ಟಿ ಬಿ ಡ್ಯಾಂನಲ್ಲಿ ಹೆಚ್ಚಿದ ಒಳಹರಿವು; ಮತ್ತೆ ಹಂಪಿಯ ಪುರಂದರ ದಾಸರ ಮಂಟಪ ಮುಳುಗಡೆ

news18
Updated:August 31, 2018, 11:25 PM IST
ಟಿ ಬಿ ಡ್ಯಾಂನಲ್ಲಿ ಹೆಚ್ಚಿದ ಒಳಹರಿವು; ಮತ್ತೆ ಹಂಪಿಯ ಪುರಂದರ ದಾಸರ ಮಂಟಪ ಮುಳುಗಡೆ
-ಚಿತ್ರ - ರಾಚಯ್ಯ ಹಂಪಿ
news18
Updated: August 31, 2018, 11:25 PM IST
- ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ (ಆ.31) - ತುಂಗಭದ್ರ ಜಲಾಶಯ ಭರ್ತಿಯಾಗಿ ಒಳಹರಿವು ಹೆಚ್ಚಳ ಕಂಡ ಹಿನ್ನೆಲೆ ಹಂಪಿಯ ಪುರಂದರದಾಸರ ಮಂಟಪ ಸೇರಿದಂತೆ ಕೆಲ ಸಾಲುಮಂಟಪಗಳು ಮತ್ತೆ ನದಿ ನೀರಿಗೆ ಮುಳುಗಿವೆ.

ಇಂದು ಜಲಾಶಯದ ಒಳಹರಿವು ಹೆಚ್ಚಳವಾಗಿದೆ. ಸದ್ಯ ಜಲಾಶಯದಲ್ಲಿ 100.66 ಟಿಎಂಸಿ ನೀರಿನಿಂದ ಭರ್ತಿಯಾಗಿದ್ದು, 1632.95 ಅಡಿಗೆ ನೀರು ಬಂದಿದೆ. ಗರಿಷ್ಟ 1633 ಅಡಿಯಾಗಿದ್ದು ಬಹುತೇಕ ಭರ್ತಿಯಾಗಿದೆ. ಇದರಿಂದಾಗಿ ಜಲಾಶಯಕ್ಕೆ ಬರುವ ಒಳಹರಿವಿನ ಅಷ್ಟೂ ನೀರನ್ನೂ ನದಿ ಮೂಲಕ ಹೊರಬಿಡಲಾಗುತ್ತಿದೆ.

ಇಂದು 50 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ಬಿಟ್ಟ ಪರಿಣಾಮ ಹಂಪಿಯ ನದಿಪಾತ್ರದಲ್ಲಿರುವ ಶ್ರೀ ಪುರಂದರದಾಸ ಮಂಟಪ ಸಂಪೂರ್ಣ ಮುಳುಗಿದೆ. ಕೋದಂಡರಾಮ ದೇವಸ್ಥಾನದ ರಸ್ತೆಯಲ್ಲಿ ಬರುವ ಒನಕೆ ಕಿಂಡಿ ಮಾರ್ಗದವರೆಗೆ ನದಿ ನೀರು ಹರಿಯುತ್ತಿದೆ. ನೀರಿನ ಪ್ರವಾಹ ಹೆಚ್ಚಾದ ಕಾರಣ ಬೋಟು ಪ್ರಯಾಣ ಲಭ್ಯವಿಲ್ಲ.

ಮಧ್ಯಾಹ್ನದಿಂದ ಹಂಪಿಯಿಂದ ಆನೆಗುಂದಿ ಹಾಗೂ ವಿರುಪಾಪುರ ಗಡ್ಡೆಗೆ ತೆರಳುತ್ತಿದ್ದ ಬೋಟ್ ಓಡಾಟ ಸ್ಥಗಿತಗೊಳಿಸಲಾಗಿದೆ. ಕಳೆದ ಹತ್ತು ದಿನಗಳ ಹಿಂದೆ ಜಲಾಶಯದ ನೀರಿನ ಒಳಹರಿವು ಹೆಚ್ಚಾದಾಗ ಪುರಂದರಮಂಟಪ, ಕೋದಂಡರಾಮ ದೇವಸ್ಥಾನದವರೆಗೆ ನದಿ ನೀರು ಬಂದಿತ್ತು. ಕಂಪ್ಲಿ ಸೇತುವೆ ಮುಳುಗಿತ್ತು. ಸಂಚಾರ ಸ್ಥಗಿತಗೊಳಿಸಲಾಗಿತ್ತು.

ರಾತ್ರಿ ವೇಳೆ ಜಲಾಶಯಕ್ಕೆ ಇನ್ನಷ್ಟು ನೀರು ಬಿಟ್ಟರೆ ಅಪಾಯಮಟ್ಟ ಮೀರಿ ಹರಿಯುವ ಸಾಧ್ಯತೆಯಿದೆ. ಬೆಳಗ್ಗೆ ಜಲಾಶಯದಲ್ಲಿ 34563 ಕ್ಯೂಸೆಕ್ಸ್ ನೀರು ಒಳಹರಿವು, 25074 ಹೊರಹರಿವು ಇತ್ತು. ಮಧ್ಯಾಹ್ನದಿಂದ ಇದು 50 ಸಾವಿರ ಕ್ಯೂಸೆಕ್ಸ್ ಮೀರಿದೆ ಎಂದು ಡ್ಯಾಂ ಅಧಿಕಾರಿ ಮೂಲಗಳು ತಿಳಿಸಿವೆ.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...