HOME » NEWS » State » TULU HEROS KOTI AND CHENNAYYA BIRTH PLACE NEED DEVELOPMENT AKP SESR

ನಿರ್ಲಕ್ಷ್ಯಕ್ಕೊಳಗಾಗಿದೆ ತುಳುನಾಡಿನ ವೀರ ಪುರುಷರ ತವರು; ಇಚ್ಛಾಶಕ್ತಿ ಕೊರತೆಯಿಂದ ನೆನೆಗುದಿಗೆ ಬಿದ್ದ ಅಭಿವೃದ್ಧಿ

ಅಭಿವೃದ್ಧಿ ಕಾಮಗಾರಿಗಳ ಮೇಲುಸ್ತುವಾರಿಗೆಂದೇ ನೇಮಿಸಲ್ಪಟ್ಟ ಸಮಿತಿಯು ಸಭೆ ಕರೆಯದೆ ವರ್ಷಗಳೇ ಕಳೆದಿದೆ.

news18-kannada
Updated:April 6, 2021, 2:43 PM IST
ನಿರ್ಲಕ್ಷ್ಯಕ್ಕೊಳಗಾಗಿದೆ ತುಳುನಾಡಿನ ವೀರ ಪುರುಷರ ತವರು; ಇಚ್ಛಾಶಕ್ತಿ ಕೊರತೆಯಿಂದ ನೆನೆಗುದಿಗೆ ಬಿದ್ದ ಅಭಿವೃದ್ಧಿ
ಪಡುಮಲೆ
  • Share this:
ಪುತ್ತೂರು (ಏ. 6):  ತುಳುನಾಡಿನ ಅವಳಿ ವೀರ ಪುರುಷರೆಂದು ಪ್ರಸಿದ್ಧವಾಗಿರುವ ಕೋಟಿ-ಚೆನ್ನಯ್ಯರ ಜನ್ಮ ಕ್ಷೇತ್ರವಾದ ದಕ್ಷಿಣಕನ್ನಡ ಜಿಲ್ಲೆಯ ಪಡುಮಲೆ ಯಲ್ಲಿ ಸರಕಾರ ಅಭಿವೃದ್ಧಿ ಕಾಮಗಾರಿಗಳಿಗಾಗಿ  5 ಕೋಟಿ ರೂಪಾಯಿಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಆದರೆ, ಬಿಡುಗಡೆಗೊಂಡ ಹಣ ಸರಕಾರದ ಖಜಾನೆಯಲ್ಲೇ ಕೊಳೆಯುತ್ತಿದೆ. ಪಡುಮಲೆಯಲ್ಲಿ  ಅಭಿವೃದ್ಧಿ ಕಾಮಗಾರಿಗಳು ಇನ್ನೂ ಆರಂಭಗೊಂಡಿಲ್ಲ. ಪಡುಮಲೆಯಲ್ಲಿ ಸರಕಾರದ ವತಿಯಿಂದ ಹಲವು ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಭಾರೀ ನಿರೀಕ್ಷೆಯಲ್ಲಿದ್ದ ಪಡುಮಲೆ ಗ್ರಾಮಸ್ಥರಿಗೆ ಇಂದಿನವರೆಗೂ ಇಲ್ಲಿ ನಿರಾಶೆ ಮಾತ್ರ ಕಾದಿದೆ. 400 ವರ್ಷಗಳ ಹಿಂದೆ ತುಳುನಾಡಿನಲ್ಲಿ ಜನಸಿದಂತಹ ಅವಳಿ ವೀರ ಪುರುಷರಾದ ಕೋಟಿ-ಚೆನ್ನಯರು ಸಾಮಾಜಿಕ ಅಸಮಾನತೆಗಾಗಿ ಹೋರಾಡಿದ  ಹಾಗೂ ಸತ್ಯಕ್ಕಾಗಿ ತನ್ನ ಜೀವ ತ್ಯಾಗ ಮಾಡಿ ಮೂಲ ಪುರುಷರಂತೆಯೂ ಗುರುತಿಸಲ್ಪಡುತ್ತಾರೆ. ಈ ಕಾರಣಕ್ಕಾಗಿ ಇವರು ಹುಟ್ಟಿದಂತಹ ಪಡುಮಲೆ ಪ್ರದೇಶವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಪರಿವರ್ತಿಸುವ ಹಾಗೂ ಜನರಿಗೆ ಅವಳಿ ವೀರರ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಹಿಂದಿನ ಸಿದ್ಧರಾಮಯ್ಯ ಸರಕಾರ ತನ್ನ ಮೊದಲ ಬಜೆಟ್ ನಲ್ಲೇ  5 ಕೋಟಿ ರೂಪಾಯಿ ಅನುದಾನವನ್ನು ತೆಗೆದಿರಿಸಿತ್ತು.  ಅಲ್ಲದೆ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ  ಕ್ಷೇತ್ರದ ವಿವಿಧ ಕಾಮಗಾರಿಗಳಿಗಾಗಿ 25 ಲಕ್ಷ ರೂಪಾಯಿಗಳನ್ನೂ ನೀಡಿತ್ತು.

ಅಭಿವೃದ್ಧಿ ಕಾಮಗಾರಿಗಳ ಮೇಲುಸ್ತುವಾರಿಗಾಗಿ ಆಗಿನ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿಯಾಗಿದ್ದ ಮಾಜಿ ಸಚಿವ ಬಿ . ರಮಾನಾಥ ರೈ ನೇತೃತ್ವದಲ್ಲಿ ಒಂದು ಸಮಿತಿಯನ್ನೂ ರಚಿಸಲಾಗಿದ್ದು,  ಆಗಿನ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿಯವರೂ ಈ ಸಮಿತಿ ಸದಸ್ಯರಾಗಿದ್ದರು.  ಸಚಿವರು, ಶಾಸಕರು ಸಮಿತಿಯಲ್ಲಿದ್ದರೂ, ಪಡುಮಲೆಯಲ್ಲಿ ಮಾತ್ರ ಸರಕಾರ ರೂಪಿಸಿದಂತಹ ಯಾವುದೇ ಕಾಮಗಾರಿಗಳಿಗೂ ಈವರೆಗೂ ಚಾಲನೆ ದೊರೆತಿಲ್ಲ. ಸಮುದಾಯ ಭವನಕ್ಕಾಗಿ ಶಂಕಪಾಲ ಬೆಟ್ಟದ ತುದಿಯನ್ನು ಸಮತಟ್ಟು ಮಾಡಿ ಶಂಕುಸ್ಥಾಪನೆ ನೆರವೇರಿಸಿರುವುದನ್ನು ಬಿಟ್ಟರೆ, ಕಾಮಗಾರಿಯು ಇಂದಿಗೂ ಆರಂಭಗೊಂಡಿಲ್ಲ. ಕೋಟಿ-ಚೆನ್ನಯರಿಗೆ ಸಂಬಂಧಪಟ್ಟ ಕೆಲವು ಕುರುಹುಗಳಿಗೆ ನಾಮಫಲಕಗಳನ್ನು ಅಳವಡಿಸಿರುವುದನ್ನು ಬಿಟ್ಟರೆ ಬೇರೆ ಯಾವುದೇ ಕಾಮಗಾರಿಯೂ ಇಲ್ಲಿ ನಡೆದಿಲ್ಲ.



ಕೋಟಿ ಚೆನ್ನಯರು ಆರಾಧಿಸುತ್ತಿದ್ದ ಕಿನ್ನಿಮಾಣಿ-ಪೂಮಾಜಿ ದೈವಸ್ಥಾನದ ಅಭಿವೃದ್ಧಿಗೆ 20 ಲಕ್ಷ ಬಿಡುಗಡೆ ಮಾಡುವುದಾಗಿ  ಹೇಳಿ ಕೆಲಸ ಮಾಡಿಸಿಕೊಂಡಿದ್ದರೂ, ಈವರೆಗೂ ಹಣವನ್ನು ಬಿಡುಗಡೆ ಮಾಡಿಲ್ಲ. ಈ ನಡುವೆ ಕೋಟಿ-ಚೆನ್ನಯರ ತಾಯಿ ದೇಯಿಬೈದೆದಿ ಹೆಸರಿನಲ್ಲಿ ಔಷಧೀಯ ವನವನ್ನು ಅರಣ್ಯ ಇಲಾಖೆಯು ಸಿದ್ಧಪಡಿಸಿದ್ದರೂ, ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ ಎನ್ನುವ ಆರೋಪವೂ ಕೇಳಿ ಬರುತ್ತಿದೆ. ಕ್ಷೇತ್ರದ ಮೊದಲ ಹಂತದ ಕಾಮಗಾರಿಗಾಗಿ ಸಿದ್ಧರಾಮಯ್ಯ ಸರಕಾರ ಬಿಡುಗಡೆ ಮಾಡಿದ 5 ಕೋಟಿ ರೂಪಾಯಿಗಳಲ್ಲಿ ಮೊದಲ ಹಂತದ 1 ಕೋಟಿ ರೂಪಾಯಿ ಬಿಡುಗಡೆಯಾಗಿದ್ದರೂ, ಅದನ್ನೂ ಖರ್ಚು ಮಾಡದ ಕಾರಣ ಆ ಹಣವೀಗ ಪುತ್ತೂರು ಸಹಾಯಕ ಕಮಿಷನರ್ ಅಧ್ಯಕ್ಷತೆಯ ಪಡುಮಲೆ ಅಭಿವೃದ್ಧಿ ಅನುಷ್ಟಾನ ಸಮಿತಿಯ ಖಾತೆಯಲ್ಲೇ ಇದೆ. ಅಲ್ಲದೆ ಪ್ರವಾಸೋಧ್ಯಮ ಇಲಾಖೆ ಬಿಡುಗಡೆ ಮಾಡಿದ 50 ಲಕ್ಷ ರೂಪಾಯಿಗಳೂ ಇದೇ ಖಾತೆಯಲ್ಲಿದ್ದು, ಇದೀಗ ಈ ಹಣಕ್ಕೆ ಬಡ್ಡಿ ಸೇರಿ 1.75 ಕೋಟಿ ರೂಪಾಯಿ ಖಾತೆಯಲ್ಲೇ ಕೊಳೆಯುತ್ತಿದೆ.



ಅಭಿವೃದ್ಧಿ ಕಾಮಗಾರಿಗಳ ಮೇಲುಸ್ತುವಾರಿಗೆಂದೇ ನೇಮಿಸಲ್ಪಟ್ಟ ಸಮಿತಿಯು ಸಭೆ ಕರೆಯದೆ ವರ್ಷಗಳೇ ಕಳೆದಿದೆ. ಅಲ್ಲದೆ ಸಮಿತಿಯ ಹಿಂದಿನ ಅಧ್ಯಕ್ಷರನ್ನಾಗಿ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಮಾಜಿ ಸಚಿವ ಬಿ. ರಮಾನಾಥ ರೈಯವರಿದ್ದು, ರಮಾನಾಥ ರೈ ಹಾಗೂ ಮಾಜಿ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿಯವರ ಮಧ್ಯೆ ಕೆಲವು ವಿಷಯಗಳಲ್ಲಿ ಮನಸ್ತಾಪವೂ ಇದ್ದ ಕಾರಣ ಕಾರಣ ಸಮಿತಿ ಸಭೆಯಿಂದ ಇಬ್ಬರೂ ತಪ್ಪಿಸಿಕೊಂಡಿದ್ದರು.  ಈ ಇಬ್ಬರ ಮುನಿಸು ಇದೀಗ ಪಡುಮಲೆಯ ಅಭಿವೃದ್ಧಿಯ ವಿಚಾರಕ್ಕೆ ಮುಳುವಾಗಿ ಪರಿಣಮಿಸಿತ್ತು. ಆದರೆ ಇದೀಗ ಹೊಸ ಸರಕಾರ, ಹೊಸ ಉಸ್ತುವಾರಿ ಸಚಿವರೂ ಪಡುಮಲೆಯ ಅಭಿವೃದ್ಧಿಯ ಬಗ್ಗೆ ಗಮನಹರಿಸಿಲ್ಲ ಎನ್ನುವ ಆರೋಪವೂ ಇದೆ.

ಚುನಾವಣೆ ಬಂದಾಗ ಕೋಟಿ-ಚೆನ್ನಯರ ಹೆಸರು ಹೇಳಿ ಜಿಲ್ಲೆಯ ಬಹುಸಂಖ್ಯಾತ ಸಮಾಜವನ್ನು ಓಲೈಸಲು ಸಾಲುಗಟ್ಟಿ ನಿಂತ ಜನಪ್ರತಿನಿಧಿಗಳು ಇದೀಗ ಈ ವಿಚಾರದಲ್ಲಿ ಮೌನವಾಗಿದ್ದಾರೆ. ಖಾಸಗಿ ಕ್ಷೇತ್ರಗಳು ಚಂದಾ ಎತ್ತಿ ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕಾರ್ಯದಲ್ಲಿ ನಿರತರಾಗಿದ್ದರೆ, ಸರಕಾರದ ಬಳಿ ಹಣವಿದ್ದರೂ, ಅದನ್ನು ಸರಿಯಾಗಿ ಖರ್ಚು ಮಾಡದೆ ಕೊಳೆಸುವಂತಹ  ಸ್ಥಿತಿ ಪಡುಮಲೆಯದ್ದಾಗಿದೆ.
Published by: Seema R
First published: April 6, 2021, 2:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories