news18-kannada Updated:February 25, 2021, 8:45 AM IST
ಸಚಿವ ಮಾಧುಸ್ವಾಮಿ
ತುಮಕೂರು: ತುಮಕೂರು ಜಿಲ್ಲೆಯಲ್ಲಿ ಕೆರೆ ಒತ್ತುವರಿ ತೆರವುಗೊಳಿಸುವ ಬಗ್ಗೆ ಜಿಲ್ಲಾಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ. ನಿನ್ನೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೆರೆ ಸಂರಕ್ಷಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆರೆಗೆ ಎರಡು ಮೂರು ವರ್ಷ ನೀರು ಬರದಿದ್ದರೆ ಏರಿ ಕುಸಿಯುತ್ತದೆ, ಕೆರೆಯ ವಿಸ್ತೀರ್ಣ ಎಷ್ಟಿದೆ ಎಂಬುದನ್ನು ನಾವು ಗುರುತಿಸಬೇಕು. ಕೆರೆಯ ಟ್ಯಾಂಕ್ ಬಂಡ್ ನಿಂದ ಒತ್ತುವರಿ ಮಾಡಿಕೊಂಡು ಬರುತ್ತಿದ್ದಾರೆ. ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಕೆರೆಯನ್ನು ರಕ್ಷಣೆ ಮಾಡಬೇಕು. ಕೆರೆಗೆ ಹೊಂದಿಕೊಂಡಿರುವ ತೋಟದವರು ಒತ್ತುವರಿ ಮಾಡಿಕೊಂಡು ಬರುತ್ತಿರುವುದು ಅಪಾಯಕಾರಿ. ಕೆರೆಯ ಒಳಗೆ ಜಾಲಿ ಗಿಡಗಳನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೆರೆಗೆ ಹಾನಿ ಮಾಡುವವರ ಬಗ್ಗೆ ಕ್ರಮ ಕೈಗೊಳ್ಳಲು ಆರಂಭಿಸಬೇಕು, ಇವೆಲ್ಲವನ್ನೂ ಮಾಡಿದರೆ ಮಾತ್ರ ಕೆರೆಗಳನ್ನು ಉಳಿಸಿಕೊಳ್ಳಲು ಸಾಧ್ಯ. ಜಿಲ್ಲೆಯಲ್ಲಿ ಎಲ್ಲಾ ಕೆರೆಗೂ ನೀರು ಕೊಡಬೇಕು ಎಂಬ ಕಾರಣಕ್ಕಾಗಿಯೇ ನಾನು ಈ ಖಾತೆಯನ್ನು ಇಟ್ಟುಕೊಂಡಿರುವುದು ಎಂದರು.
ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳನ್ನು ಗುರುತಿಸಿ ಸಣ್ಣ ನೀರಾವರಿ ಇಲಾಖೆಗೆ ಒಳಪಡಿಸಿದರೆ ಆ ಕೆರೆಗಳನ್ನು ಅಭಿವೃದ್ಧಿಗೊಳಿಸಿ ನೀರು ತುಂಬಿಸಲಾಗುವುದು. ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಕೆರೆಗಳ ಸರ್ವೆ ಕಾರ್ಯ ಮಾಡಿಸಿ, ಕೆರೆಗಳ ನಿರ್ವಹಣೆ ಮಾಡಬೇಕು. ತುಮಕೂರು ಜಿಲ್ಲೆಯಲ್ಲಿ 2,500ಕ್ಕೂ ಹೆಚ್ಚು ಕೆರೆಗಳಿದ್ದು, ಅವುಗಳ ಅಭಿವೃದ್ಧಿಗೆ 2 ಕೋಟಿ ರೂ. ಮಾತ್ರ ಮೀಸಲಿಡಲಾಗಿದೆ. ಕೆರೆಗಳ ಅಭಿವೃದ್ಧಿಗಾಗಿ ಈ ಅನುದಾನ ಸಾಕಾಗುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಆನೇಕಲ್ ಪಟ್ಟಣದಲ್ಲಿ ಶವ ಸಂಸ್ಕಾರಕ್ಕೂ ಇಲ್ಲ ಸ್ಮಶಾನದಲ್ಲಿ ಜಾಗ; ಕನಿಷ್ಠ ಚಿತಾಗಾರವಾದರೂ ನಿರ್ಮಿಸಲು ಒತ್ತಾಯ
ಕೆರೆಗಳಲ್ಲಿನ ಹೂಳು ತೆಗೆಯಲು ಅವಕಾಶ ಕಲ್ಪಿಸಲಾಗಿದ್ದು, ರೈತರು ಹೂಳನ್ನು ತುಂಬಿಕೊಂಡು ಹೋಗಬಹುದು. ಹೂಳು ತುಂಬಿರುವ ಕೆರೆ ಹಾಗೂ ಅರ್ಧ ಹೂಳು ಇರುವ ಕೆರೆಗಳ ಕುರಿತು ಹಾಗೂ ಕೆರೆಗಳ ಜಲಾನಯನ ಪ್ರದೇಶದ ಬಗ್ಗೆಯೂ ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕೆರೆಗಳ ಬಂಡು(ಏರಿ)ಗಳಲ್ಲಿನ ಗಿಡಗಳನ್ನು ತೆರವುಗೊಳಿಸುವಾಗ ಏರಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು, ಯಂತ್ರಗಳನ್ನು ಬಳಸಬಾರದು, ಕೆರೆಯ ರಚನೆಗೆ ಎಂದರು.
ಹಳೆ ನಿಜಗಲ್ ಕೆರೆಯಿಂದ ತುಮಕೂರು ಗ್ರಾಮಾಂತರದ 12 ಕೆರೆಗಳಿಗೆ ಬ್ರಿಟೇಡ್ ವಾಟರ್ ನೀರು ಹರಿಸಲು ಯೋಜನೆ ರೂಪಿಸಿ ಟೆಂಡರ್ ಕರೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಿದರು.
ತುಮಕೂರು ನಗರ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ನಗರದ ಸುತ್ತಮುತ್ತಲಿನ ಕೆರೆಗಳಲ್ಲಿನ ಬಫರ್ ಜೋನ್ಗಳಲ್ಲಿ ಮನೆ ಕಟ್ಟಿದ್ದಾರೆ. ಅವರಿಗೆ ರಿಯಾಯಿತಿ ಕಲ್ಪಿಸಬಹುದೇ? ಎಂದು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿಯಮಾನುಸಾರ ಸಾಧ್ಯವಿಲ್ಲ. ಹಸಿರು ನ್ಯಾಯ ಪೀಠದ ನಿರ್ದೇಶನದಂತೆ ಕೆರೆಗಳ ರಕ್ಷಣೆಗಾಗಿ ಬಫರ್ ಜೋನ್ ಬಿಡಬೇಕು ಎಂದರು.
Published by:
Sushma Chakre
First published:
February 25, 2021, 8:45 AM IST