ಕಲುಷಿತ ಗೊಳ್ಳುತ್ತಿದ್ದಾಳೆ ತುಂಗೆ; ಈ ನದಿಯ ನೀರು ಕುಡಿದರೆ ಆಸ್ಪತ್ರೆ ಸೇರೋದು ಗ್ಯಾರಂಟಿ!

ನಗರದ ಕೊಳಚೆ ನೀರು, ಯುಜಿಡಿ ನೀರು ಸೇರಿದಂತೆ ಕಸವೆಲ್ಲ ನೇರವಾಗಿ ನದಿಗೆ ಸೇರುತ್ತಿದೆ. ಯುಜಿಡಿ ಕಾಮಗಾರಿ ಆರಂಭವಾಗಿ 10 ವರ್ಷಗಳೇ ಕಳೆಯುತ್ತಾ ಬಂದರೂ ಇನ್ನು ಪೂರ್ಣಗೊಂಡಿಲ್ಲ.

ತುಂಗಾ ನದಿ

ತುಂಗಾ ನದಿ

  • Share this:
ಇದು ಯಾವುದೋ ಕೊಳಚೆ ಪ್ರದೇಶವಲ್ಲ. ಕೊಳಚೆ ನೀರು ಸಂಗ್ರಹವಾಗುವ ಸ್ಥಳವು ಅಲ್ಲ. ಮಲೀನಗೊಂಡ ನೀರನ್ನು ಶುದ್ಧಿಕರಣ ಮಾಡುವ ಪ್ರದೇಶವೂ ಅಲ್ಲ. ಯಾರಾದರೂ ಈ ನದಿಯಲ್ಲಿ ಇಳಿದು ನೀರು ಕುಡಿಯುವುದಕ್ಕಿಂತ ಮುಂಚೆ ನೂರು ಬಾರಿ ಯೋಚನೆ ಮಾಡಬೇಕು ಅಂತಹ ಪರಿಸ್ಥಿತಿ ಇಲ್ಲಿದೆ. ಇದೇ ನೀರನ್ನು ಹಲವ ರೈತರು ಕೃಷಿ ಚಟುವಟಿಕೆಗಳು ಸೇರಿದಂತೆ ಕುಡಿಯುವುದಕ್ಕೂ ಬಳಸುತ್ತಿದ್ದಾರೆ. 

ಗಂಗಾ ಸ್ನಾನಂ, ತುಂಗಾ ಪಾನಂ ಎಂಬ ನಾಡ್ನುಡಿ ಇದೆ. ಆದರೆ ಅದಕ್ಕೆ ವಿರುದ್ಧವಾದ ಪರಿಸ್ಥಿತಿ ಈಗ ತುಂಗಾ ನದಿಯಲ್ಲಿ ಕಂಡು ಬರುತ್ತದೆ. ತುಂಗಾ ನದಿ ನೀರು ಹಾಗೇ ಕುಡಿದರೇ ರೋಗ ರುಜಿನಿಗಳು ಬರೋದು ಗ್ಯಾರಂಟಿ ಎಂಬ ಸ್ಥಿತಿ ಶಿವಮೊಗ್ಗ ನಗರದಲ್ಲಿ ಇದೆ.  ಈ ಹಿಂದೆ ಪೂರ್ವಿಕರು ಗಂಗಾ ನದಿಯಲ್ಲಿ ಸ್ಥಾನ ಮಾಡಿದರೆ ಚರ್ಮರೋಗಗಳು ಗುಣಮುಖವಾಗುತ್ತವೆ. ಹಾಗೇ ತುಂಗಾ ನದಿಯ ನೀರು ಕುಡಿದರೆ ಅದರಲ್ಲಿರುವ ಔಷಧಿಯ ಗುಣದಿಂದ ರೋಗ ರುಜನಿಗಳು ವಾಸಿಯಾಗುತ್ತವೆ ಎಂಬ ಮಾತುಗಳನ್ನು ಹೇಳುತ್ತಿದ್ದರು. ಅದರೆ  ಈಗ ಪರಿಸ್ಥಿತಿ ಬದಲಾಗಿದೆ.

ಪ್ರಕೃತಿ ಸೌಂದರ್ಯವನ್ನು ತನ್ನ ತೆಕ್ಕೆಯಲ್ಲಿ ತುಂಗಾ ನದಿ ಹಿಡಿದು ಕೊಂಡಿದ್ದಾಳೆ. ದಟ್ಟ ಕಾನನದ ಮಲೆನಾಡಿನ ಸುಂದರ ಪ್ರಕೃತಿಯ ಸೊಬಗಿನಲ್ಲಿ ಹರಿದು ಬರುತ್ತಾಳೆ. ಅದರೆ ಯಾವಾಗ ತುಂಗೆ ಶಿವಮೊಗ್ಗ ನಗರಕ್ಕೆ ಎಂಟ್ರಿ ಕೊಡುತ್ತಾಳೆ, ಆಗ  ದುರ್ವಾಸೆಯಿಂದ ಮೂಗು ಮುಚ್ಚಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ಸ್ವತಃ ತುಂಗೆ ಮಾಡಿಕೊಂಡ ಕೆಲಸವಲ್ಲ. ಶಿವಮೊಗ್ಗ ನಗರದ ಜನರು ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಮಾಡಿದ ಕೃತ್ಯವಾಗಿದೆ.

ನಗರದ ಕೊಳಚೆ ನೀರು, ಯುಜಿಡಿ ನೀರು ಸೇರಿದಂತೆ ಕಸವೆಲ್ಲ ನೇರವಾಗಿ ನದಿಗೆ ಸೇರುತ್ತಿದೆ. ಯುಜಿಡಿ ಕಾಮಗಾರಿ ಆರಂಭವಾಗಿ 10 ವರ್ಷಗಳೇ ಕಳೆಯುತ್ತಾ ಬಂದರೂ ಇನ್ನು ಪೂರ್ಣಗೊಂಡಿಲ್ಲ. ಅದಷ್ಟು ಬೇಗ ಕೊಳಚೆ ನೀರು ಶುದ್ಧಿಕರಿಸುವ ಘಟಕಕ್ಕೆ ಯುಜಿಡಿ ನೀರು ಹರಿಯುವಂತೆ ಮಾಡಬೇಕಿದೆ. ಇದು ಪೂರ್ಣಗೊಂಡರೆ, ಕೊಳಚೆ ನೀರು ನದಿಗೆ ಸೇರುವುದಿಲ್ಲ. ಈಗಾಗಲೇ  ಕೊಳಚೆ ನೀರು ನದಿಗೆ ಸೇರುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಆದರೂ ಪ್ರಯೋಜನ ಮಾತ್ರ ಆಗಿಲ್ಲ.

ತುಂಗಾ ನದಿಗೆ ಕೊಳಚೆ ನೀರನ್ನು ಶುದ್ಧಿಕರಣಗೊಳಿಸದೇ, ನೇರವಾಗಿ ನದಿಗೆ ಹರಿಬಿಡಲಾಗುತ್ತಿದೆ. ನೀರು ಕಪ್ಪು ಬಣ್ಣಕ್ಕೆ ಪರಿವರ್ತನೆಯಾಗುತ್ತಿದೆ. ಇದೇ  ನೀರಿನಲ್ಲೇ ತುಂಗಾ ದಂಡೆಯ ಮೇಲೆ ವಾಸ ಮಾಡುವ ಜನರು ಸ್ನಾನ ಮಾಡುತ್ತಾರೆ. ಬಟ್ಟೆ  ತೊಳೆಯುತ್ತಾರೆ. ಕುಡಿಯುವುದಕ್ಕೂ ಉಪಯೋಗಿಸುತ್ತಾರೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳ ಕಾಟ ಹೆಚ್ಚುತ್ತಿವೆ. ಶಿವಮೊಗ್ಗ ನಂತರ ಬರುವಂತ ಹಳ್ಳಿಯ ಜನರು ನದಿ ನೀರನ್ನೇ ಕುಡಿಯುವುದಕ್ಕೆ ಬಳಸುತ್ತಿದ್ದಾರೆ. ಜೊತೆಗೆ ಇದೇ ನೀರನಲ್ಲಿ ಕೃಷಿ ಮಾಡುತ್ತಿದ್ದಾರೆ.

ಆದಷ್ಟು ಬೇಗಾ ತುಂಗಾ ನದಿ ಸ್ವಚ್ಚತೆ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲದೇ ಹೋದರೆ, ನದಿಯ ನೀರು ಸಂಪೂರ್ಣವಾಗಿ ಹಾಳಾಗಲಿದೆ. ತುಂಗಾ ನದಿಗೆ ರಾಜ್ಯದಲ್ಲೇ ತನ್ನದೇ ಆದ ಪ್ರಾಮುಖ್ಯತೆ ಇದ್ದು, ಅದರ ಸ್ವಚ್ಚತೆ ಬಗ್ಗೆ ಗಮನ ಹರಿಸುವ ಕೆಲಸ ಸರ್ಕಾರ ಮತ್ತು ಸ್ಥಳೀಯ ಆಡಳಿತ ಮಾಡಬೇಕಿದೆ.
Published by:Rajesh Duggumane
First published: