ಸಾರಿಗೆ ನೌಕರರ ಮುಷ್ಕರ: ಮೊದಲ ದಿನ ಇಲಾಖೆಗೆ ಆದ ನಷ್ಟವೆಷ್ಟು? ಇಂದು ಸಂಚರಿಸಿದ ಬಸ್​ಗಳ ಸಂಖ್ಯೆ ಎಷ್ಟು ಗೊತ್ತಾ?

ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಸಾರ್ವಜನಿಕರು ಖಾಸಗಿ ಪ್ರಯಾಣಿಕ ವರ್ಗದ ವಾಹನಗಳ ಮೂಲಕ ಪ್ರಯಾಣಿಸಲು ಪರ್ಯಾಯ ವ್ಯವಸ್ಥೆಗಾಗಿ  ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಅನುಪಯುಕ್ತ ಖಾಸಗಿ ಪ್ರಯಾಣಿಕ ವರ್ಗದ ವಾಹನಗಳಿಗೆ ಮೋಟಾರು ವಾಹನ ತೆರಿಗೆಯಿಂದ ವಿನಾಯ್ತಿ ನೀಡಿ ಅಧಿಸೂಚನೆ ಹೊರಡಿಸಿದೆ. ಅದರಂತೆ ಇಂದು ಕೆಲವು ಖಾಸಗಿ ಬಸ್​ಗಳು ಓಡಾಡುತ್ತಿವೆ. 

ಬಿಎಂಟಿಸಿ ಬಸ್

ಬಿಎಂಟಿಸಿ ಬಸ್

 • Share this:
  ಬೆಂಗಳೂರು: 6ನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಸಾರಿಗೆ ನೌಕರರ ಮುಷ್ಕರದಿಂದ ಸಾರಿಗೆ ಇಲಾಖೆಗೆ ಒಂದು ದಿನದಲ್ಲಿ ಕೋಟ್ಯಂಟತರ ರೂಪಾಯಿ ನಷ್ಟವಾಗಿದೆ. ರಾಜ್ಯದ ನಾಲ್ಕು ನಿಗಮಗಳಿಂದ ಇರುವ ಸಾವಿರಾರು ಬಸ್​ಗಳಲ್ಲಿ ಇಂದು ಕೆಲವೇ ಕೆಲವು ಬೆರಳೆಣಿಕೆಯಷ್ಟು ಬಸ್​ಗಳು ಮಾತ್ರ ಸಂಚಾರ ಮಾಡಿವೆ. ಇದರಿಂದ ಇಲಾಖೆಗೆ ಭಾರೀ ನಷ್ಟವಾಗಿದೆ. ಅಷ್ಟೇ ಅಲ್ಲದೇ ಪ್ರಯಾಣಿಕರಿಗೂ ಭಾರೀ ತೊಂದರೆಯಾಗಿದೆ. ಸಾರಿಗೆ ನೌಕರರು ತಮ್ಮ ಪಟ್ಟು ಬಿಡದೆ ಹೋರಾಟ ಮುಂದುವರೆಸಿದ್ದು, ಇದು ಮತ್ತಷ್ಟು ದಿನ ಮುಂದುವರೆದರೆ ಸರ್ಕಾರಕ್ಕೆ ಹಾಗೂ ಜನರ ಪ್ರಯಾಣಕ್ಕೆ ಭಾರೀ ತೊಂದರೆ ಉಂಟಾಗಲಿದೆ. 

  ಸಾರಿಗೆ ನೌಕರರ  ಮುಷ್ಕರ ಮೊದಲ ದಿನವೇ ಸಾರಿಗೆ ಇಲಾಖೆಗೆ ಕೋಟಿ ಕೋಟಿ ನಷ್ಟವಾಗಿದೆ. ಅನಿರ್ಧಿಷ್ಟಾವಧಿ ಮುಷ್ಕರದಿಂದ ಸಾರಿಗೆ ಇಲಾಖೆಯ ನಾಲ್ಕು ಇಲಾಖೆಗಳಿಂದ ಬರೋಬ್ಬರಿ  16 ಕೋಟಿ ರೂ. ಲಾಸ್ ಆಗಿದೆ. ಶೇ. 98 ಬಸ್ ಗಳು ಇಂದು ರಸ್ತೆಗೆ ಇಳಿಯದೆ ಹಾಗೆ ನಿಂತಿವೆ. ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ 16 ಕೋಟಿ ರೂ. ಹೊಡೆತ ಬಿದ್ದಿದೆ. 

  ಇಂದು 4 ನಿಗಮಗಳಿಂದಲೂ ಕೇವಲ 145 ಬಸ್ ಗಳು ಮಾತ್ರ ಓಡಾಡಿವೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 5600 ಬಿಎಂಟಿಸಿ  ಬಸ್​ಗಳಿಸದ್ದು, ಇವುಗಳಲ್ಲಿ ಇಂದು ಸಂಚರಿಸಿದವು ಕೇವಲ 35 ಬಸ್​ಗಳು ಮಾತ್ರ.  ಬಿಎಂಟಿಸಿಗೆ ಇಂದು 3.5 ಕೋಟಿ ರೂ. ನಷ್ಟ ಆಗಿದೆ ಎಂದು ನ್ಯೂಸ್ 18 ಕನ್ನಡಕೆ ಸಾರಿಗೆ ನಿಗಮಗಳ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

  ಸಾರಿಗೆ ನೌಕರರ ಮುಷ್ಕರದಿಂದಾಗಿ ಸರ್ಕಾರ ಪರ್ಯಾಯ ವ್ಯವಸ್ಥೆಗಳನ್ನು ಮಾಡಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ಬಸ್ಸುಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಲ್ಲದೇ, ರಾಜ್ಯವ್ಯಾಪಿ ಹೆಚ್ಚುವರಿ ರೈಲುಗಳ ವ್ಯವಸ್ಥೆಯನ್ನು ಮಾಡಿದೆ. ಬೆಂಗಳೂರಿನಲ್ಲಿ ಮೆಟ್ರೋ ರೈಲುಗಳ ಸಂಚಾರವನ್ನು ಹೆಚ್ಚಿಸಿದೆ.

  ಇದನ್ನು ಓದಿ: ಸಾರ್ವಜನಿಕರ ಹಿತಕ್ಕಾಗಿ ಖಾಸಗಿ ಬಸ್​ಗಳ ಸಹಾಯ ಪಡೆಯಲಾಗಿದೆ; ಡಿಸಿಎಂ ಅಶ್ವಥ್ ನಾರಾಯಣ

  ಕಳೆದ ವರ್ಷದ ನವೆಂಬರ್​ನಲ್ಲಿ ಸಾರಿಗೆ ನೌಕರರು 10 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದರು. ಅವುಗಳಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವುದು ಹಾಗೂ 6ನೇ ವೇತನ ಆಯೋಗದಂತೆ ಸಂಬಳ ಜಾರಿ ಬೇಡಿಕೆಗಳು ಪ್ರಮುಖವಾಗಿದ್ದು. ಆಗ ಮುಷ್ಕರನಿರತ ನೌಕರರೊಂದಿಗೆ ಮಾತುಕತೆ ನಡೆಸಿದ್ದ ಸರ್ಕಾರ 10 ಬೇಡಿಕೆಗಳಲ್ಲಿ ಸರ್ಕಾರಿ ನೌಕರರೆಂದು ಪರಿಗಣನೆ ಒಂದನ್ನು ಬಿಟ್ಟು ಉಳಿದ 9 ಬೇಡಿಕೆ ಈಡೇರಿಸುವ ಬಗ್ಗೆ ಲಿಖಿತ ಭರವಸೆ ನೀಡಿತ್ತು. ಆದರೆ, ನಾಲ್ಕು ತಿಂಗಳು ಕಳೆದರೂ ಸರ್ಕಾರ ನೀಡಿದ್ದ ಭರವಸೆಯಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಿ ಸಾರಿಗೆ ನೌಕರರು ಇದೀಗ ಮತ್ತೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ.

  ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಸಾರ್ವಜನಿಕರು ಖಾಸಗಿ ಪ್ರಯಾಣಿಕ ವರ್ಗದ ವಾಹನಗಳ ಮೂಲಕ ಪ್ರಯಾಣಿಸಲು ಪರ್ಯಾಯ ವ್ಯವಸ್ಥೆಗಾಗಿ  ಸರ್ಕಾರ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಅನುಪಯುಕ್ತ ಖಾಸಗಿ ಪ್ರಯಾಣಿಕ ವರ್ಗದ ವಾಹನಗಳಿಗೆ ಮೋಟಾರು ವಾಹನ ತೆರಿಗೆಯಿಂದ ವಿನಾಯ್ತಿ ನೀಡಿ ಅಧಿಸೂಚನೆ ಹೊರಡಿಸಿದೆ. ಅದರಂತೆ ಇಂದು ಕೆಲವು ಖಾಸಗಿ ಬಸ್​ಗಳು ಓಡಾಡುತ್ತಿವೆ.
  Published by:HR Ramesh
  First published: