಜೂರಾಗಿದ್ದು, ಇವರ ಖಾತೆಗೆ ಜಮೆಯಾಗಿ ಅದನ್ನು ಬಳಸಿದ್ದಾರೆ. ಆದರೆ, ಬಬಲೇಶ್ವರ ರೈತ ಸಂಪರ್ಕ ಕೇಂದ್ರದಿಂದ ಬಂದಿರುವ ನೊಟೀಸ್ ಗೆ ಇವರು ಕಂಗಾಲಾಗಿದ್ದಾರೆ. 

ನೀವು ಆದಾಯ ತೆರಿಗೆ ಪಾವತಿದಾರರಾಗಿದ್ದು, ಸರಕಾರದಿಂದ ಸಹಾಯ ಧನ ಪಡೆಯಲು ಅನರ್ಹರಾಗಿರುತ್ತೀರಿ. ಹೀಗಾಗಿ ಕೂಡಲೇ ತಾಲೂಕು ಕೃಷಿ ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಿ ಹಣವನ್ನು ಮರಳಿಸಿ. ಇಲ್ಲದಿದ್ದರೆ, ಭವಿಷ್ಯದಲ್ಲಿ ಯಾವುದೇ ಸರಕಾರಿ ಯೋಜನೆಗಳು ನಿಮಗೆ ಸಿಗುವುದಿಲ್ಲ ಎಂದು ನೊಟೀಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.

ಇದರಿಂದ ಗಾಬರಿಯಾದ ಹಸನಸಾಬ ಹಳ್ಳಿ ತಮಗೆ ಪರಿಚಯವಿರುವ ಚಾರ್ಟಟೆರ್ಡ್ ಅಕೌಂಟೆಂಟ್ ಅವರನ್ನು ಭೇಟಿಯಾಗಿ ಸಮಸ್ಯೆಯ ಕುರಿತು ಮಾಹಿತಿ ನೀಡಿದ್ದಾರೆ. ಅವರಿಗೂ ಕೂಡ ಈ ವಿಚಾರ ಶಾಕ್ ತಂದಿದೆ. ಸುಮಾರು ಒಂದು ವಾರಗಳ ಕಾಲ ಪರಿಶೀಲನೆ ನಡೆಸಿದಾಗ ಈ ಸಹೋದರರು ಮಾಡಿಸಿರುವ ಪ್ಯಾನ್ ಕಾರ್ಡ್ ನಂಬರ್ ಒಂದೇ ಸಂಖ್ಯೆಯನ್ನು ಹೊಂದಿರುವುದು ಬೆಳಕಿಗೆ ಬಂದಿದೆ. ಇವರ ಸಹೋದರ ಹುಸೇನಸಾಬ ಹಳ್ಳಿ ಪ್ರತಿವರ್ಷ ಪಾವತಿಸಿದ್ದ ತೆರಿಗೆ ಪಾವತಿ ಹಣ ಹಸನಸಾಬ ಹಳ್ಳಿ ಅವರ ಖಾತೆಗೆ ದಾಖಲಾಗಿದೆ. ಇದರಿಂದ ಈ ಎಡವಟ್ಟು ಉಂಟಾಗಿದೆ.

ಇಲ್ಲಿ ಇಬ್ಬರೂ ಅವಳಿ-ಜವಳಿ ಸಹೋದರರು. ಜನ್ಮ ದಿನಾಂಕ ಒಂದೇ ಇದೆ.  ಆದರೆ, ಇವರಿಬ್ಬರ ಭಾವಚಿತ್ರ, ಸಹಿ, ಆಧಾರ ನಂಬರ್ ಗಳು ಬೇರೆ ಬೇರೆಯಾಗಿದ್ದರೂ ಕೂಡ ಪ್ಯಾನ್ ನಂಬರ್ ಒಂದೆ ಆಗಿರುವುದು ಆದಾಯ ತೆರಿಗೆ ಇಲಾಖೆಯ ಯಡವಟ್ಟಿಗೆ ಸಾಕ್ಷಿಯಾಗಿದೆ. ಯಾರೋ ಮಾಡಿದ ತಪ್ಪಿಗೆ ನಮಗೇಕೆ ಶಿಕ್ಷೆ ಎಂದು ಹಸನಸಾಬ ನಬಿಸಾಬ ಹಳ್ಳಿ ಗೋಳು ತೋಡಿಕೊಂಡಿದ್ದಾರೆ.

ಇದನ್ನೂ ಓದಿ : ನಿಗಮ ಮಂಡಳಿಗಳಲ್ಲಿ ಸಿಎಂ ತವರು ಜಿಲ್ಲೆಯದ್ದೇ ಸಿಂಹಪಾಲು ; ತಮ್ಮ ಬೆಂಬಲಿಗರಿಗೇ ಹೆಚ್ಚು ಸ್ಥಾನ ನೀಡಿದ ಯಡಿಯೂರಪ್ಪ

ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಸೇನೆಯಲ್ಲಿದ್ದ ಸಹೋದರನಿಗೆ ಬಂದಿರುವ ಪ್ಯಾನ್ ಕಾರ್ಡ್ ನಲ್ಲಿ ಎಚ್. ಎನ್. ಹಳ್ಳಿ ಎಂದು ಹೆಸರಿದ್ದರೆ, ರೈತನಾಗಿರುವ ಸಹೋದರನಿಗೆ ನೀಡಲಾಗಿರುವ ಪ್ಯಾನ್ ಕಾರ್ಡ್​​ನಲ್ಲಿ ಹಸನಸಾಬ ಹಳ್ಳಿ ಎಂದು ಹೆಸರಿದೆ. ಆದರೆ, ಇಬ್ಬರಿಗೂ ನೀಡಲಾಗಿರುವ ಪ್ಯಾನ್ ಕಾರ್ಡ್ ನಲ್ಲಿ ಪ್ಯಾನ್​​ ನಂಬರ್​ ಸಂಖ್ಯೆ ಮಾತ್ರ ಒಂದೆಯಾಗಿರುವುದು ಇಷ್ಟೇಲ್ಲ ಎಡವಟ್ಟಿಗೆ ಕಾರಣವಾಗಿದೆ.

ಈಗ ಏನು ಮಾಡಬೇಕು ಎಂದು ತಿಳಿಯದೇ ಇಬ್ಬರೂ ಸಹೋದರರು ಅವರಿವರ ಕಡೆ ಸಲಹೆ ಕೇಳುತ್ತಿದ್ದಾರೆ. ಜನಸಾಮಾನ್ಯರು ತಪ್ಪು ಮಾಡಿದಾಗ ದಂಡ ಮತ್ತು ಇತರ ಶಿಕ್ಷೆ ವಿಧಿಸುವ ಆದಾಯ ತೆರಿಗೆ ಇಲಾಖೆ ಮತ್ತು ಸಂಬಂಧಿಸಿದ ವಿಭಾಗಗಳು ಮಾಡಿರುವ ಈ ತಪ್ಪಿಗೆ ಅಮಾಯಕ ಅವಳಿ-ಜವಳಿ ಸಹೋದರರು ಪರದಾಡುವಂತಾಗಿದ್ದು ಮಾತ್ರ ವಿಪರ್ಯಾಸವಾಗಿದೆ.
Published by:G Hareeshkumar
First published: