ವರ್ಷದಿಂದ ಕಾದರೂ ಭೇಟಿಗೆ ಅವಕಾಶ ಕೊಟ್ಟಿಲ್ಲ, ಈಗ ನೀವೇ ಬರುತ್ತೀದ್ದೀರಿ; ದಿಗ್ವಿಜಯ್ ಸಿಂಗ್​ಗೆ ರೆಬೆಲ್ ಶಾಸಕರ ಟೀಕೆ

ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ್​ ಸಿಂಗ್​ ಹಾಗೂ ನಾಲ್ವರು ಮಧ್ಯಪ್ರದೇಶ ಕಾಂಗ್ರೆಸ್​ ಶಾಸಕರು ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದರು.  ಆದರೆ, ರೆಬೆಲ್​ ಶಾಸಕರ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಈ ಬೆಳವಣಿಗೆ ಬೆನ್ನಲ್ಲೇ ಅತೃಪ್ತ ಶಾಸಕರು ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾರೆ.

ದಿಗ್ವಿಜಯ್ ಸಿಂಗ್

ದಿಗ್ವಿಜಯ್ ಸಿಂಗ್

 • Share this:
  ಬೆಂಗಳೂರು (ಮಾ.18): ನಗರದ ಹೊರ ವಲಯದಲ್ಲಿರುವ ರಮಾಡ ರೆಸಾರ್ಟ್​ನಲ್ಲಿ ಉಳಿದುಕೊಂಡಿರುವ ಮಧ್ಯಪ್ರದೇಶ ಕಾಂಗ್ರೆಸ್‌ನ ರೆಬೆಲ್​ ಶಾಸಕರನ್ನು ಭೇಟಿ ಮಾಡಲು ಹಿರಿಯ ನಾಯಕ ದಿಗ್ವಿಜಯ್​ ಸಿಂಗ್​ ಆಗಮಿಸಿದ್ದರು. ಆದರೆ, ಪೊಲೀಸರು ಇದಕ್ಕೆ ಅವಕಾಶ ನೀಡಿರಲಿಲ್ಲ. ಈ ಘಟನೆ ನಡೆದ ಬೆನ್ನಲ್ಲೇ ಅತೃಪ್ತ ಶಾಸಕರು ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದಾರೆ. ಆಗ ಭೇಟಿ ಮಾಡಲು ಅವಕಾಶ ನೀಡಿ ಎಂದರೆ ಯಾರೂ ನಮ್ಮ ಮಾತನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಈಗ ನೀವೇ ನಮ್ಮ ಭೇಟಿಗೆ ಬರುತ್ತೀದ್ದೀರಿ ಎಂದು ಅತೃಪ್ತ ಶಾಸಕರು ವಿಡಿಯೋದಲ್ಲಿ ಟೀಕೆ ಮಾಡಿದ್ದಾರೆ.

  ಇಂದು ಬೆಳಗ್ಗೆ ಅತೃಪ್ತರಿಂದ ಒಟ್ಟು 21 ವಿಡಿಯೋಗಳು ಬಿಡುಗಡೆ ಆಗಿವೆ. “ಇಂದು ನಮ್ಮನ್ನು ಭೇಟಿ ಮಾಡಲು ದಿಗ್ವಿಜಯ್​ ಸಿಂಗ್ ಸೇರಿ ಕೆಲ ಕಾಂಗ್ರೆಸ್​ ನಾಯಕರು ಆಗಮಿಸಿದ್ದರು ಎನ್ನುವ ವಿಚಾರ ತಿಳಿಯಿತು. ಕಳೆದ ಒಂದು ವರ್ಷದಿಂದ ಹಿರಿಯ ನಾಯಕರನ್ನು ಭೇಟಿ ಮಾಡಲು ಎಷ್ಟೇ ಕೋರಿಕೊಂಡರೂ ನಮಗೆ ಒಂದೂ ಅವಕಾಶ ನೀಡಿರಲಿಲ್ಲ. ಈಗ ನೀವಾಗಿಯೇ ಭೇಟಿಗೆ ಬರುತ್ತಿದ್ದೀರಿ. ಆದರೆ, ನಮಗೆ ನಿಮ್ಮನ್ನು ಭೇಟಿ ಮಾಡಲು ಇಷ್ಟವಿಲ್ಲ,” ಎಂದು ಅತೃಪ್ತ ಶಾಸಕ ಐದಲ್​ ಸಿಂಗ್​ ಹೇಳಿದ್ದಾರೆ.

  ಬಿಜೆಪಿ ಈ ಶಾಸಕರನ್ನು ಅಪಹರಿಸಿಕೊಂಡು ಬಂದಿದೆ ಎನ್ನುವ ಆರೋಪವನ್ನು ಕಾಂಗ್ರೆಸ್​ ಮಾಡಿತ್ತು. ಈ ಆರೋಪಕ್ಕೂ ಅತೃಪ್ತ ಶಾಸಕರು ತಿರುಗೇಟು ನೀಡಿದ್ದಾರೆ. “ನಾವು ಸ್ವ ಇಚ್ಛೆಯಿಂದ ಇಲ್ಲಿಗೆ ಆಗಮಿಸಿದ್ದೇವೆ. ಈಗಿನ ಸರ್ಕಾರ ಯಾವುದೆ ಕೆಲಸ ಮಾಡುತ್ತಿಲ್ಲ. ಜನರ ಬಗ್ಗೆ ಕಾಳಜಿ ತೋರುತ್ತಿಲ್ಲ. ಹೀಗಾಗಿ ನಾವು ರಾಜೀನಾಮೆ ನೀಡಿದ್ದೇವೆ,” ಎಂದು ಅತೃಪ್ತ ಶಾಸಕ ಕಮ್ಲೇಶ್​ ಜಾತವ್​ ಆರೋಪಿಸಿದ್ದಾರೆ. ಬಹುತೇಕ ಎಲ್ಲ ಅತೃಪ್ತ ಶಾಸಕರು ಇದೇ ರೀತಿಯ ಆರೋಪ ಮಾಡಿದ್ದಾರೆ.

  ಇದನ್ನೂ ಓದಿ: ರೆಸಾರ್ಟ್​ ಬಳಿ ಪ್ರತಿಭಟನೆ; ದಿಗ್ವಿಜಯ್​ ಸಿಂಗ್ ಸೇರಿ ಅನೇಕ ಕಾಂಗ್ರೆಸ್​ ನಾಯಕರು ವಶಕ್ಕೆ ಪಡೆದು ಬಿಡುಗಡೆ

  ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ್​ ಸಿಂಗ್​ ಹಾಗೂ ನಾಲ್ವರು ಮಧ್ಯಪ್ರದೇಶ ಕಾಂಗ್ರೆಸ್​ ಶಾಸಕರು ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದರು.  ರಮಾಡ ರೆಸಾರ್ಟ್​ನಲ್ಲಿರುವ ಶಾಸಕರನ್ನು ಭೇಟಿ ಮಾಡಲು ಅವರು ಪ್ರಯತ್ನಿಸಿದರಾದರೂ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅಮೃತಹಳ್ಳಿ ಪೊಲೀಸರು ದಿಗ್ವಿಜಯ್ ಸಿಂಗ್, ಮಾಜಿ ಸಚಿವ ಕೃಷ್ಣ ಬೈರೇಗೌಡ, ಹ್ಯಾರಿಸ್, ರಿಜ್ವಾನ್ ಹರ್ಷದ್ ಸೇರಿ ಹಲವು ನಾಯಕರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

   
  First published: