ಮೈಸೂರು: ಜಿಲ್ಲೆಯಲ್ಲಿ ಕಾಡು ಪ್ರಾಣಿ ದಾಳಿಗೆ ಮತ್ತೊಂದು ಜೀವ ಬಲಿಯಾಗಿದೆ. ನಾಗರಹೊಳೆ ಅಭಯಾರಣ್ಯದಲ್ಲಿ (Nagarahole National Park) ಹುಲಿದಾಳಿಗೆ (Tiger Attack) ಬಳ್ಳೆ ಹಾಡಿ ನಿವಾಸಿ ಮಂಜು ಅಲಿಯಾಸ್ ಬೆಟ್ಟದ ಹುಲಿ ಎಂಬಾತ ಬಲಿಯಾಗಿದ್ದಾನೆ. ಎಚ್ಡಿ ತಾಲೂಕಿನ (HD Kote) ಡಿ.ಬಿ ಕುಪ್ಪೆ ವಲಯದ ಬಳ್ಳೆ ಕಾಡಿನ ಒಳಭಾಗದಲ್ಲಿ ಭಾನುವಾರ ಬ್ಯಾಕ್ ವಾಟರ್ ಫೀಮೇಲ್ ಎಂಬ ಹುಲಿ ದಾಳಿ ಮಾಡಿ ಕೊಂದಿರಬಹುದು ಎಂದು ಶಂಕಿಸಲಾಗುತ್ತಿದೆ. ಮಂಜು ಕಾಡಿಗೆ ಸೌದೆ ತರಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಯುವಕನ ಮೇಲೆ ಎರಗಿರುವ ವ್ಯಾಘ್ರ, ಆತನ ತಲೆಯನ್ನು ಸೀಳಿ ಹಾಕಿದೆ. ಅದೃಷ್ಟವಶಾತ್ ಮಂಜು ಜೊತೆಗೆ ಹೋಗಿದ್ದವರು ಅಲ್ಲಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.
ಮೈಸೂರು ಹಾಗೂ ಚಾಮರಾಜನಗರ ಭಾಗದಲ್ಲಿ ಇತ್ತೀಚೆಗೆ ಚಿರತೆ ದಾಳಿಗಳು ಹೆಚ್ಚಾಗುತ್ತಿವೆ. ಈ ಆತಂಕದಲ್ಲಿದ್ದ ಜನರಿಗೆ ಈಗ ಹುಲಿ ಭಯ ಶುರುವಾಗಿದೆ. ಸೌದೆ ತರಲು ಹಾಡಿ ಜನರ ಗುಂಪು ಕಾಡಿಗೆ ತೆರಳಿದ್ದ ವೇಳೆ ಹುಲಿ ಹಠಾತ್ ದಾಳಿ ನಡೆಸಿ ಮಂಜು ಎಂಬ ಯುವಕನ ತಲೆಯನ್ನು ಸೀಳಿದೆ. ಉಳಿದವರು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.
ಸ್ಥಳೀಯರ ಪ್ರತಿಭಟನೆ
ಹುಲಿ ದಾಳಿಗೆ ಯುವಕ ಬಲಿಯಾದ ಬೆನ್ನಲ್ಲೇ ಆಕ್ರೋಶಗೊಂಡ ಸ್ಥಳೀಯರು ಬಳ್ಳೆ ಹಾಡಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮೈಸೂರು–ಮಾನಂದವಾಡಿ ಹೆದ್ದಾರಿಯಲ್ಲಿ ಕೆಲವು ಸಮಯ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಅರಣ್ಯ ಅಧಿಕಾರಿಗಳು, ಪೊಲೀಸರು ಮನವೊಲಿಸಿದ ಬಳಿಕ ಶವಪರೀಕ್ಷೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: Tiger State: 2022ರಲ್ಲಿ ಮಧ್ಯಪ್ರದೇಶದಲ್ಲಿಯೇ ಹೆಚ್ಚು ಹುಲಿಗಳ ಸಾವು; ಕರ್ನಾಟಕಕ್ಕೆ ಸಿಗುತ್ತಾ ಹುಲಿಗಳ ರಾಜ್ಯ ಟ್ಯಾಗ್?
ಕುಟುಂಬಸ್ಥರ ಆಕ್ರಂದನ
ಹುಲಿ ದಾಳಿಯ ವಿಷಯ ತಿಳಿದ ತಕ್ಷಣ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ದಾಳಿಗೊಳಗಾದ ಮಂಜುವಿನ ಪ್ರಾಣ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅವರು ಬರುವಷ್ಟರಲ್ಲಿ ಹುಲಿ ಮಂಜುನನ್ನು ಕೊಂದು ಹಾಕಿದೆ. ನಂತರ ಮೃತದೇಹವನ್ನು ಎಚ್.ಡಿ.ಕೋಟೆಯ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ, ಮೃತ ಯುವಕನ ಕುಟುಂಬದಲ್ಲಿ ಆಕ್ರೋಶ ಮುಗಿಲು ಮುಟ್ಟಿತ್ತು. ಈ ಕುರಿತು ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟು 15 ಲಕ್ಷ ಪರಿಹಾರ
ಹುಲಿ ದಾಳಿಯಿಂದ ಮೃತಪಟ್ಟಿರುವ ಮಂಜುವಿನ ಕುಟುಂಬಕ್ಕೆ ಪರಿಹಾರವಾಗಿ ಒಟ್ಟು 15 ಲಕ್ಷ ಪರಿಹಾರ ನೀಡಲಾಗುವುದು. ತಕ್ಷಣದ ಪರಿಹಾರವಾಗಿ 2.5 ಲಕ್ಷ ರೂಪಾಯಿ ನೀಡಲಾಗುವುದು. ನಂತರ 12.5 ಲಕ್ಷ ರೂಪಾಯಿಯನ್ನು ಅರಣ್ಯ ಇಲಾಖೆ ನೀಡಲಿದೆ ಎಂದು ತಿಳಿದುಬಂದಿದೆ. ಕರ್ನಾಟಕ ಸರ್ಕಾರ ವನ್ಯಜೀವಿ ದಾಳಿಗೆ ಮೃತಪಟ್ಟವರಿಗೆ ಪರಿಹಾರವನ್ನು 15 ಲಕ್ಷ ರೂಪಾಯಿ ನೀಡುವುದಾಗಿ ಘೋಷಿಸಿತ್ತು.
;
ಎಚ್ಡಿ ಕೋಟೆ ಬಳಿ ಹುಲಿ ಪ್ರತ್ಯಕ್ಷ
ನಂಜನಗೂಡಿನಲ್ಲಿ ಹುಲಿ ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಕೆಲವೇ ದಿನಗಳ ನಂತರ ವಾರದ ಹಿಂದೆಯಷ್ಟೇ ಎಚ್ಡಿ ಕೋಟೆಯ ಬೆಳಗನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷವಾಗಿತ್ತು. ಅರಣ್ಯ ಇಲಾಖೆ ಸೆರೆ ಹಿಡಿಯುವುದಕ್ಕೆ ಕಾರ್ಯಾಚರಣೆ ಕೈಗೊಂಡಿದ್ದರು. ಬಂಗಾರ ಸ್ವಾಮಿ ಎಂಬುವವರು ತಮ್ಮ ಕಬ್ಬಿನ ಗದ್ದೆಗೆ ನೀರು ಹಾಯಿಸುವ ವೇಳೆ ಹುಲಿಯನ್ನು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಡಿಸೆಂಬರ್ನಲ್ಲಿ ದನಗಾಹಿ ಮೆಲೆ ಹುಲಿ ದಾಳಿ
ಹಾಗೆ ನೋಡಿದರೆ ಮೈಸೂರು ಭಾಗದಲ್ಲಿ ಹುಲಿ ದಾಳಿ ಹೊಸದೇನಲ್ಲ. ಡಿಸೆಂಬರ್ ಎರಡನೇ ವಾರದಲ್ಲಿ ದನಗಾಹಿಯೊಬ್ಬರ ಮೇಲೆ ಹುಲಿ ದಾಳಿ ನಡೆಸಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ಎಂಬಲ್ಲಿ ನಡೆದಿತ್ತು. ದನ ಮೇಯಿಸುತ್ತಿದ್ದ ದಾಸಯ್ಯ ಎಂಬ ವ್ಯಕ್ತಿಯ ಮೇಲೆ ಹುಲಿ ದಾಳಿ ನಡೆಸಿತ್ತು. ಈ ವೇಳೆ ಹತ್ತಿರದಲ್ಲಿದ್ದವರು ನೆರವಿಗೆ ಬಂದು ಹುಲಿ ದವಡೆಗೆ ಸಿಲುಕಿದ್ದ ದಾಸಯ್ಯನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದರು. ತೀವ್ರ ಗಾಯಗೊಂಡಿದ್ದ ದಾಸಯ್ಯನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಆಗಸ್ಟ್ನಲ್ಲಿ ಎರಡು ಘಟನೆ
ಕಳದ ವರ್ಷ ಆಗಸ್ಟ್ 5ರಂದು ಎಚ್. ಡಿ. ಕೋಟೆ - ಸರಗೂರು ತಾಲ್ಲೂಕಿನ ಹಾದನೂರು ಗ್ರಾಮದ ಹೊರ ವಲಯದ ಜಮೀನಿನಲ್ಲಿ ದನ ಮೇಯಿಸುತ್ತಿದ್ದ ಪ್ರಸನ್ನ ಎಂಬ ಯುವಕನ ಮೇಲೆ ದಾಳಿ ನಡೆಸಿತ್ತು. ಆ ಘಟನೆಗೆ 5 ದಿನಗಳ ಹಿಂದೆ ನಂಜನಗೂಡು ತಾಲೂಕಿನ ಒಡೆಯನ ಪುರ ಗ್ರಾಮದ ದನಗಾಹಿ ಪುಟ್ಟಸ್ವಾಮಿಯ ಮೇಲೆ ದಾಳಿ ಹುಲಿ ಕೊಂದು ಹಾಕಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ