ಅಂಕೋಲಾ, ಉತ್ತರ ಕನ್ನಡ: ನವರಸನಾಯಕ ಜಗ್ಗೇಶ್ ಅವರ ಸಿನಿಮಾವೊಂದರಲ್ಲಿ ಬೌಬೌ ಬಿರಿಯಾನಿ (Bow Bow Biriyani) ಬಗ್ಗೆ ಕೇಳಿರುತ್ತೀರಾ, ಅಲ್ಲಿ ತಮಾಷೆಗಾಗಿ ಆ ನಾಯಿ ಮಾಂಸವನ್ನು(Dog Meat) ತಿನ್ನಿಸುವ ದೃಶ್ಯವನ್ನು ಸೇರಿಸಲಾಗಿತ್ತು. ಆ ದೃಶ್ಯವನ್ನು ನೋಡಿದ ಪ್ರತಿಯೊಬ್ಬರು ಖಂಡಿತಾಗಿ ಬಿದ್ದು ಬಿದ್ದು ನಕ್ಕಿರುತ್ತಾರೆ. ಆದರೆ ಅದೇ ರೀತಿಯ ಘಟನೆ ನಿಜವಾಗಿಯೂ ನಡೆದಿದೆ. ಕಾಡುಹಂದಿ ಮಾಂಸ (Wild Boar Meat) ಎಂದು ನಂಬಿಸಿ ನಾಯಿ ಮಾಂಸವನ್ನು ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲಾ ತಾಲೂಕಿನ ಮೊಗ್ಟಾ, ಹಿಲ್ಲೂರು ಗ್ರಾಮಗಳಲ್ಲಿ ಜನರಿಗೆ ನಾಯಿ ಮಾಂಸ ಮಾರಾಟ ಮಾಡಿ ಸಿಕ್ಕಿಬಿದ್ದು ಗೂಸ ತಿಂದಿರುವ ಘಟನೆ ಬೆಳಕಿಗೆ ಬಂದಿದೆ.
ಕಾಂಡು ಹಂದಿ ಮಾಂಸ ಪ್ರಿಯರ ಟಾರ್ಗೆಟ್
ಅಂಕೋಲಾ ತಾಲೂಕಿನ ಮೊಗ್ಟಾ, ಹಿಲ್ಲೂರು, ಗ್ರಾಮೀಣ ಭಾಗದಲ್ಲಿ ಕಾಡು ಹಂದಿ ಮಾಂಸ ಪ್ರಿಯರನ್ನ ಗುರಿಯಾಗಿಸಿಕೊಂಡಿದ್ದ ಇಬ್ಬರು ಯುವಕರು ಕಾಡು ಹಂದಿ ಮಾಂಸ ಎಂದು ನಂಬಿಸಿ ನಾಯಿ ಮಾಂಸ ಮತ್ತು ಊರಿನ ಹಂದಿ ಮಾಂಸವನ್ನು ಮಾರಾಟ ಮಾಡಿದ್ದಾರೆ. ಕಾಡು ಹಂದಿ ಮಾಂಸ ಎಂದು ಜನರನ್ನು ನಂಬಿಸಿ ಕೆಜಿ ಗಟ್ಟಲೆ ನಾಯಿ ಮತ್ತು ಊರ ಹಂದಿ ಮಾಂಸ ಮಾರಾಟ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮೋಸ ಹೋದ ಗ್ರಾಮಸ್ಥರು
ಆರೋಪಿಗಳು ಅಲೆಮಾರಿ ಜನಾಂಗದ ಯುವಕರಾಗಿದ್ದು, ನಾಯಿ ಮಾಂಸವನ್ನು ಕಾಡುಮಾಂಸವೆಂದು ಊರಿನ ಹತ್ತಾರು ಮನೆಗೆ ಮಾಂಸ ಮಾರಾಟ ಮಾಡಿದ್ದಾರೆ. ಆದರೆ ಊರಿನ ಜನರಿಗೆ ಕಾಡು ಹಂದಿ ಮಾಂಸವಲ್ಲ ಎಂಬ ಅನುಮಾನ ಬಂದಿದ್ದು, ಆ ಯುವಕರಿಗೆ ಮಾಂಸ ತರಲು ತಿಳಿಸಿದ್ದಾರೆ. ಆದರೆ ಯುವಕರು ನಾಯಿ ಹಿಡಿಯುವ ಸಂದರ್ಭದಲ್ಲಿ ಜನರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ: Vijayanagara: ವಿಜಯನಗರಕ್ಕೆ ಉದ್ದ ಕತ್ತಿನ ವಿಶೇಷ ಅತಿಥಿಯ ಆಗಮನ!
ಬೆಂಗಳೂರಿನಲ್ಲಿ ಮಾರಾಟವಾಗುತ್ತಿತ್ತು ಬೌಬೌ ಬಿರಿಯಾನಿ
ತುಂಬಾ ವರ್ಷಗಳ ಹಿಂದೆ ಬೆಂಗಳೂರಿನ ಅಶೋಕ್ ನಗರ ಮತ್ತು ಶಾಂತಿ ನಗರ ವ್ಯಾಪ್ತಿಯಲ್ಲಿ ಬೌಬೌ ಬಿರಿಯಾನಿ ಮಾರಾಟವಾಗಿದ್ದ ಅರೋಪ ಕೇಳಿಬಂದಿತ್ತು. ಬೀದಿನಾಯಿಗಳು ದಿಢೀರನೇ ಕಣ್ಮರೆಯಾಗುತ್ತಿರುವ ಬಗ್ಗೆ ಅಲ್ಲಿನ ನಿವಾಸಿಗಳು ದೂರು ನೀಡಿದ್ದರು. ತನಿಖೆಯ ವೇಳೆ ಈ ಭಾಗದಲ್ಲಿ ಬೌಬೌ ಬಿರಿಯಾನಿಯ ದಂಧೆ ನಡೆಯುತ್ತಿದೆ ಎಂಬುದಕ್ಕೆ ನಿದರ್ಶನವಾಗಿ, ನಾಯಿಯ ಇತರೆ ಭಾಗಗಳು ಕಸದ ಬುಟ್ಟಿಯಲ್ಲಿ ಪತ್ತೆಯಾಗಿದ್ದವು.
ಹಾಸನದಲ್ಲೂ ಪತ್ತೆಯಾಗಿದ್ದ ನೂರಾರು ನಾಯಿ ತಲೆ ಬುರುಡೆ
ಎರಡು ವರ್ಷಗಳ ಹಿಂದೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ, ಸೂರನಹಳ್ಳಿ ಗ್ರಾಮದ ಸಮೀಪದ ಕೊಲ್ಲಿಹಳ್ಳ ಎಂಬ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ನಾಯಿಗಳ ತಲೆಬುರುಡೆಗಳು ಪತ್ತೆಯಾಗಿವೆ. ಮಾಂಸಕ್ಕಾಗಿ ನಾಯಿಗಳನ್ನು ಕೊಂದು ತಲೆ ಬುರುಗಡೆಗಳನ್ನು ಇಲ್ಲಿ ಹಾಕಿ ಹೋಗಿರಬಹುದೇ ಎಂಬ ಅನುಮಾನ ಮೂಡಿತ್ತು. ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
ಭಾರತದಲ್ಲಿ ನಾಯಿ ಮಾಂಸ ಸೇವನೆ ಮತ್ತು ಮಾರಾಟ ಮಾಡುವುದು ಕೇವಲ ನಾಗಲ್ಯಾಂಡ್ ರಾಜ್ಯದಲ್ಲಿ ಕಂಡು ಬರುತ್ತಿತ್ತು. ನಾಗ ಸಮುದಾಯದ ಜನರು ನಾಯಿ ಮಾಂಸವನ್ನು ಸೇವಿಸುತ್ತಿದ್ದರು. ಆದರೆ ಅಲ್ಲೂ ಕೂಡ ಎರಡೂ ವರ್ಷಗಳ ಹಿಂದೆ ನಾಯಿ ಮಾಂಸ ಸೇವನೆಯನ್ನು ನಿಷೇಧಿಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ