ಸಿದ್ದರಾಮಯ್ಯಗೆ ಆದ ಗತಿ ದೇವೇಗೌಡರಿಗೂ ಆಗುತ್ತಾ? ಬೆಂಗಳೂರು ಉತ್ತರ ಮತ್ತು ತುಮಕೂರು ಎರಡರಲ್ಲೂ ಸುಲಭವಿಲ್ಲ ಜೆಡಿಎಸ್ ಗೆಲುವು

ಮಾಜಿ ಪ್ರಧಾನಿ ದೇವೇಗೌಡರು ಕೊನೆಯ ಕ್ಷಣದಲ್ಲಿ ಚುನಾವಣಾ ಕಣದಿಂದಲೇ ಹಿಂದೆ ಸರಿದರೂ ಆಶ್ಚರ್ಯ ಇಲ್ಲ ಎನ್ನುತ್ತಿವೆ ಜೆಡಿಎಸ್ ಮೂಲಗಳು.

ಹೆಚ್.ಡಿ. ದೇವೇಗೌಡ

ಹೆಚ್.ಡಿ. ದೇವೇಗೌಡ

  • News18
  • Last Updated :
  • Share this:
ಬೆಂಗಳೂರು(ಮಾ. 14): ಹಾಸನ ಮತ್ತು ಮಂಡ್ಯ ಕ್ಷೇತ್ರಗಳನ್ನು ಮೊಮ್ಮಕ್ಕಳಿಗೆ ಬಿಟ್ಟುಕೊಟ್ಟ ನಂತರ ಹೆಚ್.ಡಿ. ದೇವೇಗೌಡರು ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಎಲ್ಲರ ಕುತೂಹಲದ ನೋಟ ನೆಟ್ಟಿದೆ. ಬೆಂಗಳೂರು ಉತ್ತರ ಮತ್ತು ಮೈಸೂರು ಕ್ಷೇತ್ರಗಳ ಮೇಲೆ ಗೌಡರ ಕಣ್ಣಿದೆ ಎಂಬ ಸುದ್ದಿ ಮೊದಲು ಕೇಳಿಬರುತ್ತಿದ್ದವು. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ದೇವೇಗೌಡರ ಸ್ಪರ್ಧೆ ಖಚಿತವೆನ್ನಲಾಗುತ್ತಿತ್ತು. ಕೊನೆಗೆ ಮೈಸೂರು ಕ್ಷೇತ್ರವನ್ನು ಜೆಡಿಎಸ್​ಗೆ ಕೊಡಲು ಕಾಂಗ್ರೆಸ್ ನಿರಾಕರಿಸಿದ ಬಳಿಕ ದೇವೇಗೌಡರು ಬೇರೆ ಲೆಕ್ಕಾಚಾರದಲ್ಲಿದ್ಧಾರೆ, ಆತಂಕದಲ್ಲಿದ್ದಾರೆ.

ದೇವೇಗೌಡರ ಮುಂದೆ ಸದ್ಯಕ್ಕೆ ಇರುವ ಆಯ್ಕೆ ಬೆಂಗಳೂರು ಉತ್ತರ ಮತ್ತು ತುಮಕೂರು ಕ್ಷೇತ್ರಗಳು ಮಾತ್ರ. ಆದರೆ, ಈ ಎರಡೂ ಕ್ಷೇತ್ರಗಳು ಜೆಡಿಎಸ್​ಗೆ ಸುಲಭ ತುತ್ತಲ್ಲ. ಎರಡೂ ಕೂಡ ಕಾಂಗ್ರೆಸ್ ಪ್ರಾಬಲ್ಯ ಇರುವ ಕ್ಷೇತ್ರಗಳೇ. ಕಾಂಗ್ರೆಸ್​ನ ಸ್ಥಳೀಯ ಮುಖಂಡರ ಸಂಪೂರ್ಣ ಬೆಂಬಲ ಸಿಕ್ಕರಷ್ಟೇ ಜೆಡಿಎಸ್​ಗೆ ಗೆಲುವು ಸುಲಭ. ಆದರೆ, ಹಾಗಾಗುತ್ತದೆ ಎಂಬುದು ಪ್ರಶ್ನೆ.

ಇದನ್ನೂ ಓದಿ: ಸಮರ್ಥ ಅಭ್ಯರ್ಥಿಗಳಿಲ್ಲದೆ ಬಿಜೆಪಿ ಪರದಾಡುತ್ತಿರುವ 7 ಕ್ಷೇತ್ರಗಳು

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಇರುವ ಜೆಡಿಎಸ್ ಶಾಸಕರು ಕೇವಲ ಇಬ್ಬರೇ. ಕಾಂಗ್ರೆಸ್​ನಿಂದ ಐವರು ಶಾಸಕರಿದ್ಧಾರೆ. ಬಿಜೆಪಿಯ ಒಬ್ಬ ಶಾಸಕರಿದ್ದಾರೆ. ಹಾಲಿ ಸಂಸದ ಕೂಡ ಬಿಜೆಪಿಯವರೇ. ಕಾಂಗ್ರೆಸ್​ನ ಎಲ್ಲಾ ಐವರು ಶಾಸಕರೂ ಸಿದ್ದರಾಮಯ್ಯ ಅವರ ಆಪ್ತರೇ ಆಗಿರುವುದು ದೇವೇಗೌಡರ ಆತಂಕಕ್ಕೆ ಕಾರಣವಾಗಿದೆ. ಉತ್ತರದಲ್ಲಿ ತಾನು ನಿಂತರೆ ಸಿದ್ದರಾಮಯ್ಯ ಅವರ ಆಪ್ತ ಶಾಸಕರು ಸರಿಯಾಗಿ ಸಹಕಾರ ಕೊಡುತ್ತಾರೋ ಇಲ್ಲವೋ ಎಂಬ ಅನುಮಾನ ಗೌಡರಿಗೆ ಇದೆ.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯ ಇದೆಯಾದರೂ ಅಲ್ಲಿರುವವರು ಮೊರಸು ಒಕ್ಕಲಿಗರೇ. ದೇವೇಗೌಡರು ಹಾಸನ ಸೀಮೆಯ ಗಂಗಾಡಿಕಾರ ಒಕ್ಕಲಿಗರಾಗಿರುವುದರಿಂದ ಅವರಿಗೆ ಹೆಚ್ಚಿನ ಜನಬೆಂಬಲ ಸಿಗುವುದು ಡೌಟು. ಹಾಗೆಯೇ, ಬೆಂಗಳೂರು ಉತ್ತರವು ನಗರ ಪ್ರದೇಶವಾದ್ದರಿಂದ ಯುವಕರ ಮನಸ್ಸಲ್ಲಿ ನರೇಂದ್ರ ಮೋದಿ ಅವರೇ ಹೆಚ್ಚು ಆವರಿಸಿಕೊಂಡಿದ್ದಾರೆ. ಹಾಗೆಯೇ, ಬೆಂಗಳೂರಿಗೆ ದೇವೇಗೌಡರು ಏನು ಮಾಡಿದ್ದಾರೆ ಎಂದು ಮೋದಿ ಬೆಂಬಲಿಗರು ಕ್ಯಾಂಪೇನ್ ಮಾಡುತ್ತಿದ್ಧಾರೆ. ಇದು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ದೇವೇಗೌಡರಿಗೆ ಕಂಟಕವಾಗಬಹುದು. ಹೀಗಾಗಿಯೇ ದೇವೇಗೌಡರು ಬೆಂಗಳೂರು ಉತ್ತರದಿಂದ ದೂರ ಉಳಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ದೇವೇಗೌಡ VS ಸದಾನಂದ ಗೌಡ: ಬೆಂಗಳೂರು ಉತ್ತರದಲ್ಲಿ ಮೊಳಗಲಿದೆ ಒಕ್ಕಲಿಗ ನಾಯಕರಿಬ್ಬರ ರಣಕಹಳೆ

ಇನ್ನು, ತುಮಕೂರಿನಲ್ಲೂ ಜೆಡಿಎಸ್ ಹಾದಿ ಸುಲಭವಿಲ್ಲ. ಹಾಲಿ ಸಂಸದರಾಗಿರುವುದು ಕಾಂಗ್ರೆಸ್​ನ ಮುದ್ದಹನುಮೇಗೌಡ. ತುಮಕೂರನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿರುವುದು ಇವರಿಗೆ ಇರಿಸುಮುರುಸು ತಂದಿದೆ. ತುಮಕೂರಿನ ಬಲಿಷ್ಠ ವ್ಯಕ್ತಿ ಎನಿಸಿರುವ ಜಿ. ಪರಮೇಶ್ವರ್ ಅವರಿಗೂ ಇದು ಇಷ್ಟವಿಲ್ಲವೆನ್ನಲಾಗಿದೆ. ಇದೇ ವಿಚಾರವಾಗಿ ಜಿ. ಪರಮೇಶ್ವರ್ ಅವರು ದೇವೇಗೌಡರನ್ನು ಭೇಟಿಯಾಗಿ ತುಮಕೂರನ್ನು ಕಾಂಗ್ರೆಸ್​ಗೇ ಬಿಟ್ಟುಕೊಡಬೇಕೆಂದು ಮನವಿ ಮಾಡಿರುವ ವಿಷಯ ಮಾಧ್ಯಮಗಳಿಗೆ ಗೊತ್ತಾಗಿದೆ.

ತುಮಕೂರಿನಲ್ಲಿ ಜೆಡಿಎಸ್​ಗೆ ನೆಲೆ ಇರುವುದು ನಿಜವೇ. ಇಲ್ಲಿ ಒಕ್ಕಲಿಗರು, ದಲಿತರು ಮತ್ತು ಓಬಿಸಿ ವರ್ಗಗಳು ಜೆಡಿಎಸ್​ಗೆ ಬೆಂಬಲ ಕೊಡಬಹುದು. ಆದರೆ, ಸಾಕಷ್ಟು ಸಂಖ್ಯೆಯಲ್ಲಿರುವ ಕುರುಬರು ಮತ್ತು ಲಿಂಗಾಯತರು ಈ ಪಕ್ಷಕ್ಕೆ ಮತ ಹಾಕುವುದು ಅನುಮಾನವೇ. ಸಂಸದ ಮುದ್ದಹನುಮೇಗೌಡ, ಡಿಸಿಎಂ ಪರಮೇಶ್ವರ್, ಸಚಿವ ವೆಂಕಟರಮಣಪ್ಪ, ಕೆ.ಎನ್. ರಾಜಣ್ಣ ಅವರು ತಮಗೆ ಸಹಕಾರ ಕೊಡದೇ ಇರಬಹುದು ಎಂಬ ಆತಂಕ ದೇವೇಗೌಡರಲ್ಲಿದೆ. ಹಾಗೆಯೇ, ತುಮಕೂರಿನ ಭಾಗಕ್ಕೆ ಹೇಮಾವತಿ ನೀರು ಕೊಡಲು ಹೆಚ್.ಡಿ. ರೇವಣ್ಣ ವಿರೋಧಿಸಿದ್ದು ಇಲ್ಲಿನವರಿಗೆ ಜೆಡಿಎಸ್ ಮೇಲೆ ಸಿಟ್ಟು ತರಿಸಿದೆ. ಇದೂ ಕೂಡ ಚುನಾವಣೆಯ ವಿಷಯಗಳಲ್ಲಿ ಒಂದಾಗಬಹುದು. ಹಾಗೇನಾದರೂ ಆದರೆ ಜೆಡಿಎಸ್​ಗೆ ಮತ್ತು ದೇವೇಗೌಡರಿಗೆ ತುಮಕೂರು ಕಬ್ಬಿಣ ಕಡಲೆಯಾಗಬಹುದು.

ಇದನ್ನೂ ಓದಿ: ಬಂಡೀಪುರ ಅರಣ್ಯ ವಲಯದಲ್ಲಿ ಮತ್ತೆ ಕಾಡ್ಗಿಚ್ಚು; ನೂರಾರು ಎಕರೆ ಬೆಂಕಿಗಾಹುತಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು, ಜೆಡಿಎಸ್ ಪ್ರಾಬಲ್ಯದ ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಿದ್ದರು. ಅಲ್ಲಿ ಜಿ.ಟಿ. ದೇವೇಗೌಡರು ಸಿದ್ದರಾಮಯ್ಯ ಅವರನ್ನು ನಿರಾಯಾಸವಾಗಿ ಸೋಲಿಸಿದ್ದರು. ಈಗ ದೇವೇಗೌಡರಿಗೂ ಅಂಥದ್ದೇ ಪರಿಸ್ಥಿತಿ ಎದುರಾಗಿದೆ. ಸುಲಭವಿದ್ದ ಹಾಸನ ಮತ್ತು ಮಂಡ್ಯವನ್ನು ಮೊಮ್ಮಕ್ಕಳಿಗೆ ಬಿಟ್ಟುಕೊಟ್ಟು ಈಗ ರಿಸ್ಕಿ ಎನಿಸಿರುವ ಕ್ಷೇತ್​ರಗಳಲ್ಲಿ ಸ್ಪರ್ಧಿಸುವ ಅನಿವಾರ್ಯತೆ ಗೌಡರಿಗೆ ಬಂದಿದೆ.

ಇವೆಲ್ಲಾ ಲೆಕ್ಕಾಚಾರಗಳಲ್ಲಿರುವ ದೇವೇಗೌಡರು ಗೊಂದಲಕ್ಕೀಡಾಗಿದ್ದಾರೆ. ಒಂದು ಕಡೆ ಕುಟುಂಬ ರಾಜಕಾರಣದ ದೋಷಣೆ, ಇನ್ನೊಂದು ಕಡೆ ಸೋಲಿನ ಭೀತಿ. ಈ ಎರಡು ಕಾರಣಗಳಿಂದ ದೇವೇಗೌಡರು ಈ ಬಾರಿ ಚುನಾವಣಾ ಕಣದಿಂದಲೇ ಹಿಂಸರಿಯುವ ಸಾಧ್ಯತೆಯೂ ಇಲ್ಲದಿಲ್ಲ ಎನ್ನುತ್ತವೆ ಜೆಡಿಎಸ್ ಮೂಲಗಳು.

(ವರದಿ: ಚಿದಾನಂದ ಪಟೇಲ್)
First published: