ಬಡವರ ಜೀವನೋಪಾಯಕ್ಕಾಗಿ ಹಸು ದಾನಮಾಡಿದ ಟಿ.ವಿ.ಗೋಪಿನಾಥ್‌: ತಂದೆಯ ಕಾರ್ಯಕ್ಕೆ ಐಎಂಎಫ್‌ ಮುಖ್ಯ ಅರ್ಥಶಾಸ್ತ್ರಜ್ಞೆಯಿಂದ ಪ್ರಶಂಸೆ

ಟಿ.ವಿ.ಗೋಪಿನಾಥ್‌ ಮೈಸೂರಿನಲ್ಲಿ 50 ಎಕರೆ ತೋಟ ಹೊಂದಿದ್ದು, ಇಲ್ಲಿ ಸಮಗ್ರ ಕೃಷಿ ಸೇರಿದಂತೆ, ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ.

ಹಸು ದಾನ ಮಾಡಿದ ಗೋಪಿನಾಥ್

ಹಸು ದಾನ ಮಾಡಿದ ಗೋಪಿನಾಥ್

  • Share this:
ಮೈಸೂರು (ಏ. 19):  ಐಎಂಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ತಂದೆಯಾಗಿರುವ ಟಿ.ವಿ.ಗೋಪಿನಾಥ್  ಸಮಾಜಸೇವೆಯ ತೊಡಗಿಕೊಂಡಿದ್ದು, ತನ್ನ ನಿಸ್ವಾರ್ಥ ಸೇವೆ ಮೂಲಕ ಜನಮನ್ನಣೆ ಪಡೆದಿದ್ದಾರೆ. ಅವರ ಉದಾತ್ತ ಸೇವೆಯ ಅಂಗವಾಗಿ ಇಂದು ಬಡವರಿಗೆ ಸ್ವವಲಂಬಿ ಬದುಕು ಕಟ್ಟಿಕೊಳ್ಳಲು ಹಸುಗಳನ್ನ ದಾನ ಮಾಡಿದ್ದಾರೆ. ಜಿಲ್ಲೆಯ ಬಿಳಿಕೆರೆ ಬಳಿ ಇರುವ ತಮ್ಮ ತೋಟದಲ್ಲಿನ 15 ಹಸುಗಳನ್ನ ದಾನ ಮಾಡಿ ಹೃದಯವಂತಿಕೆ ಮರೆದಿದ್ದಾರೆ. ತಂದೆಯ ಈ ಕಾರ್ಯಕ್ಕೆ ಮಗಳು ಟ್ವಿಟ್ಟರ್‌ನಲ್ಲಿ ಹೆಮ್ಮೆ ವ್ಯಕ್ತಪಡಿಸಿದ್ದು, ನನ್ನ ತಂದೆಯ ಈ ಕಾರ್ಯ ನನಗೂ ಗೊತ್ತಿರಲಿಲ್ಲ ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. 

ಟಿ.ವಿ.ಗೋಪಿನಾಥ್‌ ಮೈಸೂರಿನಲ್ಲಿ 50 ಎಕರೆ ತೋಟ ಹೊಂದಿದ್ದು, ಇಲ್ಲಿ ಸಮಗ್ರ ಕೃಷಿ ಸೇರಿದಂತೆ, ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ತಮ್ಮ ತೋಟದಲ್ಲಿದ್ದ 70-80 ಹಸುಗಳನ್ನ ನೋಡಿಕೊಳ್ಳುತ್ತಿದ್ದ ಸಿಬ್ಬಂದಿಗಳು ಕೊರೋನಾ ಕಾರಣದಿಂದ ಕರ್ತವ್ಯಕ್ಕೆ ಗೈರಾಗುತ್ತಿದ್ದ ಕಾರಣ ಹಸುಗಳನ್ನ ಮಠಕ್ಕೆ ದಾನ ಮಾಡುವ ಚಿಂತನೆ ಮಾಡಿ, ಹಲವು ಮಠಗಳಿಗೆ ಒಂದೆರಡು ಹಸುಗಳನ್ನ ದಾನ ಮಾಡಿದ್ದರು. ಅದಾದ ನಂತರ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಗೋಪಿನಾಥ್‌ರಿಗೆ ಸಲಹೆ ನೀಡಿದ್ದು, ನೀವು ದಾನ ಮಾಡುವುದಾದರೆ ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಸು ನೀಡಿ ಎಂದು ಸಲಹೆ ನೀಡಿದರು.ಆ ನಂತರ ಬಡವರನ್ನ ಗುರುತಿಸಿ ಜೀವನೋಪಾಯಕ್ಕಾಗಿ ಹಸುಗಳ ದಾನ ಮಾಡಲು ನಿರ್ಧರಿಸಿದರು.  15 ಹಾಲು ಕರೆಯುತ್ತಿರುವ ಹಾಗೂ ತೆನೆ ಹಸುಗಳ ದಾನ ಮಾಡಿದ್ದಾರೆ, ತನ್ನ ತಂದೆಯ ಕಾರ್ಯಕ್ಕೆ ಮಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ತಂದೆಯ ಕಾರ್ಯದ ಬಗ್ಗೆ  ಹೆಮ್ಮೆ ವ್ಯಕ್ತಪಡಿಸಿದ್ದಾರೆ. ನನ್ನ ತಂದೆ ಮಾಡುತ್ತಿದ್ದ ನಿಸ್ವಾರ್ಥ ಸೇವೆ ನನಗೆ ಗೊತ್ತೆ ಇರಲಿಲ್ಲ. ಈ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ. ತಂದೆ  ಹಾಗೂ ಮಗಳ ಉದಾರತೆಗೆ ನೆಟ್ಟಿಗರಿಂದಲೂ ಪ್ರಶಂಸೆ ವ್ಯಕ್ತವಾಗಿದ್ದು, ಕಾಮೆಂಟ್‌ ಬಾಕ್ಸ್ ನಲ್ಲಿ ಶ್ಲಾಘನೆ ಮಾಡಿದ್ದಾರೆ.

ಇದನ್ನು ಓದಿ: ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ

ಇನ್ನು ಟಿ.ವಿ.ಗೋಪಿನಾಥ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ರೈತಮುಖಂಡ ಕುರುಬೂರು ಶಾಂತಕುಮಾರ್, ಗೋಪಿನಾಥ್ ಅವರು ಈ ಹಿಂದೆ ಮಠಕ್ಕೆ ಹಸುಗಳನ್ನ ನೀಡಿದ್ದರು. ಈ ಬಗ್ಗೆ ನನಗೆ ಮಾಹಿತಿ ಸಿಕ್ಕಿತ್ತು, ಕಾರ್ಯಕ್ರಮವೊಂದರಲ್ಲಿ ಅವರನ್ನ ಭೇಟಿಯಾದಾಗ ಬಡವರಿಗೆ ನೀಡಿ ಎಂದು ಸಲಹೆ ನೀಡಿದೆ. ತಕ್ಷಣವೇ ಅವರು ಕಾರ್ಯಪ್ರವೃತರಾಗಿ, ತನ್ನ ಸಿಬ್ಬಂದಿಗಳ ಮೂಲಕ ಸೂಕ್ತ ಬಡವರನ್ನ ಗುರುತಿಸಿ, ಅವರ ಜೀವನೋಪಾಯಕ್ಕಾಗಿ ಹಸು ನೀಡಿದ್ದಾರೆ.

ತಮ್ಮ ಈ ಕಾರ್ಯದ ಹಿಂದೆ ಯಾವುದೇ  ಪ್ರಚಾರದ ಉದ್ದೇಶವಿಲ್ಲ. ಈ  ದಾನವನ್ನು ಎಂದು ಪ್ರಚಾರ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ಈ ವಿಷಯವನ್ನು ಯಾರ ಬಳಿ ಹೇಳಬಾರದು ಎಂದು  ಗೋಪಿನಾಥ್‌ ತಮಗೆ ತಾಕಿತ್ತು ಮಾಡಿದ್ದರು. ಆದರೂ ಈ ವಿಷಯ ಎಲ್ಲರಿಗೂ ತಿಳಿದು, ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಮಗಳು ಸಹ ಈ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಟಿ.ವಿ.ಗೋಪಿನಾಥ್ ರಂತವರು ನಿಜಕ್ಕೂ ಸಮಾಜಕ್ಕೆ ಮಾದರಿ ವ್ಯಕ್ತಿಗಳು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

(ವರದಿ : ಪುಟ್ಟಪ್ಪ ಕೆ)
Published by:Seema R
First published: