ತುಮಕೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Election) ಕೆಲವೇ ದಿನಗಳು ಬಾಕಿ ಇದೆ. ಈ ನಡುವೆ ಮತದಾರರ ಮನವೊಲಿಕೆಗೆ ಗಿಫ್ಟ್ ರಾಜಕೀಯ (Gift Politics) ಜೋರಾಗಿ ಸದ್ದು ಮಾಡುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ (Belagavi) ಗ್ರಾಮೀಣ ಕ್ಷೇತ್ರದಲ್ಲಿ ಸದ್ದು ಮಾಡಿದ್ದ ಕುಕ್ಕರ್ (Cooker) ಪಾಲಿಟಿಕ್ಸ್, ಈ ಬಾರಿ ಅನೇಕ ಕ್ಷೇತ್ರಗಳಲ್ಲಿ ಸದ್ದು ಮಾಡುತ್ತಿದೆ. ಇಂದು ತುಮಕೂರಿನ (Tumakuru) ಗುಬ್ಬಿ ಕ್ಷೇತ್ರದಲ್ಲೂ ಕುಕ್ಕರ್ ಗಿಫ್ಟ್ ಪಾಲಿಟಿಕ್ಸ್ ಸದ್ದು ಮಾಡಿದ್ದು, ಕುಕ್ಕರ್ ಹಂಚಿಕೆ ಮಾಡಲು ಬಂದಿದ್ದ ರಾಜಕೀಯ ಮುಖಂಡರಿಗೆ ತಿರುಗೇಟು ನೀಡಿರುವ ಮತದಾರ, ನಿಮ್ಮ ಕುಕ್ಕರ್ ನಮಗೆ ಬೇಡ ಎಂದು ತಿರಸ್ಕರಿಸಿದ್ದಾರೆ.
ಕುಕ್ಕರ್ ಹಂಚುತ್ತಿದ್ದ ಎಸ್.ಆರ್ ಶ್ರೀನಿವಾಸ್ ಸಂಬಂಧಿಗೆ ಮುಖಭಂಗ
ಹೌದು, ಮತದಾರರು ಪ್ರಜ್ಞಾವಂತರಾಗುತ್ತಿದ್ದಾರೆ. ಕೆಲಸ ಮಾಡದ ನಾಯಕರು ಕೊಡುವ ಗಿಫ್ಟ್ಗಳನ್ನು ಪಡೆಯುತ್ತಿಲ್ಲ. ತುಮಕೂರು ಜಿಲ್ಲೆಯ ಗುಬ್ಬಿ ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್ ಶ್ರೀನಿವಾಸ್, ಶಿವರಾತ್ರಿ ಪ್ರಯುಕ್ತ ಮದಲಾಪುರದಲ್ಲಿ ಕುಕ್ಕರ್ ನೀಡುತ್ತಿದ್ದರು. ಆದರೆ ಕುಕ್ಕರ್ ಹಂಚುತ್ತಿದ್ದ ಎಸ್.ಆರ್ ಶ್ರೀನಿವಾಸ್ ಸಂಬಂಧಿಗೆ ಮುಖಭಂಗವಾಗಿದೆ.
ನಿಮ್ಮ ಕುಕ್ಕರೂ ಬೇಡ, ನೀವೂ ಬೇಡ. ನಿಮಗೆ ಮನೆ ಕೊಡೋಕಾಗಿಲ್ಲ. 20 ವರ್ಷ ಶಾಸಕರಾಗಿದ್ದರೂ ನಮಗೆ ಮನೆ ಕೊಟ್ಟಿಲ್ಲ. ನಾವು ಎದೆ ಮೇಲೆ ಕುಮಾರಸ್ವಾಮಿ ಹಚ್ಚೆ ಹಾಕಿಸಿಕೊಂಡಿದ್ದೇವೆ. ಅವರಿಗೇ ಮತ ಹಾಕೋದು ಎಂದು ಗಂಗಾಧರ್ ಎಂಬಾತ ಟಾಂಗ್ ಕೊಟ್ಟಿದ್ದಾರೆ.
ಮಳೆ ಬಂದಾಗ ಪಿಡಿಓ ಅಧಿಕಾರಿಗೆ ಎಷ್ಟು ಸಾಲ ಮನವಿ ಮಾಡಿದ್ದೀವಿ ನನಗೆ ಗೊತ್ತು. ಆಗ ಯಾರು ಮನೆ ಹತ್ರನೂ ಬರಲಿಲ್ಲ. ಈಗ ಮನೆ ಬಳಿ ಬಂದಿದ್ದೀರಿ, ಈಗಲಾದರೂ ಮನೆ ಒಳಗೆ ಬಂದು ನೋಡಿ ಎಂದು ಮನೆ ಮಾಲೀಕ ಮನವಿ ಮಾಡಿದ್ದಾರೆ. ಮನೆಯಲ್ಲಿ ಮಗು ಇದೆ ಎಂದರು ಯಾರು ಕರುಣೆ ತೋರಿ ಮನೆ ಕೊಡಲಿಲ್ಲ. ಈಗ ಸ್ವಂತಕ್ಕೆ ಬಂದು ಅಧಿಕಾರಿ ಕೈ ಕಾಲು ಹಿಡಿದು ಮನೆ ಹಾಕಿಸಿಕೊಂಡಿದ್ದೀನಿ. ಈಗ ನೀವು ಬಂದು ಲಿಸ್ಟ್ನಲ್ಲಿ ಹೆಸರು ಬಂದಿದೆ ಅಂತ ಹೇಳುತ್ತಿದ್ದೀರಿ ಎಂದು ಮನೆ ಬಾಗಿಲಿಗೆ ಕುಕ್ಕರ್ ತಂದ ಗುಬ್ಬಿ ಶ್ರೀನಿವಾಸ್ ಸಂಬಂಧಿಗೆ ಮತದಾರ ಚಳಿ ಜ್ವರ ಬಿಡಿಸಿದ್ದಾರೆ.
ಮತದಾರರ ಮಾತುಗಳಿಂದ ಆಕ್ರೋಶಗೊಂಡ ಕುಕ್ಕರ್ ತಂದಿದ್ದ ವ್ಯಕ್ತಿ, ನಾನೇ ಇಲ್ಲಿ ಮುಂದಿನ ಚೇರ್ಮನ್. ಈಗ ಮನೆ ಆಗುತ್ತೆ ಅಂತ ಹೇಳ್ತಿದ್ದೀನಿ ಅಲ್ವಾ. ಬಂದು ಹರಿಶಿಣ-ಕುಂಕುಮ ತಗೊಂಡು ಕುಕ್ಕರ್ ತಗೋ ಅಂತ ಏರು ಧ್ವನಿಯಲ್ಲಿ ಹೇಳಿದ್ದಾರೆ. ಅಲ್ಲದೆ ಶಾಸಕರ ಪರ ಬಂದಿದ್ದ ಮಹಿಳೆ ಕೂಡ, ಮನೆ ಬಾಗಿಲಿಗೆ ಬಂದವರನ್ನು ವಾಪಸ್ ಕಳುಹಿಸುತ್ತಿದ್ದೀಯಾ? ನಿನಗೆ ಮನೆ ಕೂಡ ಬೇಡವಾ? ಎಂದಿದ್ದಾರೆ. ಇಷ್ಟಾದ್ರು ಆಮಿಷಕ್ಕೆ ಒಳಗಾದ ವ್ಯಕ್ತಿ ನಿಮ್ಮ ಕುಕ್ಕರ್ ಯಾರಿಗೆ ಬೇಕು, ನಾವೇ ದುಡ್ಡು ಕೊಟ್ಟು ತಗೋತಿವಿ. ನಮಗೆ ಯಾವುದೇ ಕುಕ್ಕರ್ ಬೇಡ ಎಂದು ವಾಪಸ್ ಕಳುಹಿಸಿದ್ದಾರೆ.
ನಿರಾಣಿ ಗಿಫ್ಟ್ ತಿರಸ್ಕರಿಸಿದ್ದ ಮಹಿಳೆ
ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ನಿವಾಸಿ ಅನ್ನಪೂರ್ಣ ಅವರು ಮನೆಯವರೆಗೂ ಬಂದ ಸಕ್ಕರೆಯನ್ನು ತಿರಸ್ಕರಿಸಿದ್ದರು. ಕಳೆದ ಕೆಲ ದಿನಗಳ ಹಿಂದೆ ನಿರಾಣಿ ಬೆಂಬಲಿಗರು ಒತ್ತಾಯವಾಗಿ ಮನೆಯೊಳಗೆ ಸಕ್ಕರೆ ಪ್ಯಾಕೆಟ್ ಇರಿಸಿದರೆ ಮಹಿಳೆ ಅದನ್ನು ಹೊರಗೆ ತಂದು, ಇದು ನಮಗೆ ಬೇಡ. ದಯವಿಟ್ಟು ವಾಪಸ್ ತೆಗೆದುಕೊಂಡು ಹೋಗಿ ಎಂದು ಮನವಿ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಕ್ಷೇತ್ರದ ಕಾಂಗ್ರೆಸ್ ನಾಯಕರು, ಮುರುಗೇಶ್ ನಿರಾಣಿ ಅವರು ಬೀಳಗಿ ಮತಕ್ಷೇತ್ರದಿಂದ ಮೂರು ಬಾರಿ ಗೆದ್ದು, ಎರಡು ಸಲ ಮಂತ್ರಿಯೂ ಆಗಿದ್ದಾರೆ. ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರದಲ್ಲಿ ಮತದಾರರನ್ನ ಸೆಳೆಯಲು ಗಿಫ್ಟ್ ರಾಜಕೀಯ ಶುರು ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಅಲಾರಂ ವಿತರಣೆ
ಇದಕ್ಕೂ ಮುನ್ನ ಕ್ಷೇತ್ರದ ಪ್ರೌಢ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳಿಗೆ, ನಿರಾಣಿ ಸಮೂಹ ಸಂಸ್ಥೆಯ ಲೇಬಲ್ ಇರುವ 5 ಕೆಜಿ ಸಕ್ಕರೆ ಪ್ಯಾಕೆಟ್ ಹಾಗೂ ಬಿಜೆಪಿ ಪಕ್ಷದ ಚಿಹ್ನೆ ಮತ್ತು ಸಚಿವರ ಭಾವಚಿತ್ರವಿರುವ ಅಲಾರಾಂ ವಿತರಣೆ ಮಾಡಿದದ್ದರು. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೂ ಗ್ರಾಸವಾಗಿತ್ತು. ಈ ಸಂಬಂಧ ಶಿಕ್ಷಣ ಇಲಾಖೆಗೆ ದೂರು ಸಲ್ಲಿಕೆಯಾದ ಬಳಿಕ ವಿತರಣಾ ಕಾರ್ಯಕ್ರಮ ನಿಲ್ಲಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ