ತಿಂಗಳಿಗೆ ಲಕ್ಷ-ಲಕ್ಷ ಸಂಬಳ ಎಣಿಸುತ್ತಿದ್ದ ತುಮಕೂರು ದಂಪತಿ ಈಗ ಮರಳಿ ಕೃಷಿಯತ್ತ!

ಇಂಜಿನಿಯರ್​ಗಳಾಗಿದ್ದ ಎನ್. ನಿಖಿಲ್ ಹಾಗೂ ಪತ್ನಿ ಎಸ್.ಕೆ. ಲತಾ ತುಮಕೂರಿನ ತಮ್ಮ ಊರಿನಲ್ಲಿ ಕೃಷಿಗೆ ನೀರಿನ ಸಮಸ್ಯೆಗೆ ಪರಿಹಾರ ಹುಡುಕಲು ಆರಂಭಿಸಿದರು. ಕನಿಷ್ಠ ಪ್ರಮಾಣದಲ್ಲಿ ನೀರು ಬರುತ್ತಿದ್ದ ಎರಡು ಕೊಳವೆಬಾವಿಗಳಿಗೆ ಇಂಗು ಗುಂಡಿ ನಿರ್ಮಿಸಿದರು. ಜಮೀನಿನ ಪಕ್ಕ ಹರಿಯುತ್ತಿದ್ದ ಹಳ್ಳದ ಸ್ವಲ್ಪ ನೀರು ಸಂಗ್ರಹಿಸಲು 40 ಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯದ ಕೃಷಿ ಹೊಂಡ ನಿರ್ಮಿಸಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತುಮಕೂರು: ಲಾಕ್‌ಡೌನ್‌ ಸಮಯದಲ್ಲಿ ಹಳ್ಳಿಗೆ ಹಿಂತಿರುಗಿದ ಬಹುತೇಕ ಜನರು ಇವತ್ತು ಸಂಪೂರ್ಣ ಕೃಷಿಯಲ್ಲಿ ತೊಡಗುತ್ತಿದ್ದಾರೆ. ಅದರಲ್ಲೂ ಬಹುತೇಕ ವಿದ್ಯಾವಂತರು, ತಿಂಗಳಿಗೆ ಲಕ್ಷಲಕ್ಷ ಸಂಬಳ ಪಡೆಯುತ್ತಿದ್ದವರೇ ಕೃಷಿಯಲ್ಲಿ ತೊಡಗುತ್ತಿರೋದು ಸಂತಸ ತರಿಸಿದೆ. ಈ‌ ಮಾತಿಗೆ ಪುಷ್ಠಿ ನೀಡುವಂತೆ ತುಮಕೂರು ಜಿಲ್ಲೆಯ ಎಂಜಿನಿಯರ್‌ ದಂಪತಿ ಈಗ ಸಂಪೂರ್ಣ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿಯಲ್ಲೇ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿದ್ದಾರೆ.

ಹೌದು, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆ ಸಮೀಪದ ಜುಂಜರಾಮನಹಳ್ಳಿಯಲ್ಲಿ ಈ ವಿಶೇಷ ದಂಪತಿಗಳು ಕಂಡು ಬಂದಿದ್ದಾರೆ. ಎನ್. ನಿಖಿಲ್ ಹಾಗೂ ಪತ್ನಿ ಎಸ್.ಕೆ. ಲತಾ ಎಂಬುವವರೇ ಆ ಎಂಜಿನಿಯರಿಂಗ್‌ ದಂಪತಿಗಳು. ಇವರಿಬ್ಬರೂ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದು ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು.  ಲಾಕ್ ಡೌನ್ ವೇಳೆಯಲ್ಲಿ ಮಾರ್ಚ್‌ ನಲ್ಲಿ ತಮ್ಮ ಹಳ್ಳಿಗೆ ಹಿಂದಿರುಗಿದ್ದರು. ಲತಾ ಮನೆಯಿಂದ ಕಂಪನಿ ಕೆಲಸ ಮಾಡುತ್ತಿದ್ದರು. ನಿಖಿಲ್ ಜಮೀನಿನ ಕಡೆ ಚಿತ್ತ ಹರಿಸಿದ್ದರು. ಅಷ್ಟರಲ್ಲಿ ಲತಾ ಅವರನ್ನು ಕಂಪನಿಯವರು ಕೆಲಸದಿಂದ ಬಿಡುಗಡೆ ಮಾಡಿದರು. ಬಳಿಕ ದಂಪತಿ ಯೋಚಿಸಿ ಕೃಷಿ ಚಟುವಟಿಕೆಯನ್ನು ಮುಂದುವರಿಸಲು ನಿರ್ಧರಿಸಿದರು.

ಇದನ್ನೂ ಓದಿ: ನೆಲಮಂಗಲ ಟೋಲ್‌ನಲ್ಲಿ ಸಿಬ್ಬಂದಿಗಳ ಸರಣಿ ಸಾವು; ಪರಿಹಾರಕ್ಕಾಗಿ ಪ್ರಾಣಿ ಬಲಿ ಕೊಟ್ಟ ಟೋಲ್ ಕಂಪನಿ!

ತಂದೆ ನರಸಿಂಹಮೂರ್ತಿ ಬಹಳ ವರ್ಷಗಳಿಂದ ಕೃಷಿ ಮಾಡುತ್ತಿದ್ದರು. ತೆಂಗು, ಅಡಿಕೆಮರ ಬೆಳೆಸಿದ್ದರು. ನೀರಿಗಾಗಿ 17 ಕೊಳವೆ ಬಾವಿ ಕೊರೆಸಿದ್ದರೂ ಪ್ರತಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಕಾಡುತ್ತಿತ್ತು. ಆತಂಕದಲ್ಲಿ ಬೇರೆ ಬೆಳೆ ಬೆಳೆಯಲು ಮುಂದಾಗುತ್ತಿರಲಿಲ್ಲ. ಮಳೆ ಆಶ್ರಯದಲ್ಲಿ ತೊಗರಿಯನ್ನು ನಿರಂತರವಾಗಿ ಬೆಳೆಯುತ್ತಿದ್ದರು. ಕೃಷಿಗೆ ಇಳಿದ ದಂಪತಿ ನೀರಿನ ಸಮಸ್ಯೆಗೆ ಪರಿಹಾರ ಹುಡುಕಲು ಆರಂಭಿಸಿದರು. ಕನಿಷ್ಠ ಪ್ರಮಾಣದಲ್ಲಿ ನೀರು ಬರುತ್ತಿದ್ದ ಎರಡು ಕೊಳವೆಬಾವಿಗಳಿಗೆ ಇಂಗು ಗುಂಡಿ ನಿರ್ಮಿಸಿದರು. ಜಮೀನಿನ ಪಕ್ಕ ಹರಿಯುತ್ತಿದ್ದ ಹಳ್ಳದ ಸ್ವಲ್ಪ ನೀರು ಸಂಗ್ರಹಿಸಲು 40 ಲಕ್ಷ ಲೀಟರ್ ಸಂಗ್ರಹಣಾ ಸಾಮರ್ಥ್ಯದ ಕೃಷಿ ಹೊಂಡ ನಿರ್ಮಿಸಿದರು.

ಉತ್ತಮ ಮಳೆಯಾಗಿ ಕೃಷಿ ಹೊಂಡ ತುಂಬಿದರೆ ಬೇಸಿಗೆಯಲ್ಲಿ ತೆಂಗು, ಅಡಿಕೆ ಮರಗಳಿಗೆ ಹನಿ ನೀರಾವರಿ ಮೂಲಕ ನೀರು ಹರಿಸಲು ಯೋಚಿಸಿದ್ದಾರೆ. ಈಗಾಗಲೇ ಕೃಷಿ ಹೊಂಡಕ್ಕೆ 30 ಲಕ್ಷ ಲೀಟರ್ ನೀರು ಬಂದಿದೆ. ಜಮೀನಿನಲ್ಲಿ ಬಿದ್ದ ಮಳೆ ನೀರು ಹೊರಗೆ ಹರಿಯದಂತೆ ಬದುಗಳನ್ನು ನಿರ್ಮಿಸುತ್ತಿದ್ದಾರೆ. ದಂಪತಿ ಬೆಳಿಗ್ಗೆ ಜಮೀನಿನ ಕಡೆ ಹೋದರೆ ಮನೆಗೆ ಹಿಂದಿರುಗುವುದು ಸಂಜೆ. ತರಕಾರಿ ಬಿಡಿಸುವುದು ಸೇರಿದಂತೆ ಇತರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೆಚ್ಚು ಕೆಲಸಗಳು ಇದ್ದಾಗ ಕೃಷಿ ಕಾರ್ಮಿಕರ ಮೊರೆ ಹೋಗುತ್ತಾರೆ. ಒಟ್ಟಾರೆ ಲಕ್ಷ‌-ಲಕ್ಷ ಸಂಬಳಕ್ಕೋಸ್ಕರ ಮೂಲ ಕಸುಬು ಬಿಟ್ಟು ತೆರಳಿದ್ದ ಲಕ್ಷಾಂತರ ಮಂದಿ ಇವತ್ತು ಮತ್ತೆ ತಮ್ಮ ಮೂಲ ಕಸುಬು ಕೃಷಿಯತ್ತ‌ ಸಾಗುತ್ತಿರೋದು ಆಶಾದಾಯಕವಾಗಿದೆ.
Published by:Sushma Chakre
First published: