news18-kannada Updated:January 19, 2021, 7:06 AM IST
ಟಿ.ಎಸ್.ನಾಗಾಭರಣ
ಕಲಬುರ್ಗಿ(ಜ.18): ಪದೇ ಪದೇ ಗಡಿ ಕ್ಯಾತೆ ತೆಗೆಯುವ ತಲೆಹರಟೆಗಳಿಗೆ ತಕ್ಕ ಉತ್ತರ ಕೊಡಲೇಬೇಕೆಂದು ಖ್ಯಾತ ನಿರ್ದೇಶಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟಿದ್ದಾರೆ. ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಅವರು, ಉದ್ಧವ್ ಠಾಕ್ರೆ ಯಾವತ್ತೂ ಒಳ್ಳೆಯ ಮಾತುಗಳನ್ನು ಹೇಳಿಲ್ಲ. ಪ್ರತಿ ಬಾರಿಯೂ ಇದೇ ರೀತಿ ವಿವಾದಾತ್ಮಕ ಹೇಳಿಕೆ ನೀಡ್ತಾರೆ. ವಿಚಿದ್ರಕಾರಿ ಹೇಳಿಕೆ ಕೊಡೋದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಮನಸ್ಸುಗಳನ್ನು ಕಟ್ಟುವ ಕೆಲಸ ಅವರಿಗೆ ಗೊತ್ತಿಲ್ಲ. ಪ್ರತಿಯೊಬ್ಬ ಭಾರತೀಯರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು. ಅವರು ಸಿಎಂನಂತಹ ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತಿರುವಾಗಲೂ ಈ ರೀತಿ ಮಾಡ್ತಿದಾರೆ. ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತಾಗ ಎಲ್ಲಿಯೂ, ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಆದ್ರೆ ಶಿವಸೇನೆಯ ಮೂಲ ವ್ಯಕ್ತಿತ್ವವೇ ಬೇರೆ ಇದೆ. ಗಡಿ ಕ್ಯಾತೆ ಹೇಳಿಕೆಯ ಹಿಂದೆ ದೊಡ್ಡ ಹುನ್ನಾರವಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ಉದ್ದವ್ ಠಾಕ್ರೆ ಹಗಲುಗನಸು ಕಾಣುವುದನ್ನ ಬಿಡಬೇಕು; ಮಹಾ ಸಿಎಂಗೆ ಸಚಿವರ ತಿರುಗೇಟು
ವೈಯಕ್ತಿಕ ಲಾಭಕ್ಕಾಗಿ ಪಿತೂರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಪ್ರತಿ ಬಾರಿಯೂ ಬೆಳಗಾವಿ ವಿಷಯದಲ್ಲಿ ಇವರು ಕ್ಯಾತೆ ತೆಗೆಯುತ್ತಾರೆ. ಆದ್ರೆ ಮಹಾರಾಷ್ಟ್ರದಲ್ಲಿಯೂ ಕನ್ನಡ ಮಾತನಾಡುವ ಪ್ರದೇಶಗಳಿವೆ. ಸೊಲ್ಲಾಪುರ, ಅಕ್ಕಲಕೋಟ, ಜತ್ತ ಇತ್ಯಾದಿ ಪ್ರದೇಶಗಳಲ್ಲಿ ಅಪ್ಪಟ ಕನ್ನಡಿಗರಿದ್ದಾರೆ. ಅಲ್ಲಿನ ಕನ್ನಡ ಶಾಲೆಗಳನ್ನು ಹಂತ ಹಂತವಾಗಿ ಮುಚ್ಚಿಸಿ, ಕನ್ನಡಿಗರ ಸ್ಥಿತಿಯನ್ನು ಅಧೋಗತಿಗೆ ತಳ್ಳಲಾಗುತ್ತಿದೆ. ಆದ್ರೆ ನಮ್ಮ ರಾಜ್ಯದಲ್ಲಿರೋ ಮರಾಠಿ ಶಾಲೆಗಳನ್ನು ನಾವು ಹೃದಯ ವೈಶಾಲ್ಯತೆಯಿಂದ ಬೆಳೆಸುತ್ತಿದ್ದೇವೆ. ಮಹಾರಾಷ್ಟ್ರದಲ್ಲಿರೋ ಕನ್ನಡಿಗರ ಪ್ರದೇಶಗಳನ್ನು ಕರ್ನಾಟಕ್ಕೆ ಸೇರಿಸುವಂತೆ ನಾವೂ ಕ್ಯಾತೆ ತೆಗೆಯಬಹುದಲ್ಲವೇ ಎಂದು ಪ್ರಶ್ನಿಸಿದರು.
ಇಂತಹ ಹೇಳಿಕೆಗಳ ಮೂಲಕ ಶ್ರೀಸಾಮಾನ್ಯನ ಬದುಕಿಗೆ ಧಕ್ಕೆ ತರಲಾಗ್ತಿದೆ. ಈ ರೀತಿಯ ರಾಜಕಾರಣದಿಂದ ಘನಾತ್ಮಕ ಅಂಶ ಸಾಧ್ಯವಿಲ್ಲ. ಇವರನ್ನು ಹೀಗೆ ಬಿಡೋದು ತರವಲ್ಲ. ಕನ್ನಡಿಗರು ವಿಶಾಲ ಹೃದಯಿಗಳು. ನಮ್ಮ ವಿಶಾಲತೆಯನ್ನು ದೌರ್ಬಲ್ಯ ಅಂತ ತಿಳಿದುಕೊಳ್ತಿದಾರೆ. ಇದಕ್ಕೆ ಒಂದು ಬಾರಿ ಸರಿಯಾದ ಪೆಟ್ಟು ಕೊಡಬೇಕು. ಗಡಿ ಕ್ಯಾತೆಗೆ ಮಂಗಳ ಹಾಡಬೇಕು. ಇಂತಹ ತಲೆ ಹರಟೆಗಳಿಗೆ ತಕ್ಕ ಉತ್ತರ ಕೊಡಬೇಕೆಂದು ನಾಗಾಭರಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಡಿ ವಿಚಾರದಲ್ಲಿ ಕಾಂಗ್ರೆಸ್ ಸಾಫ್ಟ್ ಕಾರ್ನರ್ ಪ್ರಶ್ನೆಯೇ ಇಲ್ಲ; ಡಿಕೆಶಿಮಹಾರಾಷ್ಟ್ರ ಗಡಿ ವಿಚಾರದಲ್ಲಿ ಕಾಂಗ್ರೆಸ್ ಸಾಫ್ಟ್ ಕಾರ್ನರ್ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿರಬಹುದು. ಆದರೆ ಗಡಿ ವಿಷಯದಲ್ಲಿ ಕಾಂಗ್ರೆಸ್ ಸುಮ್ಮನೇ ಕೂಡಲ್ಲ. ಬೆಳಗಾವಿ ಬಿಡಿ, ಒಂದಿಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಕೊಡುವ ಪ್ರಶ್ನೆ ಇಲ್ಲ, ನಾವೂ ತೆಗೆದುಕೊಳ್ಳುವ ಪ್ರಶ್ನೆ ಇಲ್ಲ. ಮಹಾಜನ್ ವರದಿ ಅಂತಿಮವಾಗಿದೆ. ಯಾರೂ ಏನೇ ಹೇಳಿಕೆ ನೀಡಿದ್ರೂ ಏನೂ ಪ್ರಯೋಜನವಿಲ್ಲ. ಉದ್ಧವ್ ಠಾಕ್ರೆ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ರಾಜ್ಯ ಒಂದೇ. ಅಖಂಡ ಕರ್ನಾಟಕ ಇರಲಿದೆ ಎಂದರು.
Published by:
Latha CG
First published:
January 19, 2021, 7:06 AM IST