ಬರದ ನಾಡು ವಿಜಯಪುರದ 500 ಎಕರೆಯಲ್ಲಿ ಹಸಿರು ಕ್ರಾಂತಿ; ವಿಶಿಷ್ಟ ಮಾದರಿಯ ಹನಿನೀರಾವರಿ ಪ್ರಯೋಗಕ್ಕೆ ಪ್ರಶಂಸೆ

ಈಗ ಈ ಗಿಡಗಳು ಐದಾರು ಅಡಿ ಬೆಳೆದಿದ್ದು, ಈ ಮುಂಚೆ ಇವುಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಿ ಬದುಕಿಸಲಾಗಿದೆ. ಈಗ ಗಿಡಗಳಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ.  ಮುಂದಿನ ವರ್ಷಗಳಲ್ಲಿ ಇವು ಹೆಮ್ಮರವಾಗಿ ಬೆಳೆಯಲಿದ್ದು, ಈಗಾಗಲೇ ಇಲ್ಲಿ ಜೀವ ಸಂಕುಲ ಬರಲಾರಂಭಿಸಿವೆ ಎನ್ನುತ್ತಾರೆ ವಿಜಯಪುರದಲ್ಲಿ ನಡೆಯುತ್ತಿರುವ ಕೋಟಿ ವೃಕ್ಷ ಅಭಿಯಾನದ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ

news18-kannada
Updated:January 31, 2020, 3:59 PM IST
ಬರದ ನಾಡು ವಿಜಯಪುರದ 500 ಎಕರೆಯಲ್ಲಿ ಹಸಿರು ಕ್ರಾಂತಿ; ವಿಶಿಷ್ಟ ಮಾದರಿಯ ಹನಿನೀರಾವರಿ ಪ್ರಯೋಗಕ್ಕೆ ಪ್ರಶಂಸೆ
ವಿಶಿಷ್ಟ ಮಾದರಿಯ ಹನಿ ನೀರಾವರಿ ಪ್ರಯೋಗ.
  • Share this:
ವಿಜಯಪುರ: ನೀರಿನ ಮಿತ ಬಳಕೆಗೆ ಹನಿನೀರಾವರಿ ಅತ್ಯುತ್ತಮ ಮಾದರಿ. ಇತ್ತೀಚೆಗೆ ನೀರಿನ ಮಹತ್ವ ಎಲ್ಲರಿಗೂ ಅರಿವಾಗಿದ್ದು, ನೀರು ಪೋಲಾಗದಂತೆ ಹನಿ ನೀರಾವರಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಅದರಂತೆ ವಿಜಯಪುರದಲ್ಲಿ 500 ಎಕರೆ ಪ್ರದೇಶದಲ್ಲಿ ಸರ್ಕಾರದ ವತಿಯಿಂದ ಅರಣ್ಯ ಕೃಷಿ ಮಾಡಲಾಗಿದ್ದು, ಇಲ್ಲಿ ಅಳವಡಿಸಿರುವ ಹನಿ ನೀರಾವರಿ ಪ್ರಯೋಗ ಇಡೀ ದೇಶಕ್ಕೆ ಮಾದರಿಯಾಗಿದೆ.  

ಬರದ ನಾಡು ಬಸವನಾಡು ವಿಜಯಪುರದಲ್ಲಿ ದಶಕದಲ್ಲೊಮ್ಮೆ ಧಾರಾಕಾರ ಮಳೆ ಸುರಿದರೆ ಉಳಿದ ವರ್ಷಗಳಲ್ಲಿ ಬರ ಕಟ್ಟಿಟ್ಟ ಬುತ್ತಿ. ಇಂಥ ಬರದ ನಾಡಿನಲ್ಲಿ 500 ಎಕರೆಯಲ್ಲಿ ಅರಣ್ಯೀಕರಣ ಯೋಜನೆ ಕೈಗೊಳ್ಳಲಾಗಿದ್ದು, ಈ ಯೋಜನೆಗೆ ಅನುಸರಿಸಿದ ತಂತ್ರ ಮಾತ್ರ ಸಾಕಷ್ಟು ಜನರಿಗೆ ಅಚ್ಚರಿ ಮೂಡಿಸಿದೆ.

ಹನಿನೀರಾವರಿ ಬಳಸಿಕೊಳ್ಳುತ್ತಿರುವ ಸೋಲಾರ್.


ವಿಜಯಪುರ ನಗರದ ಹೊರವಲಯದ ಭೂತ್ನಾಳ ಕೆರೆಯ ಹಿಂಭಾಗದಲ್ಲಿ 500 ಎಕರೆ ಪ್ರದೇಶದಲ್ಲಿ 60 ಸಾವಿರ ಗಿಡಗಳನ್ನು ನೆಡಲಾಗಿದ್ದು, 2016ರಲ್ಲಿ ಆರಂಭವಾದ ಈ ಯೋಜನೆ ಈಗ ಪೂರ್ಣಗೊಂಡಿದೆ. ಮಳೆಗಾಲದಲ್ಲಿ ಇಲ್ಲಿ ಗಿಡ, ಮರಗಳು ಸುಲಭವಾಗಿ ಬೆಳೆಯಬಹುದಾದರೂ ಬೇಸಿಗೆಯಲ್ಲಿ ಈ ಮರಗಳನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿತ್ತು. ಆದರೆ, ಇದಕ್ಕೆ ಪರಿಹಾರ ಕಂಡುಕೊಂಡ ವಿಜಯಪುರ ಜಿಲ್ಲೆಯ ನಿಡಗುಂದಿಯ ಆಲಮಟ್ಟಿ ಕೆಬಿಜೆಎನ್‌ಎಲ್ ಹನಿ ನೀರಾವರಿ ಸೌಲಭ್ಯ ಒದಗಿಸುವ ಮೂಲಕ ನೀರಿನ ಸದುಪಯೋಗ ಪಡಿಸಿಕೊಂಡು ಬೆಳೆಗಳು ಸದೃಢವಾಗಿ ಬೆಳೆಸುವಲ್ಲಿ ಯಶಸ್ವಿಯಾಗಿದೆ. ಕೆಬಿಜೆಎನ್‌ಎಲ್‌ ಅಧಿಕಾರಿ ಮಹೇಶ ಪಾಟೀಲ ಹೇಳುವಂತೆ, 2016ರಲ್ಲಿ ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರ ಸೂಚನೆಯಂತೆ ಇಲ್ಲಿ ಸಸಿ ನೆಡುವ ಕಾರ್ಯ ಆರಂಭವಾಯಿತು. ಸುಮಾರು 7 ಕೋಟಿ ರೂ. ವೆಚ್ಚದಲ್ಲಿ 60 ಸಾವಿರ ಗಿಡಗಳನ್ನು ನೆಡಲಾಗಿದೆ. ಅಷ್ಟೇ ಅಲ್ಲ, ಈ ಗಿಡಗಳು ಹಾಳಾಗದಂತೆ ಈ ಅರಣ್ಯ ಪ್ರದೇಶದ ಸುತ್ತಮುತ್ತ 17 ಕಿ.ಮೀ. ವರೆಗೆ ಫೆನ್ಸಿಂಗ್ ಅಂದರೆ ತಂತಿ ಬೇಲಿ ಮೂಲಕ ಗಡಿ ಹಾಕಲಾಗಿದೆ.  ಈ ಗಿಡಗಳಿಗೆ ನೀರಿನ ಕೊರತೆಯಾಗದಂತೆ ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಎಂ. ಬಿ. ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದಾಗ ಕೆರೆಗೆ ನೀರು ತುಂಬಿಸುವ ಯೋಜನೆಯಡಿ ಇದೇ ಭೂತ್ನಾಳ ಕೆರೆಗೆ ನೀರು ತುಂಬಿಸಲು ಚಾಲನೆ ನೀಡಿದ್ದರು. ಹೀಗಾಗಿ ಮಳೆ ಇಲ್ಲದಿದ್ದರೂ ಕೃಷ್ಣಾ ನದಿಯ ಮೂಲಕ ಈ ಕೆರೆಗೆ ಪೈಪ್‌ಲೈನ್‌ ಮೂಲಕ ನೀರು ತುಂಬಿಸಲಾಗುತ್ತಿದೆ.  ಈ ನೀರು ಈಗ ಈ ಅರಣ್ಯಕ್ಕೆ ಜೀವಜಲವಾಗಿದೆ.

ಅರಣ್ಯ ಪ್ರದೇಶದಲ್ಲಿ ಜೀವ ಸಂಕುಲ.


ಮುಳವಾಡ ಏತ ನೀರಾವರಿ ಯೋಜನೆಯ ಬಬಲೇಶ್ವರ ವಿಭಾಗದ ವತಿಯಿಂದ ಈ ಯೋಜನೆ ಜಾರಿ ಮಾಡಲಾಗಿದೆ. ವಿದ್ಯುತ್ ಸಮಸ್ಯೆ ನೀಗಿಸಲು ಇದಕ್ಕೆ ಸೋಲಾರ ವಿದ್ಯುತ್ ಬಳಸಲಾಗುತ್ತಿದೆ. ಸೋಲಾರ್ ವಿದ್ಯುತ್ ಘಟಗಳೂ ಇಲ್ಲಿರುವುದು ವಿಶೇಷವಾಗಿವೆ. ಈ ಪ್ರಯೋಗದ ಹನಿ ನೀರಾವರಿ ಮೂಲಕ ಅರಣ್ಯ ಬೆಳೆಸುವ ಯೋಜನೆ ದೇಶದಲ್ಲಿಯೇ ಇದೇ ಮೊದಲು ಎಂದು ಹೇಳಲಾಗುತ್ತಿದೆ. ಆಲ, ಅರಳಿ, ಬಸರಿ, ಹೊಂಗೆ, ಗೋನಿ, ಬೇವು, ಅಂಜನ್, ಸೀಮಾರೋಬಾ, ಬಿದಿರು, ನೆಲ್ಲಿ, ಹೆಬ್ಬೇವು, ಪೇರು, ಮಾವು, ಸಪೋಟ ಸೇರಿದಂತೆ ಸುಮಾರು 150 ತಳಿಯ ತರಹೇವಾರಿ ಗಿಡಗಳನ್ನು ಬೆಳೆಸಲಾಗುತ್ತಿದೆ. ಒಟ್ಟು ರೂ. 7 ಕೋಟಿ ರೂ. ಯೋಜನೆಯಲ್ಲಿ 2.19 ಕೋಟಿ ಹಣವನ್ನು ಈ ಹನಿ ನೀರಾವರಿ ಅಳವಡಿಸಲು ಬಳಸಲಾಗಿದೆ ಎನ್ನುತ್ತಾರೆ ಎಂ. ಬಿ. ಪಾಟೀಲ ಆಪ್ತ ಮಹಾಂತೇಶ ಬಿರಾದಾರ.

ಈಗ ಈ ಗಿಡಗಳು ಐದಾರು ಅಡಿ ಬೆಳೆದಿದ್ದು, ಈ ಮುಂಚೆ ಇವುಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕಿ ಬದುಕಿಸಲಾಗಿದೆ. ಈಗ ಗಿಡಗಳಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ.  ಮುಂದಿನ ವರ್ಷಗಳಲ್ಲಿ ಇವು ಹೆಮ್ಮರವಾಗಿ ಬೆಳೆಯಲಿದ್ದು, ಈಗಾಗಲೇ ಇಲ್ಲಿ ಜೀವ ಸಂಕುಲ ಬರಲಾರಂಭಿಸಿವೆ ಎನ್ನುತ್ತಾರೆ ವಿಜಯಪುರದಲ್ಲಿ ನಡೆಯುತ್ತಿರುವ ಕೋಟಿ ವೃಕ್ಷ ಅಭಿಯಾನದ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ. ಅಷ್ಟೇ ಅಲ್ಲ, ಆಲಮಟ್ಟಿ ಜಲಾಶಯದ ಎತ್ತರವನ್ನು ಈಗಿರುವ 519.60 ದಿಂದ 524.256 ಮೀಟರ್‌ ಗೆ ಹೆಚ್ಚಿಸಿದಾಗ ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿಯೂ ಈ ಅರಣ್ಯ ಬೆಳೆಸಲಾಗುತ್ತಿದ್ದು ಮುಂಬರುವ ದಿನಗಳಲ್ಲಿ ಇದೊಂದು ಪ್ರೇಕ್ಷಣೀಯ ಸ್ಥಳವಾಗುವುದರಲ್ಲಿ ಸಂಶಯವಿಲ್ಲ.ಇದನ್ನು ಓದಿ: 10 ವರ್ಷದ ಮಂಗಳೂರು ಪಂಪ್ವೆಲ್​ ಮೇಲ್ಸೇತುವೆಗೆ ಕೊನೆಗೂ ಸಿಕ್ತು ಮುಕ್ತಿ; ಇಂದು ಉದ್ಘಾಟಿಸಿದ ಸಂಸದ ನಳಿನ್ ಕುಮಾರ್

ಇದೇ ಸ್ಥಳದಲ್ಲಿ ಸಾರ್ವಜನಿಕರಿಗಾಗಿ 10 ಎಕರೆ ಪ್ರದೇಶದಲ್ಲಿ ಸುಂದರ ಪಾರ್ಕ್ ನಿರ್ಮಿಸಲಾಗುವುದು ಎಂದು ಹೇಳುತ್ತಾರೆ ಈ ಯೋಜನೆಯ ರುವಾರಿ ಮತ್ತು ಹಾಲಿ ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ. ಇತ್ತೀಚೆಗೆ ನಿಧನ ಹೊಂದಿದ ಕೆಬಿಜೆಎನ್ಎಲ್ ಉಪಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ. ನಾಯಕ ಭೂತ್ನಾಳ ಸಸ್ಯೊದ್ಯಾನದ ಕುರಿತು ವಿಶೇಷ ಕಾಳಜಿ ಹೊಂದಿ, ಇದರ ಅಭಿವೃದ್ಧಿಗೆ ಶ್ರಮಿಸಿದ್ದರು.  ಅವರ ನೆನಪಿನಲ್ಲಿ ಈ ಸ್ಥಳದಲ್ಲಿ ಅವರ ಸೇವೆಯನ್ನು ಸ್ಮರಿಸುವ ಫಲಕ ಅಳವಡಿಸಲೂ ಎಂ. ಬಿ. ಪಾಟೀಲ ಕೆಬಿಜೆಎನ್‌ಎಲ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರೊಂದಿಗೆ ಮುಂಬರುವ ದಿನಗಳಲ್ಲಿ ಈ ಪ್ರದೇಶ ಜನಾಕರ್ಷಣೆಯ ಕೇಂದ್ರವಾಗುವುದರಲ್ಲಿ ಸಂಶಯವೇ ಇಲ್ಲ.
First published: January 31, 2020, 3:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading