ಮುಷ್ಕರ ನಿಷೇಧದ ಬೆದರಿಕೆ ನಡುವೆಯೂ 4ನೇ ದಿನಕ್ಕೆ ಅಡಿ ಇಟ್ಟ ಸಾರಿಗೆ ನೌಕರರ ಸ್ಟ್ರೈಕ್
ರಾಜ್ಯದ ಸಾರಿಗೆ ನಿಗಮಗಳ ನೌಕರರ ಮುಷ್ಕರ ನಾಲ್ಕನೇ ದಿನವೂ ಮುಂದುವರಿದಿದೆ. ಸರ್ಕಾರ ಸದ್ಯ ಖಾಸಗಿ ಬಸ್ಸುಗಳಿಂದಲೇ ಸಾರಿಗೆ ವ್ಯವಸ್ಥೆ ಮುಂದುವರಿಸುತ್ತಿದೆ. ಇತ್ತ ಮುಷ್ಕರ ಇನ್ನಷ್ಟು ತೀವ್ರಗೊಳಿಸಲು ಸಾರಿಗೆ ಮುಖಂಡರು ಸಜ್ಜಾಗುತ್ತಿದ್ದಾರೆ.
ಬೆಂಗಳೂರು(ಏ. 10): ಸಾರಿಗೆ ನೌಕರರು ಮತ್ತು ಸರ್ಕಾರದ ಮಧ್ಯೆ ಹಗ್ಗ ಜಗ್ಗಾಟ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಆರನೇ ವೇತನ ಜಾರಿ ಆಗುವವರೆಗೂ ಅಸಹಕಾರ ಮುಂದುವರಿಸಲು ಸಾರಿಗೆ ನೌಕರರು ಹಟ ತೊಟ್ಟಿದ್ದಾರೆ. ಆರನೇ ವೇತನ ಜಾರಿ ಅಸಾಧ್ಯ. ಹಠ ಬಿಟ್ಟು ಕೆಲಸಕ್ಕೆ ಬನ್ನಿ ಎಂದು ಸರ್ಕಾರ ಪಟ್ಟು ಹಿಡಿದಿದೆ. ಇದರ ಮಧ್ಯೆ ಮುಷ್ಕರವನ್ನೇ ನಿಷೇಧಿಸಿ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. ಆದರೂ ಜಗ್ಗದ ಸಾರಿಗೆ ನೌಕರರು ನಾಲ್ಕನೇ ದಿನವೂ ತಮ್ಮ ಮುಷ್ಕರ ಮುಂದುವರಿಸಿದ್ದಾರೆ. ಸಾರಿಗೆ ನೌಕರರ ಹೋರಾಟದ ನೇತೃತ್ವ ವಹಿಸಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರು ಯಾವುದೇ ಕಾರಣಕ್ಕೂ ಬೇಡಿಕೆ ಈಡೇರಿಕೆ ಆಗುವವರೆಗೂ ಮುಷ್ಕರ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು ಮುಷ್ಕರದ ನಾಲ್ಕನೇ ದಿನವಾಗಿದ್ದು, ಬಿಎಂಟಿಸಿ ಸೇರಿದಂತೆ ಸಾರಿಗೆ ನಿಗಮಗಳ ಸಾವಿರಾರು ಬಸ್ಸುಗಳ ಪೈಕಿ ಬೆರಳೆಣಿಕೆಯಷ್ಟು ಬಸ್ಸುಗಳು ಮಾತ್ರ ಸಂಚಾರ ನಡೆಸುತ್ತಿವೆ. ಬೆಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಖಾಸಗಿ ಬಸ್ಸು, ಆಟೋಗಳು ರಸ್ತೆಗೆ ಇಳಿದಿದ್ದರೂ ಅದಕ್ಕೆ ತಕ್ಕಷ್ಟು ಪ್ರಯಾಣಿಕರು ಸಿಗದೇ ಅವರೂ ಪರದಾಡುತ್ತಿದ್ದಾರೆ. ಬಿಎಂಟಿಸಿಯ ಸಮರ್ಪಕ ಬಸ್ ವ್ಯವಸ್ಥೆಗೆ ಹೊಂದಿಕೊಂಡಿದ್ದ ಬೆಂಗಳೂರಿಗರು ಈಗ ರಸ್ತೆಗೆ ಇಳಿಯಲು ಹಿಂದೇಟು ಹಾಕುತ್ತಿರುವಂತಿದೆ. ಟ್ರೈನು ಮತ್ತು ಬೇರೆ ಬೇರೆ ರಾಜ್ಯದ ಬಸ್ಸುಗಳಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಯಾಣಿಕರು ಬಿಟ್ಟರೆ ಸ್ಥಳೀಯವಾಗಿ ಬಸ್ಸುಗಳಲ್ಲಿ ಸಂಚರಿಸುವ ಜನರ ಸಂಖ್ಯೆ ಇವತ್ತು ವಿರಳವಾಗಿದೆ.
ಮುಷ್ಕರ ಆರಂಭಗೊಂಡ ಬಳಿಕ ದಿನದಿಂದ ದಿನಕ್ಕೆ ಸಾರಿಗೆ ನಿಗಮ ಬಸ್ಸುಗಳು ರಸ್ತೆಗಿಳಿಯುವ ಸಂಖ್ಯೆ ಹೆಚ್ಚುತ್ತಿದ್ದರೂ ಇನ್ನೂ ನಗಣ್ಯವೆನಿಸಿದೆ. ಮೂರು ದಿನ ಮುಷ್ಕರದ ನಂತರ ಇಂದು ಕರ್ತವ್ಯಕ್ಕೆ ಹಾಜರಾದ ನಿರ್ವಾಹಕಿಯೊಬ್ಬರು ಇಂದು ಹೆಚ್ಚು ಮಂದಿ ಕೆಲಸಕ್ಕೆ ಹಾಜರಾಗುತ್ತಾರೆಂದು ತಿಳಿಸಿದ್ದಾರೆ.
ಮುಷ್ಕರಕ್ಕೆಲ್ಲಾ ಒಂದು ಮಿತಿ ಇದೆ. ಅದನ್ನೇ ದೀರ್ಘ ಕಾಲ ಮಾಡಿಕೊಂಡು ಕೂರಲು ಸಾಧ್ಯವಿಲ್ಲ. ಕೊರೋನಾ ಸಮಯದಲ್ಲಿ ನಮಗೆಲ್ಲಾ ಸುಮ್ಮನೆ ಸಂಬಳ ಕೊಟ್ಟಿದೆ. ನಾವೂ ಕೂಡ ನಿಗಮ ಹಾಗೂ ಸರ್ಕಾರದ ಬಗ್ಗೆ ಯೋಚಿಸಬೇಕು. ಬಹಳಷ್ಟು ಸಿಬ್ಬಂದಿ ಇಂದು ಕೆಲಸಕ್ಕೆ ಹಾಜರಾಗುವುದಾಗಿ ಹೇಳಿದ್ಧಾರೆ ಎಂದು ನಿರ್ವಾಹಕಿ ಉಮಾ ಅವರು ಹೇಳಿದ್ದಾರೆ.
ಇದೇ ವೇಳೆ, ಸಾರಿಗೆ ಮುಖಂಡರು ರಾಜ್ಯಾದ್ಯಂತ ಮುಷ್ಕರವನ್ನು ಇನ್ನಷ್ಟು ತೀವ್ರಗೊಳಿಸಲು ತಯಾರಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವರು ಬೆಳಗಾವಿಗೆ ಇಂದು ಪ್ರಯಾಣ ಬೆಳೆಸಿದ್ದಾರೆ. ಬೆಳಗಾವಿ ಮತ್ತು ಕಲಬುರ್ಗಿಯ ಸಾರಿಗೆ ಮುಖಂಡರು ಮತ್ತು ನೌಕರರ ಸಭೆ ನಡೆಸಿ ಮುಂದಿನ ನಡೆಗಳ ಬಗ್ಗೆ ಚರ್ಚಿಸಲಿದ್ದಾರೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ