news18-kannada Updated:January 18, 2021, 6:55 AM IST
ಯುದ್ಧ ವಿಮಾನ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ರವೀಂದ್ರನಾಥ್ ಕಡಲತೀರದಲ್ಲಿ ಯುದ್ಧ ವಿಮಾನ ಐಎನ್ಎಸ್ ಟೊಪೊಲೋವ್ ಮ್ಯೂಸಿಯಂ ಮಾರ್ಚ್ ಅಂತ್ಯದ ವೇಳೆಗೆ ಉದ್ಘಾಟನೆಗೊಳ್ಳಲಿದೆ ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ. ಮ್ಯೂಸಿಯಂ ಸ್ಥಾಪಿಸುವ ಪ್ರಕ್ರಿಯೆಗಳು ಚುರುಕಾಗಿದ್ದು, ಸದ್ಯ ಈ ಯುದ್ಧ ವಿಮಾನ ಮ್ಯೂಸಿಯಂ ಸ್ಥಾಪನೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಿವೆ. ಯುದ್ಧವಿಮಾನವನ್ನು ತರಲು ಟೆಂಡರ್ ಪ್ರಕ್ರಿಯೆಗಳು ಪ್ರಾರಂಭವಾಗಿವೆ. ಇನ್ನು ಮೂರು ತಿಂಗಳಲ್ಲಿ ಮ್ಯೂಸಿಯಂ ತಲೆ ಎತ್ತಿ ನಿಲ್ಲಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಎಂಒಯು ಒಪ್ಪಂದದ ಪ್ರಕಾರ ನೌಕಾಸೇನೆ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ವಿಮಾನ ಸಾಗಾಟದ ವೆಚ್ಚ ಭರಿಸಲು ಒಪ್ಪಿಕೊಂಡಿದೆ. ಕಾರವಾರಕ್ಕೆ ಬಂದ ಬಳಿಕ ನೌಕಾಸೇನೆಯ ತಂತ್ರಜ್ಞರು ವಿಮಾನವನ್ನು ಮರು ಜೋಡಣೆ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಏನಿದು ಯೋಜನೆ..?
ಐಎನ್ಎಸ್ ಟೊಪೊಲೋವ್ ಭಾರತೀಯ ನೌಕಾಸೇನೆಯ ಹೆಮ್ಮೆಯ ಯುದ್ಧ ವಿಮಾನವಾಗಿದೆ. ಅನೇಕ ಯುದ್ಧದ ಕಾರ್ಯಾಚರಣೆಯಲ್ಲಿ ಬಳಸಿದ್ದ ಈ ವಿಮಾನವು 2017ರ ಮಾರ್ಚ್ ನಲ್ಲಿ ವಿಶಾಖಪಟ್ಟಣ ನೌಕಾನೆಲೆಯಲ್ಲಿ ಡಿಕಮೀಷನ್ ಮಾಡಲಾಗಿತ್ತು. ಬಳಿಕ ಈ ವಿಮಾನವನ್ನು ತಮಿಳುನಾಡಿನ ಚೆನೈನಲ್ಲಿರಿಸಲಾಗಿತ್ತು.
2020ರ ಮಾರ್ಚ್ನಲ್ಲಿ ನೌಕಾಸೇನೆ ಮತ್ತು ಉತ್ತರಕನ್ನಡ ಜಿಲ್ಲಾಡಳಿತದ ನಡುವೆ ಎಂಒಯು ಒಪ್ಪಂದ ಏರ್ಪಟ್ಟಿದ್ದು 2020ರ ಡಿಸೆಂಬರ್ ವೇಳೆಗೆ ಯುದ್ಧವಿಮಾನ ಕಾರವಾರಕ್ಕೆ ಬರುವ ನಿರೀಕ್ಷೆ ಇತ್ತು. ಆದರೆ ಕೋವಿಡ್ ಕಾರಣದಿಂದ ಈ ಯೋಜನೆಗೆ ವಿಘ್ನ ಉಂಟಾಗಿ, ಮತ್ತೆ ಮುಂದೂಡಲ್ಪಟ್ಟಿತ್ತು. ಇದರಿಂದ ಸಾರ್ವಜನಿಕ ವಲಯದಲ್ಲಿ ಈ ಯೋಜನೆ ಸಂಬಂಧ ಅನೇಕ ಅನುಮಾನಗಳು ಮೂಡಿದ್ದವು.
ಕಳೆದ ಕೆಲ ವರ್ಷಗಳಿಂದ ಈ ಯೋಜನೆಯು ನೆನೆಗುದಿಗೆ ಬಿದ್ದು, ಯೋಜನೆ ಕಾರ್ಯಗತವಾಗುತ್ತದೆಯೋ ? ಇಲ್ಲವೋ ಎಂಬುದು ತೀವ್ರ ಗೊಂದಲಗಳಿಗೆ ಕಾರಣವಾಗಿತ್ತು. ಆದರೆ ಈಗ ಜಿಲ್ಲಾಧಿಕಾರಿಗಳ ಘೋಷಣೆಯಿಂದ ಎಲ್ಲ ಗೊಂದಲಗಳು ನಿವಾರಣೆಯಾದಂತಾಗಿದೆ. ಯುದ್ಧ ವಿಮಾನ ಮ್ಯೂಸಿಯಂ ನಿರ್ಮಾಣವಾಗುವುದು ನಿಶ್ಚಿತವಾದಂತಾಗಿದೆ.
ಈಗಾಗಲೇ ಕಾರವಾರದ ರವೀಂದ್ರನಾಥ್ ಟ್ಯಾಗೋರ್ ಕಡಲತೀರಕ್ಕೆ ಚಾಪೆಲ್ ಯುದ್ಧ ಹಡಗು ಒಂದು ಮೆರಗನ್ನು ನೀಡಿತ್ತು. ಇದೇ ವೇಳೆಯಲ್ಲಿ ಐಎನ್ಎಸ್ ಟೊಪೊಲೋವ್ ಮ್ಯೂಜಿಯಂ ನಿರ್ಮಾಣದ ಕುರಿತು ವಿವಿಧ ರಾಜ್ಯಗಳಿಂದ ಬೇಡಿಕೆ ಬಂದಿತ್ತು. ಅಂದು ರಕ್ಷಣಾ ಇಲಾಖೆಯಿಂದ ಯುದ್ಧ ವಿಮಾನ ಪಡೆಯುವ ಸಂಬಂಧ ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು ಮುಂತಾದ ದಕ್ಷಿಣ ರಾಜ್ಯಗಳ ನಡುವೆ ತೀವ್ರ ಪೈಪೋಟಿ ನಡೆದಿತ್ತು.ಅಂದಿನ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2018ರಲ್ಲಿ ರಕ್ಷಣಾ ಇಲಾಖೆಗೆ ಪತ್ರ ಬರೆದು ಯುದ್ಧ ವಿಮಾನವನ್ನು ಕಾರವಾರದಲ್ಲಿ ಮ್ಯೂಸಿಯಂ ನಿರ್ಮಿಸುವ ಉದ್ದೇಶದಿಂದ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಚಾಪೆಲ್ ಯುದ್ಧ ಹಡಗಿನ ಜತೆಗೆ ಐಎನ್ಎಸ್ ಟೊಪೊಲೋವ್ ಮ್ಯೂಸಿಯಂ ನಿರ್ಮಾಣವಾದರೆ, ಕಡಲತೀರಕ್ಕೆ ಇನ್ನಷ್ಟು ಮೆರಗು ದೊರೆತಂತಾಗುತ್ತದೆ ಎಂಬುದು ಜನರ ನಿರೀಕ್ಷೆಯಾಗಿತ್ತು. ಆದರೆ ವಿವಿಧ ಅಡೆತಡೆಗಳಿಂದಾಗಿ ಯೋಜನೆ ನೆನೆಗುದಿಗೆ ಬಿದ್ದಿತ್ತು.
ಪ್ರಸ್ತುತ ವಿಮಾನ ತರಲು ನೌಕಾಸೇನೆ ಮತ್ತು ಉತ್ತರಕನ್ನಡ ಜಿಲ್ಲಾಡಳಿತದ ವತಿಯಿಂದ ಟೆಂಡರ್ ಪ್ರಕ್ರಿಯೆಗಳು ಚಾಲನೆ ಪಡೆದಿವೆ. ಅಂತೂ ಮಾರ್ಚ್ ಅಂತ್ಯದ ವೇಳೆಗೆ ಕಾರವಾರಕ್ಕೆ ತರುವ ಬಗ್ಗೆ ಜಿಲ್ಲಾಡಳಿತ ಭರವಸೆ ನೀಡಿದೆ. ಈಗ ಐಎನ್ಎಸ್ ಟುಪೊಲೋವ್ ಯುದ್ಧ ವಿಮಾನವನ್ನು ಬಿಡಿ ಭಾಗಗಳನ್ನಾಗಿ ಕಳಚಿ 40 ಲಾರಿಗಳ ಮೂಲಕ ಕಾರವಾರಕ್ಕೆ ತರುವುದೊಂದೇ ಬಾಕಿ ಉಳಿದಿದೆ.
Published by:
zahir
First published:
January 18, 2021, 6:55 AM IST